ಎಪ್ರಿಲ್̇ 24 – ಡಾ. ರಾಜ್ಕುಮಾರ್ ಹುಟ್ಟು ಹಬ್ಬ
ಇಂದಿನ ಯುವಕರು ಸೋಲಿಗೆ ಕುಗ್ಗುತ್ತಾರೆ ಮತ್ತು ಸಣ್ಣ ಯಶಸ್ಸಿಗೆ ಉಬ್ಬಿ ಹೋಗುತ್ತಾರೆ. ರಾಜ್ಕುಮಾರ್ ಅವರ ಜೀವನ ಕಲಿಸುವ ಪಾಠವೇನೆಂದರೆ: “ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ನಿಮ್ಮ ಕಾಲುಗಳು ನೆಲದ ಮೇಲಿರಲಿ.” ಜ್ಞಾನ ಮತ್ತು ಸಾಧನೆ ಹೆಚ್ಚಾದಂತೆ ವಿನಯವೂ ಹೆಚ್ಚಾಗಬೇಕು ಎಂಬುದು. ಇಂದಿನ ‘Influencer’ ಯುಗದಲ್ಲಿ ಕೃತಕವಾದ ಇಮೇಜ್ಗಿಂತ ನೈಜವಾದ ಸರಳತೆ ಹೆಚ್ಚು ಕಾಲ ಉಳಿಯುತ್ತದೆ ಎಂಬುದನ್ನು ಅವರ ಜೀವನ ಸಾಬೀತುಪಡಿಸಿದೆ – ಡಾ. ರವಿ ಶೇಷಗಿರಿ ಸಹಾಯಕ ಪ್ರಾಧ್ಯಾಪಕರು.
ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಡಾ. ರಾಜ್ಕುಮಾರ್ ಎನ್ನುವುದು ಕೇವಲ ಒಂದು ಹೆಸರಲ್ಲ, ಅದೊಂದು ಮೌಲ್ಯಗಳ ವಿಶ್ವವಿದ್ಯಾಲಯ. ಕಾಲ ಉರುಳಿದಂತೆ ತಂತ್ರಜ್ಞಾನ ಮತ್ತು ಜೀವನಶೈಲಿ ಬದಲಾಗಿದ್ದರೂ, ಅಣ್ಣಾವ್ರು ಬದುಕಿ ತೋರಿಸಿದ ಮೌಲ್ಯಗಳು ಇಂದಿಗೂ ದಾರಿದೀಪವಾಗಿವೆ. ಅಕ್ಷರ ಕಲಿಯದ ಸಾಮಾನ್ಯ ಜನರಿಗೂ ಬದುಕಿನ ಶ್ರೇಷ್ಠ ಪಾಠಗಳನ್ನು ಸಿನಿಮಾದ ಮೂಲಕ ಕಲಿಸಿದ ಅವರು, ಪ್ರತಿಯೊಂದು ಮನೆಮನೆಯ ‘ಬಂಗಾರದ ಮನುಷ್ಯ’ನಾದವರು. ನನ್ನ ಅಜ್ಜ ಮತ್ತು ಅಪ್ಪನ ತಲೆಮಾರಿಗೆ ಅಣ್ಣಾವ್ರು ಧೀಮಂತ ಶಕ್ತಿಯಾಗಿದ್ದರೆ, ಇಂದಿನ ನನ್ನಂತಹ ಯುವ ಪೀಳಿಗೆಗೆ ಅವರನ್ನೇ ನಡೆ ನುಡಿ ಸಂಸ್ಕಾರದ ರೂಪದಲ್ಲಿ ಹೊತ್ತಿದ್ದ ‘ಅಪ್ಪು’ ವಾಗಿ ಪ್ರೇರಣೆ ನೀಡುತ್ತಿದ್ದಾರೆ.
ಕನ್ನಡ ಚಿತ್ರರಂಗದ ‘ನಟಸಾರ್ವಭೌಮ’ ಡಾ. ರಾಜ್ಕುಮಾರ್ ಅವರ ವ್ಯಕ್ತಿತ್ವವು ಒಂದು ತೆರೆದ ಪುಸ್ತಕವಿದ್ದಂತೆ. ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಮನುಷ್ಯನ ನೈತಿಕ ಮೌಲ್ಯಗಳು ಕುಸಿಯುತ್ತಿವೆ ಎಂಬ ಆತಂಕದ ನಡುವೆ ರಾಜ್ಕುಮಾರ್ ಅವರ ಜೀವನದ ಹಾದಿ ನಮಗೆ ದಾರಿದೀಪವಾಗಿದೆ.
