ನವದೆಹಲಿ : ಕೇಂದ್ರ ಗೃಹ ಸಚಿವಾಲಯದ (MHA) ಅಧೀನದಲ್ಲಿರುವ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C), ಜ್ಯಾಕ್ ಡೋರ್ಸಿ ಅಭಿವೃದ್ಧಿಪಡಿಸಿರುವ ‘ಬಿಟ್‌ಚಾಟ್’ (Bitchat) ಎಂಬ ಬ್ಲೂಟೂತ್ ಮೆಶ್ ಮೆಸೇಜಿಂಗ್ ಆ್ಯಪ್‌ನ ಸೋರ್ಸ್ ಕೋಡ್ ಹೊಂದಿರುವ ಮೂರು GitHub ಪುಟಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ದಿ ಪ್ರಿಂಟ್ ವರದಿ ಪ್ರಕಾರ, ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಈ ಆ್ಯಪ್ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜ್ಯಾಕ್ ಡೋರ್ಸಿ ಅವರು ಎಕ್ಸ್ (X) ನಲ್ಲಿ ತಮಗೆ ಬಂದಿರುವುದಾಗಿ ಹೇಳಲಾದ ಎರಡು ಪುಟಗಳ ನೋಟಿಸ್‌ನ ಚಿತ್ರಗಳನ್ನು ಹಂಚಿಕೊಂಡು, “ಭಾರತ ಸರ್ಕಾರಕ್ಕೆ Bitchat ಮಾದರಿಯ ತಂತ್ರಜ್ಞಾನಗಳು ಇಷ್ಟವಿಲ್ಲ; ಅದನ್ನು ತೆಗೆದುಹಾಕಲು ಬಯಸುತ್ತಿದೆ” ಎಂದು ಬರೆದಿದ್ದಾರೆ ಎಂದು ವರದಿ ತಿಳಿಸಿದೆ.
ವರದಿ ಪ್ರಕಾರ, ಈ ನೋಟಿಸ್‌ಗೆ 2026ರ ಜುಲೈ 23ರಂದು ರಾತ್ರಿ 11:16ರ ಸಮಯ ನಮೂದಿಸಲಾಗಿದೆ. ಈ ಆದೇಶದಲ್ಲಿ GitHub ಮೂರು ಗಂಟೆಗಳೊಳಗೆ ಸಂಬಂಧಿತ ಲಿಂಕ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.
ಆದರೆ, ಈ ನೋಟಿಸ್‌ನ ನೈಜತೆಯನ್ನು ದಿ ಪ್ರಿಂಟ್ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ತನ್ನ ವರದಿಯಲ್ಲೇ ಸ್ಪಷ್ಟಪಡಿಸಿದೆ. ಅಲ್ಲದೆ, I4C ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕುಮಾರ್ ಅವರನ್ನು ಸಂಪರ್ಕಿಸಲಾಗಿದ್ದು, ಅವರ ಪ್ರತಿಕ್ರಿಯೆ ಬಂದ ಬಳಿಕ ವರದಿಯನ್ನು ನವೀಕರಿಸಲಾಗುವುದು ಎಂದೂ ದಿ ಪ್ರಿಂಟ್ ಹೇಳಿದೆ.
ಬಿಟ್‌ಚಾಟ್ ಎಂದರೇನು?
ಬಿಟ್‌ಚಾಟ್ ಒಂದು ಬ್ಲೂಟೂತ್ ಮೆಶ್ ಆಧಾರಿತ ವಿಕೇಂದ್ರೀಕೃತ ಸಂದೇಶ ವಿನಿಮಯ ಆ್ಯಪ್ ಆಗಿದ್ದು, ಮೊಬೈಲ್ ಡೇಟಾ ಅಥವಾ ಇಂಟರ್‌ನೆಟ್ ಸಂಪರ್ಕವಿಲ್ಲದೆ ಸಮೀಪದಲ್ಲಿರುವ ಸಾಧನಗಳ ನಡುವೆ ಸಂದೇಶಗಳನ್ನು ರವಾನಿಸಲು ಸಾಧ್ಯವಾಗುತ್ತದೆ ಎಂದು ದಿ ಪ್ರಿಂಟ್ ವರದಿ ವಿವರಿಸಿದೆ.
ಜಂತರ್ ಮಂತರ್ ಬಳಿ ವಿದ್ಯಾರ್ಥಿಗಳು ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾಮರ್ಇಂ ಗಳನ್ನು ಬಳಸಿ ಟೆರ್ ನೆಟ್ ತೆಗೆದು ಹಾಕಿದ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಪ್ರತಿಭಟನಾಕಾರರು ಬಿಟ್ ಚಾಟ್ ಬಳಸುತ್ತಿದ್ದರು.

