ಗುಬ್ಬಿ ಚನ್ನಬಸಯ್ಯ ಎಂಬ ಶತಮಾನದ ರಂಗಚೇತನ

ಹಿರಿಯ ರಂಗಚೇತನ ಗುಬ್ಬಿ ಚನ್ನಬಸಯ್ಯ ಅವರು ಇದೇ ಮೇ ಆರನೇ ತಾರೀಖಿಗೆ ನೂರಾ ಮೂರು ವಸಂತಗಳು ತುಂಬಿ ನೂರಾ ನಾಲ್ಕಕ್ಕೆ ಕಾಲಿಡುತ್ತಿದ್ದಾರೆ. ಚನ್ನಬಸಯ್ಯ ಕಳೆದ ಎಂಬತ್ತು ವರುಷಗಳಿಂದ ಕನ್ನಡ ರಂಗಭೂಮಿಯ ಮೌಲ್ಯಗಳನ್ನು ಬಿತ್ತಿ ಬೆಳೆದವರು. ವೃತ್ತಿರಂಗಭೂಮಿಯ ಹಲವು ಅನನ್ಯತೆಗಳನ್ನು ಬದುಕಿದವರು. ಸ್ವಾತಂತ್ರ್ಯ ಸೇನಾನಿಗಳಾದ ಸುಭಾಷ್ ಚಂದ್ರ ಬೋಸ್, ಹೊಸಮನಿ ಸಿದ್ದಪ್ಪ (ಸುಭಾಷಚಂದ್ರ ಭೋಸ್ ಒಡನಾಡಿ) ಅವರ ಬದುಕು ಸಾಧನೆಗಳ ಮೇಲೆ ನಿಚ್ಚಳ ಬೆಳಕು ಚೆಲ್ಲುವ ಮಹತ್ವದ ನಾಟಕಗಳನ್ನು ಕನ್ನಡ ರಂಗಭೂಮಿಗೆ ತಂದವರು. ತನ್ಮೂಲಕ ಸ್ವಾತಂತ್ರ್ಯಹೋರಾಟದ ರಂಗಸಂಸ್ಕೃತಿ ಪರಂಪರೆ ಮೆರೆದವರು – ಮಲ್ಲಿಕಾರ್ಜುನ ಕಡಕೋಳ, ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರು

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಚೇತನ ಗುಬ್ಬಿ ಚನ್ನಬಸಯ್ಯ ಅವರು ಇದೇ ಮೇ ಆರನೇ ತಾರೀಖಿಗೆ (O6-05-1923 ಜನನ) ನೂರಾ ಮೂರು ವಸಂತಗಳು ತುಂಬಿ ನೂರಾ ನಾಲ್ಕಕ್ಕೆ ಕಾಲಿಡುವರು. ಅವರ ಹುಟ್ಟೂರು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಒಡೆಯರ ಮತಿಘಟ್ಟ. ಚನ್ನಬಸಯ್ಯ ಕಳೆದ ಎಂಬತ್ತು ವರುಷಗಳಿಂದ ಕನ್ನಡ ರಂಗಭೂಮಿಯ ಮೌಲ್ಯಗಳನ್ನು ಬಿತ್ತಿ ಬೆಳೆದವರು. ವೃತ್ತಿರಂಗಭೂಮಿಯ ಹಲವು ಅನನ್ಯತೆಗಳನ್ನು ಬದುಕಿದವರು. ಸ್ವಾತಂತ್ರ್ಯ ಸೇನಾನಿಗಳಾದ ಸುಭಾಷ್ ಚಂದ್ರ ಬೋಸ್, ಹೊಸಮನಿ ಸಿದ್ದಪ್ಪ (ಸುಭಾಷಚಂದ್ರ ಭೋಸ್ ಒಡನಾಡಿ) ಅವರ ಬದುಕು ಸಾಧನೆಗಳ ಮೇಲೆ ನಿಚ್ಚಳ ಬೆಳಕು ಚೆಲ್ಲುವ ಮಹತ್ವದ ನಾಟಕಗಳನ್ನು ಕನ್ನಡ ರಂಗಭೂಮಿಗೆ ತಂದವರು. ತನ್ಮೂಲಕ ಸ್ವಾತಂತ್ರ್ಯಹೋರಾಟದ ರಂಗಸಂಸ್ಕೃತಿ ಪರಂಪರೆ ಮೆರೆದವರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ವರ್ಷಗಳ ಹಿಂದೆ ನಾಟ್ಯ ಸರಸ್ವತಿ ಶಾಂತಲಾ ಕಲಾಸಂಘದ ರಂಗಕರ್ಮಿ ಆಂಜನೇಯ, ಚನ್ನಬಸಯ್ಯನವರ ನೂರನೇ ವರ್ಷದ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು. ಸೇಡಂ, ಸಿಂಧನೂರು, ಸಿರಸಿ, ದಾವಣಗೆರೆ, ತುಮಕೂರು, ತಾಳಗುಪ್ಪ, ಶಿವಮೊಗ್ಗ ಹೀಗೆ ನಾಡಿನ ನಾನಾ ಭಾಗಗಳಿಂದ ಚನ್ನಬಸಯ್ಯನವರ ನೂರಾರು ಅಭಿಮಾನಿಗಳು ಆಗಮಿಸಿದ್ದರು. ಅವತ್ತು ‌ಕರ್ನಾಟಕ ಸರ್ಕಾರದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರು ಗುಬ್ಬಿ ಚನ್ನಬಸಯ್ಯನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಈ ಕಾಲದಲ್ಲಿ “ನೂರು ವರುಷ ಬದುಕುವುದೇ ದೊಡ್ಡ ಪವಾಡ, ಅದು ಕಲಾವಿದರಿಗೆ ಮಾತ್ರ ಸಾಧ್ಯ” ಎಂದು ಅಚ್ಚರಿ ತೋರಿದ್ದರು. ಕಾರ್ಯಕ್ರಮ ಮುಗಿಯುವವರೆಗೆ ಸಚಿವರು ಪ್ರೀತಿಯಿಂದ ಪಾಲ್ಗೊಂಡಿದ್ದರು.

