ಈ ರಾಜಕೀಯ ಹಿತಾಸಕ್ತಿಗಳ ಆರೋಪ ಪ್ರತ್ಯಾರೋಪಗಳ ನಡುವೆ ನಿಜವಾದ ಅಪರಾಧಿಗಳು ಬಚಾವ್ ಆಗುತ್ತಿರುವುದು ಆತಂಕಕಾರಿಯಾಗಿದೆ. ತಪ್ಪು ಮಾಡಿದರೆ ಶಿಕ್ಷೆ ಗ್ಯಾರಂಟಿ ಎನ್ನುವ ಭಯ ಇದ್ದರೆ ಸಾಧ್ಯವಾದಷ್ಟೂ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ. ಹೀಗೆ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವ ಮೂಲಕ ಅಪರಾಧಿ ಕೃತ್ಯಗಳಿಗೆ ಸರಕಾರಗಳೇ ಬೆಂಬಲ ಕೊಡುತ್ತಾ ಹೋದರೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವವರು ಯಾರು? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈ ಕಾಂಗ್ರೆಸ್ಸಿಗರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ. ಅಧಿಕಾರಕ್ಕೆ ಬಂದಾಗ ಏನಾದರೊಂದು ಎಡವಟ್ಟು ಮಾಡ್ತಾನೇ ಇರುತ್ತೆ? ಕೋಮುವಾದಿ ಪಕ್ಷದ ಪ್ರಕೋಪಗಳಿಗೆ ಪರ್ಯಾಯಗಳಿಲ್ಲದೇ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವವರಿಗೆ ಮುಜುಗರವನ್ನೂ ತರುತ್ತದೆ.
ಪೊಲೀಸ್ ಹಾಗೂ ಇತರೇ ಇಲಾಖೆಗಳ ವಿರೋಧದ ಹೊರತಾಗಿಯೂ ಈಗ ನಡೆದ ಸಚಿವ ಸಂಪುಟದ ಸಭೆಯಲ್ಲಿ ಐವತ್ತೆರಡು ಪೊಲೀಸ್ ಕೇಸುಗಳನ್ನು ಹಿಂಪಡೆಯಲು ಅನುಮೋದನೆ ನೀಡಲಾಗಿದೆ. ಸಾಮಾಜಿಕ ಹೋರಾಟಗಾರರ ಮೇಲೆ ಹಾಕಲಾದ ಮೊಕದ್ದಮೆಗಳಿದ್ದರೆ ಹಿಂಪಡೆಯಲಿ. ಬೇಡ ಎನ್ನುವವರು ಯಾರು?
ಆದರೆ ಕೋಮುದ್ವೇಷ ಭಾಷಣಗಳ ಮೂಲಕ ಒಂದು ಸಮುದಾಯವನ್ನು ಪ್ರಚೋದಿಸುವ ಹಾಗೂ ಅನ್ಯ ಕೋಮುವನ್ನು ಹೀಯಾಳಿಸುವಂತಹ ಸಮಾಜ ವಿರೋಧಿ ಕೃತ್ಯವನ್ನು ಮಾಡಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳು ಮಾಡಿದ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ್, ಹಿಂದುತ್ವವಾದಿ ಸಂಘಟನೆಯ ಚೈತ್ರಾ ಕುಂದಾಪುರ ಮೇಲಿದ್ದ ಕ್ರಿಮಿನಲ್ ಕೇಸುಗಳನ್ನೂ ಸಹ ಹಿಂಪಡೆದಿರುವ ಕಾಂಗ್ರೆಸ್ ಸರಕಾರದ ನಿಲುವು ಖಂಡಿತಾ ಸಮರ್ಥನೀಯವಲ್ಲ. ಕಾಂಗ್ರೆಸ್ ಸರಕಾರವೇ ಇರಲಿ ಇಲ್ಲವೇ ಬಿಜೆಪಿ ಸರಕಾರವೇ ಇರಲಿ ಎಷ್ಟೇ ದ್ವೇಷ ಭಾಷಣ ಮಾಡಿದರೂ ಮಾಪಿ ಇದೆ ಎನ್ನುವುದು ಗೊತ್ತಾದರೆ ಈ ಕೋಮು ಕ್ರಿಮಿಗಳು ಕಾನೂನಿನ ಭಯ ಇಲ್ಲದೇ ತಮ್ಮ ಕೋಮುವಾದಿ ಪ್ರಚೋದನೆಯನ್ನು ಮುಂದುವರೆಸುತ್ತಾರೆ.
