ಬೆಂಗಳೂರು : ರಾಜ್ಯದಲ್ಲಿ ಉದ್ದಿಮೆ ಹಾಗೂ ವಹಿವಾಟುಗಳು ಹೆಚ್ಚಿನ ಆತ್ಮವಿಶ್ವಾಸದಿಂದ ಹೊಸತನ ಅಳವಡಿಸಿಕೊಳ್ಳಲು ಮತ್ತು ಜಾಗತಿಕ ಗುಣಮಟ್ಟದ ಪ್ರತಿಭಾನ್ವಿತ ತಂತ್ರಜ್ಞರನ್ನು ಆಕರ್ಷಿಸಲು ಅಗತ್ಯವಾದ ಅನುಕೂಲಕರ ವಾತಾವರಣ ಕಲ್ಪಿಸಿಕೊಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಮುಖಂಡರ ಜೊತೆಗೆ ಬುಧವಾರ ಹಮ್ಮಿಕೊಂಡಿದ್ದ ‘ಕ್ಯಾಟಲಿಸ್ಟ್ ಕನೆಕ್ಟ್’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
”ಮುಂದಿನ ತಲೆಮಾರಿನ ಜಾಗತಿಕ ತಂತ್ರಜ್ಞಾನಗಳು ಕರ್ನಾಟಕದಿಂದಲೇ ವಿಸ್ತರಣೆಯಾಗಲು ಈ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲಾಗುವುದು. 2029ರ ಒಳಗೆ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ, 3.5 ಲಕ್ಷ ಗುಣಮಟ್ಟದ ಉದ್ಯೋಗ ಸೃಷ್ಟಿಸುವ ಹಾಗೂ ₹ 4.76 ಲಕ್ಷ ಕೋಟಿ ಮೊತ್ತದ ಆರ್ಥಿಕ ಉತ್ಪಾದನೆಯ ಗುರಿ ಸಾಧಿಸಲು ಸರ್ಕಾರ ಬದ್ಧವಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಗೂ ಮುನ್ನ ಸಿಎಂ ಅವರು ಟಾರ್ಗೆಟ್ ಇಂಡಿಯಾದ ಬೆಂಗಳೂರು ಕ್ಯಾಂಪಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಸಿಸಿ ಕೇವಲ ಸೇವಾ ಕೇಂದ್ರಗಳಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು, “ದೇಶದ ಪ್ರಮುಖ ‘ಜಿಸಿಸಿ’ ತಾಣವಾಗಿ ಕರ್ನಾಟಕ ಬೆಳೆದಿರುವುದು ಜಾಗತಿಕ ಉದ್ಯಮ ಸಮುದಾಯದ ವಿಶ್ವಾಸದ ಫಲವಾಗಿದೆ. ಇಂದು ‘ಜಿಸಿಸಿ’ಗಳು ಕೇವಲ ಸೇವಾ ವಿತರಣಾ ಕೇಂದ್ರಗಳಷ್ಟೇ ಅಲ್ಲದೆ, ಕೃತಕ ಬುದ್ಧಿಮತ್ತೆ (AI), ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಉತ್ಪನ್ನ ನಾವೀನ್ಯತೆಯ ಜಾಗತಿಕ ಕೇಂದ್ರಗಳಾಗಿ ಬೆಳೆಯುತ್ತಿವೆ” ಎಂದರು.
”ಜಿಸಿಸಿಗಳು ಇನ್ನಷ್ಟು ದೊಡ್ಡ ಜಾಗತಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಅಗತ್ಯವಾದ ತಂತ್ರಜ್ಞರ ಲಭ್ಯತೆ, ನೀತಿ ನಿಯಮಗಳ ನೆರವು ಮತ್ತು ಅತ್ಯುತ್ತಮ ಪರಿಸರ ಒದಗಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಕೈಗಾರಿಕಾ ವಲಯದ ಜೊತೆಗಿನ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸರ್ಕಾರ ನಿರಂತರ ಉತ್ತೇಜನ ನೀಡಲಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

