ಇದು ನಾಟಕದ ಕುರಿತಾದ ವಿಮರ್ಶೆಯಲ್ಲ ಅದರ ಕುರಿತಾದ ಪ್ರತಿಸ್ಪಂದನೆ ..
ಇತ್ತೀಚೆಗೆ ಶಿವಮೊಗ್ಗ ರಂಗಾಯಣದವರು ಪ್ರಸ್ತುತಪಡಿಸಿದ ಬೊಳುವಾರು ಮೊಹಮ್ಮದ್ ಕುಂಞ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು ಆಧರಿಸಿದ ರಂಗಪ್ರಸ್ತುತಿ ‘ಸ್ವಾತಂತ್ರ್ಯದ ಓಟ’ ನಾಟಕವು ತಾನು ಹೋದಲ್ಲೆಲ್ಲಾ ಅಲ್ಲಿಯ ಸಹೃದಯರ ಮನದೊಳಗೆ ಕಾರುಣ್ಯದ, ಪ್ರೀತಿಯ ಬೀಜವನ್ನು ಬಿತ್ತುವಲ್ಲಿ ಸಫಲವಾಗಿದೆ.
‘ತಟ್ಟು ಚಪ್ಪಾಳೆ ಪುಟ್ಟ ಮಗು’ ಸಂಕಲನದ ಮೂಲಕ ಕನ್ನಡ ನಾಡಿನ ಅರಿವನ್ನು ವಿಸ್ತರಿಸಿದವರು ಬೊಳುವಾರು ಮೊಹಮ್ಮದ್ ಕುಂಞ. ಸಾವಿರಾರು ವರ್ಷಗಳಿಂದ ಈ ನಾಡಿನಲ್ಲಿ ಇದ್ದು, ಇಲ್ಲಿಯೇ ಬಾಳಿ, ದೇಶಕ್ಕಾಗಿ ಹೋರಾಡಿ, ರಾಜಕೀಯ ಕಾರಣಗಳಿಂದ ‘ಅನ್ಯ’ ವೆನಿಸಿದ ಸಮುದಾಯದ ಕಥನಗಳನ್ನು ಈ ನಾಡಿಗೆ ನೀಡಿದವರು.
ಈಗ ‘ಸ್ವಾತಂತ್ರ್ಯದ ಓಟ’ ಅನ್ನುವ ಸಾವಿರಾರು ಪುಟಗಳ ಕೃತಿಯ ಮೂಲಕ ದೇಶ ವಿಭಜನೆಯ ದುರಂತ, ಅದರ ಪರಿಣಾಮ, ಪಡೆದುಕೊಂಡು ಕಳೆದುಕೊಂಡವರ, ಕಳೆದುಕೊಂಡು ಪಡೆದುಕೊಂಡವರ ಧ್ವನಿಯನ್ನು , ಅವರ ಬಾಳಿನ ದರ್ಶನವನ್ನು ನಮ್ಮ ಮುಂದಿಟ್ಟಿದ್ದಾರೆ.
ಇಂಥ ಅಗಾಧ ಹರಹಿನ ಕೃತಿಯನ್ನು ರಂಗರೂಪಕ್ಕೆ ಅಳವಡಿಸಿ ನಾಟಕ ಪ್ರದರ್ಶನದ ಮೂಲಕ ಇದನ್ನು ಸಾಧ್ಯವಾಗಿಸಿದ ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಸಾಗರ, ಈ ನಾಟಕದ ನಿರ್ದೇಶಕರಾದ ನಟರಾಜ ಹೊನ್ನವಳ್ಳಿ ಅವರಿಗೂ ಹಾಗೂ ಸಮರ್ಥವಾಗಿ ಸಹೃದಯರಿಗೆ ದಾಟಿಸಿದ ನಟವರ್ಗ ಮತ್ತು ತಾಂತ್ರಿಕ ವರ್ಗದವರಿಗೂ ಮೊದಲಿಗೆ ಅಭಿನಂದನೆಗಳು.