ಈ ಹಿಂದುತ್ವವಾದಿಗಳ ಮೇಲಿನ ಕೇಸಿನ ಜೊತೆಗೆ ಬಿಜೆಪಿ ಸರಕಾರ ಇದ್ದಾಗ ಹಾಕಲಾಗಿದ್ದ ಹಲವಾರು ಕಾಂಗ್ರೆಸ್ ಪರರ ಕೇಸುಗಳನ್ನು ಹಿಂಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅವುಗಳಲ್ಲಿ ಪ್ರಮುಖವಾದವು..
* ಮಾನ್ಯ ಡಿ.ಕೆ.ಶಿವಕುಮಾರರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ 11 ಕೇಸುಗಳಿವೆ.
* 2019 ರಲ್ಲಿ ಚಿತ್ತಾಪುರ ಕಲ್ಲು ತೂರಾಟ ಪ್ರಕರಣದ ಕೇಸುಗಳಿವೆ.
* 2023 ರಲ್ಲಿ ಮಾನ್ಯ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ ಸೇರಿದಂತೆ ಕಾಂಗ್ರೆಸ್ ನಾಯಕರುಗಳ ಮೇಲೆ ಹಾಕಲಾಗಿದ್ದ ಕೋವಿಡ್-19 ಪ್ರೋಟೋಕಾಲ್ ಉಲ್ಲಂಘನೆ ಕೇಸುಗಳಿವೆ.
* ಮಾನ್ಯ ಡಿ.ಕೆ.ಶಿವಕುಮಾರರವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆ ಹಿಂಪಡೆಯುವ ಪ್ರಸ್ತಾಪವಿದೆ.
* 2022 ರ ಆಳಂದ ದರ್ಗಾ ದಂಗೆ ಕುರಿತ ಏಳು ಕೇಸುಗಳಿವೆ.
ಹೀಗೆ ಒಟ್ಟು 52 ಪ್ರಕರಣಗಳನ್ನು ಕಾಂಗ್ರೆಸ್ ಸರಕಾರ ನಿರ್ದೋಷಿಗಳ ರಕ್ಷಣೆ ಹೆಸರಲ್ಲಿ ಹಿಂಪಡೆದಿದೆ. ಇವುಗಳಲ್ಲಿ ಮುಸ್ಲಿಂ ಸಮುದಾಯದವರ ಮೇಲಿನ ಕೇಸುಗಳನ್ನು ಹಿಂಪಡೆದಿರುವುದು ಬಿಜೆಪಿ ಪಕ್ಷದವರನ್ನು ಕೆರಳಿಸಿದೆ.
ಏನದು ಆಳಂದ ದರ್ಗಾ ದಂಗೆ?

2022 ಮಾರ್ಚ್ 1, ಮಹಾಶಿವರಾತ್ರಿ ಸಮಯ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಕೋಮು ಘರ್ಷಣೆ ಸಂಭವಿಸುತ್ತದೆ. ಕಾರಣಗಳು ಹೀಗಿವೆ.
* ದರ್ಗಾ ಆವರಣದಲ್ಲಿ ಶ್ರೀ ರಾಘವ ಚೈತನ್ಯ ಶಿವಲಿಂಗ ಇದೆ ಎಂದು ಹಿಂದುತ್ವವಾದಿಗಳ ತಕರಾರು.
