ಎಲ್ಲೋ ರಥ ಎಳೆಯುತ್ತಿವೆ
ಕಲ್ಲಿನ ಕುದುರೆಗಳೆರಡು
ಅನ್ನಕ್ಕೂ ಹಾಹಾಕಾರವೇಳಬಹುದು
ಸಹಸ್ರಮಾನದ ಶುರುವಿಂದ
ಕಾಣ್ಕೆ ನುಡಿಯುತ್ತಲೇಯಿದ್ದಳು
ಕಾಲದಿ ಹಣ್ಣಾದ ಕುರುಡು ಮುದುಕಿ
ವಿಧಿಯೆಂಬುದು ವಿಚಿತ್ರ
ಸತ್ಯಕ್ಕಾಗಿ ನೆತ್ತರಾದವನ ನೆಲದಲ್ಲೇ
ಮಾಯಾವಿ ಅಶ್ವಮೇಧಯಾಗಕೆ ತಿಲಕವಿಟ್ಟಿದ್ದಾರೆ
ಚಪ್ಪಾಳೆಯಿಟ್ಟವು ಗೆರೆ ಮಾಸಿದ ಅಂಗೈಗಳು
ಸುಂದರ ಸ್ವಪ್ನಗಳ ರೋಮಾಂಚನದಿ
ಮುಖಗಳಲಿ ನಗುವಿತ್ತು
ಕಡ್ಡಾಯವಾಯಿತದು ಮುಂದೆ
ಕೆತ್ತಿದ್ದಿರಬೇಕೇನೋ ಎನಿಸಿತು ಆಮೇಲೆ
ಸಮತೆಯ ತತ್ವಾದರ್ಶಗಳ ಹೊತ್ತ ರಥ
ರಕ್ಕಸ ಕಲ್ಲಾಯಿತು ಈ ಕುದುರೆಗಳ ಹೆಗಲು ಸೋಕಿ
ನಡುಮುರಿದುಕೊಂಡ ರಥ
ಸಾಗುತ್ತದೆ ಎಳೆದತ್ತ ಓಡುತ್ತದೆ ಬಿಟ್ಟತ್ತ
ಛಿದ್ರಗೊಂಡಿವೆ ನರನಾಡಿಗಳು
ಎಳೆದೆಳೆದು ಎಸೆಯುತ್ತಿವೆ ಎತ್ತೆಂದರತ್ತ
ರಥವೆಂದರೆ ರಥವಲ್ಲ ನಾಡು ನಡೆಸುವ ಪಥ
ಹಸಿದ ಹೊಟ್ಟೆಗಳಿಗೆ ಈಗ ಧ್ವಜ ನಕಾಶೆಯ
ನೆರಳು-ನಶೆಯ ಔತಣ
ಬಡ ಮಕ್ಕಳೆದೆಯ ಮೇಲೆ ಅಳುಕಿಲ್ಲದೆ ಉರುಳುವ
ಚಕ್ರಗಳು ವ್ಯಾಪಾರಿಗಳರಮನೆಯ ಮುಂದೆ
ಮೆತ್ತಗೆ ಬಾಗಿ ಮಂಡಿಯೂರುತ್ತವೆ
ಭೂಮಿಯ ಉಸಿರು ಸಂಪತ್ತಿನ ಒಡಲು
ನುಚ್ಚುನೂರಾಗಿವೆ ಅಭಿವೃದ್ಧಿಯ ಚಕ್ರದಡಿ
ವಿಕಾಸದ ಕನಸಿನ ರಥದ ತುಂಬಾ
ಮುಖವಾಡದ ವಿಕೃತ ಆಟಗಳು
ಚಲಿಸುತ್ತಿವೆ ಚಕ್ರಗಳು ಮುಂದಕ್ಕೆ
ರಥ ಮಾತ್ರ ಹರಿಯುತಿದೆ ಹಿಂದಕ್ಕೆ
ದುರಹಂಕಾರಿ ಕೇಡುಗುದುರೆಗಳ
ದೃಷ್ಟಿಯ ತುಂಬಾ ನಾಣ್ಯಗಳು
ತಲೆಯೊಳಗಣ ದಿಕ್ಸೂಚಿ ತಿರುಗುವುದು
ಮತಪೆಟ್ಟಿಗೆಯೆಡೆಗೆ ಮಾತ್ರ
ಮೇಯುತ್ತವೆ ದೇವಲೋಕದ ಅಣಬೆ
ಕೆನೆಯುತ್ತವೆ ಮತಾಂಧತೆಯ ಹೋಮಧೂಮಕೆ
ದಾರಿಗಂಟಿದ ನೆತ್ತರ ಘಾಟಿಗೆ
ಲೇಪಿಸಲಾಗಿದೆ ಹೂವ ಪರಿಮಳ
ಕಾಲು ಶತಮಾನ ಈ ಸು-ವರ್ಣ ಯುಗಕೆ
ಮುದುಕಿಯ ಮಾತೊಂದು ಮರೆತೇ ಹೋಗಿತ್ತು
ಇರುವೆ ಜಿರಲೆಗಳಿಗೆ ಬಾಯಿ ಬಂದ ದಿನ
ಈ ಕುದುರೆಗಳ ತೊಡೆತ್ರಾಣ ಬಸಿದುಹೋಗುವುದಂತೆ
ನೀಲಿಬಾನ ಪುಟಗಳಲಿ ಅರಳುವ ಕೆಂಪು ನಕ್ಷತ್ರಗಳ ನಗುವಿಗೆ
ಕುದುರೆಗಳ ಎದೆ ಬಡಿತ ತಾಳ ತಪ್ಪುವುದಂತೆ
ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು,
ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಇದನ್ನೂ ಓದಿ- ಎಲ್ನಿನೊ, ಉಣುಚಿಕೊಳ್ಳುವವರ ಊರುಗೋಲು | ಭಾಗ 3


