ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಬ್ ಚಾಲಕ ಇಂದುಶೇಖರ್ ಎಂಬಾತ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ ಪತ್ನಿ, ಅತ್ತೆ, ಪತ್ನಿಯ ಅಣ್ಣಂದಿರು ಹಾಗೂ ಅತ್ತಿಗೆಯರನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.
ಈ ಪ್ರಕರಣದ ಪ್ರಾಥಮಿಕ ತನಿಖೆಯ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತರು, ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಹಲವು ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದಾರೆ.
7 ಮಂದಿಯ ಹತ್ಯೆ, 6 ಮೃತದೇಹಗಳಿಗಾಗಿ ಶೋಧ
ನವೆಂಬರ್ 3ರಂದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಒಂದೇ ಕುಟುಂಬದ ಏಳು ಮಂದಿಯನ್ನು ಆರೋಪಿ ಒಬ್ಬನೇ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಒಂದು ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಆರು ಮೃತದೇಹಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವೈಯಕ್ತಿಕ ಕಾರಣಕ್ಕೆ ಕೊಲೆ?
ಆರೋಪಿಯ ಸ್ವಯಂ ಹೇಳಿಕೆಯ ಪ್ರಕಾರ, ವೈಯಕ್ತಿಕ ಕಾರಣಗಳಿಂದ ಏಳು ಮಂದಿಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ. ಕುಟುಂಬದ ಸದಸ್ಯರು ಸುಮಾರು 15ರಿಂದ 20 ದಿನಗಳ ಅಂತರದಲ್ಲಿ ಒಬ್ಬೊಬ್ಬರಾಗಿ ನಾಪತ್ತೆಯಾಗಿದ್ದರು ಎನ್ನಲಾಗಿದೆ.
ನಾಪತ್ತೆ ಪ್ರಕರಣದ ದೂರು ಕೂಡ ಆರೋಪಿಯೇ ಮೃತರ ಮೊಬೈಲ್ನಿಂದ ದಾಖಲಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.
ಮಗುವಿನ ಹತ್ಯೆಗೂ ಸಂಚು?
ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಒಂದು ಮಗುವನ್ನು ರಕ್ಷಿಸಲಾಗಿದೆ. ಆ ಮಗುವನ್ನು ಹತ್ಯೆ ಮಾಡುವ ಯೋಜನೆಯನ್ನೂ ಆರೋಪಿ ರೂಪಿಸಿದ್ದ ಎನ್ನಲಾಗಿದೆ.
ಇನ್ನೊಂದೆಡೆ, ಆರೋಪಿಯ ಮಗಳು ಕೂಡ ಪ್ರಕರಣದಲ್ಲಿ ಸಾಥ್ ನೀಡಿದ್ದಾಳೆ ಎಂಬ ಮಾಹಿತಿ ಹೊರಬಿದ್ದಿದೆ. ಅಪ್ರಾಪ್ತ ಬಾಲಕಿಗೆ ಆರೋಪಿ ಬ್ರೈನ್ವಾಷ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹಿನ್ನೆಲೆ
ಇಂದುಶೇಖರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಸುಮಾರು ಐದು ವರ್ಷಗಳ ಹಿಂದೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಸರ ಕಳವು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಉಳಿದ ಮೃತದೇಹಗಳ ಪತ್ತೆ ಹಾಗೂ ಹತ್ಯೆಯ ಹಿಂದಿನ ನಿಖರ ಕಾರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