* ಈ ಶಿವಲಿಂಗಕ್ಕೆ ಮಹಾಶಿವರಾತ್ರಿಯ ದಿನ ಪೂಜೆ ಸಲ್ಲಿಸಲೇಬೇಕೆಂದು ಮೆರವಣಿಗೆ ಮಾಡುವುದು ಬಜರಂಗದಳ, ಶ್ರೀರಾಮಸೇನೆ ಮುಂತಾದ ಸಂಘ ಪರಿವಾರಿಗರ ಪೂರ್ವಯೋಜಿತ ಯೋಜನೆ.
* ಅದಕ್ಕೆ ಕೇಂದ್ರ ಸಚಿವರಾದ ಭಗವಂತ ಖೂಬಾ ಹಾಗೂ ಬಿಜೆಪಿ ಶಾಸಕರ ಬೆಂಬಲ.
* ಅದೇ ದಿನ ಆ ದರ್ಗಾದಲ್ಲಿ ಶವ್-ಎ-ಬರಾತ್ ಎನ್ನುವ ಮುಸ್ಲಿಂ ಸಮುದಾಯದವರ ಕಾರ್ಯಕ್ರಮ.
* ಸಂಘ ಪರಿವಾರದ ರ್ಯಾಲಿ ಬಗ್ಗೆ ದರ್ಗಾ ಸಮಿತಿ ಹಾಗೂ ಮುಸ್ಲಿಂ ಸಮುದಾಯದ ವಿರೋಧ.
* ಅಷ್ಟರಲ್ಲಿ ದರ್ಗಾದ ಶಿವಲಿಂಗದ ಮೇಲೆ ಕೆಲವು ಕಿಡಿಗೇಡಿಗಳು ಮಲ ಮೂತ್ರ ಎಸೆದಿರುವ ಸುದ್ದಿ ಖಂಡಿಸಿ ಜೀವರ್ಗಿಯ ಅಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಶಿವಲಿಂಗ ಶುದ್ಧೀಕರಣಕ್ಕೆ ಕರೆ.
* ನಿಷೇಧಾಜ್ಞೆ ಮತ್ತು ಜಿಲ್ಲಾ ಪ್ರವೇಶ ನಿರ್ಬಂಧಿಸಿದ್ದ ಆದೇಶ ಉಲ್ಲಂಘಿದ್ದಕ್ಕೆ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣ ದಾಖಲು.
* ನಿಷೇದಾಜ್ಞೆ ಉಲ್ಲಂಘನೆ, ಕಲ್ಲು ತೂರಾಟ, ಗುಂಪುಗೂಡುವಿಕೆ, ಸರ್ಕಾರಿ ವಾಹನಗಳ ಜಕಂ ಮಾಡಿದ್ದಕ್ಕೆ ಮುಸ್ಲಿಂ ಬಾಲಕರು, ಯುವಕರ ವಿರುದ್ದ ಒಟ್ಟು ಎಂಟು ಪ್ರಕರಣಗಳು ದಾಖಲೆ.
ಇವೆಲ್ಲಾ ಅನಪೇಕ್ಷಿತ ಕಾರಣಗಳಿಂದಾಗಿ ಎರಡೂ ಸಮುದಾಯದವರಿಂದ ಕಲ್ಲು ತೂರಾಟ ನಡೆದು ಪೊಲೀಸರು 144 ಸೆಕ್ಷನ್ ಜಾರಿ ಮಾಡುತ್ತಾರೆ. 167 ಜನರ ಬಂಧನವಾಗಿ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತದೆ. ಅದರಲ್ಲಿ ಬಹುತೇಕರು ಮುಸ್ಲಿಂ ಸಮುದಾಯದವರು. ಈ ಪ್ರಕರಣದ ಕುರಿತು ಬಿಜೆಪಿ ಸರಕಾರ ಇದ್ದಾಗ ದಾಖಲಾದ ಕೇಸುಗಳನ್ನು ಈಗ ಕಾಂಗ್ರೆಸ್ ಸರಕಾರ ಹಿಂಪಡೆಯಲು ಅನುಮತಿ ನೀಡಿದೆ. ಇದು ಬಿಜೆಪಿ ಪಕ್ಷವನ್ನು ಕೆರಳಿಸಿತು. ಮುಸ್ಲಿಂ ತುಷ್ಟೀಕರಣ, ಓಟ್ ಬ್ಯಾಂಕ್ ರಾಜಕೀಯ ಎಂದೆಲ್ಲಾ ಆರೋಪಿಸಿತು.
