ಯುವ ಮನಸ್ಸುಗಳ ಆಶಯಗಳನ್ನು ಕೇಳಿಸಿಕೊಳ್ಳದ ಸಮಾಜವನ್ನು ಧಿಕ್ಕರಿಸಿ ಬೀದಿಗಿಳಿದ ಜೆನ್ ಜೀ ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನಷ್ಟೇ ಮಾಡುತ್ತಿಲ್ಲ. ಮಾನವೀಯತೆಯ ಮೌಲ್ಯಗಳನ್ನು ಮತ್ತೆ ನಮಗೆ ನೆನಪಿಸಿವೆ. ಯುವಜನತೆಯ ಹೋರಾಟ ಹೊಸ ರೂಪದ ಚಳುವಳಿಯನ್ನು ನಮ್ಮ ಮುಂದೆ ಇಟ್ಟಿದೆ. ನೋವು ದುಮ್ಮಾನಗಳ ನಡುವೆಯೂ ಹಾಡು, ಕುಣಿತ, ಚಿತ್ರಕಲೆ, ಸಂವಾದ, ಆಟ, ಹಾಸ್ಯ-ವಿಡಂಬನೆಯನ್ನು ತಮ್ಮ ರೀಲ್ಸ್ ಗಳಲ್ಲಿ ಹಿಡಿದಿಟ್ಟು ಜಗತ್ತಿಗೆ ಮುಟ್ಟಿಸಿವೆ. ಈ ಕಾಲವು ಕಸಿದುಕೊಂಡ ಕಲೆ-ಸಾಹಿತ್ಯದ ಅಭಿವ್ಯಕ್ತಿಯನ್ನು ಹೊಸ ರೂಪದಲ್ಲಿ ಮುಂದಿಡುತ್ತಿರುವುದನ್ನು ನಾವು ತೆರೆದ ಮನಸ್ಸಿನಿಂದ ಗಮನಿಸಬೇಕಾಗಿದೆ. ಕಲಿಕೆಯ ಹೊಸ ಹಾದಿಯೊಂದನ್ನು ನಮಗೆ ತೆರೆಸಿವೆ – ಡಾ. ಸುಶಿ ಕಾಡನಕುಪ್ಪೆ,
ಹತ್ತೊಂಬತ್ತನೇ ಶತಮಾನದ ಇಂಗ್ಲೆಂಡ್ನಲ್ಲಿ ನಡೆದ ಲಡ್ಡೈಟ್ (Luddite) ಚಳುವಳಿ ಹೊಸ ಯಂತ್ರಗಳಿಂದ ತಮ್ಮ ಉದ್ಯೋಗ ಕಳೆದುಕೊಂಡ ಕಾರ್ಮಿಕರ ಪ್ರತಿಭಟನೆ ಆಗಿತ್ತು. ಯಂತ್ರಗಳನ್ನು ತಿರಸ್ಕರಿಸಿದ ಅವರು ತಂತ್ರಜ್ಞಾನವನ್ನು ವಿರೋಧಿಸಲಿಲ್ಲ; ಶೋಷಕ ಕಾರ್ಖಾನೆ ಮಾಲೀಕರ ಅನ್ಯಾಯದ ವಿರುದ್ಧ ನಿಂತಿದ್ದರು. ತಂತ್ರಜ್ಞಾನ ಬದಲಾವಣೆ ಸಮಾಜದ ನ್ಯಾಯ, ಮಾನವೀಯತೆ ಮತ್ತು ಜೀವನೋಪಾಯವನ್ನು ಹೇಗೆ ನಿಯಂತ್ರಿಸುತ್ತದೆ ಎಂಬ ಪ್ರಶ್ನೆಯನ್ನು ಮೊದಲ ಬಾರಿಗೆ ಗಂಭೀರವಾಗಿ ಎತ್ತಿದ ಚಳುವಳಿಯೇ ಲಡ್ಡೈಟ್ ಚಳುವಳಿ.