ಚನ್ನಬಸಯ್ಯ ದೂರದ ದೆಹಲಿ, ಕೊಲ್ಕತ್ತಾ ಮಹಾನಗರಗಳಿಗೆ ಒಂಬತ್ತು ವರ್ಷಗಳ ಕಾಲ ಓಡಾಡಿ, ವಾರಗಟ್ಟಲೆ ವಾಸ್ತವ್ಯ ಮಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬದುಕು ಸಾಧನೆಗಳ ಸಮಗ್ರ ಮಾಹಿತಿ ಸಂಗ್ರಹಿಸುತ್ತಾರೆ. ಸುಭಾಷಚಂದ್ರ ಬೋಸ್ ಅವರ ಮೊಮ್ಮಗ ಶಿಶಿರಚಂದ್ರ ಬೋಸ್ ಅವರೊಂದಿಗೆ ಕೊಲ್ಕತ್ತಾದಲ್ಲಿ ಸುದೀರ್ಘ ಕಾಲ ಸಮಾಲೋಚಿಸಿ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಸುಭಾಷ್ ಚಂದ್ರ ಭೋಸ್ ಕುರಿತು ಚಿಂತನಾರ್ಹ ನಾಟಕ ರೂಪಿಸುತ್ತಾರೆ. ಅದು ಅವರ ತಪಸ್ಸಿನ ಫಲವಂತೆ. ಇದಕ್ಕೆಲ್ಲ ಸುಭಾಷ್ ಚಂದ್ರ ಬೋಸ್ ಅನುಯಾಯಿಗಳಾದ ಕಲಬುರ್ಗಿಯ ಡಿ. ಬಿ. ಕಲ್ಮಣಕರ್ ಅವರ ನೆರವು ಪಡೆಯುತ್ತಾರೆ. ಈ ನಾಟಕವನ್ನು ಇಂಗ್ಲಿಷ್ ಭಾಷೆಯಲ್ಲೂ ಪ್ರಕಟಿಸಿದ್ದಾರೆ. ಹಾಗೆಯೇ ಅವರು ಹೊಸಮನಿ ಸಿದ್ದಪ್ಪ ಕುರಿತು ನಾಟಕ ಬರೆದಿದ್ದಾರೆ. ಈ ಎರಡೂ ನಾಟಕಗಳು ಅನೇಕ ಕಡೆ ಪ್ರದರ್ಶನ ಕಂಡಿವೆ. ಖುದ್ದಾಗಿ ಚನ್ನಬಸಯ್ಯ ಅಭಿನಯಿಸಿದ್ದಾರೆ.