ಹಿಂದೆಯೂ ಕೂಡ ಕೇಸ್ ಹಿಂಪಡೆತ ಕ್ರಮ ನಡೆದಿತ್ತು
ಈ ಹಿಂದೆ 2024 ಅಕ್ಟೋಬರ್ ನಲ್ಲಿ ಇದೇ ಕಾಂಗ್ರೆಸ್ ಸರಕಾರವು 43 ಕ್ರಿಮಿನಲ್ ಕೇಸುಗಳನ್ನು ಹಿಂಪಡೆದಿತ್ತು. 2008 ರಿಂದ 2023 ರ ಅವಧಿಯೊಳಗಿನ ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಮೇಲಿನ 43 ಕೇಸುಗಳೂ ಸೇರಿದ್ದವು. ಬಹಳ ಮುಖ್ಯವಾಗಿ 2022 ರಲ್ಲಿ ಹಳೇ ಹುಬ್ಬಳ್ಳಿ ದಂಗೆ ಪ್ರಕರಣದ 138 ಜನ ಮುಸ್ಲಿಂ ಸಮುದಾಯದವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಲಾಗಿತ್ತು.
ಏನಿದು ಹಳೇ ಹುಬ್ಬಳ್ಳಿ ದಂಗೆ ಪ್ರಕರಣ?
2022 ಎಪ್ರಿಲ್ 16 ರಂದು ಯಾರೋ ಒಬ್ಬ ಹಿಂದೂ ಮತಾಂಧ ಕೇಸರಿ ಧ್ವಜವನ್ನು ಮಸೀದಿ ಮೇಲೆ ಹಾರಿಸಿದಂತೆ ತೋರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ತನ್ನ ವಿಕೃತಿ ಮೆರೆದಿದ್ದ. ಇದರಿಂದ ಆಕ್ರೋಶಕ್ಕೆ ಒಳಗಾದ ಕೆಲವು ಮುಸಲ್ಮಾನರು ಇದು ಇಸ್ಲಾಂ ಧರ್ಮಕ್ಕೆ ಮಾಡಲಾದ ಅಪಮಾನ ಎಂದು ಆರೋಪಿಸಿ ಆರೋಪಿಯನ್ನು ತಮಗೆ ಒಪ್ಪಿಸಲು ಆಗ್ರಹಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು, ಪೊಲೀಸರ ಮೇಲೆ ಹಲ್ಲೆಗಳಾದವು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯ್ತು. ಕಲ್ಲು ತೂರಾಟ ನಡೆಯಿತು. ಪಕ್ಕದಲ್ಲಿದ್ದ ಹನುಮಾನ್ ದೇವಸ್ಥಾನಕ್ಕೆ ಹಾನಿ ಮಾಡಲಾಯ್ತು. AIMIM ಮುಖಂಡ ಕಾರ್ಪೋರೇಟರ್ ಮೊಹಮದ್ ಅರೀಫ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ಅರೀಫ್ ಸೇರಿದಂತೆ 150 ಕ್ಕೂ ಹೆಚ್ಚು ಮುಸಲ್ಮಾನರ ಮೇಲೆ 12 ಕ್ರಿಮಿನಲ್ ಕೇಸ್ ದಾಖಲಿಸಲಾಯ್ತು. ಈ 12 ಕೇಸುಗಳನ್ನೂ ಹಿಂಪಡೆಯಲು ಕಾಂಗ್ರೆಸ್ ಸರಕಾರ ಮುಂದಾಗಿತ್ತು. ಆಗಲೂ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿತ್ತು.