ಹತ್ತೊಂಬತ್ತನೇ ಶತಮಾನದ ಲಡ್ಡೈಟ್ ಚಳುವಳಿಗಾರರು ತಂತ್ರಜ್ಞಾನದ ಅನನುಕೂಲಗಳ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದರು. ಈ ಯುಗದ ಯುವಜನರ ಪ್ರತಿಭಟನೆಗಳು ಲಡ್ಡೈಟ್ ಚಳುವಳಿಯ ಹೊಸ ರೂಪದಂತೆಯೇ ಕಾಣಿಸುತ್ತಿದೆ. ಈಗಿನ ತಂತ್ರಜ್ಞಾನ ಉದ್ಯೋಗಗಳನ್ನು ಮಾತ್ರವಲ್ಲ, ಮಾನವೀಯತೆ, ಸಂಬಂಧ, ನಂಬಿಕೆ, ಪ್ರೀತಿ- ಇವೆಲ್ಲವನ್ನೂ ಕಸಿದುಕೊಂಡಿದೆ. ಹಳೆಯ ಲಡ್ಡೈಟ್ಗಳು ಯಂತ್ರಗಳ ವಿರುದ್ಧ ಹೋರಾಡಿದಂತೆ, ಇಂದಿನ ಜೆನ್ ಝೀ (Gen Z) ತಂತ್ರಜ್ಞಾನದಿಂದ ಹುಟ್ಟಿದ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಶೋಷಣೆಯ ವಿರುದ್ಧ ಹೋರಾಡುತ್ತಿದ್ದಾರೆ.
ಸಮಾಜವನ್ನು ಮರು ಸೃಷ್ಟಿಸಿರುವ ಉದ್ಯಮ ನೀತಿಗಳು ತಂತ್ರಜ್ಞಾನವನ್ನು ಆರ್ಥಿಕ ಲಾಭಗಳಿಕೆಗೆ ಬಳಸುತ್ತಿವೆ. ಲಾಭದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿರುವ ತಂತ್ರಜ್ಞಾನದ ವಿಕಾಸ, ಕೃತಕ ಬುದ್ಧಿಮತ್ತೆಯವರೆಗೂ ಬಂದು ನಿಂತಿದೆ. ಸಮಾಜದ ಪ್ರಗತಿಗೆ ಬೇಕಾಗಿರುವುದು ಕೇವಲ ಲಾಭ ತರುವ ಉದ್ಯಮಗಳಷ್ಟೇ ಅಲ್ಲ. ನಾವು ಬಳಸುವ ಸೋಷಿಯಲ್ ಮೀಡಿಯಾ, ಇಂಟರ್ನೆಂಟ್ ಸರ್ಚ್ ಎಂಜಿನ್ಸ್ ಅಥವಾ ನಮ್ಮ ನಿತ್ಯ ಬಳಕೆಯ ಹಲವು ಸೌಕರ್ಯಗಳು ನಮ್ಮ ಸಮಾಜದ ರಚನೆಯನ್ನಷ್ಟೇ ಬದಲಿಸಿಲ್ಲ. ಸ್ಪರ್ಧಾತ್ಮಕ ಮತ್ತು ವೇಗದ ಬದುಕನ್ನು ಸೃಷ್ಟಿಸಿವೆ. ಸರಳ ಬದುಕನ್ನು ಕಸಿದಿವೆ. ಮಾರುಕಟ್ಟೆಯ ಸುಳಿಯಲ್ಲಿ ಸಿಲುಕಿರುವ ಜನರ ಜೀವನ ಸರಳ ಬದುಕಿನ ಮಾದರಿಯನ್ನು ಬಿಟ್ಟುಕೊಡುವ ಅನಿವಾರ್ಯ ಸ್ಥಿತಿಗೆ ತಲುಪಿದೆ.

ಯಶಸ್ಸಿನ ಭ್ರಮೆಯ ಹಿಂದೆ ಬಿದ್ದಿರುವ ಕುಟುಂಬಗಳು ಮನುಷ್ಯ ಸಂಬಂಧಕ್ಕಿಂತ ಲಾಭ ನಷ್ಟಗಳ ವ್ಯಾವಹಾರಿಕತೆಗೆ ಬಲಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ತಪ್ಪಿಲ್ಲದೆ ನಲುಗುತ್ತಿರುವವರು ಈಗಿನ ಮಕ್ಕಳು ಮತ್ತು ಯುವಜನತೆ. ತಂತ್ರಜ್ಞಾನವನ್ನೇ ಬಹಳ ಸಮರ್ಥವಾಗಿ ಬಳಸುವ ಜೆನ್ ಝೀ, ತಂತ್ರಜ್ಞಾನವನ್ನು ಬಳಸಿ ಸಮಾಜವನ್ನು ರೋಗಗ್ರಸ್ಥಗೊಳಿಸಿರುವ ಉದ್ಯಮಗಳ ಗಾಳಗಳನ್ನು ಬಯಲಿಗೆಳೆದಿದ್ದಾರೆ. ಇವರ ಮೀಮ್ ಮತ್ತು ರೀಲ್ಸ್ ಚಳುವಳಿ ಈ ಯುಗದ ಲಡ್ಡೈಟ್ ಚಳುವಳಿ. ಆದರೆ ಜೆನ್ ಝೀ ತಂತ್ರಜ್ಞಾನವನ್ನು ತಿರಸ್ಕರಿಸುವುದಿಲ್ಲ; ಅದನ್ನೇ ಉಪಯೋಗಿಸಿ ಉದ್ಯಮಗಳ ಶೋಷಣೆಯನ್ನು ಬಯಲಿಗೆಳೆಯುತ್ತಾರೆ.