ಮೂಲದ ಕಾದಂಬರಿಯನ್ನು ನಾನಿನ್ನೂ ಓದಿಲ್ಲವಾದರೂ ಮೂರುವರೆ ಗಂಟೆಯ ಈ ರಂಗಪ್ರಸ್ತುತಿಯಲ್ಲಿ ಕಥಾನಾಯಕ ಚಾಂದ್ ಅಲಿಯ ಬದುಕಿನ ಓಟಗಳನ್ನು, ವಿಭಜನೆಯ ನೋವುಗಳನ್ನು ಮತ್ತು ತಾನು ನೆಲೆ ಕಂಡುಕೊಂಡ ಊರಾದ ಮುತ್ತುಪ್ಪಾಡಿಯ ಆದರ್ಶ ಬದುಕು, ಅದರ ನೋವು-ನಲಿವುಗಳನ್ನು ಸಶಕ್ತವಾಗಿ ನಾಟಕವು ಕಟ್ಟಿಕೊಡುತ್ತದೆ. ಅದಕ್ಕಾಗಿ ನಾಟಕದ ನಿರ್ದೇಶಕರು ಬಳಸಿಕೊಂಡಿರುವ ದೃಶ್ಯೀಕರಣ ತಂತ್ರ, ಕುತೂಹಲ ಮೂಡಿಸುವ ಅದರ ಬಂಧ ಮತ್ತು ಒಟ್ಟೂ ನಾಟಕದ ಅರ್ಥ ಸಾಧ್ಯತೆಯನ್ನು ವಿಸ್ತರಿಸಲೆಂಬಂತೆ ಇವೆಲ್ಲವನ್ನೂ ಒಂದೇ ಸೂತ್ರದಲ್ಲಿ ಹದವಾಗಿ, ಹೃದ್ಯವಾಗಿ ಬೆಸೆಯುವ ಈ ನಾಟಕದ ಸಂಗೀತದ ವಿನ್ಯಾಸವು ಎಷ್ಟು ಅದ್ಭುತ ಎಂಬುದನ್ನು ಈ ನಾಟಕವನ್ನು ನೋಡಿಯೇ ತಿಳಿಯಬೇಕು.
ನಾಟಕದ ಕೇಂದ್ರ ಪಾತ್ರ ಚಾಂದ್ ಅಲಿ, ಚಂದರ್ ಆಗುವಾಗ ಮತ್ತು ಮತ್ತೆ ಚಾಂದ್ ಅಲಿಯೇ ಆಗಿ ಗುರುತು ಪರಿಚಯವಿರದ ನಾಡಿನಲ್ಲಿ ಬದುಕಬೇಕಾದಾಗ ವ್ಯಕ್ತಿಯೊಬ್ಬನ ತಳಮಳ, ‘ಅನ್ಯ’ ತನದ ಸಂಕಟ …ಅದು ನೋಡುವವನ ಸಂಕಟವೂ ಆಗುತ್ತದಲ್ಲ..!
ಈ ವರ್ಷದ ಅತ್ತ್ಯುತ್ತಮ ನಾಟಕಗಳಲ್ಲಿ ಒಂದಾಗಬಹುದಾದ ‘ಸ್ವಾತಂತ್ರ್ಯದ ಓಟ’ ರಂಗಪ್ರಯೋಗಕ್ಕೆ ಒಂದು ಐತಿಹಾಸಿಕ ಮಹತ್ವವಿದೆ.
ಜೀವ ಪವಿತ್ರವೋ ಇಟ್ಟಿಗೆ ಪವಿತ್ರವೋ!
‘ಮುತ್ತುಪ್ಪಾಡಿಯಿಂದಲೂ ಒಂದಷ್ಟು ಇಟ್ಟಿಗೆಗಳು ಹೋಗಿದ್ದವು’ ಅಂತ ನಾಟಕದಲ್ಲಿ ಒಂದು ಮಾತಿದೆ.