ಅವರ ವಿನಯ ಮತ್ತು ಸರಳತೆಯನ್ನು ಗಮನಿಸಿದಾಗ, ಇಂದಿನ ಕಾಲದಲ್ಲಿ ಅಲ್ಪ ಸ್ವಲ್ಪ ಪ್ರಸಿದ್ಧಿ ಅಥವಾ ಅಧಿಕಾರ ಸಿಕ್ಕ ಕೂಡಲೇ ಮನುಷ್ಯ ತನ್ನ ಬೇರುಗಳನ್ನು ಮರೆಯುತ್ತಾನೆ. ‘ಸೆಲ್ಫಿ’ ಸಂಸ್ಕೃತಿಯ ಈ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ದೊಡ್ಡವರೆಂದು ತೋರಿಸಿಕೊಳ್ಳುವ ಅಬ್ಬರದಲ್ಲಿದ್ದಾರೆ. ಆದರೆ, ಡಾ. ರಾಜ್ಕುಮಾರ್ ಅವರು ದಶಕಗಳ ಕಾಲ ಚಿತ್ರರಂಗದ ಅಧಿಪತಿಯಾಗಿದ್ದರೂ, ಎಂದಿಗೂ ಅಹಂಕಾರವನ್ನು ಮೈಗೆ ಹಚ್ಚಿಕೊಂಡವರಲ್ಲ. “ನಾನು ಶ್ರೇಷ್ಠ” ಎನ್ನುವ ಬದಲು, “ನನ್ನನ್ನು ಬೆಳೆಸಿದ ಜನರು ಶ್ರೇಷ್ಠ” ಎಂದು ನಂಬಿದ್ದರು. ಇದು ಅವರ ವ್ಯಕ್ತಿತ್ವದ ದೊಡ್ಡತನ.

’ಅಭಿಮಾನಿಗಳೇ ದೇವರು’ ಎಂಬುದು ಅವರ ಪಾಲಿಗೆ ಕೇವಲ ಘೋಷಣೆಯಲ್ಲ, ಅದೊಂದು ದರ್ಶನ. ರಾಜ್ಕುಮಾರ್ ಅವರು ಅಭಿಮಾನಿಗಳನ್ನು ಕೇವಲ ಸಿನಿಮಾ ಪ್ರೇಕ್ಷಕರನ್ನಾಗಿ ನೋಡಲಿಲ್ಲ. ಅವರು ವೇದಿಕೆಯ ಮೇಲೆ ಬಂದಾಗಲೆಲ್ಲಾ ಅಭಿಮಾನಿಗಳಿಗೆ ತಲೆಬಾಗಿ ನಮಸ್ಕರಿಸುತ್ತಿದ್ದರು. ಇಂದಿನ ತಾರಾ ವರ್ಚಸ್ಸಿನ ಜಗತ್ತಿನಲ್ಲಿ ನಟರು ಅಭಿಮಾನಿಗಳಿಂದ ದೂರವಿರಲು ಬಯಸುವ ಸಂದರ್ಭಗಳೇ ಹೆಚ್ಚು. ಆದರೆ ರಾಜ್ ಅವರು ಜನಸಾಮಾನ್ಯರ ನಡುವೆ ಒಬ್ಬರಾಗಿ ಬೆರೆತರು. “ಅಭಿಮಾನಿಗಳೇ ದೇವರು” ಎಂಬ ಅವರ ಮಾತು ಕೇವಲ ವೇದಿಕೆಯ ಘೋಷಣೆಯಾಗಿರದೆ, ಅವರ ಜೀವನದ ಧರ್ಮವಾಗಿತ್ತು.
ಸರಳತೆ ಎಂದರೆ ಸರಳ ಉಡುಪು ಧರಿಸಿ ಕೇವಲ ಕಡಿಮೆ ಮಾತನಾಡುವುದಲ್ಲ, ಅದು ಕೆಲಸದ ಮೇಲಿರುವ ಶ್ರದ್ಧೆಯೂ ಹೌದು. ಅವರು ಚಿತ್ರೀಕರಣದ ಸೆಟ್ಗೆ ಬಂದಾಗ ಎಲ್ಲರೊಂದಿಗೂ ಒಬ್ಬ ಸಾಮಾನ್ಯ ನಟನಂತೆ ನಡೆದುಕೊಳ್ಳುತ್ತಿದ್ದರು ಮತ್ತು ಸ್ಟಂಟ್ ಮಾಡುವಾಗ ತನಗೂ ಸಿಗುವ ಸೌಲಭ್ಯಗಳು ಇತರರಿಗೂ ಸಿಗಲಿ ಎನ್ನುವ ಆಶಯ, ಸ್ಟಾರ್ಗಿರಿ ತೋರಿಸದೆ, ಎಲ್ಲರನ್ನೂ ಸಮಾನವಾಗಿ ಕಾಣುವ ಅವರ ಗುಣ ಇಂದಿನ ಯುವ ವೃತ್ತಿಪರರಿಗೆ ಮಾದರಿ. ಯಶಸ್ಸು ಎಂಬುದು ತಲೆಗೆ ಏರಬಾರದು, ಬದಲಿಗೆ ಅದು ಹೃದಯಕ್ಕೆ ಇಳಿದು ಮೃದುವಾಗಬೇಕು ಎಂಬುದಕ್ಕೆ ಅವರೇ ಸಾಕ್ಷಿ.