ಜೆನ್ ಝೀ ಯ ಸೃಜನಶೀಲತೆ ತಂತ್ರಜ್ಞಾನದ ಸಹಾಯದಿಂದ ಸಮಾಜಕ್ಕೆ ಮರುಹುಟ್ಟು ನೀಡಿದೆ. ಇದರ ಜೊತೆಗೇ ಹಳೇ ತಲೆಮಾರಿನ ಜಡ್ಡುಹಿಡಿದ ಮನಸ್ಸುಗಳಿಗೆ ಪ್ರೀತಿಯಿಂದಲೇ ಮದ್ದು ನೀಡಿದೆ. ಜವಾಬ್ದಾರಿಯ ಲವಲೇಶವೂ ಇಲ್ಲದ ಹಳೆ ತಲೆಮಾರಿನ ಒಂದು ಭಾಗ ಯುವಕ ಯುವತಿಯರನ್ನು ಮೂದಲಿಸುವುದರಲ್ಲೆ ಸುಖ ಕಾಣುತ್ತಿದೆ. ಉಸಿರುಗಟ್ಟಿಸುವ ಕೌಟುಂಬಿಕ ಮತ್ತು ಶಿಕ್ಷಣದ ವಾತಾವರಣವನ್ನು ಸೃಷ್ಟಿಸಿ ಅತ್ಯಂತ ಕಠಿಣವಾದ ಸ್ಪರ್ಧಾತ್ಮಕ ಬದುಕನ್ನು ಕಟ್ಟಿಕೊಟ್ಟು ಬದುಕಿನ ಚೆಲುವನ್ನು ಅವರಿಂದ ಕಸಿದುಕೊಂಡಿದೆ. ಇದರಿಂದ ಶೋಷಣೆಗೆ ಒಳಗಾದ ಯುವಜನತೆ ವೇಗದ ಬದುಕನ್ನು ತಿರಸ್ಕರಿಸಿದಾಗ ‘ಸೋಮಾರಿ’ ಜನಾಂಗವೆಂಬ ಹಣೆಪಟ್ಟಿಯನ್ನು ಪಡೆಯಬೇಕಾಯಿತು. ಹೊಸ ತಂತ್ರಜ್ಞಾನದಿಂದ ಜೀವನ ಶೈಲಿಯು ಬದಲಾದರೂ, ಮಾನವ ಜನಾಂಗದ ಪ್ರಜ್ಞೆ ಸರಿ ತಪ್ಪುಗಳ ಜ್ಞಾನವನ್ನು ಹೊಸ ಪೀಳಿಗೆಗೆ ದಾಟಿಸಿರುತ್ತದೆ. ಪ್ರವಚನ ನೀಡುವುದರಿಂದ ಅಥವಾ ಹೇರಿಕೆಯಿಂದ ನೈತಿಕತೆ ಮೂಡುವುದಿಲ್ಲ. ‘ದೊಡ್ಡವರ’ ಮಾತನ್ನು ಕೇಳದ, ಬದಲಾಗದ ಸಮಾಜದ ಶೋಷಣೆಗೆ ಬಲಿಯಾಗಲಾರೆವು ಎಂಬ ಯುವಜನರ ನಡವಳಿಕೆ ಈ ಕಾಲದ ಲಡ್ಡೈಟ್ ಚಳುವಳಿ ಎಂದೇ ಕಾಣಿಸುತ್ತಿದೆ.
