ಬದುಕಲ್ಲಿ ತೀರಾ ಸಹಜವೆನಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಅಥವಾ ನೆಮ್ಮದಿಯನ್ನರಸಿಕೊಂಡು ದೇವರ ಸನ್ನಿಧಾನಕ್ಕೆ ಬರುವವರನ್ನು ಪಾವಿತ್ರ್ಯದ ಹೆಸರಲ್ಲಿ ಮೇಲೆ ಕುಳಿತಂಥ ದೇವದಲ್ಲಾಳಿಗಳೇ ಭಯ ಬಿತ್ತಿ ಶೋಷಿಸುತ್ತಾರೆಂದರೆ ಈ ನಂಬಿಕೆಯ ನಶೆ ಮತ್ತು ಭಕ್ತ ಜನರ ಈ ದೌರ್ಬಲ್ಯಗಳ ದುರ್ಲಾಭವನ್ನು ಪಡೆಯುತ್ತಿರುವ ದೇವ ದಲ್ಲಾಳಿಗಳ ದುರುಳತನವನ್ನು ಭಗವಂತನೆನ್ನುವನಿದ್ದರೆ ಮೆಚ್ಚಿಯಾನೇ ? – ಶಂಕರ್ ಸೂರ್ನಳ್ಳಿ, ಲೇಖಕರು.
ಮೂಲ ಎಲ್ಲಿಯದೋ ಆದರೂ ಕನ್ನಡದಲ್ಲೊಂದು ಪ್ರಸಿದ್ಧ ಮಾತಿದೆ. ಅದು “ಅಜ್ಞಾನವೇ ವರ“ (Ignorance is Bliss) ಎಂಬ ನಾಣ್ಣುಡಿ. ಮುಖ್ಯವಾಗಿ ಮಾನವನಿಗೆ ಸಂಬಂಧಿಸಿದಂತೆ ಇದೊಂದು ಸಾರ್ವತ್ರಿಕವಾಗಿ ಒಪ್ಪುವಂತಹ ಸುಂದರ ಸಾರ್ವಕಾಲಿಕ ನಾಣ್ಣುಡಿ.
ಮಾನವ ಅನಿಕೇತನನಾಗಿ ಒಟ್ಟಾರೆ ಅಲೆದಾಡಿಕೊಂಡು ಪ್ರಾಣಿಗಳಂತೆ ಬದುಕುವುದನ್ನು ಬಿಟ್ಟು ಒಂದೆಡೆ ನೆಲೆ ನಿಂತು ನಾಗರಿಕ ಎನಿಸಿಕೊಳ್ಳತೊಡಗಿದ ಮೇಲೆ ಒಂದು ಮಟ್ಟದಲ್ಲಿ ಅವನ ಬದುಕೇನೋ ಹಸನುಗೊಳ್ಳತೊಡಗಿದರೂ ಸಹ ಅವನ ನಾಗರೀಕ ಬದುಕಲ್ಲಿ ಕಾಳುಗಳೊಂದಿಗೆ ಬೇಕಷ್ಟು ಜೊಳ್ಳುಗಳೂ ಕೂಡ ಸೇರಿಕೊಂಡು ಅವು ಆಗಾಗ ತಮ್ಮ ಆಟಾಟೋಪವನ್ನು ತೋರಿಸುತ್ತಲೇ ಬಂದಿವೆ
ಮಾನವನ ಹೊರತಾಗಿ ಇನ್ನಿತರ ಪ್ರಾಣಿಗಳಿಗಿಲ್ಲದ ಸಾಮಾನ್ಯ ಬದುಕಿಗೆ ಹೊರತಾದ ಜ್ಞಾನದ ಪಿಪಾಸೆ ಮಾನವನ ಬದುಕನ್ನೇ ಕಾಡುವಂತಾಗಿ ಹೋಗಿರುವ ಸನ್ನಿವೇಶಗಳು ಬಹಳಷ್ಟಿವೆ . ಮುಖ್ಯವಾಗಿ ಹೇಳಬೇಕೆಂದರೆ ಮಾನವನೇ ತನ್ನ ಮಿತಿ ಮತ್ತು ಸುತ್ತಲಿನ ಪಾರಿಸರಿಕ ಅರಿವು ಮತ್ತು ಅನುಭವಗಳ ಹಿನ್ನೆಲೆಯಿಂದ ಕಲ್ಪಿಸಿ ಸೃಷ್ಟಿಸಿಕೊಂಡ ದೇವರು ಧರ್ಮಗಳ ಸಂಕೋಲೆಗಳ ಸಿಕ್ಕುಗಳು ಹಲವುಬಾರಿ ಅವನ ನೆಮ್ಮದಿಯನ್ನೇ ಹಾಳುಗೆಡವಿದ್ದುಂಟು. ಪ್ರಾದೇಶಿಕವಾಗಿ ಆಯಾಯ ದೃಷ್ಟಿಕೋನಗಳಿಂದ ಅವರವರ ವಿವೇಚನೆಗಳಿಗೆ ತಕ್ಕಂತೆ ಕಟ್ಟಿಕೊಂಡ ಈ ದೇವರು ಧರ್ಮಗಳ ವಿಚಾರಗಳ ನೆಪದಲ್ಲಿ ಸಾಕಷ್ಟು ಯುದ್ಧಗಳು, ಶೋಷಣೆಗಳು ನಿರಂತರವಾಗಿ ನಡೆದು ಬಂದಿರುವುದಕ್ಕೆ ದೊಡ್ಡ ಇತಿಹಾಸವೇ ಇದೆ.
