ಚಂಡೀಗಢ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ನಡೆದ ವಿಶೇಷ ವಿಧಾನಸಭೆ ಅಧಿವೇಶನಕ್ಕೆ ಮದ್ಯಪಾನ ಮಾಡಿ ಬಂದಿದ್ದಾರೆ ಎಂದು ಪ್ರತಿಪಕ್ಷಗಳು ಅರೋಪ ಮಾಡಿವೆ.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಅಧಿವೇಶನದಲ್ಲಿ ಈ ಘಟನೆ ನಡೆದಿದೆ. ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕರೊಬ್ಬರು ಮುಖ್ಯಮಂತ್ರಿಗಳು ಮದ್ಯದ ಅಮಲಿನಲ್ಲಿ ಸದನಕ್ಕೆ ಬಂದಿದ್ದಾರೆ ಎಂದು ದೂರಿದರು.
ಇದನ್ನೇ ಅಸ್ತ್ರವಾಗಿಸಿಕೊಂಡ ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ‘ರಾಜ್ಯದ ಮುಖ್ಯಸ್ಥರ ಮೇಲೆ ಇಂತಹ ಗಂಭೀರ ಆರೋಪ ಕೇಳಿಬಂದಿರುವಾಗ, ಸತ್ಯಾಸತ್ಯತೆ ತಿಳಿಯಲು ಮುಖ್ಯಮಂತ್ರಿ ಮತ್ತು ಎಲ್ಲಾ ಶಾಸಕರನ್ನು ಮದ್ಯಪಾನ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಪಟ್ಟು ಹಿಡಿದರು.
ಅಲ್ಲದೆ, ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲಾ ಆಪ್ ಶಾಸಕರನ್ನು ಅಲ್ಕೋಹಾಲ್ ಮೀಟರ್ ಮತ್ತು ಡೋಪಿಂಗ್ ಪರೀಕ್ಷೆ ನಡೆಸುವಂತೆ ವಿಪಕ್ಷ ನಾಯಕ ಭಾಜ್ವಾ ಅವರು ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇತ್ತೀಚಿಗಷ್ಟೇ ಆಪ್ ತೊರೆದು ಬಿಜೆಪಿ ಸೇರಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು, ಭಗವಂತ್ ಮಾನ್ ಅವರು ತೊದಲುತ್ತಾ ಮಾತನಾಡುತ್ತಿರುವ ವಿಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. ಆಪ್ ಮುಖ್ಯಮಂತ್ರಿ ಪಂಜಾಬ್ ವಿಧಾನಸಭೆಯ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
ಈ ಎಲ್ಲಾ ಗದ್ದಲಗಳ ನಡುವೆ ಮಾತನಾಡಿದ ಸಿಎಂ ಭಗವಂತ್ ಮಾನ್, ‘ಈ ವಿಶೇಷ ಅಧಿವೇಶನವನ್ನು ಕಾರ್ಮಿಕರಿಗಾಗಿ ಮೀಸಲಿಡಲಾಗಿದೆ. ಸಣ್ಣಪುಟ್ಟ ವಾದಗಳನ್ನು ಬಿಟ್ಟು ಸದನದ ಗೌರವವನ್ನು ಕಾಪಾಡಿ’ ಎಂದು ಮನವಿ ಮಾಡಿದರು.
ದಿನಗೂಲಿ ಕಾರ್ಮಿಕರ ವೇತನ ಹೆಚ್ಚಳ:
ಇದೇ ವೇಳೆ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ಸಿಂಗ್ ಮಾನ್, ಪಂಜಾಬ್ ದಿನಗೂಲಿ ಕಾರ್ಮಿಕರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಿರುವುದಾಗಿ ಘೋಷಿಸುವ ಮೂಲಕ ಕಾರ್ಮಿಕರ ದಿನಾಚರಣೆಯ ಉಡುಗೊರೆ ನೀಡಿದರು.