ಇಂದಿನ ಯುವಕರು ಸೋಲಿಗೆ ಕುಗ್ಗುತ್ತಾರೆ ಮತ್ತು ಸಣ್ಣ ಯಶಸ್ಸಿಗೆ ಉಬ್ಬಿ ಹೋಗುತ್ತಾರೆ. ರಾಜ್ಕುಮಾರ್ ಅವರ ಜೀವನ ಕಲಿಸುವ ಪಾಠವೇನೆಂದರೆ: “ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ನಿಮ್ಮ ಕಾಲುಗಳು ನೆಲದ ಮೇಲಿರಲಿ.” ಜ್ಞಾನ ಮತ್ತು ಸಾಧನೆ ಹೆಚ್ಚಾದಂತೆ ವಿನಯವೂ ಹೆಚ್ಚಾಗಬೇಕು ಎಂಬುದು. ಇಂದಿನ ‘Influencer’ ಯುಗದಲ್ಲಿ ಕೃತಕವಾದ ಇಮೇಜ್ಗಿಂತ ನೈಜವಾದ ಸರಳತೆ ಹೆಚ್ಚು ಕಾಲ ಉಳಿಯುತ್ತದೆ ಎಂಬುದನ್ನು ಅವರ ಜೀವನ ಸಾಬೀತುಪಡಿಸಿದೆ.
ಬಾಹ್ಯದ ಆಡಂಬರವಿಲ್ಲದೆ, ಅಂತರಂಗದ ಸೌಂದರ್ಯದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದವರು ಡಾ. ರಾಜ್. ಅವರ ಈ ವಿನಯಶೀಲತೆ ಕೇವಲ ಒಂದು ಗುಣವಲ್ಲ, ಅದು ಒಬ್ಬ ಮನುಷ್ಯ ಸಾಧಿಸಬಹುದಾದ ಅತ್ಯುನ್ನತ ಸಂಸ್ಕಾರ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕಲು ಈ ‘ಸರಳತೆ’ ಎಂಬ ಮೌಲ್ಯವೇ ಸಂಜೀವಿನಿ.
ಡಾ. ರಾಜ್ಕುಮಾರ್ ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಮಾತೃಭಾಷಾ ಪ್ರೇಮ ಮತ್ತು ಸಂಸ್ಕೃತಿಯು ಅದು ಕನ್ನಡದ ಅಸ್ಮಿತೆಯ ಸಂಕೇತವೂ ಹೌದು. ಇಂದಿನ ಜಾಗತೀಕರಣದ ಯುಗದಲ್ಲಿ ಇಂಗ್ಲಿಷ್ ಅನಿವಾರ್ಯ ಭಾಷೆಯಾಗಿ ಬೆಳೆದಿದೆ. ಈ ಓಟದಲ್ಲಿ ನಾವು ನಮ್ಮ ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಗೌಣವಾಗಿ ಕಾಣುತ್ತಿದ್ದೇವೆ. ಆದರೆ, ಡಾ. ರಾಜ್ಕುಮಾರ್ ಅವರು ಅಂದೇ ಕನ್ನಡವನ್ನು ಕೇವಲ ಒಂದು ಭಾಷೆಯಾಗಿ ನೋಡದೆ, ಅದನ್ನೊಂದು ಜೀವನಾಡಿ ಎಂದು ನಂಬಿದ್ದರು. ಪರಭಾಷೆಗಳ ಪ್ರಭಾವದ ನಡುವೆಯೂ ಕನ್ನಡದ ಘನತೆಯನ್ನು ಎತ್ತಿಹಿಡಿದು, ಕನ್ನಡಿಗರಲ್ಲಿ ಸ್ವಭಾಷಾ ಅಭಿಮಾನದ ಕಿಚ್ಚು ಹಚ್ಚಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಕನ್ನಡ ಭಾಷೆಯ ಇತಿಹಾಸದಲ್ಲಿ ‘ಗೋಕಾಕ್ ಚಳವಳಿ’ ಒಂದು ಮೈಲಿಗಲ್ಲು. ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಎಂಬ ಹೋರಾಟಕ್ಕೆ ರಾಜ್ಕುಮಾರ್ ಅವರು ಧುಮುಕಿದಾಗ, ಅದು ಕೇವಲ ಸಾಹಿತಿಗಳ ಹೋರಾಟವಾಗಿ ಉಳಿಯದೆ ಜನಸಾಮಾನ್ಯರ ಆಂದೋಲನವಾಗಿ ಬದಲಾಯಿತು. ಒಬ್ಬ ನಟ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ, ವೈಯಕ್ತಿಕ ಲಾಭವನ್ನು ಬದಿಗಿಟ್ಟು ನೆಲ-ಜಲದ ಹಿತಕ್ಕಾಗಿ ಬೀದಿಗಿಳಿದು ಹೋರಾಡುವುದು ಅಪರೂಪದ ಸಂಗತಿ. ಅಂದು ಅವರು ಪ್ರದರ್ಶಿಸಿದ ಸಂಘಟನಾ ಶಕ್ತಿ ಮತ್ತು ಬದ್ಧತೆ ಇಂದಿಗೂ ಭಾಷಾ ಪ್ರೇಮಿಗಳಿಗೆ ಸ್ಪೂರ್ತಿಯಾಗಿದೆ.
ರಾಜ್ಕುಮಾರ್ ಅವರ ಅತಿದೊಡ್ಡ ಕೊಡುಗೆ ಎಂದರೆ ಕನ್ನಡವನ್ನು ಜನಸಾಮಾನ್ಯರ ಮನೆಮಾತಾಗಿಸಿದ್ದು. ಸಿನಿಮಾ ಅಂದರೆ ಕೇವಲ ಮನರಂಜನೆ ಎನ್ನುವ ಕಾಲದಲ್ಲಿ, ತಮ್ಮ ಸ್ಪಷ್ಟ ಮತ್ತು ಶುದ್ಧವಾದ ಕನ್ನಡ ಉಚ್ಚಾರಣೆಯ ಮೂಲಕ ಕನ್ನಡ ಭಾಷೆಯ ಸೌಂದರ್ಯವನ್ನು ಜನರಿಗೆ ಪರಿಚಯಿಸಿದರು. ಐತಿಹಾಸಿಕವಾಗಿ ಸಾಮಾಜಿಕವಾಗಿ ಮತ್ತು ಕಲಾತ್ಮಕವಾಗಿಯೂ ತಮ್ಮ ಚಿತ್ರಗಳಲ್ಲಿ ಪುರಂದರ ದಾಸರು, ಕನಕದಾಸರ ಕೀರ್ತನೆಗಳು, ಸರ್ವಜ್ಞನ ವಚನಗಳು ಮತ್ತು ಪಂಪ-ರನ್ನರಂತಹ ಮಹಾಕವಿಗಳ ಸಾಹಿತ್ಯವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಹಾಡುಗಳ ಮೂಲಕ ಮತ್ತು ಐತಿಹಾಸಿಕ ಪಾತ್ರಗಳ ಮೂಲಕ ತಲುಪಿಸಿದರು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಅವರು ಮಾಡಿದ ಮಹತ್ತರ ಸೇವೆ.

ರಾಜ್ ಅವರ ಚಲನಚಿತ್ರಗಳು ಕರ್ನಾಟಕದ ಗ್ರಾಮೀಣ ಸೊಗಡು, ಹಬ್ಬ-ಹರಿದಿನಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುತ್ತಿದ್ದವು. ಅವರು ತೆರೆಯ ಮೇಲೆ ಧರಿಸುತ್ತಿದ್ದ ಉಡುಗೆ-ತೊಡುಗೆಯಿಂದ ಹಿಡಿದು ಅವರ ನಡವಳಿಕೆಯವರೆಗೆ ಎಲ್ಲದರಲ್ಲೂ ಕರ್ನಾಟಕದ ಮಣ್ಣಿನ ವಾಸನೆಯಿತ್ತು. ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಹೇಗೆ ಗೌರವಿಸಬೇಕು ಮತ್ತು ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದಕ್ಕೆ ಅವರೇ ಒಂದು ಜೀವಂತ ಮಾದರಿ.
ಕನ್ನಡ ಎಂದರೆ ಕೇವಲ ಅಕ್ಷರವಲ್ಲ, ಅದು ನಮ್ಮ ಅಸ್ಮಿತೆ ಎಂಬುದನ್ನು ರಾಜ್ಕುