ಕರಾವಳಿ ರಂಗಾಯಣ ವಿರುದ್ಧ ಯಕ್ಷ ರಂಗಾಯಣ ಕಾಳಗ

ಕರ್ನಾಟಕಕ್ಕೆ ಸದ್ಯದ ಸಂದರ್ಭದಲ್ಲಿ ಒಂದು ರಂಗಾಯಣ ಸಾಲದು ಕನಿಷ್ಟ ಬಯಲು ಸೀಮೆಗೊಂದು, ಮಲೆನಾಡಿಗೊಂದು, ಕರಾವಳಿಗೊಂದು, ಉತ್ತರ ಕರ್ನಾಟಕಕ್ಕೆ ಇನ್ನೊಂದು ಹೀಗೆ ಅಲ್ಲಲ್ಲಿ ರಂಗಶಾಲೆಗಳು ಜನಮಾನಸದ ಸೊಗಡನ್ನು ಉಳಿಸಿ, ಬೆಳೆಸಿ ಮುಂದುವರಿಸುವಂತಾದರೆ ಅದೊಂದು ಕರುನಾಡಿನ ಸಂಸ್ಕೃತಿಯ ರಾಯಭಾರಿಯಾಗಿ ಪರಿಣಮಿಸಲಿದೆ ಎನ್ನುವ ಅರ್ಥದಲ್ಲಿ ಕಾರಂತರು ಆಗ ಅಭಿವ್ಯಕ್ತಿಸಿದ್ದರು – ಮೋಚ, ರಂಗಕರ್ಮಿ

ಯಕ್ಷಗಾನ ಪ್ರಸಂಗಗಳಲ್ಲಿ ಕರಪತ್ರ, ಭಿತ್ತಿಚಿತ್ರಗಳಲ್ಲಿ ಮುಖ್ಯಪಾತ್ರದ ಹೆಸರಿನ ಕೊನೆಯಲ್ಲಿ ಮಹಾತ್ಮೆ, ಸಂಧಾನ, ಮೋಕ್ಷ, ವಿಜಯ, ಗರ್ವಭಂಗ, ಕಾಳಗ, ಪರಿಣಯ. ಉದಾ: ದೇವಿ ಮಹಾತ್ಮೆ, ಕೃಷ್ಣಸಂಧಾನ, ಸುಧನ್ವ ಮೋಕ್ಷ, ಬಬ್ರುವಾಹನ ಕಾಳಗ ಹೀಗೆ.. ಇವೆಲ್ಲವೂ ಹತ್ತಡಿ ಚೌಕಟ್ಟಿನಲ್ಲಿ ಒಂದು ತಾಸಿನಿಂದ ಹಿಡಿದು ಬೆಳಗಿನ ಜಾವದ ತನಕ ನಡೆಯುವ ಪ್ರಸಂಗಗಳು ಅಲ್ಲವೇ? ಇದು ಮನೋರಂಜನೆಯ ದೃಷ್ಟಿಯಿಂದ ರಂಗಸ್ಥಳಕ್ಕೆ ಸೀಮಿತವಾಗಿ ನಡೆದು ಪ್ರೇಕ್ಷಕರ ಆತ್ಮಶೋಧನೆಗೆ ಅನುಕೂಲವಾದರೆ ಅಡ್ಡಿಯಿಲ್ಲ. ಆದರೆ ಅದು ಮನೋರಂಜನೆಯ ವ್ಯಾಪ್ತಿಯನ್ನು ಬಿಟ್ಟು, ಹತ್ತಡಿ ಚೌಕದ ಎಲ್ಲೆ ಮೀರಿ ಸಮಯ ದಿನಗಳ ಪರಿವೇ ಇಲ್ಲದೆ ಕಳೆದ ಒಂದೆರಡು ವಾರಗಳಲ್ಲಿ ಕಲಾವಿದರ ನಡುವೆ ಕಾಳಗವೊಂದನ್ನು ಏರ್ಪಡಿಸುವ ವ್ಯರ್ಥ ಪ್ರಯತ್ನವೊಂದು ನಡೆದು ರಂಗ ಮತ್ತು ಯಕ್ಷಗಾನದ ಕಲಾವಿದರುಗಳು ಪರಸ್ಪರ ಕಾಲ್ಕೆರೆದು, ಕಾಳಗದ ಹಂತಕ್ಕೆ ಬಂದು ನಿಂತು ತದನಂತರ ಉಭಯರಲ್ಲಿ ಸಂಧಾನವಾಗದಿದ್ದರೂ ಸದ್ಯ ಉಪಶಮನವಾದಂತೆ ಕಂಡರೂ  ಅಸಮಾಧಾನದ ಎಳೆಯಂತೂ ಕಲಾವಿದರ ನಡುವೆ ಇನ್ನೂ ಹಸಿರಾಗಿದೆ.

ಮಾನ್ಯ ಶ್ರೀ ಸುನಿಲ್ ಕುಮಾರ್ ರವರು ಕನ್ನಡ ಸಂಸ್ಕೃತಿಯ ಸಚಿವರಾದ ಸಂದರ್ಭದಲ್ಲಿ ಪದನಿಮಿತ್ತ ರಂಗಸಮಾಜದ ಅಧ್ಯಕ್ಷರು ಆಗಿದ್ದುದರಿಂದ ಉಡುಪಿ ಜಿಲ್ಲೆಯಲ್ಲಿ ರಂಗಾಯಣದ ಶಾಖೆಯೊಂದನ್ನು ತಂದ ಅವರ ಕಾಳಜಿಯನ್ನು ಮೆಚ್ಚಲೇ ಬೇಕು. ಉಡುಪಿ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರಂಗಾಯಣಕ್ಕೊಂದು ಭೌತಿಕ ನೆಲೆ ಬೇಕಲ್ಲ. ಅದನ್ನೂ ಶ್ರೀ ಸುನಿಲ್ ಕುಮಾರ್ ರವರು ಕಾರ್ಕಳದ ಕೋಟಿಚೆನ್ನಯ ಥೀಮ್ ಪಾರ್ಕಿನ ಬಳಿಯಲ್ಲಿ ಇರುವ ಒಂದೆರಡು ಎಕರೆ ಜಾಗವನ್ನು ಅತ್ಯಂತ ಮುತುವರ್ಜಿವಹಿಸಿ ರಂಗಾಯಣದ ಆಸ್ತಿಯಾಗಿ ಪರಿಣಮಿಸುವಲ್ಲಿ ಆದ್ಯತೆ ತೋರಿದರು. ರಂಗಾಯಣದ ನಿತ್ಯ ಚಟುವಟಿಕೆಗೆ ಸ್ವಂತ ರಂಗಮಂದಿರದ ವ್ಯವಸ್ಥೆ ಇಲ್ಲದಂತಹ ಪರಿಸ್ಥಿತಿಯಲ್ಲಿಯೂ ಕೋಟಿಚೆನ್ನಯ ಥೀಮ್ ಪಾರ್ಕಿನ ಒಂದೆರಡು ಆಲಯಗಳನ್ನು ಕಚೇರಿ ಕೆಲಸಗಳಿಗೆ, ರಂಗ ಪ್ರಾತ್ಯಕ್ಷಿಕೆಗಳಿಗೆ ಒದಗಿಸುವಲ್ಲಿ ನೆರವಾದರು.

ಈ ಒಳ್ಳೆಯ ಪ್ರಯತ್ನಗಳ ನಡುವೆ ರಂಗಾಯಣಕ್ಕೆ ಹೆಸರಿಡುವ ಸಂದರ್ಭದಲ್ಲಿ ಆಗ ಸಚಿವರಾಗಿದ್ದ ಶ್ರೀಯುತ ಸುನಿಲ್ ಕುಮಾರ್ ಅವರಿಗೆ ಬಿ ವಿ ಕಾರಂತರ ಕನಸು ಮತ್ತು ಅವರ ಮನಸ್ಸನ್ನು ಕಟ್ಟಿಕೊಡುವ ಕೆಲಸವನ್ನು ಅಲ್ಲಿ ಉಪಸ್ಥಿತರಿದ್ದ ಇಲಾಖೆಯ ಅಧಿಕಾರಿಗಳಾಗಲಿ, ರಂಗಸಮಾಜದ ಪ್ರತಿನಿಧಿಗಳಾಗಲಿ ಮಾಡುವ ಪ್ರಯತ್ನವನ್ನು  ಮಾಡಿರಲಿಲ್ಲ. ಆದರೂ ರಂಗಾಯಣಕ್ಕೆ ಹೆಸರಿಡುವ ಸಂದರ್ಭದಲ್ಲಿ ಕರಾವಳಿ ಭಾಗ ಯಕ್ಷಗಾನ ಕಲೆಗೆ ಹೆಸರುವಾಸಿ ಮತ್ತು ಅದು ಕರಾವಳಿಯ ಸಂಸ್ಕೃತಿಯನ್ನು ಪ್ರತಿನಿಧಿಸುವುದರಿಂದ ಯಕ್ಷ ರಂಗಾಯಣವೇ ಸೂಕ್ತವೆಂಬ ಅಭಿಪ್ರಾಯವನ್ನು ಸಚಿವರ ಸುತ್ತ ನೆರೆದವರು ವ್ಯಕ್ತಪಡಿಸಿದ್ದರಿಂದ  ಶ್ರೀಯುತ ಸುನಿಲ್ ಕುಮಾರ ಅವರು ಇಂಬು ಕೊಟ್ಟಿರುವುದು ಸಹಜವೇ.