ಯುವ ಮನಸ್ಸುಗಳ ಆಶಯಗಳನ್ನು ಕೇಳಿಸಿಕೊಳ್ಳದ ಸಮಾಜವನ್ನು ಧಿಕ್ಕರಿಸಿ ಬೀದಿಗಿಳಿದ ಜೆನ್ ಝೀ ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನಷ್ಟೇ ಮಾಡುತ್ತಿಲ್ಲ. ಮಾನವೀಯತೆಯ ಮೌಲ್ಯಗಳನ್ನು ಮತ್ತೆ ನಮಗೆ ನೆನಪಿಸಿವೆ. ದೇಶದ ವಿವಿಧೆಡೆ ನಡೆಯುತ್ತಿರುವ ಯುವಜನತೆಯ ಹೋರಾಟ ಹೊಸ ರೂಪದ ಚಳುವಳಿಯನ್ನು ನಮ್ಮ ಮುಂದೆ ಇಟ್ಟಿದೆ. ನೋವು ದುಮ್ಮಾನಗಳ ನಡುವೆಯೂ ಹಾಡು, ಕುಣಿತ, ಚಿತ್ರಕಲೆ, ಸಂವಾದ, ಆಟ, ಹಾಸ್ಯ-ವಿಡಂಬನೆಯನ್ನು ತಮ್ಮ ರೀಲ್ಸ್ ಗಳಲ್ಲಿ ಹಿಡಿದಿಟ್ಟು ಜಗತ್ತಿಗೆ ಮುಟ್ಟಿಸಿವೆ. ಜಾತಿ ಭೇದವಿಲ್ಲದ, ಲಿಂಗ ತಾರತಮ್ಯವಿಲ್ಲದ, ಹಲವು ಸಮುದಾಯಗಳ, ದಿಲ್ಲಿ-ಹಳ್ಳಿಯೆನ್ನದೆ ಸೇರಿದ ಯುವಜನತೆ ಭವಿಷ್ಯವನ್ನು ರೂಪಿಸಿಕೊಳ್ಳುವ ಹಾದಿಯನ್ನು ಸಾಮೂಹಿಕ ನಾಯಕತ್ವದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಕಾಲವು ಕಸಿದುಕೊಂಡ ಕಲೆ-ಸಾಹಿತ್ಯದ ಅಭಿವ್ಯಕ್ತಿಯನ್ನು ಹೊಸ ರೂಪದಲ್ಲಿ ಮುಂದಿಡುತ್ತಿರುವುದನ್ನು ನಾವು ತೆರೆದ ಮನಸ್ಸಿನಿಂದ ಗಮನಿಸಬೇಕಾಗಿದೆ. ಇವು ಸೃಷ್ಟಿಸಿರುವ ಮೀಮ್ಸ್ ನಮ್ಮಲ್ಲಿ ಕೆಲವರಿಗಾದರು ಹೊಸ ದಿಕ್ಕಿನಿಂದ ಆಲೋಚಿಸಲು ಪ್ರಚೋದಿಸಿವೆ. ಕಲಿಕೆಯ ಹೊಸ ಹಾದಿಯೊಂದನ್ನು ನಮಗೆ ತೆರೆಸಿವೆ. ಬೀದಿಗಿಳಿದು ಎಲ್ಲರೊಡನೆ ಬೆರೆತು ಪ್ರೀತಿ ಹಂಚಿ ಹೊಸ ಬೆಳಕನ್ನು ನೀಡಿವೆ.

ಲಾಭ ನಷ್ಟಗಳಲ್ಲಿ ಕಳೆದುಹೋಗಿರುವ, ನಗು ಮರೆತ, ದ್ವೇಷ ಭರಿತ ಹಳೇ ಮನಸ್ಸುಗಳಿಗೆ ಕಲಿಕೆಯ ಅವಕಾಶವನ್ನು ತೆರೆದಿಟ್ಟಿವೆ. ಜೆನ್ ಝೀ ಭಾಷೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ‘ಸೋಮಾರಿ’ ಯೆಂದು ಕರೆಸಿಕೊಳ್ಳುವ ಯುವ ಮನಸ್ಸುಗಳು ನಮಗೆ ಏನು ಹೇಳುತ್ತಿವೆ ಎಂಬುದು ತಿಳಿಯಬಹುದು. ಮೀಮ್ಸ್, ರೀಲ್ಸ್, ಕಲಾತ್ಮಕ ಅಭಿವ್ಯಕ್ತಿಗಳ ಮೂಲಕ ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುತ್ತಾ, ತಲೆಮಾರುಗಳ ನಡುವಿನ ಅಂತರವನ್ನು ಪ್ರೀತಿಯಿಂದ ಸೇರ್ಪಡೆಗೊಳಿಸುತ್ತಿದ್ದಾರೆ. ಇವರ ಚಳುವಳಿ ಸಮಾಜಕ್ಕೆ ಹೊಸ ಕಲಿಕೆ, ಹೊಸ ನೈತಿಕತೆ ಮತ್ತು ಹೊಸ ಭವಿಷ್ಯದ ದಿಕ್ಕನ್ನು ತೋರಿಸುತ್ತಿದೆ. ಈ ಕಾಲಮಾನದ ಸಮಸ್ಯೆಗಳನ್ನು ಬಗೆಹರಿಸುವ ಪ್ರಕ್ರಿಯೆಯಲ್ಲಿ ಈ ಕಾಲದ ತಲೆಮಾರನ್ನು ದೂರವಿಡುವುದು ಮೂರ್ಖತನ. ಅವರ ಜಗತ್ತಿನಲ್ಲಿ ಬದುಕಲು ಬರದ ನಮಗೆ ಅವರ ಸಮಸ್ಯೆಗಳ ಅರಿವು ಹೇಗೆ ತಾನೆ ಮೂಡುತ್ತದೆ?
