ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನು ನಡೆಸಲೇಬೇಕೆಂಬ ಕಾನೂನು ಇದೆಯೇ ಎಂದು ಪ್ರಶ್ನಿಸುವವರು, ನಮ್ಮ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳ ಈ ಕಾಳಜಿಗಳನ್ನು ಇಣುಕಿ ನೋಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಗೋಷ್ಠಿಗಳ ಉತ್ತರದಾಯಿತ್ವದ ಅನಿವಾರ್ಯತೆಯನ್ನು ಯಾವ ಪತ್ರಕರ್ತರು ರಾಜಕಾರಣಿಗಳಿಗೆ ತಿಳಿಹೇಳಬೇಕಿತ್ತೋ, ಅದೇ ಪತ್ರಕರ್ತರು ಪತ್ರಿಕಾಗೋಷ್ಠಿಗಳನ್ನು ಅಪ್ರಸ್ತುತ ಎಂದು ವಾದಿಸುತ್ತಿರುವುದು ವಿಪರ್ಯಾಸ ಮಾತ್ರವಲ್ಲ; ದೇಶದಲ್ಲಿ ಪತ್ರಿಕೋದ್ಯಮ ತಲುಪಿರುವ ಅಧಃಪತನದ ಆಳವೂ ಹೌದು – ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.
ಪ್ರಧಾನಿ ಪತ್ರಿಕಾಗೋಷ್ಠಿ ಎದುರಿಸಲೇಬೇಕು: ಯಾಕೆಂದರೆ…
“ಪ್ರಧಾನಿಯಾದವರು ಪತ್ರಿಕಾಗೋಷ್ಠಿ ನಡೆಸಲೇಬೇಕು ಎನ್ನುವ ಕಾನೂನು ಎಲ್ಲಿದೆ?”
ಇತ್ತೀಚೆಗೆ ನಾರ್ವೆ ದೇಶದಲ್ಲಿ ಅಲ್ಲಿನ ಪತ್ರಕರ್ತೆ ಹೆಲ್ಲೆ ಲಿಂಗ್ ಕೇಳಿದ ಪ್ರಶ್ನೆಗೆ ಮೋದಿಯವರು ಉತ್ತರಿಸದೆ ಹೊರನಡೆದ ನಂತರ ಪತ್ರಿಕಾಗೋಷ್ಠಿಯ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಚರ್ಚೆಯಲ್ಲಿ, ಕಳೆದ ಹನ್ನೆರಡು ವರ್ಷಗಳಿಂದ ಮುಕ್ತ ಪ್ರಶ್ನೆಗಳ ಪತ್ರಿಕಾಗೋಷ್ಠಿ ನಡೆಸದ ಮೋದಿಯವರನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಮೇಲಿನ ಪ್ರಶ್ನೆ ಮುಂದೊಡ್ಡುತ್ತಿದ್ದಾರೆ.
ಹೀಗೆ ಕೇಳುತ್ತಿರುವವರು ಕಾನೂನಿನ ಅಕ್ಷರಗಳನ್ನು (Letter of the Law) ಮಾತ್ರ ನೋಡುತ್ತಿದ್ದಾರೆಯೇ ಹೊರತು, ಸಂವಿಧಾನದ ನೈಜ ಜೀವಾಳವನ್ನು (Spirit of the Law) ಗ್ರಹಿಸುತ್ತಿಲ್ಲ. ಆದರೆ ನಾವು ನೆನಪಿಡಬೇಕಾದ ಸಂಗತಿಯೆಂದರೆ, ಭಾರತೀಯ ಪ್ರಜಾಪ್ರಭುತ್ವವು ಕೇವಲ ಲಿಖಿತ ಕಾನೂನುಗಳ ಮೇಲಷ್ಟೇ ಅಲ್ಲ, ದಶಕಗಳಿಂದ ಬೆಳೆದುಬಂದಿರುವ ‘ಸಂವಿಧಾನಾತ್ಮಕ ರೂಢಿಗಳು’ (Constitutional Conventions) ಮತ್ತು ನೈತಿಕ ಸಾಂಪ್ರದಾಯಿಕ ಪದ್ಧತಿಗಳ ಮೇಲೆಯೂ ನಿಂತಿದೆ. ಇವುಗಳನ್ನು ಕಾನೂನಿನ ಪುಸ್ತಕದಲ್ಲಿ ಬರೆದಿಡದಿದ್ದರೂ, ಇವುಗಳನ್ನು ಉಲ್ಲಂಘಿಸಿದರೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಂತಾಗುತ್ತದೆ. ಪ್ರಧಾನಿ ಅಥವಾ ಯಾವುದೇ ಅಧಿಕಾರಸ್ಥರು ನಡೆಸಬೇಕಾದ ಪತ್ರಿಕಾಗೋಷ್ಠಿ ಕೂಡಾ ಇಂತಹ ಸಂವಿಧಾನಾತ್ಮಕ ರೂಢಿಗಳಲ್ಲಿ ಒಂದು.