ಕಾರ್ಕಳದಲ್ಲಿ ರಂಗಾಯಣ ಆರಂಭಗೊಂಡಿರುವ ಬಗ್ಗೆ ನನಗೆ ಯಾವುದೇ ಗೊಂದಲಗಳಿರಲಿಲ್ಲ. ಪ್ರಾರಂಭಿಕ ಹಂತದಲ್ಲಿ ಅದನ್ನು ಕಟ್ಟುವ ಮತ್ತು ನಿರ್ವಹಿಸುವ ಕೆಲಸವನ್ನು ಶ್ರೀಯುತ ಜೀವನರಾಂ ಸುಳ್ಯ ಅವುಡು ಕಚ್ಚಿ ನಡೆಸಿದರು. ಆದರೆ ಅವರಿಗೆ ಮೂರು ಜಿಲ್ಲೆಯ (ಉತ್ತರಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆ) ರಂಗಕಲಾವಿದರಾಗಲಿ, ಯಕ್ಷ ರಂಗದ ಮೇರು ಕಲಾವಿದರುಗಳಾಗಲಿ ಬೆಂಬಲ ನೀಡಿರುವುದು ಅತ್ಯಲ್ಪ. ಹೀಗೆ ಯಾರಿಗೂ ಬೇಡದ ಈ ಯಕ್ಷರಂಗಾಯಣವೆಂದರೆ ಅದು ಯಕ್ಷಗಾನಕ್ಕೆ ಸೀಮಿತವಾದ ಶಾಖೆ. ಅಂತಹ ಶಾಖೆಗಳಲ್ಲಿ ರಂಗಕಲಾವಿದರಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ರಂಗಾಸಕ್ತರು ಬದಿಗೆ ಸರಿದರೆ, ಯಕ್ಷಗಾನಕ್ಕೆ ರಂಗಮಂದಿರ ಯಾಕೆ ಬೇಕು? ಯಕ್ಷಗಾನ ಕಲಿಯುವ ಆಸಕ್ತರಿಗೆ ಒಂದಷ್ಟು ಕೊಠಡಿಗಳು, ವಾಸ್ತವ್ಯದ ವ್ಯವಸ್ಥೆ ಇದ್ದರೆ ಸಾಕು ಇತ್ಯಾದಿ ಕುಹಕಗಳೊಂದಿಗೆ ಯಕ್ಷರಂಗಾಯಣ ದಿಕ್ಕಿಲ್ಲದ ಕೂಸಾಯಿತು.

ಹಾಗಾದರೆ ಈಗ ಯಾಕೆ ಯಕ್ಷರಂಗಾಯಣ ಮುಂಚೂಣಿಯ ಚರ್ಚೆಯಲ್ಲಿದೆ?

ಕಾರಣ ಬಹಳ ಸರಳ. ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ಇತ್ತೀಚೆಗೆ ಹೊರಡಿಸಿದ ಫರ್ಮಾನು – ಅದೇನೆಂದರೆ ಇಂದಿನಿಂದ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿರುವ ’ಯಕ್ಷ ರಂಗಾಯಣ’ ವನ್ನು ಇನ್ನೂ ಮುಂದಕ್ಕೆ ’ಕರಾವಳಿ ರಂಗಾಯಣ’ ಎಂಬ ನಾಮಧೇಯದಲ್ಲಿ ಸಂಭೋಧಿಸ ತಕ್ಕದ್ದು.

ಈ ಹೆಸರು ಬದಲಾವಣೆಯನ್ನು ಪ್ರಸ್ತುತ ರಂಗಸಮಾಜದ ಅಧ್ಯಕ್ಷರಾದ ಹಾಲಿ ಸಚಿವರ ಗಮನಕ್ಕೆ ತಂದು ಬದಲಾಯಿಸಿ ಕರಾವಳಿ ರಂಗಾಯಣ ಎಂದು ನಾಮಕರಣ ಮಾಡಿದಾಗ ಮಾಜಿ ಸಚಿವರೂ ಹಾಲಿ ಶಾಸಕರೂ ಆಗಿರುವ ಶ್ರೀಯುತ ಸುನಿಲ್ ಕುಮಾರ್ ಅವರ ಮೂಲಕ ಸರಕಾರದ ಈ ತೀರ್ಮಾನ ಸರಿಯಿಲ್ಲ ಎಂಬ ವ್ಯಾಖ್ಯಾನವನ್ನು ಹೇಳಿಸಿ ಅವರನ್ನು ದಾರಿ ತಪ್ಪಿಸುವಲ್ಲಿ ಬೆರಳೆಣಿಕೆಯಷ್ಟು ಯಕ್ಷಗಾನದ ಪ್ರಭೃತಿಗಳು ಸಫಲರಾದರು.

ಮೂಲತ: ವಿಷಯವೇನೆಂದರೆ

ನಾನು ನೇರವಾಗಿ ಬಿ ವಿ ಕಾರಂತರ ಶಿಷ್ಯಾಟನೆ ಮಾಡಿರುವುದರಿಂದ ಅವರ ಕನಸು ಮತ್ತು ಮನಸ್ಸಿನ ಅಭಿಪ್ರಾಯವನ್ನು ಇಲ್ಲಿ ಹೇಳುವುದು ಈ ಸಂದರ್ಭದಲ್ಲಿ ಸೂಕ್ತ ಎಂದು ಭಾವಿಸುತ್ತೇನೆ. ಇದನ್ನು ಪುರಾವೆ ಸಮೇತ ರುಜು ಮಾಡಿ ಎಂದರೆ  ಇದನ್ನು ಪುರಾವೆ ಮಾಡುವ ವ್ಯಕ್ತಿಗಳು ಬದುಕಿಲ್ಲ. ಬದುಕಿರುವ ಏಕ ವ್ಯಕ್ತಿಗೆ ಅರುಳು ಮರುಳು.

1982-8೩ ರ ಕಾಲ ನಾನು ನೀನಾಸಮ್ ನ ರಂಗಶಾಲೆಯ ಡಿಪ್ಲೊಮಾ ಹೊಂದಿದ ಬಳಿಕ ಒಂದು ತಿಂಗಳ ಕಾಲ ಬಿ.ವಿ ಕಾರಂತರ ಜೊತೆಗೆ ಮಧ್ಯಪ್ರದೇಶದ ಭೋಪಾಲ್ (ಭಾರತ ಭವನ)ನಲ್ಲಿ ಶಿಷ್ಯವೃತ್ತಿ ಮಾಡುವ ಅವಕಾಶ ಆಗಿನ ಕರ್ನಾಟಕ ನಾಟಕ ಆಕಾಡೆಮಿಯ ವತಿಯಿಂದ ಒದಗಿ ಬಂತು. ನನ್ನ ಜೊತೆಗೆ ಕರ್ನಾಟಕದ ಇನ್ನಿಬ್ಬರು ಗೆಳೆಯರು ಜೊತೆಗಾರರು ಇದ್ದರು. ಅದರಲ್ಲಿ ಬೀದರಿನ ಬಸು (ಈಗ ಕೀರ್ತಿಶೇಷ) ಮತ್ತು ಮಹಾಬಲೇಶ್ ರಾವ್ ಕೆ ಜಿ (ಸಹಪಾಠಿ ಮತ್ತು ನೀನಾಸಂ ರಂಗ ಶಿಕ್ಷಣ ಶಾಲೆಯ ನಿವೃತ್ತ ಪ್ರಾಂಶುಪಾಲರು) ಜೊತೆಗಿದ್ದರು. ನಮ್ಮೊಂದಿಗೆ ಕಾರಂತರು ತಮ್ಮ ಕನಸುಗಳನ್ನು ಬಿಚ್ಚಿಡುತ್ತಿರುವಾಗ ನಾವೊಂದು ಪ್ರಶ್ನೆ ಕೇಳಿದೆವು. ನೀವು ನಮ್ಮಲ್ಲಿಗೆ ಬರುವುದು ಯಾವಾಗ?