ಸೌಭಾಗ್ಯಲಕ್ಷ್ಮಿ, ಬಾಲಚಂದ್ರ, ಕಡಕೋಳ ಮಡಿವಾಳಪ್ಪ, ಪುತ್ಥಳಿಯಂತಹ ಕ್ಲಾಸಿಕ್ ಪರಂಪರೆಯ ನೂರೈವತ್ತಕ್ಕು ಹೆಚ್ಚು ನಾಟಕಗಳ ನೂರಾರು ಪಾತ್ರಗಳಲ್ಲಿ ಅಭಿನಯಿಸಿದವರು ಗುಬ್ಬಿ. ಸಹಸ್ರಾರು ಪ್ರದರ್ಶನಗಳ ಮೂಲಕ ಕನ್ನಡ ರಂಗಭೂಮಿಯ ಸಂವೇದನಾಶೀಲ ಪರಂಪರೆಯನ್ನು ಸಮೃದ್ಧಗೊಳಿಸಿದವರು.

ಗುಬ್ಬಿ ಚನ್ನಬಸಯ್ಯ ನವರು

ಪರದೆ ಎಳೆಯುವ ರಂಗಕಾರ್ಮಿಕನಾಗಿ, ನಟನಾಗಿ, ನಿರ್ದೇಶಕನಾಗಿ, ನಾಟಕ ಕಂಪನಿ ಮಾಲೀಕನಾಗಿ, ನಾಟಕಕಾರನಾಗಿ, ಚಲನಶೀಲ ರಂಗೇತಿಹಾಸಕಾರನಾಗಿ ಹೀಗೆ ಬಹುಮುಖಿ ರಂಗ ಬದುಕಿನ ಎಂಟು ದಶಕಗಳನ್ನು ಹಾಳತವಾಗಿ ಬಾಳಿದವರು. ಇನ್ನೂ ಇಂತಹ ಹತ್ತಾರು ಮಹತ್ತರ ರಂಗಭೂಮತ್ವದ ವ್ಯಕ್ತಿತ್ವವುಳ್ಳ ಗುಬ್ಬಿ ಚನ್ನಬಸಯ್ಯ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇದುವರೆಗೆ ಬಾರದಿರುವುದೇ ಪರಮಾಶ್ಚರ್ಯ. ಆದರೆ ಅವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಪ್ರಾಪ್ತವಾಗಿದೆ ಎಂಬುದೇ ಸಂತಸ. ಅಷ್ಟಕ್ಕೂ ಅವರೇನು ಪ್ರಶಸ್ತಿಗಳಿಗಾಗಿ ಇಷ್ಟೆಲ್ಲ ರಂಗಸಾಧನೆ ಮಾಡಿದವರಲ್ಲ.

ಚನ್ನಬಸಯ್ಯ ಗುಬ್ಬಿ, ತನ್ನ ಪರಿಚಯಕ್ಕೆ ಮುನ್ನವೇ “ನಾನು ಗುಬ್ಬಿ ವೀರಣ್ಣನವರ ಕುಟುಂಬಕ್ಕೆ ಸಂಬಂಧಿಸಿದವನಲ್ಲ” ಎಂದು ವಿನೀತರಾಗೇ ಸ್ಪಷ್ಟಪಡಿಸುತ್ತಾರೆ. ಅದು ಅವರ ಮನೋಧರ್ಮವೇ ಆಗಿದೆ. ಅದು ಅವರ ಸ್ವಯಂ ಪರಿಚಯದ ಗಟ್ಟಿಧ್ವನಿಯ ವಾಡಿಕೆಯೇ ಆಗಿದೆ.