ಹಿಂಪಡೆತ ರದ್ದು ಮಾಡಿದ ಹೈಕೋರ್ಟ್
ಈ ಕೇಸ್ ಹಿಂಪಡಿಯುವಿಕೆಯನ್ನು ಪ್ರಶ್ನಿಸಿ ಬೆಂಗಳೂರಿನ ಗಿರೀಶ್ ಭಾರದ್ವಾಜ್ ಎನ್ನುವರು ಹೈಕೋರ್ಟಿನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದರು. ಆಗ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ ಹಾಗೂ ಇನ್ನೊಬ್ಬ ನ್ಯಾಯಮೂರ್ತಿ ಕೆ.ವಿ.ಅರವಿಂದರವರಿದ್ದ ದ್ವಿಸದಸ್ಯ ವಿಭಾಗೀಯ ಪೀಠವು 2024, ಅಕ್ಟೋಬರ್ 15 ರಂದು ಕಾಂಗ್ರೆಸ್ ಸರಕಾರದ ಕೇಸ್ ಹಿಂಪಡಿಯುವಿಕೆ ಆದೇಶವನ್ನು ಸಂಪೂರ್ಣವಾಗಿ ರದ್ದು ಮಾಡಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿತು.
* ಕೇಸ್ ಹಿಂಪಡಿಯುವಿಕೆಯು ನಿರರ್ಥಕ ರಾಜಕೀಯ ನಿರ್ಧಾರವಾಗಿದೆ.
* ಸರಕಾರವು Cr.PC ಸೆಕ್ಷನ್ 321 ರ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಸ್ವತಂತ್ರ ನಿರ್ಧಾರಗಳನ್ನು ಉಲ್ಲಂಘಿಸಿದೆ.
* ಸರಕಾರವು ಕೇವಲ ರಾಜಕೀಯ ಕಾರಣಗಳಿಗಾಗಿ ಕೇಸುಗಳನ್ನು ಹಿಂಪಡೆಯಲು ಅನುಮತಿಸಿದೆ.
* ಇದು ಕಾನೂನು ಉಲ್ಲಂಘನೆ ಮತ್ತು ಅಧಿಕಾರ ಮೀರಿದ ಕ್ರಮ.
* ಎಲ್ಲಾ 43 ಕೇಸುಗಳ ವಿಚಾರಣೆಗಳು ಮುಂದುವರೆಯುತ್ತವೆ.
ಎಂದು ಕರ್ನಾಟಕ ಉಚ್ಛ ನ್ಯಾಯಾಲಯವು ಕಾಂಗ್ರೆಸ್ ಸರಕಾರಕ್ಕೆ ಮಹಾಮಂಗಳಾರತಿ ಮಾಡಿತ್ತು. ತನ್ನ ಆದೇಶಕ್ಕೆ ವಿರುದ್ಧವಾಗಿ ಹೈಕೋರ್ಟ್ ತೀರ್ಪು ಬಂದಿದ್ದರಿಂದ ಪಾಠ ಕಲಿಯದ ಕಾಂಗ್ರೆಸ್ ಸರಕಾರವು ಈಗ ಮತ್ತೆ ಅಂತಹುದೇ ಪ್ರಯತ್ನವನ್ನು ಮಾಡಿದೆ. ಈ ಸಲ 60 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ. ಈ ನಿರ್ಧಾರದ ವಿರುದ್ಧ ಹೈಕೋರ್ಟಿಗೆ ಹೋಗುವುದಾಗಿ ಸಂಘಿಗಳು ಘೋಷಿಸಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಮುಖಭಂಗವನ್ನು ಅನುಭವಿಸುವುದು ನಿಶ್ಚಿತವಾಗಿದೆ.
ಬಿಜೆಪಿ ಸರಕಾರದಲ್ಲೂ ಕೇಸು ಹಿಂಪಡೆತ
ಕ್ರಿಮಿನಲ್ ಕೇಸ್ ಹಿಂಪಡೆತ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರದ ಕ್ರಮವನ್ನು ವಿರೋಧಿಸಲು ಬಿಜೆಪಿ ಪಕ್ಷಕ್ಕೆ ಯಾವ ನೈತಿಕತೆಯೂ ಇಲ್ಲವಾಗಿದೆ. ಯಾಕೆಂದರೆ ಇಂತಹುದೇ ಕೆಲಸವನ್ನು ಬಿಜೆಪಿ ಸರಕಾರ ಇದ್ದಾಗಲೂ ಆ ಪಕ್ಷ ಮಾಡಿಯಾಗಿದೆ.
2019-2013 ರ ಅವಧಿಯಲ್ಲಿ ಮಾನ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ಮಾನ್ಯ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಪಕ್ಷದ ಸರಕಾರ ಇದ್ದಾಗಲೂ 385 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಹೆಚ್ಚಿನ ಕೇಸುಗಳು 2013-2028 ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ದಾಖಲಾಗಿದ್ದವು. ಅದರಲ್ಲಿ
* 189 ಕೇಸುಗಳು ದ್ವೇಷಭಾಷಣ, ಗೋರಕ್ಷಣೆ, ಸಮುದಾಯ ಹಿಂಸೆ ಹಾಗೂ (ಅ)ನೈತಿಕ ಪೊಲೀಸ್ ಗಿರಿಗಳ ಕುರಿತಾಗಿದ್ದವು.
* ಇದರಲ್ಲಿ 62 ಕೇಸುಗಳು ಬಿಜೆಪಿ ಪಕ್ಷದ ಎಂಪಿ, ಸಚಿವರು ಹಾಗೂ ಶಾಸಕರ ವಿರುದ್ಧ ದಾಖಲಾಗಿದ್ದವು.
* ಪ್ರತಾಪ ಸಿಂಹ, ರೇಣುಕಾಚಾರ್ಯ, ಸಿ.ಟಿ.ರವಿ ರವರಂತವರ ಮೇಲೆ ದಾಖಲಿಸಿದ ಕ್ರಿಮಿನಲ್ ಕೇಸುಗಳಿದ್ದವು.
* ಈ ಎಲ್ಲಾ 385 ಕೇಸುಗಳನ್ನು ಹಿಂಪಡೆಯಲು 2020 ರಲ್ಲಿ ಬಿಜೆಪಿಯ ಸಚಿವ ಸಂಪುಟ ಅನುಮೋದನೆ ನೀಡಿತ್ತು.
* ಉತ್ತರ ಕನ್ನಡದಲ್ಲಿ ಬಲಪಂಥೀಯ ಕಾರ್ಯಕರ್ತರ ವಿರುದ್ಧದ ಹಿಂಸೆ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು.
* 2017 ರಲ್ಲಿ ಕರಾವಳಿ ಭಾಗದಲ್ಲಿ ಪರೇಶ್ ಮೇಸ್ತಾ ಮರಣಕ್ಕೆ ಸಂಬಂಧಿಸಿದಂತೆ ಹಿಂದುತ್ವವಾದಿ ಕಾರ್ಯಕರ್ತರ ಮೇಲಿನ 45 ಕೇಸುಗಳಿದ್ದವು.
* ಟಿಪ್ಪು ಜಯಂತಿ, ರಾಮನವಮಿ, ಹನುಮ ಜಯಂತಿ, ಗಣೇಶೋತ್ಸವಗಳ ಸಂದರ್ಭದಲ್ಲಿ ಹಿಂದುತ್ವವಾದಿಗಳ ಮೇಲೆ ಹಾಕಲಾದ ಮೊಕದ್ದಮೆಗಳೂ ಇದ್ದವು.
* ಇದರ ಜೊತೆಗೆ ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು, ಆರೆಸ್ಸೆಸ್ ಹಾಗೂ ಬಜರಂಗದಳದ ಕಾರ್ಯಕರ್ತರುಗಳೂ ಸೇರಿದಂತೆ ಒಟ್ಟು ಏಳು ಸಾವಿರಕ್ಕೂ ಹೆಚ್ಚು ಜನರ ಹೆಸರುಗಳನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು.
ಇದೆಲ್ಲದಕ್ಕೂ ರಾಜಕೀಯ ಪ್ರೇರಿತ ಕೇಸುಗಳೆಂದು ಬಿಜೆಪಿ ಕಾರಣ ಕೊಟ್ಟಿತ್ತು. ಕೇಸ್ ಹಿಂಪಡಿತ ಬಿಜೆಪಿಯ ರಾಜಕೀಯ ಪ್ರೇರಿತ ನಿರ್ಧಾರಗಳೆಂದು ಕಾಂಗ್ರೆಸ್ ಆರೋಪಿಸಿತ್ತು. ಬಿಜೆಪಿಯ ಅಸಂವಿಧಾನಿಕ ನಿರ್ಧಾರವನ್ನು ಹೈಕೋರ್ಟಿನಲ್ಲಿ ಕಾಂಗ್ರೆಸ್ ಪ್ರಶ್ನಿಸಬಹುದಾಗಿತ್ತಾದರೂ ಅದನ್ನೂ ಮಾಡಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಕೇಸ್ ಹಿಂಪಡೆತವನ್ನು ಬಿಜೆಪಿ ಪ್ರಶ್ನಿಸದೇ ಬಿಡಲಿಲ್ಲ.
ಎಲ್ಲಿದೆ ಕಾನೂನಿನ ಭಯ?
ಒಟ್ಟಾರೆಯಾಗಿ ಈ ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಕ್ರಿಮಿನಲ್ ಗಳು ಬಚಾವ್ ಆಗುತ್ತಾ ಬಂದಿದ್ದಾರೆ. ಇದರಿಂದಾಗಿ ದ್ವೇಷ ಭಾಷಣ ಮಾಡುವವರಿಗೆ, ಸಮಾಜದಲ್ಲಿ ದೊಂಬಿ ಗಲಭೆ ಸೃಷ್ಟಿಸುವವರಿಗೆ, ಸಮುದಾಯದವರನ್ನು ಪ್ರಚೋದಿಸಿ ಅಪರಾಧಿಕ ಕೃತ್ಯಗಳನ್ನು ಮಾಡಲು ಪ್ರೋತ್ಸಾಹಿಸುವವರಿಗೆ, ಕೋಮು ಸಂಘರ್ಷ ಹುಟ್ಟು ಹಾಕುವವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ನಮ್ಮ ಪರವಾದ ಸರಕಾರ ಬಂದಾಗ ನಮ್ಮ ಮೇಲಿನ ಕೇಸುಗಳನ್ನು ವಾಪಸ್ ಪಡೆಯುತ್ತದೆ ಬಿಡು ಎನ್ನುವ ಧೋರಣೆ ಬಂದಷ್ಟೂ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚುತ್ತಾ ಹೋಗುತ್ತವೆ. ಸಾಮಾಜಿಕ ಸ್ವಾಸ್ಥ್ಯ ಹಾಳಾಗಲು ಈ ರಾಜಕೀಯ ಪಕ್ಷಗಳೇ ಕಾರಣವಾಗುತ್ತವೆ.
ಪೊಲೀಸ್ ವ್ಯವಸ್ಥೆಯ ಮೇಲೆ ಒತ್ತಡ

ಯಾವುದೇ ರೀತಿಯ ಕಾನೂನು ಉಲ್ಲಂಘನೆಗಳು ಆದಾಗ ಪೊಲೀಸರು ಕೇಸುಗಳನ್ನು ದಾಖಲಿಸುತ್ತಾರೆ. ತೀವ್ರವಾಗಿ ವಿಚಾರಣೆಗಳನ್ನೂ ಮಾಡುತ್ತಾರೆ. ಸೂಕ್ತ ಸಾಕ್ಷ್ಯ ಪುರಾವೆಗಳನ್ನು ಸಂಗ್ರಹಿಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸಿದವರಿಗೆ ಕಾನೂನಾತ್ಮಕ ಶಿಕ್ಷೆ ಕೊಡಿಸಲು ಇಷ್ಟೆಲ್ಲಾ ಪ್ರಯತ್ನ ಪಡುವ ಪೊಲೀಸರಿಗೆ ಈ ಸರಕಾರಿ ಕೇಸ್ ಹಿಂಪಡೆಯುವಿಕೆಯು ತೀವ್ರ ಆಘಾತವನ್ನುಂಟು ಮಾಡುತ್ತದೆ. ಪೊಲೀಸರಿಗಿರುವ ಆತ್ಮವಿಶ್ವಾಸವನ್ನೇ ಕೊಲ್ಲುತ್ತದೆ. ಇಂತಹ ಕೇಸ್ ಹಿಂಪಡಿಯುವಿಕೆಗಳು ಪೊಲೀಸ್ ವ್ಯವಸ್ಥೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ರಾಜಕೀಯ ವ್ಯವಸ್ಥೆಯ ಮೇಲೆಯೇ ಭ್ರಮನಿರಸನ ಪಡುವಂತಾಗುತ್ತದೆ.
ಯಾವುದೇ ಕ್ರಿಮಿನಲ್ ಕೇಸುಗಳಲ್ಲಿ ಯಾರು ಅಪರಾಧಿಯೋ ನಿರಪರಾಧಿಯೋ ಎನ್ನುವುದನ್ನು ವಿಚಾರಣೆಗೊಳಪಡಿಸಿ ತೀರ್ಪು ಕೊಡುವುದು ನ್ಯಾಯಾಂಗದ ಕೆಲಸ. ಆದರೆ ಆ ಕೆಲಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಶಾಸಕಾಂಗವೇ ಮಾಡಿದರೆ ನ್ಯಾಯಾಂಗದ ಅಗತ್ಯವಾದರೂ ಏನಿದೆ?
ವೋಟ್ ರಾಜಕೀಯ?
ಚುನಾವಣಾ ವ್ಯವಸ್ಥೆಯ ಓಟ್ ರಾಜಕೀಯವೂ ಈ ಕೇಸ್ ಹಿಂಪಡೆತ ಪ್ರಕರಣಗಳ ಹಿಂದಿದೆ. ಮುಸಲ್ಮಾನರನ್ನು ಓಲೈಸಲು ಅವರ ಮೇಲಿದ್ದ ಕೇಸುಗಳನ್ನು ಕಾಂಗ್ರೆಸ್ ಸರಕಾರ ಹಿಂಪಡೆದು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಅದೇ ರೀತಿ ಬಿಜೆಪಿಯೂ ಸಹ ತನ್ನ ಸರಕಾರ ಇದ್ದಾಗ ಹಿಂದುತ್ವವಾದಿ ಮುಖಂಡರು ಮತ್ತು ಕಾರ್ಯಕರ್ತರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಹಿಂದೂ ಧ್ರುವೀಕರಣ ಮಾಡುವ ಮೂಲಕ ಹಿಂದೂ ಸಮುದಾಯದವರನ್ನು ಓಲೈಸುತ್ತಿದೆ ಹಾಗೂ ಓಟ್ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ.
ಈ ರಾಜಕೀಯ ಹಿತಾಸಕ್ತಿಗಳ ಆರೋಪ ಪ್ರತ್ಯಾರೋಪಗಳ ನಡುವೆ ನಿಜವಾದ ಅಪರಾಧಿಗಳು ಬಚಾವ್ ಆಗುತ್ತಿರುವುದು ಆತಂಕಕಾರಿಯಾಗಿದೆ. ತಪ್ಪು ಮಾಡಿದರೆ ಶಿಕ್ಷೆ ಗ್ಯಾರಂಟಿ ಎನ್ನುವ ಭಯ ಇದ್ದರೆ ಸಾಧ್ಯವಾದಷ್ಟೂ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ. ಹೀಗೆ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವ ಮೂಲಕ ಅಪರಾಧಿ ಕೃತ್ಯಗಳಿಗೆ ಸರಕಾರಗಳೇ ಬೆಂಬಲ ಕೊಡುತ್ತಾ ಹೋದರೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವವರು ಯಾರು?
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ವಿದ್ಯಾರ್ಥಿಗಳ ಕನಸು ನನಸಾಗಬೇಕೆಂದರೆ NEET ಬ್ಯಾನ್ ಆಗಬೇಕು