ಈಗ ಕಾಲ ಬದಲಾಗಿದೆ. ಸಂವಹನದ ಮಾಧ್ಯಮಗಳಲ್ಲಿ ಸಾಕಷ್ಟು ಹೊಸ ನೀರು ಉಕ್ಕಿದೆ. ಹಾಗಾಗಿ ಪತ್ರಿಕಾಗೋಷ್ಠಿಗಳು ಅಪ್ರಸ್ತುತ ಎಂದು ವಾದಿಸುವವರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪತ್ರಿಕಾಗೋಷ್ಠಿ ಎನ್ನುವುದು ಕಮ್ಯುನಿಕೇಷನ್‌ನ ಒಂದು ಫ್ಲಾಟ್‌ಫಾರಂ ಅಲ್ಲ. ಅಧಿಕಾರಸ್ಥರು ನಿಭಾಯಿಸಲೇಬೇಕಾದ ಉತ್ತರದಾಯಿತ್ವದ ವೇದಿಕೆ. ನಮಗಿದು ಅರ್ಥವಾಗಬೇಕೆಂದರೆ, ಸಂವಿಧಾನ ರಚನಾ ಸಭೆಯಲ್ಲಿ ನಡೆದ ಒಂದು ಚರ್ಚೆಯನ್ನು ಗಮನಿಸಬೇಕು.

ದಾಮೋದರ್ ಎಸ್ ಸೇಠ್ ಮತ್ತು ಕೆ ಟಿ ಶಾ ಮೊದಲಾದವರು, ಸಂವಿಧಾನದ ಆರ್ಟಿಕಲ್ 19 (1) (ಎ) ಅಡಿ `ಫ್ರೀಡಂ ಆಫ್ ಪ್ರೆಸ್’ (ಪತ್ರಿಕಾ ಸ್ವಾತಂತ್ರ್ಯ) ಅನ್ನೂ ಪ್ರತ್ಯೇಕವಾಗಿ ಉಲ್ಲೇಖಿಸಬೇಕೆಂದು ವಾದಿಸಿದರು. ಬಹಳಷ್ಟು ಚರ್ಚೆ ನಡೆಯಿತು. ಕೊನೆಗೆ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರು, “ಪ್ರೆಸ್ (ಮಾಧ್ಯಮ) ಎನ್ನುವುದನ್ನು ಒಂದು ಪ್ರತ್ಯೇಕ ವೃತ್ತಿಯಾಗಿ ನೋಡುವುದಕ್ಕಿಂತ, ಅದನ್ನು ಕೂಡಾ ನಾವು ಒಬ್ಬ ವ್ಯಕ್ತಿ ಅಥವಾ ನಾಗರಿಕ ಎಂದೇ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಒಬ್ಬ ಪತ್ರಕರ್ತ, ಅಥವಾ ಸಂಪಾದಕ ಕೂಡಾ ಸ್ವತಂತ್ರ ವ್ಯಕ್ತಿಯಾಗಿರುತ್ತಾನೆ/ಳೆ. ಆತ/ಆಕೆ ಬರೆದ ಅಭಿಪ್ರಾಯ ಅಥವಾ ವರದಿ ಆತನ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿರುತ್ತದೆ. ಹಾಗಾಗಿ ಪತ್ರಕರ್ತರಾದವರಿಗೆ ಒಬ್ಬ ನಾಗರಿಕನಿಗೆ ಅನ್ವಯಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲಾ ರಕ್ಷಣೆಗಳು/ಹಕ್ಕುಗಳು ಲಭಿಸುವುದರಿಂದ ಪ್ರತ್ಯೇಕವಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಉಲ್ಲೇಖಿಸುವ ಅಗತ್ಯವಿಲ್ಲ” ಎಂದು ಹೇಳುತ್ತಾರೆ.
(https://clpr.org.in/blog/freedom-of-the-press-a-constitutional history/#:~:text=He%20argued%20that%20the%20press,of%20the%20press%20at%20all’.)
1975ರ ಸ್ಟೇಟ್ ಆಫ್ ಉತ್ತರಪ್ರದೇಶ ವರ್ಸಸ್ ರಾಜ್ ನರೇನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, “ಸಾರ್ವಜನಿಕ ಆಡಳಿತಗಾರರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರ, ನೀತಿಗಳ ಬಗ್ಗೆ ‘ತಿಳಿದುಕೊಳ್ಳುವ ಹಕ್ಕು’ (Right to Know) ಪ್ರತಿಯೊಬ್ಬ ನಾಗರಿಕನಿಗೆ ಇರುತ್ತದೆ. ಈ ` ತಿಳಿದುಕೊಳ್ಳುವ ಹಕ್ಕು’ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ” ಎಂದು ಹೇಳಿದೆ.
ಇವೆರಡನ್ನೂ ಸಾರಾಂಶದಲ್ಲಿ ನೋಡಿದಾಗ, ಪತ್ರಕರ್ತನಾದವನು ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿದ ಒಬ್ಬ ನಾಗರಿಕನೂ ಆಗಿರುತ್ತಾನೆ; ಆ ನಾಗರಿಕನಾದವನಿಗೆ ತನ್ನ ಆಡಳಿತಗಾರರ ನೀತಿ, ನಿರ್ಧಾರಗಳನ್ನು ‘ತಿಳಿದುಕೊಳ್ಳುವ ಹಕ್ಕು’ (Right to Know) ಇರುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೆ ಪ್ರಧಾನಿಯಂತಹ ಉನ್ನತ ಹುದ್ದೆಗಳಲ್ಲಿ ಇರುವವರ ಜೊತೆಗೆ ನೇರವಾಗಿ ದ್ವಿಮುಖ ಸಂವಹನ ಸರಳ ಮತ್ತು ಸುಲಭವಲ್ಲವಾದ್ದರಿಂದ, ಅಂತವರ ಪ್ರತಿನಿಧಿಗಳಾದ ಪತ್ರಕರ್ತರ ಪ್ರಶ್ನೆಗಳಿಗೆ ಮುಖಾಮುಖಿಯಾಗುವುದು ಕಮ್ಯುನಿಕೇಷನ್ ಮಾರ್ಗ ಮಾತ್ರ ಆಗಿರುವುದಿಲ್ಲ, ಜನರಿಗೆ ತಮ್ಮ ಉತ್ತರದಾಯಿತ್ವವನ್ನು ಪ್ರಸ್ತುತಪಡಿಸುವ ವೇದಿಕೆಯೂ ಆಗಿರುತ್ತದೆ. ಯಾಕೆಂದರೆ, ಪತ್ರಕರ್ತರು ಕೂಡಾ ಜನ, ಅರ್ಥಾತ್ ನಾಗರಿಕರು!
ಪ್ರಧಾನಿ ಪತ್ರಿಕಾಗೋಷ್ಠಿ ನಡೆಸದಿರುವುದನ್ನು ಸಮರ್ಥಿಸಿಕೊಳ್ಳುತ್ತಿರುವವರು, ಜನರಿಗೆ ಉತ್ತರ ನೀಡಲು ಅವರು ಬೇರೆ ಬೇರೆ ಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ನೀವು ಎಷ್ಟೇ ಭಿನ್ನ ಮಾರ್ಗಗಳನ್ನು ಕಂಡುಕೊಂಡರೂ, ಒಬ್ಬ ನಾಗರಿಕನಿಗೆ ಇರುವ ಅವನದೇ ಮಾರ್ಗವನ್ನು ನೀವು ನಿರಾಕರಿಸುವಂತಿಲ್ಲ, ನಿರ್ಲಕ್ಷಿಸುವಂತೆಯೂ ಇಲ್ಲ. ಪತ್ರಕರ್ತ ಒಬ್ಬ ನಾಗರಿಕ ಎಂದಾದ ಮೇಲೆ, ಅವನ ಪ್ರಶ್ನೆಗಳನ್ನು ಉತ್ತರಿಸದೆ ಪತ್ರಿಕಾಗೋಷ್ಠಿಯಿಂದ ವಿಮುಖವಾಗುವುದು ಸಂವಿಧಾನದ ಆಶಯಕ್ಕೆ ಮಾಡಿದ ಅಪಚಾರವಲ್ಲವೇ?
ಇಂಡಿಯನ್ ಎಕ್ಸ್ಪ್ರೆಸ್ ನ್ಯೂಸ್ಪೇಪರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1985) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ “ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಸಾಮಾಜಿಕ ಮತ್ತು ರಾಜಕೀಯ ಸಂವಾದಗಳ ಹೃದಯವಿದ್ದಂತೆ” ಎಂದು ಸ್ಪಷ್ಟವಾಗಿ ಹೇಳಿದೆ.
(https://indiankanoon.org/doc/223504/)
ಮುಕ್ತ ಪ್ರಶ್ನೆಗಳ ಅವಕಾಶದ ಪತ್ರಿಕಾಗೋಷ್ಠಿಯೆಂಬ ಹೃದಯವನ್ನೇ ನೀವು ಕಡೆಗಣಿಸಿ, ಪ್ರಜಾಪ್ರಭುತ್ವಕ್ಕೆ ಉಸಿರು ತುಂಬಲು ಸಾಧ್ಯವೇ?
ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನು ನಡೆಸಲೇಬೇಕೆಂಬ ಕಾನೂನು ಇದೆಯೇ ಎಂದು ಪ್ರಶ್ನಿಸುವವರು, ನಮ್ಮ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳ ಈ ಕಾಳಜಿಗಳನ್ನು ಇಣುಕಿ ನೋಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಗೋಷ್ಠಿಗಳ ಉತ್ತರದಾಯಿತ್ವದ ಅನಿವಾರ್ಯತೆಯನ್ನು ಯಾವ ಪತ್ರಕರ್ತರು ರಾಜಕಾರಣಿಗಳಿಗೆ ತಿಳಿಹೇಳಬೇಕಿತ್ತೋ, ಅದೇ ಪತ್ರಕರ್ತರು ಪತ್ರಿಕಾಗೋಷ್ಠಿಗಳನ್ನು ಅಪ್ರಸ್ತುತ ಎಂದು ವಾದಿಸುತ್ತಿರುವುದು ವಿಪರ್ಯಾಸ ಮಾತ್ರವಲ್ಲ; ದೇಶದಲ್ಲಿ ಪತ್ರಿಕೋದ್ಯಮ ತಲುಪಿರುವ ಅಧಃಪತನದ ಆಳವೂ ಹೌದು.
ಅಂದಹಾಗೆ, ಪತ್ರಿಕಾಗೋಷ್ಠಿಗಳು ಮಾಹಿತಿ ಪಡೆಯುವ ಜನರ ಹಕ್ಕಿನ ಉತ್ತರದಾಯಿತ್ವ ವೇದಿಕೆಗಳು ಮಾತ್ರವಲ್ಲದೆ, ತನ್ನ ನಾಯಕನ/ಕಿಯ ವ್ಯಕ್ತಿತ್ವವನ್ನು ಅರಿಯುವ ಮಾಪನಗಳೂ ಆಗಿರುತ್ತವೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ನಾಯಕ(ಕಿ) ಆದವರು ಹೇಗೆ ವರ್ತಿಸುತ್ತಾನೆ ಎನ್ನುವುದನ್ನು ಪತ್ರಿಕಾಗೋಷ್ಠಿಗಳು ಜನರ ಮುಂದೆ ತೆರೆದಿಡುತ್ತವೆ. ತಮ್ಮ ನೀತಿಗಳನ್ನು ಟೀಕಿಸುವ, ಅಥವಾ ಕಟುವಾಗಿ ವಿಮರ್ಶಿಸುವ ಪ್ರಶ್ನೆಗಳು ಎದುರಾದಾಗ ಒಬ್ಬ ನಾಯಕ/ಕಿ ತನ್ನ ಸಹಿಷ್ಣುತೆಯನ್ನು ಕಳೆದುಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸುವುದು ತುಂಬಾ ಮುಖ್ಯ. ಯಾಕೆಂದರೆ ಪಾರದರ್ಶಕತೆಯ ಜೊತೆಗೆ, ಸಂವೇದನಾಶೀಲತೆಯೂ ಅನಾವರಣವಾಗುತ್ತದೆ. ಅಂತಹ ಸಂವೇದನಾಶೀಲತೆ ಇರುವ ವ್ಯಕ್ತಿ ಮಾತ್ರ ದೇಶವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾನೆ/ಳೆ. ಸಮರ್ಪಕ ಉತ್ತರಗಳನ್ನು ನೀಡುವ ಮೂಲಕ, ತಾನು ಕೇವಲ ಅಧಿಕಾರಿಗಳ ಫೀಡಿಂಗ್ ಅವಲಂಬಿಸಿದ ವ್ಯಕ್ತಿಯಲ್ಲ, ದೇಶದ ಆಗುಹೋಗುಗಳ ಬಗ್ಗೆ ಸಮಗ್ರ ಅರಿವು ಮತ್ತು ವಿವೇಚನೆ ಹೊಂದಿರುವ ವ್ಯಕ್ತಿ ಎಂದು ಆತ/ಆಕೆ ಸಾಬೀತು ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ, ತಮ್ಮ ಹಾಸ್ಯಪ್ರಜ್ಞೆಯ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಗೊಳಿಸುವ ನಿಪುಣತೆಯನ್ನೂ ತೋರಬೇಕಾಗುತ್ತದೆ. ನೀವು ಒಬ್ಬ ಸಮರ್ಥ ವ್ಯಕ್ತಿಯ ಕೈಗೆ ಅಧಿಕಾರ ಕೊಟ್ಟಿದ್ದೀರಿ, ನಾನದನ್ನು ನಿಭಾಯಿಸುತ್ತಿದ್ದೇನೆ ಎಂಬ ವಿಶ್ವಾಸವನ್ನು ನಾಯಕ/ಕಿ ಆದವರು ಜನರಿಗೆ ಆಗಿಂದಾಗ್ಗೆ ಸಾಬೀತು ಮಾಡುತ್ತಾ ಇರುವುದು ಸಂಸತ್ತಿನಲ್ಲಿ ವಿಶ್ವಾಸಮತವನ್ನು ಕಾಯ್ದುಕೊಂಡಷ್ಟೇ ಅಗತ್ಯ. ಮುಕ್ತ ಮತ್ತು unscripted ಪ್ರಶ್ನೆಗಳನ್ನು ಎದುರಿಸುವ ಪತ್ರಿಕಾಗೋಷ್ಠಿಗೆ ನಿಮ್ಮನ್ನು ಒಡ್ಡಿಕೊಂಡಷ್ಟೂ, ನಿಮ್ಮ ನೀತಿಗಳ ಪಾರದರ್ಶಕತೆಯ ಜೊತೆಗೆ ನಿಮ್ಮ ಸಾಮರ್ಥ್ಯದ ವಿಶ್ವಾಸವನ್ನು ನಾಗರಿಕ ಪ್ರತಿನಿಧಿಗಳಾದ ಪತ್ರಕರ್ತರ ಮೂಲಕ ಜನರಿಗೆ ಮನವರಿಕೆ ಮಾಡಿಕೊಟ್ಟಂತೆ ಆಗುತ್ತೆ. ಅಂತಹ ಪತ್ರಿಕಾಗೋಷ್ಠಿಗಳನ್ನೆ ಅಪ್ರಸ್ತುತವೆನ್ನುವುದು, ಸಾಂವಿಧಾನಿಕ ರೂಢಿಯ ನೋಟದಲ್ಲಿ ಸಂಸತ್ತಿನಲ್ಲಿ ವಿಶ್ವಾಸಮತವನ್ನೇ ಅಪ್ರಸ್ತುತವೆಂದಂತಾಗುವುದಿಲ್ಲವೇ?
ಪ್ರಧಾನಿಗಳಿಗೆ ಅನ್ವಯಿಸುತ್ತಿರುವ ಈ ರಿಯಾಯಿತಿ ವಾದ ಬೇರೆಬೇರೆ ಸಚಿವರು, ಮುಖ್ಯಮಂತ್ರಿಗಳಿಗೂ ಅನ್ವಯಿಸುತ್ತದಲ್ಲವೇ? ಪತ್ರಿಕಾಗೋಷ್ಠಿಗಳೆಂದರೆ ಬರೀ ಕಾಡುಹರಟೆ – ಗದ್ದಲದ ಪ್ರಸಂಗಗಳು, ಹಾಗಾಗಿ ನಾವು ಪತ್ರಿಕಾಗೋಷ್ಠಿ ನಡೆಸುವುದಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ನಾವು ಕೂಡಾ ಒನ್‌ಸೈಡೆಡ್ ಭಿನ್ನ ಮಾರ್ಗಗಳಲ್ಲಿ ಜನರನ್ನು ತಲುಪುತ್ತೇವೆ ಎಂದು ಅವರೆಲ್ಲರೂ ನಿರ್ಧಾರಕ್ಕೆ ಬಂದರೆ, ಪ್ರಧಾನಿಗಳ ಸಮರ್ಥಕರು ಅದನ್ನು ಸ್ವಾಗತಿಸುತ್ತಾರೆಯೇ? ಅವರು ಸ್ವಾಗತಿಸಬಹುದೇನೋ, ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವುದೇ?
ಮಾಚಯ್ಯ ಎಂ ಹಿಪ್ಪರಿಗಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ನಾರ್ವೆಯಲ್ಲಿ ಮೋದಿ ಪಲಾಯನ