ಕಾರಂತರು ಅಂದರು; ಭಾರತ್ ಭವನದಲ್ಲಿ ಮಾಡಿರುವ ರೆಪರ್ಟರಿಯ ಮಾದರಿಯದ್ದೇ ಒಂದನ್ನು ಕರ್ನಾಟಕದಲ್ಲಿ ರೂಪಿಸುವ ಯೋಜನೆಯೊಂದಿದೆ. ಆದರೆ ಅದು ಯಾವಾಗ? ಎಲ್ಲಿ? ಎತ್ತ? ಎನ್ನುವುದು ಇನ್ನೂ ನೆನೆಗುದಿಯಲ್ಲಿದೆ ಎಂದು ಅಂದಿರುವ ನೆನಪು.

ಅಂತು ಇಂತೂ 1989 ರಲ್ಲಿ ಮೈಸೂರಿನಲ್ಲಿ ನಾಟಕ ಕರ್ನಾಟಕ ಎಂಬ ಹೆಸರಿನಲ್ಲಿ ರಂಗಶಾಲೆ ಆರಂಭಗೊಂಡಾಗ ಮತ್ತು ಅದರಲ್ಲಿ ನಮ್ಮ ಒಡನಾಡಿಗಳೆಲ್ಲರೂ ಕಲಾವಿದರಾಗಿ ಸೇರಿಕೊಂಡು ಬದುಕಿಗೊಂದು ನೆಲೆಕಂಡುಕೊಂಡಾಗ ಅತ್ಯಂತ ಸಂತಸ ಪಟ್ಟವರಲ್ಲಿ ನಾನೂ ಒಬ್ಬ.

ಈ ಮುವ್ವತ್ತಾರು ವರ್ಷಗಳಲ್ಲಿ ರಂಗಾಯಣ ವಿಸ್ತರಿಸಿಕೊಂಡಿದೆ, ಸರಕಾರಗಳು ಬದಲಾಗಿವೆ, ರಂಗಾಯಣದ ರಂಗಸಮಾಜದ ಪ್ರತಿನಿಧಿಗಳು ಬದಲಾಗಿದ್ದಾರೆ. ಇರುವ ಒಂದು ರಂಗಾಯಣ ಪ್ರಸ್ತುತ ಆರು ಶಾಖೆಗಳನ್ನು ಹೊಂದಿದೆ. ಕ್ರಿಯಾಶೀಲವಾಗಿ ರಂಗಕ್ರಿಯೆಗಳನ್ನು ನಡೆಸಬೇಕಾದ ರಂಗಾಯಣದ ನಿರ್ದೇಶಕರುಗಳು ಕಡತಗಳನ್ನು ಹಿಡಿದುಕೊಂಡು ಎಂಎಸ್ ಬಿಲ್ಡಿಂಗ್ ನಿಂದ ವಿಧಾನಸೌಧದ ಕಂಭಗಳಿಗೆ ಎಡತಾಕುವ ಮೂಲಕ ರಂಗಕ್ರಿಯೆಗಿಂತ ಅನುದಾನ ಹಿಡಿದುಕೊಂಡು ಬರುವ ಓಲೈಕೆದಾರರಾಗಿದ್ದಾರೆ. ಇಂತಹ ಒಂದು ವ್ಯವಸ್ಥೆಯಲ್ಲಿ ನೈಜ ಮತ್ತು ಸಹಜ ರಂಗ ಕ್ರಿಯೆ ಸತ್ತು ನೆಲಕಚ್ಚಿದೆ.

ಬಿ ವಿ ಕಾರಂತರು

ಈ ದುರಿತ ಕಾಲದಲ್ಲಿ ರಂಗ ಚಟುವಟಿಕೆಗಳ ಪ್ರಯೋಗಶೀಲತೆಗೆ, ಪ್ರಾತ್ಯಕ್ಷಿಕೆಗೆ, ಪ್ರದರ್ಶನಗಳಿಗೆ ಆದ್ಯತೆ ನೀಡ ಬೇಕಾದ ನಾವು ನಾಮಕರಣದ ಗೊಂದಲಗಳಲ್ಲಿ ಸಿಲುಕಿಕೊಂಡಿದ್ದೇವೆ.

ಸಜ್ಜನರಿಗಿದು ಕಾಲವಲ್ಲ ಎನ್ನುವುದು ಬ್ರೆಕ್ಟ್ ಮಹಾಶಯನ ಒಂದು ನಾಟಕದ ತಲೆಬರಹ. ಎರಡು ವರ್ಷಗಳ ಹಿಂದೆ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ರಂಗಭೂಮಿಯ ಸಜ್ಜನಿಕೆಯ ಪ್ರತೀಕವಾದ ಶ್ರೀಯುತ ವೆಂಕಟರಮಣ ಐತಾಳರವರು ಕಾರ್ಕಳ ಯಕ್ಷರಂಗಾಯಣಕ್ಕೆ ಒಂದು ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮುಂದಾದರು. ಅವರು ಒಬ್ಬ ನಿರ್ದೇಶಕರಾಗಿ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬಂದಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಆದರೆ ಏನು ಮಾಡುವುದು? ಅವರ ಸಜ್ಜನಿಕೆ ಅವರನ್ನು ಸುಮ್ಮನೆ ಬಿಡಬೇಕಲ್ಲ. ರಂಗ ಸಮುದಾಯದ ಕಲಾವಿದರನ್ನು ವಿಸ್ತೃತವಾಗಿ ಭೇಟಿಯಾಗಿ ನಾವೇನು ಮಾಡಬೇಕು ಸಲಹೆ ನೀಡಿ ಎಂದು ಬೇಡಿಕೊಂಡರು. ಅದರಲ್ಲಿ ವ್ಯಕ್ತವಾದ ಹಲವಾರು ಸಲಹೆ ಮತ್ತು ಅಭಿಪ್ರಾಯಗಳಲ್ಲಿ ಯಕ್ಷಗಾನಕ್ಕೆ ವ್ಯವಸ್ಥೆ ಇದೆ, ಆಕಾಡೆಮಿ ಇದೆ, ದೇವಸ್ಥಾನಗಳಿವೆ, ಭಕ್ತಾದಿಗಳು ಇದ್ದಾರೆ, ಪೋಷಕರು, ದಾನಿಗಳು ಇದ್ದಾರೆ. ಆದರೆ ರಂಗಭೂಮಿ ಅನಾಥವಾಗಿದೆ. ಇಷ್ಟಕ್ಕೂ ಕರಾವಳಿ ಉದ್ದಕ್ಕೂ ವೈವಿಧ್ಯಮಯವಾದ ಮೂಲನಿವಾಸಿಗಳು, ಪಂಗಡಗಳು ಅವರ ಆಚರಣೆಗಳು, ಅವರ ಹಾಡು, ಕುಣಿತ, ಭಾಷಾ ವೈವಿಧ್ಯತೆ ಇದೆ. ಅವೆಲ್ಲವನ್ನು ಒಳಗೊಂಡ ಒಂದು ಸಾಂಸ್ಕೃತಿಕ ಸಂವಹನ, ಪರಸ್ಪರ ಕೊಡುಕೊಳ್ಳುವಿಕೆಯ, ಕಲಿಕೆಯ ವಾತಾವರಣ ನಿರ್ಮಾಣಗೊಳ್ಳ ಬೇಕು. ಮಾತ್ರವಲ್ಲ ಅದೊಂದು ಕರಾವಳಿಯ ಅಸ್ಮಿತೆಯ ಅಭಿವ್ಯಕ್ತಿಯಾಗಬೇಕು.

ಈ ಮಾಹಿತಿಯನ್ನು ರಂಗಸಮಾಜಕ್ಕೆ ತಲುಪಿಸಿ ಬಳಿಕ ರಂಗಸಮಾಜ ತೆಗೆದುಕೊಂಡ ತೀರ್ಮಾನವೇ ’ಕರಾವಳಿ ರಂಗಾಯಣ’. ಅದು ಉಡುಪಿ ರಂಗಾಯಣ, ಕಾರ್ಕಳ ರಂಗಾಯಣ ಆಗಿದ್ದರೂ ಸಮಸ್ಯೆಯಾಗುತ್ತಿರಲಿಲ್ಲ.

ಇಷ್ಟಕ್ಕೂ ಮೀರಿ ಅದು ಯಕ್ಷರಂಗಾಯಣವೇ ಆಗ ಬೇಕೆಂದು ಯಾರಾದ್ರೂ ಕಾಳಗಕ್ಕೆ ಸಿದ್ಧವಾದರೆ ಆ ಕಾಳಗಕ್ಕೆ ನಾನಂತು ಸಿದ್ಧನಿಲ್ಲ.

ನನ್ನ ಮನೆಯಲ್ಲಿ ಕಾರಂತರ ಒಂದು ಫೋಟೋ ಇದೆ. ದಿನಾ ಅದಕ್ಕೊಂದು ಹೂವು ಇಡ್ತೇನೆ. ನಾಳೆ ಹೂ ಇಡುವಾಗ ಅವರಲ್ಲಿ ಕ್ಷಮೆ ಕೋರುತ್ತೇನೆ. ನೀವು ನಮ್ಮ ಜಿಲ್ಲೆಯಲ್ಲಿ ಹುಟ್ಟಿದಿರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಂಗಭೂಮಿಯ ಋಷಿ ಎಂದು ಗುರುತಿಸಲ್ಪಟ್ಟಿರಿ. ನಮ್ಮೆಲ್ಲರಿಗೂ ರಂಗಭೂಮಿ ಬದುಕು ಕಟ್ಟಿಕೊಡುತ್ತೆ ಎಂದು ದಾರಿ ತೋರಿದಿರಿ. ಆದರೆ ನಿಮ್ಮ ಜಿಲ್ಲೆಯಲ್ಲಿ ನಿಮ್ಮ ಕನಸಾದ ಕರಾವಳಿ ರಂಗಭೂಮಿಯನ್ನು ನಿರ್ಮಿಸುವಲ್ಲಿ ನಾನು ಸೋತಿದ್ದೇನೆ. ನನಗೆ ಕ್ಷಮೆ ಇರಲಿ.

ಮೋಚ

ಮೋಚ ಹೆಸರಿನಿಂದಲೇ ಖ್ಯಾತರಾಗಿರುವ ಮೋಹನಚಂದ್ರ ಯು ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ರಂಗಕರ್ಮಿ. ಪ್ರೊಸೀನಿಯಮ್ ಹಾಗೂ ಬೀದಿನಾಟಕಗಳಲ್ಲಿ ಸತತವಾಗಿ ಕೆಲಸ ಮಾಡುತ್ತಿರುವ ಒಬ್ಬ ಪ್ರತಿಭಾವಂತ ನಿರ್ದೇಶಕ. ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು ‘ತಾಯಿ’, ‘ಕತ್ತಲೆ ದಾರಿ ದೂರ’, ‘ಗ್ರಾಮಚಾವಡಿ’, ‘ಬಸ್ತಿ’, ‘ನೆಮ್ಮದಿ ಅಪಾರ್ಟ್‌ ಮೆಂಟ್’, ‘ಜ್ಯೂಲಿಯಸ್ ಸೀಝರ್’, ‘ದಂಗೆಯ ಮುಂಚಿನ ದಿನಗಳು’ ‘ಸಂಪಿಗೆ ನಗರ ಪೋಲೀಸ್ ಸ್ಟೇಶನ್’, ‘ಅಶ್ವತ್ಥಾಮ ನಾಟ್ಔಟ್’ ಮೊದಲಾದುವು.  ಇವರಿಗೆ ಪ್ರತಿಷ್ಠಿತ ‘ಸಿಜಿಕೆ ರಂಗ ಪುರಸ್ಕಾರ’ ಕೂಡ ಲಭಿಸಿದೆ.

ಇದನ್ನೂ ಓದಿಸಿನೆಮಾ | ʼಸತ್ಲುಜ್‌ʼ ಸತ್ಯಕ್ಕೆ ಬೆದರಿದ ಸರಕಾರ

More articles

Latest article

Most read