ಈ ಕಲ್ಪನೆಯ ಹಿನ್ನೆಲೆಯಿಂದಲೇ ಹುಟ್ಟಿಕೊಂಡ ನಮ್ಮ ಧರ್ಮ, ನಮ್ಮ ದೇವರು, ಆತ ದೇವರ ನಂಬದ ನಾಸ್ತಿಕ, ಆತ ಧರ್ಮ ವಿರೋಧಿ, ಸ್ವರ್ಗ- ನರಕ, ಪಾಪ- ಪುಣ್ಯ ಜಟಾಪಟಿಗಳು ಇವನ್ನೆಲ್ಲ ನೋಡಿದಾಗ ಇಂತವುಗಳ ಗೊಡವೆಯೇ ಇಲ್ಲದೆ ಬದುಕು ಸಾಗಿಸುವ ಅಜ್ಞಾನಿ ಪ್ರಾಣಿಗಳೇ ನಮಗಿಂತ ಎಷ್ಟೋ ವಾಸಿ ಎಂದನ್ನಿಸದೆ ಇರದು. ಅದಕ್ಕೆ ಹೇಳಿದ್ದು ‘ಅಜ್ಞಾನವೇ ವರವಲ್ಲ ಮಹಾ ವರ“ ವೆಂದು
ದೇವರು ಮತ್ತು ಆ ನಂಬಿಕೆಯದ್ದೇ ಮತ್ತೊಂದು ಕವಲಾದ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಮೋಸ, ವಂಚನೆ, ಶೋಷಣೆ, ಅನಾಚಾರಗಳು ಅನೇಕ ಬಾರಿ ಪ್ರಶ್ನಾತೀತವಾಗೇ ಮರೆಗೆ ಸರಿಯುತ್ತವೆ. ಯಾಕೆಂದರೆ, ಬಹುತೇಕ ಎಲ್ಲ ಧರ್ಮಗಳಲ್ಲೂ ಪ್ರಶ್ನಿಸುವುದಕ್ಕೆ ಅಲಿಖಿತ ನಿರ್ಬಂಧವಿದೆ. ಸಣ್ಣದಿರುವಾಗಲೇ ಏಯ್, ಹಾಗೆಲ್ಲ ಪ್ರಶ್ನಿಸಬಾರದು.. ಎಂಬ ಎಚ್ಚರಿಕೆಯನ್ನು ಮನೆಯಲ್ಲೇ ಕಲಿಸಲಾಗುತ್ತದೆ. ದೇವರನ್ನೇ ಅಥವಾ ಧರ್ಮಶಾಸ್ತ್ರಗಳನ್ನೇ ಪ್ರಶ್ನಿಸಿ ನಮ್ಮ ಮಗ ದೇವರ ಅವಕೃಪೆಗೆ ಬೀಳದಿರಲಿ ಎಂಬ ಮುನ್ನೆಚ್ಚರಿಕೆ ಇದಾದರೂ, ಪ್ರಶ್ನೆಗಳಿಲ್ಲದೆಡೆ ಮೌಢ್ಯಗಳು ಎಗ್ಗಿಲ್ಲದೆ ಹುಲುಸಾಗಿ ಬೆಳೆಯುವುದೂ ಕೂಡ ಅಷ್ಟೇ ಸತ್ಯ.