ಕೆಲವು ಮಂದಿ ಕಲಾವಿದರು ತಮ್ಮ ಪರಿಚಯವನ್ನು ಹೆಗ್ಗಳಿಕೆಯ ಧ್ವನಿಯಲ್ಲಿ “ತಾವು ಗುಬ್ಬಿವೀರಣ್ಣನವರ ಖಾಸಾ  ಸಂಬಂಧಿಗಳೆಂಬಂತೆ” ಅವರ ಮರಿ, ಗಿರಿ ಮೊಮ್ಮಕ್ಕಳೆಂದು ತಲೆಮಾರುಗಳ ನಂಟಿನ ‘ಗಂಟುಹಾಕಿ’ ಹೇಳುವುದನ್ನು ಕೇಳಿದ್ದೇವೆ. ಎಷ್ಟೋಬಾರಿ ಅವರ ಮೂಲ ಕುಟುಂಬಸ್ಥರಿಗೇ ಅವು ಗೊತ್ತಿರದ ಮುಜುಗರದ ಸಂಬಂಧಗಳಾಗಿರ್ತವೆ.

ಅಂಥದಕ್ಕೆ ಅವಕಾಶವೇ ಬೇಡವೆಂದು ಚನ್ನಬಸಯ್ಯ ಅದನ್ನು ಕರಾರುವಾಕ್ಕಾಗಿ ಎಂಬಂತೆ ತಮ್ಮ ಹೆಸರಿನ ಪರಿಚಯದ ಆರಂಭಕ್ಕೇ ಅದನ್ನು ಹೇಳಿ ನಿರಾಳರಾಗುತ್ತಾರೆ. ಗುಬ್ಬಿ ವೀರಣ್ಣನವರ ಹೆಸರಿಗೆ ಮುಕ್ಕು ಬಾರದಿರುವ ಕಳಕಳಿ ಅವರದು. ಅಷ್ಟು ಮಾತ್ರವಲ್ಲ ಚನ್ನಬಸಯ್ಯ ಗುಬ್ಬಿ ಅವರಿಗೆ ನಾಟಕರತ್ನ ಗುಬ್ಬಿ ವೀರಣ್ಣನವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ.

ತಮ್ಮ ತೊಂಬತ್ತೇಳರ ಏರುಪ್ರಾಯದಲ್ಲಿ ದಾವಣಗೆರೆಗೆ ಬಂದಿದ್ದರು. ಆಗ ಇಲ್ಲಿ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ‘ಕುಮಾರ ವಿಜಯ ನಾಟಕ ಕಂಪನಿ’ ಕ್ಯಾಂಪ್ ಮಾಡಿತ್ತು. ಕಂಪನಿಗೆ ಭೇಟಿ ಕೊಟ್ಟು ಕಲಾವಿದರಿಗೆ ಶಾಲು ಹೊದಿಸಿ, ಸತ್ಕರಿಸಿ, ಕೈಲಾದ ಆರ್ಥಿಕ ಸಹಾಯ ಮಾಡಿ ಸೊಗಸಾಗಿ ಮಾತಾಡಿದರು. ಚಿತ್ತರಗಿ ನಾಟಕ ಕಂಪನಿ ಚನ್ನಬಸಯ್ಯರಿಗೆ ಗಟ್ಟಿ ಬದುಕು ಕಟ್ಟಿಕೊಟ್ಟ ಅವರ ಪಾಲಿನ ವಿಶ್ವವಿದ್ಯಾಲಯ. ಅಷ್ಟಕ್ಕೂ ಚಿತ್ತರಗಿ ಶಾಸ್ತ್ರಿಗಳ ಕಂಪನಿಗೆ ವೃತ್ತಿರಂಗ ಚರಿತೆಯಲ್ಲಿ ವಿಶೇಷ ಸ್ಥಾನಮಾನ.

ಮನೆಯಲ್ಲಿ ಪುಟ್ಟದೊಂದು ರೇಡಿಯೊ ಇಟ್ಟುಕೊಂಡಿದ್ದಾರೆ. ದಿನಾಲೂ ಬಾನುಲಿ ಒಡನಾಟ. ಅವರು ಅಪಾರ ನೆನಪುಗಳ ರಂಗಭಂಡಾರ. ನೂರಾ ಮೂರರ ಪ್ರಾಯದಲ್ಲೂ ಯಾರ ನೆರವಿಲ್ಲದೇ ದೂರದ ಊರುಗಳಿಗೆ ಸರಕಾರದ ಕೆಂಪು ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಅವಕಾಶ ದೊರಕಿದರೆ ರಂಗಮಂಟಪದಲ್ಲಿ ಅಭಿನಯಿಸುವುದು, ಅಸ್ಖಲಿತವಾಗಿ ಸಂಭಾಷಣೆ ಹೇಳುವುದು… ಹೀಗೆ ಅವರ ಚುರುಕಿನ ರಂಗಚಟುವಟಿಕೆ ಸೋಜಿಗದ್ದು.