ಒಂದು ಸಲ ಹಿಂತಿರುಗಿ ನೋಡಿದಾಗ ವಾಲ್ಮೀಕಿ ಕವಿ ಅಂದು ಕಾಣಿಸಿದ್ದು ಮನುಷ್ಯರಲ್ಲೇ ಉತ್ತಮನು ಆ ರಾಮ, ಆದರೆ ನಮ್ಮಂಥ ಜನಸಾಮಾನ್ಯರ ಊನವೂ ಅವನಲ್ಲಿದೆ, ಅತೀತನಲ್ಲ. ಹಾಗಿದ್ದೂ ಅದನ್ನು ಮೀರಬಲ್ಲ ಮನುಷ್ಯ ರೂಪದ ಆದರ್ಶ ವ್ಯಕ್ತಿತ್ವವನ್ನು ಆ ಪಾತ್ರದ ಮೂಲಕ ಅವರು ರೂಪಿಸಿದ್ದಾರೆ. ಅಂತಹ ರಾಮನ ಹೆಸರಲ್ಲಿ ಏನೆಲ್ಲಾ ನಡೆದವು, ಅವನ ಹೆಸರಲ್ಲಿ ಎಷ್ಟು ಇಟ್ಟಿಗೆಗಳು ಹೋದವು.. ಎಲ್ಲಿ ಹೋದವು, ಏನಾದವು…! ಗೊತ್ತಿಲ್ಲ…ಆದರೆ ಅವನ ಹೆಸರಿನಲ್ಲಿ ಗೋಡೆಗಳು ಎದ್ದು ನಿಂತವು… ‘ಅನ್ಯ’ ಅನ್ನುವ ಭಾವವನ್ನು ಸದಾ ಉಳಿಸುವುದೇ ಇದರ ಪರಮ ಉದ್ದೇಶವೋ..ಗೊತ್ತಿಲ್ಲ.
ಕಬೀರನ ರಾಮ, ಗಾಂಧಿಯ ರಾಮ ಗುಡಿಗಾಗಿ ಅಂಗಲಾಚಿಲ್ಲ, ಅವನು ಅದಕ್ಕಿಂತ ಮಿಗಿಲಾಗಿ ಅವರ ಎದೆಯ ಸೂರಿನೊಳಗೆ ವಿರಾಜಮಾನನಾಗಿದ್ದ. ಈ ನಾಟಕದಲ್ಲಿ ಹಿಂದೂ -ಮುಸ್ಲಿಂ ಸಾಮರಸ್ಯಕ್ಕೆ ಒದ್ಡಾಡಿದ ಬಾಪು ಅವರು ಗೋಡ್ಸೆಯಿಂದ ಕೊಲೆಯಾಗುವ ಸಂದರ್ಭವು ಪ್ರತಿಯೊಬ್ಬ ನೋಡುಗನನ್ನು ಬೆಚ್ಚಿಬೀಳಿಸುತ್ತದೆ. ಆಗ ಉಂಟಾಗುವ ಮೌನ ಮುಂಬರುವ ಇಂಡಿಯಾದ ಎಲ್ಲ ತಲ್ಲಣಗಳನ್ನು ಒಮ್ಮೆಗೆ ನೆನಪಿಸುವಂತೆ ಮಾಡುತ್ತದೆ. 80 ರ ದಶಕದಿಂದ ಆರಂಭಗೊಂಡ ಈ ಅನ್ಯತನದ ಬೀಜಕ್ಕೆ ಈ ಭೀಭತ್ಸ ಕೃತ್ಯವೇ ತಾಯಿಬೇರು .

ಭಾರತದ ಚರಿತ್ರೆ ಪ್ರಾರಂಭವಾಗುವುದೇ 2014ರ ನಂತರ ಅನ್ನುವ ಸುಳ್ಳು ನೆರೆಟಿವ್ ಒಂದನ್ನು ವ್ಯಾಪಕವಾಗಿ ಹಬ್ಬಿಸಲಾಗಿರುವ ಈ ಸಂದರ್ಭದಲ್ಲಿ, ಇಂತಹ ಡಿಜಿಟಲ್ ಭ್ರಮೆಗೆ ಒಳಗಾಗಿ ‘ಅನ್ಯ’ತನವನ್ನು ನೀರೆರೆದು ಪೋಷಿಸುವ ರೋಗಗ್ರಸ್ತ ಮನಸ್ಸುಗಳಿಗೆ ಈ ಕಥನ ಮದ್ದಾಗಬಹುದು.
ಮುತ್ತುಪಾಡಿ, ಶಿವಪುರ, ಮಾಲ್ಗುಡಿ, ಹನೇಹಳ್ಳಿ ಹೀಗೆ ನಮ್ಮ ಸಾಹಿತ್ಯದ ಸೃಜನಶೀಲ ಮನಸ್ಸುಗಳು ಗಾಂಧಿ ಕನಸು ಕಂಡ ಸ್ವರಾಜ್ಯ ಮಾದರಿಯ ಆದರ್ಶ ಗ್ರಾಮದ ಕಲ್ಪನೆಯನ್ನು ನಮ್ಮೊಳಗೆ ಮೂಡಿಸಿದಂತೆ ‘ಇಂಡಿಯಾʼ ಕೂಡ ಬದಲಾಗಬಹುದು.
