ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಮುಖ್ಯ ಚುನಾವಣಾ ಅಧಿಕಾರಿಗೆ ಸೋಮವಾರ ದೂರು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ನಡೆಉತ್ತಿರುವ ಎಸ್ಐಆರ್ ಪ್ರಕ್ರಿಯೆಯು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಲಾಗಿದೆ. ಮನೆ ಮನೆಗೆ ತೆರಳಿ ಮಾಡಬೇಕಾದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್, ಪಾವಗಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸಾಮೂಹಿಕವಾಗಿ ಮಸೀದಿಗಳು, ಕಲ್ಯಾಣ ಮಂಟಪಗಳಲ್ಲಿ ಸ್ಥಳೀಯರನ್ನು ಕರೆಸಿಕೊಂಡು ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಇದು ಅನರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಾಯವಾಗಲಿದೆ. ಈ ಮೂಲಕ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.
ಈ ಸಾಮೂಹಿಕವಾಗಿ ನಡೆಸಿದ ಎಸ್ಐಆರ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿ, ಹೊಸದಾಗಿ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಬೇಕು ಮತ್ತು ಅಗತ್ಯವಿದ್ದರೆ ಹೊರರಾಜ್ಯಗಳ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ವಿಪಕ್ಷಗಳು ಮನವಿ ಮಾಡಿವೆ.
ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಎಂಎಲ್ಸಿ ಸಿ.ಟಿ. ರವಿ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಇದ್ದರು.