ದೇವರ ಹೆಸರಲ್ಲಿ, ಮುಗ್ಧ ನಂಬಿಕೆಯ ಹೆಸರಲ್ಲಿ ಬರುವಂತಹ ಸ್ತ್ರೀಯರನ್ನು ಧರ್ಮದ ಹೆಸರಲ್ಲಿ ಮೋಡಿಗೊಳಿಸಿ ಶೋಷಿಸುವ, ಭಕ್ತರಿಂದ ಬರುವ ಹಣವನ್ನು ಎಗ್ಗಿಲ್ಲದೆ ದೋಚುವ ನಂಬಿಕೆ ದ್ರೋಹವೆಸಗುವಂತಹ ಅನೇಕ ಅಪರಾಧ ಪ್ರಕರಣಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಬದುಕಲ್ಲಿ ತೀರಾ ಸಹಜವೆನಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಅಥವಾ ನೆಮ್ಮದಿಯನ್ನರಸಿಕೊಂಡು ದೇವರ ಸನ್ನಿಧಾನಕ್ಕೆ ಬರುವವರನ್ನು ಪಾವಿತ್ರ್ಯದ ಹೆಸರಲ್ಲಿ ಮೇಲೆ ಕುಳಿತಂಥ ದೇವದಲ್ಲಾಳಿಗಳೇ ಭಯ ಬಿತ್ತಿ ಶೋಷಿಸುತ್ತಾರೆಂದರೆ ಈ ನಂಬಿಕೆಯ ನಶೆ ಮತ್ತು ಭಕ್ತ ಜನರ ಈ ದೌರ್ಬಲ್ಯಗಳ ದುರ್ಲಾಭವನ್ನು ಪಡೆಯುತ್ತಿರುವ ದೇವ ದಲ್ಲಾಳಿಗಳ ದುರುಳತನವನ್ನು ಭಗವಂತನೆನ್ನುವನಿದ್ದರೆ ಮೆಚ್ಚಿಯಾನೇ.. ?

ವಿಶೇಷವೆಂದರೆ ದೇವರ ಹೆಸರಲ್ಲಿನ ಈ ವಂಚನೆ ಮೋಸಗಳು ಹೊಸತೇನಲ್ಲ. ಕೋಟ್ಯಂತರ ಜನರ ಹಣ, ಸಂಪತ್ತು, ಆಭರಣ ಇತ್ಯಾದಿಗಳನ್ನು ಭವ್ಯ ದೇಗುಲ ಕಟ್ಟಿದ ವರ್ಷದೊಳಗೆ ಲೂಟಿ ಮಾಡಿ ಸುದ್ದಿಯಾಗುತ್ತಿರುವ ಅಯೋಧ್ಯೆಯ ರಾಮ ಮಂದಿರದ ಕಥೆಯಲ್ಲಿ ಅಚ್ಚರಿಯ ವಿಚಾರವೇನಿಲ್ಲ. ಸ್ವಯಂ ಶ್ರೀರಾಮನೇ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದನೆಂಬ ವಿಚಾರ ಸ್ವತಃ ರಾಮಾಯಣದಲ್ಲೇ ಇದೆ.
ಶ್ರೀರಾಮಚಂದ್ರ ರಾವಣನ್ನು ಕೊಂದು ಅಯೋಧ್ಯೆಯಲ್ಲಿ ರಾಜ್ಯಭಾರ ನಡೆಸುತ್ತಿದ್ದಾಗ ಅದೊಂದು ಮಾದರಿ ರಾಜ್ಯ ಅನ್ನಿಸಿತ್ತಂತೆ. ಅರ್ಥಾತ್ ರಾಮರಾಜ್ಯ. ಈ ರಾಮ ರಾಜ್ಯದಲ್ಲಿ ಬೀದಿಯಲ್ಲಿ ಹೋಗುವವನೊಬ್ಬ ನಾಯಿಗೆ ಕಲ್ಲು ಹೊಡೆದು ಘಾಸಿಗೊಳಿಸಿದನಂತೆ. ಇದರಲ್ಲೇನು ನಾಯಿಗೆ ಕಲ್ಲು ಹೊಡೆಯೋದು ತೀರಾ ಸಾಮಾನ್ಯ ವಿಷಯ, ಅದರದು ರಾಮರಾಜ್ಯವಲ್ಲವೇ. ಅನಾವಶ್ಯಕವಾಗಿ ಪೆಟ್ಟು ತಿಂದಂತಹ ಆ ನಾಯಿ ಸೀದಾ ರಾಮನ ಆಸ್ಥಾನಕ್ಕೆ ಹೋಗಿ ನೇರ ರಾಮನಲ್ಲೇ ದೂರು ನೀಡಿ ನನಗೆ ಒಬ್ಬನಿಂದ ಅನ್ಯಾಯವಾಗಿದೆ ನೀನು ನ್ಯಾಯ ತೀರ್ಮಾನ ಮಾಡಲೇ ಬೇಕೆಂದಿತಂತೆ. ವಿಚಾರ ತಿಳಿದ ರಾಮ ನಾಯಿಗೆ ಕಲ್ಲು ಹೊಡೆದದ್ದಕ್ಕೆ ಎಂಥ ನ್ಯಾಯ ಕೊಡೋದು ಅಂತ ಮಂತ್ರಿಗಳಲ್ಲೆಲ್ಲ ಚರ್ಚಿಸಿದರೂ ಆತನಿಗೆ ಏನೂ ತೋಚಲಿಲ್ಲವಂತೆ.
ಕೊನೆಗಾತ ನೀನೇ ಹೇಳಪ್ಪ ಆತನಿಗೆ ಯಾವ ಶಿಕ್ಷೆ ನೀಡಿದರೆ ನಿನಗೆ ತೃಪ್ತಿ ಎಂದು ಆ ನಾಯಿಯನ್ನೇ ಕೇಳಿದಾಗ ಅದು ” ಏನೂ ಬೇಡ ಆತನನ್ನು ಯಾವುದೋ ಒಂದು ದೇವಸನ್ನಿಧಾನಕ್ಕೆ ಮುಖ್ಯಸ್ಥನನ್ನಾಗಿ ಮಾಡು ಅಷ್ಟೇ ಸಾಕು ಅಂತಂತೆ. ಮೊದಲೇ ಎದುರಾದ ವಿಚಿತ್ರ ಕೇಸಿಗೆ ತಲೆ ಕೆಡಿಸಿಕೊಂಡಿದ್ದ ರಾಮನ ತಲೆ ಇನ್ನಷ್ಟು ಕೆಟ್ಟು ಅಲ್ಲಾ ಶುನಕರಾಯ ಶಿಕ್ಷೆ ಕೊಡು ಅಂದರೆ ಬಹುಮಾನದ ಮಾತಾಡುತ್ತೀಯಲ್ಲ ನನಗೊಂದೂ ತಿಳಿಯದಪ್ಪ ಸ್ವಲ್ಪ ವಿವರಿಸಿ ಹೇಳು ಅಂದನಂತೆ. ಅದಕ್ಕೆ ನಾಯಿ ಹಾಗೇನಿಲ್ಲ, ನಾನು ಹಿಂದಿನ ಜನ್ಮದಲ್ಲಿ ಇದೇ ಪಟ್ಟದಲ್ಲಿದ್ದು ಭಾರೀ ಮೆರೆಯುತ್ತಿದ್ದೆ. ವಂಚನೆ, ದ್ವೇಷ, ನಂಬಿಕೆ ದ್ರೋಹ, ಎಲ್ಲವನ್ನೂ ಕೂಡ ದೇವರ ಗುರಾಣಿಯಡಿಯಲ್ಲಿದ್ದುಕೊಂಡು ಮಾಡಿದ್ದ ಪರಿಣಾಮವಾಗಿ ನನಗೀ ಗತಿಯಾಗಿದೆ. ಇದನ್ನು ಅವನೂ ಸಹ ಅನುಭವಿಸಲಿ ಎಂದಿತಂತೆ.
ಆಸ್ತಿಕರಾದ ನನ್ನ ಮಿತ್ರರೊಬ್ಬರು ಕೆಲ ತಿಂಗಳುಗಳ ಹಿಂದೆ ಕುಟುಂಬ ಸಮೇತರಾಗಿ ಅಯೋಧ್ಯೆ ದರ್ಶನ ಮಾಡಿ ಬಂದಿದ್ದರು. ದೇಗುಲದ ಭವ್ಯತೆಯ ಬಗ್ಗೆ ಮಾತನಾಡುತ್ತಲೇ ಅಲ್ಲಿನ ಸ್ಥಳೀಯ ನಿವಾಸಿಗಳ ಬಡತನದ ಬಗ್ಗೆಯೂ ಅವರು ಹೇಳಿಕೊಂಡಿದ್ದರು. ರಾಮ ರಾಜ್ಯವೆಂದರೆ ಆಗಿನ ಕಟ್ಟುಪಾಡುಗಳ ಹೊರತಾಗಿ ಸುಭಿಕ್ಷೆ ಮತ್ತು ನೆಮ್ಮದಿಯ ಪ್ರತೀಕವೆಂದು ಪರಿಗಣಿತವಾಗಿತ್ತು. ಇದನ್ನೇ ಇವತ್ತಿನ ಕಾಲಕ್ಕನುಗುಣವಾಗಿ ಗಾಂಧೀಜಿಯೂ ಸಹ ರಾಮರಾಜ್ಯದ ಸುಭಿಕ್ಷಾ ಕನಸನ್ನು ಕಂಡಿದ್ದರು. ಆದರೆ, ಏಕಾಏಕಿ ನೂರಾರು ಪಟ್ಟು ಏರಿಕೆಯ ಸುಭಿಕ್ಷೆ ಆಗುತ್ತಿರುವುದು ಮಾತ್ರ ಮತ್ತಿನ್ಯಾರಿಗೆ..
ಶಂಕರ್ ಸೂರ್ನಳ್ಳಿ
ಲೇಖಕರು
ಇದನ್ನೂ ಓದಿ- ಕರಾವಳಿ ರಂಗಾಯಣ ವಿರುದ್ಧ ಯಕ್ಷ ರಂಗಾಯಣ ಕಾಳಗ