ಯುವ ಮನಸ್ಸುಗಳು ಬೀದಿಗಿಳಿಯುವ ಧೈರ್ಯ ತಮಗಿದೆ ಎಂದು ತೋರಿಸುತ್ತಿದ್ದಾರೆ. ಸಮಾಜದ ಮೇಲಿನ ತಮ್ಮ ಹಿಡಿತ ಸಡಿಲವಾಗುವ ಭಯ ಪಟ್ಟಭದ್ರಹಿತಾಸಕ್ತಿಗಳಿಗೆ ಇದ್ದೇ ಇರುತ್ತದೆ. ಜಾರುತ್ತಿರುವ ಹಿಡಿತದಿಂದ ವಿಚಲಿತರಾಗಿರುವ ಹಳೇತಲೆಮಾರು ಒಂದು ಕಡೆಯಿದ್ದರೆ, ಯುವ ಮನಸ್ಸುಗಳ ಜೊತೆಗೂಡಿರುವ ಎಲ್ಲಾ ತಲೆಮಾರುಗಳು ಆರೋಗ್ಯಕರ ಸಮಾಜದ ಮರುಸೃಷ್ಟಿಯನ್ನು ಆಶಿಸುತ್ತಿದ್ದಾರೆ. ಈ ಹೋರಾಟದ ರಾಜಕೀಯ ಏನೇ ಇರಲಿ, ಯುವಜನಕ್ಕೆ ಸಿಕ್ಕ ಈ ಅನುಭವ ಜೀವನದ ಕಲಿಕೆಯ ಅವಕಾಶವಂತೂ ಹೌದು. ಯಾವುದೇ ಕಾಲಮಾನದ ಯುವಜನರು ಎಂದಿಗೂ ಧೈರ್ಯ, ಮುಗ್ಧತೆ ಮತ್ತು ಬದ್ಧತೆಯನ್ನು ತೋರಿದ್ದಾರೆ. ಅದು ಆ ವಯಸ್ಸಿಗಿರುವ ಗುಣ. ಅದರಿಂದಲೇ ಸಮಾಜವು ವಿಕಾಸ ಹೊಂದುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಇದನ್ನು ಅಲ್ಲಗಳೆಯುವುದು ನಮ್ಮ ಅಹಂಕಾರ. ಅಹಂಕಾರದಿಂದ ಉಂಟಾಗುವುದು ವಿನಾಶವೊಂದೇ ಎಂದು ಇತಿಹಾಸ ನಮಗೆ ತೋರಿಸಿದೆ. ಇತಿಹಾಸದಿಂದ ಕಲಿಯುವ ನಮ್ರತೆ ನಮಗಿರಬೇಕಷ್ಟೆ. ತಲೆಮಾರುಗಳ ನಡುವಿನ ಸಂಘರ್ಷದಲ್ಲಿ, ಜೆನ್ ಜೀ ನೀಡುತ್ತಿರುವ ಕಲಿಕೆಗಳನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು.
ಡಾ. ಸುಶಿ ಕಾಡನಕುಪ್ಪೆ
ಸಹ ಪ್ರಾಧ್ಯಾಪಕರು, ಸಮುದಾಯ ಆರೋಗ್ಯ ದಂತ ವೈದ್ಯಕೀಯ ವಿಭಾಗ,
ವಿ ಎಸ್ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು.
ಇದನ್ನೂ ಓದಿ- ಯುವಶಕ್ತಿಗೆ ಐತಿಹಾಸಿಕ ಗೆಲುವು; ಆನೆಯನ್ನು ಮಣಿಸಿದ ಜಿರಲೆಗಳು