ಸಿದ್ರಾಮಯ್ಯ ಲಕ್ಷ್ಮಿದೇವಮ್ಮ‌ ಇವರ ಅಪ್ಪ ಅಮ್ಮ. ಬಾಲ್ಯದಲ್ಲಿಯೇ ಅಲೆಮಾರಿ ಬದುಕು. ಹತ್ತು ವರ್ಷದ ಬಾಲಕನಿದ್ದಾಗಲೇ ರೈಲು ಹತ್ತಿ ಹುಬ್ಬಳ್ಳಿಗೆ ಹೋಗಿ ಹೋಟೆಲೊಂದರಲ್ಲಿ ಚಹದ ಕಪ್ಪುಬಸಿ ತೊಳೆಯುವ ಕಾಯಕ.‌‌ ಆಗಲೇ ಅಲ್ಲಿ ಕ್ಯಾಂಪ್ ಮಾಡಿದ್ದ ಚಿತ್ತರಗಿ ನಾಟಕ ಮಂಡಳಿಯ ಮಾಲಿಕ ಗಂಗಾಧರ ಶಾಸ್ತ್ರಿಗಳ ಕಣ್ಣಿಗೆ ಬಿದ್ದ ಈ ಬಾಲಕ.

ಚಿಕ್ಕಹುಡುಗ ಚನ್ನಬಸಯ್ಯನ ಕ್ರಿಯಾಶೀಲತೆ ಶಾಸ್ತ್ರಿಗಳ ಅಂತಃಕರಣ ಸೆಳೆಯಿತು. ಅವನ ಸೂಕ್ಷ್ಮ ನಡವಳಿಕೆಗಳು ಶಾಸ್ತ್ರಿಗಳ ಅಂತರಂಗದಲ್ಲಿ ಜೀವ ಕಕ್ಕುಲತೆ ಹುಟ್ಟಿಸುತ್ತವೆ. ತಡಮಾಡದೇ ಹುಡುಗನ ಮೈದಡವಿ ಅವನಲ್ಲಿ ಮಾತೃತ್ವದ ಪ್ರೀತಿ ಹಂಚುತ್ತಾರೆ. “ನಮ್ ಕಂಪ್ನಿಗೆ ಬರ್ತಿಯಾ” ಅಂತ ಶಾಸ್ತ್ರಿಗಳು ಕೇಳುತ್ತಿದ್ದಂತೆ, ಒಂದೇ ಮಾತಿಗೆ ಬಾಲಕ ಚನ್ನಬಸಯ್ಯ ಹೋಟೆಲಿನಿಂದ ಸಿದ್ಧಗೊಂಡು ಎದ್ದು ನಿಲ್ಲುತ್ತಾನೆ. ಶಾಸ್ತ್ರಿಗಳ ತಾಯ್ತನದ ಪ್ರೀತಿ ಬಾಲಕನನ್ನು ನಾಟಕ ಕಂಪನಿಗೆ ಕರೆದೊಯ್ಯುತ್ತದೆ. ಅಂದಿನಿಂದ ಇಂದಿನವರೆಗೂ ಶಾಸ್ತ್ರಿಗಳ ನಂತರವೂ ಅವರ ಕಂಪನಿ ಮೇಲಿನ ಮಮಕಾರ, ಪ್ರೀತಿಯ ನಂಟಿಗೆ ಧಕ್ಕೆ ಉಂಟಾಗಿಲ್ಲ.

ಗುಬ್ಬಿ ವೀರಣ್ಣನವರ ಸಮಕಾಲೀನರಾದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳಿಗೆ ವೀರಣ್ಣನವರ ಬಗ್ಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಯ ದ್ಯೋತಕವಾಗಿ ಅದೇ ಗುಬ್ಬಿ ತಾಲ್ಲೂಕಿನ ಚನ್ನಬಸಯ್ಯಗೆ ‘ಗುಬ್ಬಿ’ ಹೆಸರಿನಿಂದಲೇ ಕರೆಯುವುದು ಶಾಸ್ತ್ರಿಗಳಿಗೆ ರೂಢಿಯಾಗುತ್ತದೆ. “ಎಲೋ ಮಗಾ ಗುಬ್ಬಿ” ಅಂತಲೇ ಕರೆದು, ಕರೆದು ಇವರ ಹೆಸರು ಗುಬ್ಬಿ ಚನ್ನಬಸಯ್ಯ ಅಂತಾಗಿ ಬಿಟ್ಟಿದೆ. ಆ ಹೆಸರಿಗೀಗ ನೂರಾ ಮೂರು ತುಂಬಿದ ಮಹಾಪ್ರಾಯ.

ಮಿಲ್ಟ್ರಿ ಶಿಸ್ತಿನ ಚಿತ್ತರಗಿ ಶಾಸ್ತ್ರಿಗಳ ರಂಗ ಗರಡಿಯಲ್ಲಿ ಚನ್ನಬಸಯ್ಯ ಶಿಸ್ತಿನ ರಂಗ ಸಿಪಾಯಿಯಾಗುತ್ತಾರೆ. ಚಿತ್ತರಗಿ ಕಂಪನಿಯ ಹೆಸರಾಂತ ಬಾಲಚಂದ್ರ, ಸೌಭಾಗ್ಯಲಕ್ಷ್ಮಿ, ಜೀವನಯಾತ್ರೆ ಈ ಎಲ್ಲ ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಚನ್ನಬಸಯ್ಯ ಪಳಗುತ್ತಾರೆ. ಆ ಪಾತ್ರಗಳು ಅವರಿಗೆ ಹೆಸರು ತರುತ್ತವೆ. ಆ ನಡುವೆ ಗಜಾನನ ಸಂಗೀತ ನಾಟಕ ಮಂಡಳಿಯಲ್ಲಿ ಕೆಲಕಾಲ ರಂಗಾನುಭವ. 1981ರಲ್ಲಿ “ಅಮರೇಶ್ವರ ವಿಜಯ ನಾಟಕ ಸಂಘ” ಹೆಸರಿನ ಸ್ವಂತ ನಾಟಕ ಕಂಪನಿಯ ಸ್ಥಾಪನೆ. ತನ್ಮೂಲಕ ನಿರಂತರ ರಂಗ ಕೈಂಕರ್ಯ. 

ಚನ್ನಬಸಯ್ಯರ ಬದುಕಿನಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಘಟಿಸುತ್ತವೆ. ಒಂದಲ್ಲ ಎರಡು ಮದುವೆಗಳು. ಇಂತಹ ಕೆಲವು ಘಟನೆಗಳು ಅವರನ್ನು ಕೊಂಚ ಧೃತಿಗೆಡಿಸುತ್ತವೆ. ಆದಾಗ್ಯೂ ತಮ್ಮೆಲ್ಲ ಸಂಕಟ, ಸಂತಸಗಳನ್ನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವಿಕೆಯ ಮೂಲಕ ಬದುಕು ನಿಭಾಯಿಸಿಕೊಂಡು ನೂರಾ ನಾಲ್ಕರ ಪ್ರಾಯದಲ್ಲಿ  ಹೆಜ್ಜೆ ಇಟ್ಟಿದ್ದಾರೆ. ಈ ರಂಗಚೇತನ ಇನ್ನಷ್ಟು ಕಾಲ ಬದುಕಲಿ. ಬೆಂಗಳೂರಿನ “ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘದ” ಆಂಜನೇಯ ಅವರು ಮಗನಿಗಿಂತಲೂ ಹೆಚ್ಚು ಪ್ರೀತಿಯಿಂದ ತಮ್ಮ ಮನೆಯಲ್ಲೇ ಇರಿಸಿಕೊಂಡು ಗುಬ್ಬಿ ಚನ್ನಬಸಯ್ಯ ಅವರನ್ನು ಸಲಹುತ್ತಿದ್ದಾರೆ.

ಮಲ್ಲಿಕಾರ್ಜುನ ಕಡಕೋಳ

ರಂಗಭೂಮಿ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಇವರು ಪ್ರಸ್ತುತ ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ- ಶೋಭಕ್ಕ ಮತ್ತು ಸೂಚ್ಯಂಕ

More articles

Latest article

Most read