ಬೆಂಗಳೂರು : ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ಅಸಮಾಧಾನಗೊಂಡಿದ್ದು, ಸಮಯಾವಕಾಶ ಕೇಳಿದ್ದಾರೆ.
ಅಸಮಾಧಾನಗೊಂಡಿರುವ ಸಭಾಪತಿ ಹೊರಟ್ಟಿ ಅವರು ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಮಾತನಾಡಿದ್ದಾರೆ. ಆದರೆ, ಸಿಎಂ ಅವರೊಂದಿಗೆ ಮಾತುಕತೆ ನಡೆಸಿ ಹೊರಬಂದವರು ಸೀದಾ ಕಾರಿನೊಳಗೆ ಕುಳಿತು ಹೊರಟಿದ್ದಾರೆ. ಗೇಟಿನ ತನಕ ಸಿಎಂ ಬಂದರೂ ಹಿಂದಿರುಗಿ ನೋಡದೆ ಬಸವರಾಜ ಹೊರಟ್ಟಿ ಹೋಗಿದ್ದಾರೆ.
ಇದೇ 13ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭ ಆಗಲಿದ್ದು, ಅಧಿವೇಶನದ ಎರಡನೆ ದಿನ ಉಪ ಸಭಾಪತಿ ಚುನಾವಣೆ ನಡೆಸಿ ನಿರ್ಗಮನಕ್ಕೆ ಹೊರಟ್ಟಿ ನಿರ್ಧಾರ ಮಾಡಿದ್ದಾರೆ. ಆಗಸ್ಟ್ 14ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಉಪಸಭಾಪತಿ ಆಯ್ಕೆ ಬಳಿಕ ಸ್ಥಾನವನ್ನು ಹೊರಟ್ಟಿ ತೊರೆಯಲಿದ್ದಾರೆ ಎಂಬ ಮಾಹಿತಿ ನಿನ್ನೆಯವರೆಗೂ ಇತ್ತು.
ಈ ಮಧ್ಯೆ ಸಭಾಪತಿ ಸ್ಥಾನದಿಂದ ಹೊರಟ್ಟಿ ಅವರನ್ನು ಬದಲಾಯಿಸದಂತೆ ಮುಂದುವರೆಸುವಂತೆ ಕಾಂಗ್ರೆಸ್‌ನಲ್ಲೇ ಒತ್ತಡ ವ್ಯಕ್ತವಾಗಿತ್ತು. ಸಚಿವರಾದ ಸತೀಶ್ ಜಾರಕಿಹೊಳಿ, ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಯು.ಟಿ. ಖಾದರ್, ಎನ್.ಎ. ಹ್ಯಾರಿಸ್ ಸೇರಿ ಹಲವರು ಒತ್ತಡ ತಂದಿದ್ದರು. ಹೊರಟ್ಟಿ ಅವರು ಹಿರಿಯ ನಾಯಕರಿದ್ದು, ಅವರನ್ನು ಆ ಸ್ಥಾನದಿಂದ ಇಳಿಸುವ ನಿರ್ಧಾರ ಬೇಡ. ಅವರ ಅವಧಿ ಇರುವವರೆಗೂ ಮುಂದುವರಿಯಲಿ ಎಂದು ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ, ಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ ಎಂದು ಹೇಳಲಾಗಿದೆ.
ಪಕ್ಷದ ವರಿಷ್ಠರು ಈಗಾಗಲೇ ಸಭಾಪತಿ, ಉಪಸಭಾಪತಿ ಯಾರಾಗಬೇಕು ಎಂದು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹೀಗಾಗಿ ಪಕ್ಷದ ನಿರ್ಧಾರ ಪಾಲಿಸಬೇಕು ಎಂದು ಸಿಎಂ ಪಟ್ಟು ಹಿಡಿದರು ಎನ್ನಲಾಗಿದೆ.
ಬಿಜೆಪಿಯಿಂದ ಶಾಸಕರಾಗಿರುವ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು 46 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ದಾಖಲೆ ಹೊಂದಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷವು ಪರಿಷತ್ತಿನಲ್ಲಿ ಬಹುಮತ ಹೊಂದಿರುವುದರಿಂದ ಈ ಬದಲಾವಣೆಗೆ ಮುಂದಾಗಿದೆ.
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಅವರ ಹೆಸರು ಹಾಗೂ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರು ಈಗಾಗಲೇ ಘೋಷಿಸಲಾಗಿದೆ. ಆಗಸ್ಟ್ 13 ರಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು, ಎರಡನೇ ದಿನ ನೂತನ ಸಭಾಪತಿ, ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