ಈ ನಾಟಕದಿಂದ ಇಷ್ಟೊಂದು ಬಗೆಯ ಹೊಳವು, ಭರವಸೆ ಮೂಡಲು ಒದಗಿ ಬಂದ ಮತ್ತೊಂದು ಚಿಮ್ಮು ಹಲಗೆ ಅದು ಈ ನಾಟಕದ ಸಂಗೀತದಿಂದಲೇ ಅನ್ನುವುದನ್ನು ಖಚಿತವಾಗಿ ಹೇಳಬಹುದು. ಚಾಂದ್ ಅಲಿ ಆಯಣ ಮಾಡುವ ಜಾಗಗಳಲ್ಲಿ ಇರುವ ಅದರದ್ದೇ ಆದ ಸ್ವ-ವಿಶಿಷ್ಟತೆಯುಳ್ಳ ಸಂಗೀತ ಪರಂಪರೆ ಈ ನಾಟಕದ ಆಂತರ್ಯವನ್ನು ಮುಟ್ಟಲು ಸಹಾಯ ಮಾಡಿತು. ಅದು ಬರೀ ಸ್ವರಗಳಿಂದ ಕೂಡಿದ ರಾಗವಲ್ಲ, ಆಯಾಯ ನೆಲದ ಜನರ ಉಸಿರು, ನಿಟ್ಟುಸಿರು… ಆದ್ದರಿಂದಲೇ ಆ ಹಾಡು-ಸಂಗೀತಗಳಿಗೆ ಅಷ್ಟೊಂದು ಮಾಧುರ್ಯ, ವಿಷಣ್ಣ ಭಾವ. ಸಂತ ಕಬೀರ ಇಂಡಿಯಾದ ಸಹಬಾಳ್ವೆಗೊಂದು ಅರಿವಿನ, ಪ್ರೀತಿಯ ಎಳೆಗಳನ್ನು ಜೋಡಿಸಿ ‘ಬಟ್ಟೆ’ ನೇಯ್ದು ಹೋಗಿದ್ದಾನೆ, ಅದೇ ‘ಬಟ್ಟೆ’ ಈ ನಾಟಕದಲ್ಲಿ ಸಂಗೀತದ ಮೂಲಕ ನೋಡುಗರನ್ನು ಬೆಚ್ಚಗೆ ಹೊಚ್ಚಿ ಭಾವವನ್ನು ನೇವರಿಸುತ್ತದೆ. ಅಂಥ ಎಷ್ಟೊಂದು ಸಂದರ್ಭಗಳಲ್ಲಿ ಕಬೀರನ ಈ ಬಟ್ಟೆಯೇ ಬಾಬಾಸಾಹೇಬರನ್ನು ಅಂಥ ‘ಪರಕೀಯ’, ‘ಅನ್ಯ’ ಪರಿಸ್ಥಿತಿಯಲ್ಲಿ ಹೊಚ್ಚಿದ್ದು, ಲಾಲಿ ಹಾಡಿ ಸಂತೈಸಿದ್ದು…!
ಹೀಗೆ ವಾಜಿದ್ ಅಲಿ ಷಾನ ಇಂದ್ರಸಭಾದಿಂದ ಹಿಡಿದು ಉತ್ತರ ಕರ್ನಾಟಕದ ಸಾಮರಸ್ಯ ಸಾರುವ ಮೊಹರಂನ ಆಲಾವಿ ಪದಗಳ ತನಕ, ಇಡೀ ಸಂಗೀತವನ್ನು ವಿನ್ಯಾಸ ಮಾಡಿದ ಶ್ರೇಯ ಸಂಗೀತವನ್ನೇ ಸದಾ ಧ್ಯಾನಿಸುವ ಯುವ ಪ್ರತಿಭೆ ರಾಘವ ಕಮ್ಮಾರ ಅವರಿಗೆ ಸೇರಬೇಕು. ಅವರಿಗೆ ಜೊತೆಯಾಗಿ ಮೇಘನಾ ಆರ್ ಕೊತಬಾಳ, ಕೃಷ್ಣ ಬಡಿಗೇರ್ , ವೆಂಕಟೇಶ್ ರೆಡ್ಡಿ ಮೊದಲಾದವರ ಸಂಗೀತ ಸಾಂಗತ್ಯ ಆಟದಲ್ಲಿ ಕಳೆಗಟ್ಟಿ ಎಲ್ಲವೂ ಒಟ್ಟಿಗೆ ಪರಿಣಮಿಸಿದ್ದು ವಿಶೇಷವಾಗಿತ್ತು.

ವೀರ್ ಝಾರಾ ಸಿನೆಮಾದ ಸಂಗೀತದ ಒಂದು ಎಳೆ ಇಲ್ಲೂ ಕಾಣುತ್ತದೆ.. ಅದು ಈ ತರಹದ ಕಥಾನಕಗಳು ಇಟ್ಟುಕೊಂಡ ಕರುಳ ಬಳ್ಳಿ ಸಂಬಂಧಕ್ಕೆ ಕುರುಹು.
ನಾಟಕದ ಮೊದಲರ್ಧ ಭಾಗ ತುಂಬಾ ಚುರುಕಾಗಿ ಹೋಗುತ್ತದೆ. ಯಾಕೆಂದರೆ ದೇಶ ವಿಭಜನೆಯ ಆ ಗದ್ದಲದಲ್ಲಿ ಬಾಳಿನ ಉಳಿವಿಗೆ ಅರ್ಥವಿಲ್ಲ. ಅಂತಹ ಸಂದರ್ಭದಲ್ಲಿ ಓಡುವುದೊಂದೇ ಉಳಿದಿರುವ ದಾರಿ. ಕಥೆಯ ಹರಿವು ಹಾಗೆ ಇರುವುದರಿಂದ, ಅದೇ ಗತಿಯನ್ನು, ಬಂಧವನ್ನು ಈ ನಾಟಕದ ವಿನ್ಯಾಸ ಅನುಸರಿಸುತ್ತದೆ. ಶತಮಾನಗಳ ಕಾಲ ಒಟ್ಟಿಗೆ ಬದುಕಿದ್ದ ಎರಡು ಸಮುದಾಯಗಳು ಈಗ ಪರಸ್ಪರ ಜಿದ್ದಿಗೆ ಬಿದ್ದವರಂತೆ ಒಬ್ಬರನೊಬ್ಬರು ತಿನ್ನಲು, ತಮ್ಮ ಜೀವವನ್ನು ಉಳಿಸಿಕೊಳ್ಳಲು ಮಾಡುವ ಓಟವೇನಿದೆ ಅದನ್ನು ನಿರ್ದೇಶಕರು ಕಟ್ಟಿಕೊಟ್ಟ ರೀತಿ ಅನನ್ಯ. ಒಬ್ಬೊಬ್ಬರ ನಿಧಾನ ಗತಿಯ ನಡಿಗೆ, ನಂತರ ಸೇರಿ ಸೇರಿ ಅನಂತವಾಗುವ ಜನ ಸಾಗರ… ನೆಲಕ್ಕಾಗಿ ಓಟ, ಸೂರಿಗಾಗಿ ಓಟ, ಕೊಲೆಗಾಗಿ ಓಟ, ಮಾನಕ್ಕಾಗಿ ಓಟ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಅದರಿಂದ ಬಿಡಿಸಿಕೊಳ್ಳಲು ಓಟ.. .ಹೀಗೆ ವಿಭಜನೆಯ ಕಾಲದ ಭಾರತದ ದಿಕ್ಕೆಟ್ಟ ಬಗೆಯನ್ನು ನಟರ ಗುಂಪುಗಳ ಮೂಲಕ ನಿರ್ದೇಶಕರು ಕಟ್ಟಿಕೊಡುತ್ತಾರೆ. ಎರಡು ಸಮುದಾಯಗಳು ಪರಸ್ಪರ ಸಂಸ್ಕೃತಿ, ಭಾಷೆ, ಆಚಾರಗಳ ಬಗ್ಗೆ ಪರಸ್ಪರ ಸಂಶಯದೊಂದಿಗೆ ಏಗುವ ಈ ಸಂದರ್ಭದಲ್ಲಿ, ನಾಟಕದ ಲೋಕದೊಳಗೆ ಒಡಮೂಡುವ ನಿಜಾಮುದ್ದೀನ್ ದರ್ಗಾ, ಅಲ್ಲಿಯ ಧೂಪದ ಘಮಲು, ಸೂಫಿಯ ಪ್ರೇಮದ ಪರಾಕಾಷ್ಟೆ, ಆ ಅನುಪಮ ಸಂಗೀತ ಎಲ್ಲ ಸೇರಿ ಒಂದು ಬಗೆಯ ಅನುಭೂತಿಯನ್ನು ಸಹೃದಯನಲ್ಲಿ ಉಂಟು ಮಾಡಿ ಕರಗಿಸಿಬಿಡುತ್ತದೆ.
ನಾಟಕದ ಎರಡನೇ ಭಾಗದಲ್ಲಿ ‘ಅನ್ಯ’ನಾದ ಚಾಂದ್ ಅಲಿಯ ಪ್ರಯಾಣ ತುಂಬಾ ಸ್ವಾರಸ್ಯಕರವಾದುದು. ಉರ್ದು – ಹಿಂದಿ -ಕನ್ನಡ- ಬ್ಯಾರಿ-ತುಳು ಕೊನೆಗೆ ಪಂಜಾಬಿ ಹೀಗೆ ಅನ್ಯವೆನಿಸಿದ ಎಲ್ಲವೂ ತನ್ನದಾಗುವ ಪರಿ ಅಚ್ಚರಿ ಮೂಡಿಸುತ್ತದೆ. ಈ ಓಟದ ಅಂತಿಮ ನಿಲ್ದಾಣವಾದ ಕರ್ನಾಟಕದ ತುಳುನಾಡಿನ ಮುತ್ತುಪ್ಪಾಡಿಯಲ್ಲಿ ‘ನಮ್ಮವ’ನಾಗುವ, ಅಲ್ಲೇ ಬದುಕು ಕಟ್ಟಿಕೊಂಡು ಯಾರದೋ ತಂದೆತಾಯಿಗಳ ಮಗನಾಗುವ ಮೂಲಕ ತನ್ನ ಬಾಳನ್ನು ಸಾರ್ಥಕಗೊಳಿಸುವ ಭಾಗ.

ಹೀಗೆ ಒಂದೇ ದೇಶದ ಲಾಹೋರಿನಲ್ಲಿ ಹುಟ್ಟಿ ಆ ನಂತರ ಅದು ಅನ್ಯ ದೇಶವಾಗಿ ಜನರು ‘ಮತ’ಕ್ಕಾಗಿ ಉನ್ಮಾದದ ಸೊಕ್ಕಿನಲ್ಲಿ ಇರಿದು ಕೊಂದುಕೊಂಡಾಗ, ಇಬ್ಬರು ಹೆಣ್ಣು ಮಕ್ಕಳಿಗೆ ಸಹಾಯ ಮಾಡಲು ಭಾರತಕ್ಕೆ ಬಂದು, ವಾಪಾಸು ತನ್ನ ದೇಶಕ್ಕೆ ಹೋಗಲಾಗದೆ ಅನುಭಾವಿಯೊಬ್ಬನ ಸಾಂಗತ್ಯದಲ್ಲಿ ಬೆರೆತು ಮುತ್ತುಪ್ಪಾಡಿಯ ದಾರಿ ಹಿಡಿದು, ಕೊನೆಯಲ್ಲಿ ತನ್ನ ಅಂತರಾಳದ ದನಿಯಂತೆ ಗುರುದ್ವಾರಕ್ಕೆ ತೆರಳಿ ಬಂಗಾರವನ್ನು ಅದರ ನಿಜ ವಾರಸುದಾರರಿಗೆ ಒಪ್ಪಿಸಿದೆನೆಂದು ಚಾಂದ್ ಅಜ್ಜ ನೆಮ್ಮದಿ ಪಡೆದುಕೊಳ್ಳುವ ತನಕದ ದೀರ್ಘ ಕಾಲದ ಘಟನಾವಳಿ ಇರುವ ಈ ನಾಟಕದ ಗಾಢವಾದ ಪರಿಣಾಮವನ್ನು ಮಾತಿನಲ್ಲಿ ಹೇಳುವುದು ಕಷ್ಟವಾದರೂ ಬಹುಕಾಲ ಕಾಡುವಂಥದ್ದು.
ನಾಟಕದ ನಿರ್ದೇಶಕರಾದ ನಟರಾಜ ಹೊನ್ನವಳ್ಳಿಯವರ ಬಹುಬಗೆಯ ವಿಸ್ತ್ರತ ಓದು ಈ ನಾಟಕವನ್ನು ಬಹು ಆಯಾಮದಲ್ಲಿ ರೂಪಿಸಿದೆ. ಕಾದಂಬರಿ, ಕಥೆಗಳನ್ನು ಸಮರ್ಥವಾಗಿ ರಂಗಕ್ಕೆ ತರುವುದರಲ್ಲಿ ಅವರು ನಿಷ್ಣಾತರು. ಈ ನಾಟಕ ಅವರ ವೃತ್ತಿ ಜೀವನದ ‘ಮಾಸ್ಟರ್ ಪೀಸ್’. ಮಾಗಿದ ನಿರ್ದೇಶಕನೊಬ್ಬನು ಕವಿ ಮನಸ್ಸಿನ ಆಂತರ್ಯವನ್ನು ಅರಿತು ಕಂಡುಕೊಂಡ ದರ್ಶನ. ಹೀಗೆ ಹೇಳುವಾಗಲೂ ಇದು ಈ ಪಠ್ಯದ ಒಂದು ವ್ಯಾಖ್ಯಾನ, ಮತ್ತೊಬ್ಬರಲ್ಲಿ ಇನ್ನೂ ಬೇರೆಯದೇ ಅರ್ಥ ಸಾಧ್ಯತೆಯನ್ನು ಪಡೆಯಬಹುದು. ಕಾರಣ ಆ ಪಠ್ಯದ ಅಂತಃಸತ್ವ.
ಇನ್ನು ನಟರ ಬಗ್ಗೆ ಹೇಳುವುದಾದರೆ ನಾಟಕದ ಅರ್ಥಸಾಧ್ಯತೆಯನ್ನು, ಅದರ ವಿಸ್ತಾರವಾದ ಕಥಾ ಹರವನ್ನು ಪಕ್ವತೆಯಿಂದ ನೋಡುಗನಿಗೆ ದಾಟಿಸಿದರು. ರಂಗಶಾಲೆಗಳಿಂದ ಕಲಿತು ಬಂದವರಲ್ಲಿ ಹೆಚ್ಚಿನವರು ಒಂದು ಬಗೆಯ ಏಕತಾನತೆಯನ್ನು ರೂಢಿಸಿಕೊಂಡಿರುತ್ತಾರೆ. ಅದನ್ನು ಮೀರುವುದು ಕೆಲವರು ಮಾತ್ರ. ಆದ್ದರಿಂದ ಪಾತ್ರಗಳ ನಿರ್ವಹಣೆಯಲ್ಲೂ ಅದು ಕಾಣತೊಡಗುತ್ತದೆ. ಆದರೆ ಆ ಬಗೆಯ ಅಪಾಯಗಳಿಗೆ ಈ ತಂಡ ಒಳಗಾಗಿಲ್ಲ. ಪ್ರತಿ ಪಾತ್ರದ ವ್ಯಕ್ತಿವಿಶಿಷ್ಟತೆ ಭಿನ್ನ ಭಿನ್ನವಾಗಿದ್ದರಿಂದ ವೈವಿಧ್ಯತೆ ಕಾಣಿಸಿತು. ಬೇರೆ ಬೇರೆ ವಯೋಮಾನದ, ಅನುಭವದ ನಟರಿರುವುದರಿಂದಲೇ ನಾಟಕಕ್ಕೆ ಅಪಾರ ಶಕ್ತಿ ಪ್ರಾಪ್ತವಾಗಿದೆ. ಆದರೂ ಚಾಂದ್ ಅಲಿ ಪಾತ್ರದ ತಳಮಳ ಅದು ಶಿಕಾರಿಯ ನಾಗಪ್ಪನಂತೆ, ಟ್ಯಾಗೋರರ ಗೋರಾನಂತೆ ನಟನಿಗೆ ಅನೇಕ ಬಗೆಯ ಸವಾಲುಗಳನ್ನು ಒಡ್ಡುವಂತಹದ್ದು. ಈ ನಾಟಕದ ಈ ಪಾತ್ರಧಾರಿಗಳು ಇವುಗಳನ್ನು ಮುಂದಿನ ಪ್ರದರ್ಶನಗಳಲ್ಲಿ ಸರಿಪಡಿಸಿಕೊಂಡರೆ ಇನ್ನೂ ಹೆಚ್ಚಿನ ಅನುಭವ ನೋಡುಗನಲ್ಲಿ ಮೂಡಬಹುದು ಎಂಬ ಸಣ್ಣ ಆಸೆ. ಜೋಳಿಗೆ ಬಾಬನ ಪಾತ್ರಧಾರಿ ನಿಜಕ್ಕೂ ಮೈ ಜುಮ್ಮೆನಿಸುವ ಎಷ್ಟೋ ಕ್ಷಣಗಳನ್ನು ನೋಡುಗನಿಗೆ ದಾಟಿಸಿದರು. ಪಾತ್ರದ ಭಾವಭಂಗಿ- ಮಾತು ಸಮರಸದಲ್ಲಿ ಒಡಮೂಡಿದಂತೆ ನಿರ್ದೇಶಕ ಮತ್ತು ನಟ ಪಠ್ಯವನ್ನು ಅನುಸಂಧಾನ ಮಾಡಿಕೊಂಡು ಒಂದು ನಾಟಕದ ಪಾಕದಲ್ಲಿ ಕರಗಿ ಮತ್ತೆ ರುಚಿಯಲ್ಲಿ ( ಆಸ್ವಾದನೆ) ಅನುಭವಕ್ಕೆ ಬರುವ ಅಪೂರ್ವ ಕ್ಷಣಗಳಿವು.

ನಾಟಕದ ಪರಿಸರ, ಕಾಲ, ಅದರ ಅರ್ಥಸಾಧ್ಯತೆಯನ್ನು ವಿಸ್ತರಿಸುವಲ್ಲಿ-ಬೆಳಗಿಸುವಲ್ಲಿ ರಂಗಸಜ್ಜಿಕೆ, ವಸ್ತ್ರ ವಿನ್ಯಾಸ ಹಾಗೂ ಬೆಳಕಿನ ಪಾತ್ರ ಬಹು ದೊಡ್ಡದು. ಅದಕ್ಕೆ ಪೂರಕವಾಗಿ ರಮೇಶ್ ಎಸ್( ಕಾವಾ), ಡಾ. ಸಹನಾ ಪಿಂಜಾರ್ ಮತ್ತು ಮಂಜು ನಾರಾಯಣ ಇವರುಗಳ ಸೃಜನಾತ್ಮಕ ಕುಸುರಿ ಕೆಲಸವಿದೆ.
ಇಷ್ಟೊಂದು ದೀರ್ಘವಾಗಿ ಬರೆಯಲು ಕಾರಣರಾದ ಈ ನಾಟಕದ ಮೂಲ ಪಠ್ಯದ ಕರ್ತೃ ಬೊಳುವಾರು ಮೊಹಮ್ಮದ್ ಕುಂಞ ಅವರಿಗೆ , ನಾಟಕವನ್ನು ಕಟ್ಟಿಕೊಟ್ಟು ಆ ಅನುಭವದ ಬುತ್ತಿಯನ್ನು ನಮಗೆ ನೀಡಿದ ನಟರಾಜ್ ಹೊನ್ನವಳ್ಳಿ ಅವರಿಗೆ, ನಾಟಕಕ್ಕೆ ಸಹ ನಿರ್ದೇಶನ ಮಾಡಿದ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಸಲ್ಮಾ ದಂಡಿನ ಅವರಿಗೂ, ಇದನ್ನು ಆಗು ಮಾಡಲು ಟೊಂಕಕಟ್ಟಿ ನಿಂತ ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಸಾಗರ ಅವರಿಗೆ ಮತ್ತು ನೋಡುಗರಿಗೆ ಇದನ್ನು ಹಂಚಿ ಉಣಬಡಿಸಿದ ಶಿವಮೊಗ್ಗ ರಂಗಾಯಣದ ಎಲ್ಲ ನಟ -ತಾಂತ್ರಿಕ ವರ್ಗಕ್ಕೂ ಮತ್ತೊಮ್ಮೆ ಶರಣು, ಶರಣು …
ಸಾಲಿಯಾನ್ ಉಮೇಶ್ ನಾರಾಯಣ
ರಂಗ ನಿರ್ದೇಶಕರು, ರಂಗಾಯಣ, ಮೈಸೂರು.
ಇದನ್ನೂ ಓದಿ- https://kannadaplanet.com/theater-experiment-review-mittabail-yamunakka/ ರಂಗ ಪ್ರಯೋಗ ವಿಮರ್ಶೆ | ದ್ವೇಷದ ಜ್ವಾಲೆಯಲಿ ಮಿಂದೆದ್ದ ‘ಮಿತ್ತಬೈಲ್ ಯಮುನಕ್ಕ’


