ಬೆಂಗಳೂರು, ಸೆ.15 : ನಗರದಲ್ಲಿ ಮಂಗಳವಾರ ಸಂಜೆ ಏಕಾಏಕಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆ ಸುರಿದಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ, ಅಲ್ಲಲ್ಲಿ ತುಸು ಮಳೆಯಾಗುತ್ತಿತ್ತು. ಆದರೆ, ಮಂಗಳವಾರ ಸಂಜೆ 5 ಗಂಟೆ ವೇಳೆ ಒಮ್ಮೆಗೆ ಕಾರ್ಮೋಡ ಕವಿದು ಜೋರು ಮಳೆ ಸುರಿಯಲಾರಂಭಿಸಿತು. 5.30ರ ಬಳಿ ಅಬ್ಬರ ಜೋರಾಗಿದ್ದು, ಸತತ ಒಂದು ಗಂಟೆಗಳ ಕಾಲ ಸುರಿಯಿತು.
ಮಲ್ಲೇಶ್ವರ, ಯಶವಂತಪುರ ಸರ್ಕಲ್, ವಿಜಯನಗರ, ರಾಜಾಜಿನಗರ, ಬಸವೇಶ್ವರ ನಗರ, ಎಂಜಿ ರೋಡ್, ಕಾರ್ಪೋರೇಷನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಜೋರಾಗಿ ಮಳೆ ಸುರಿದಿದೆ. ಕೆಆರ್ ಸರ್ಕಲ್‌ನಿಂದ ವಿಧಾನಸೌಧ, ಎಂಎಸ್ ಬಿಲ್ಡಿಂಗ್ ಕಡೆ ಹೋಗುವ ಮಾರ್ಗ ಜಲಾವೃತವಾಗಿದೆ. ರಸ್ತೆಗಳು ಕೆರೆಯಂತಾಗಿವೆ. ವಾಹನ ಚಾಲಕರು ಹೈರಾಣಾಗಿದ್ದಾರೆ.
ನಗರದ ಕೇಂದ್ರ ಹಾಗೂ ಉತ್ತರ ಭಾಗಗಳಾದ ಮೆಜೆಸ್ಟಿಕ್, ಎಂ.ಜಿ. ರಸ್ತೆ, ವಿಧಾನಸೌಧ, ಹೆಬ್ಬಾಳ ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಕಂಡುಬಂತು. ಇದರಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಚೇರಿಗಳಿಂದ ಮನೆಗೆ ಮರಳುತ್ತಿದ್ದ ಸವಾರರು ಟ್ರಾಫಿಕ್ ಜಾಮ್‌ನಿಂದಾಗಿ ತೀವ್ರ ಪರದಾಟ ಅನುಭವಿಸಿದರು.
ಟ್ರಾಫಿಕ್ ಜಾಮ್
ಎಂ. ಜಿ ರಸ್ತೆಯಲ್ಲಿ ಡ್ರೈನ್ ಅನ್ನು ಪಾಲಿಕೆ ಸಿಬ್ಬಂದಿಗಳು ಶುಚಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ವಹಿಸಿದರು.ರಾಯನ್ ವೃತ್ತದ ಕೆಳಗೆ ನೀರು ನಿಂತಿದ್ದರಿಂದ ಕೆ.ಆರ್.ಮಾರುಕಟ್ಟೆ ಕಡೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳ ಸಂಚಾರಕ್ಕೆ ತೊಡಕಾಯಿತು. ಬೈಕ್ ಸವಾರರು ರಸ್ತೆ ಬದಿ ನಿಂತು ಅಂಗಡಿಗಳ ಮುಂಗಟ್ಟುಗಳ ಆಶ್ರಯ ಪಡೆದರೆ, ಕಾರು ಸೇರಿ ಇತರೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು. ಇದರಿಂದಾಗಿ ಟ್ರಾಫಿಕ್ ಕೂಡ ಹೆಚ್ಚಾಯಿತು.
ಇನ್ನೂ 2 ದಿನ ಮಳೆ
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಮಾಹಿತಿಯಂತೆ, ಟ್ರಫ್ ಹಾಗೂ ಚಂಡಮಾರುತ ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಪ್ರಸಕ್ತ ವಾರ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

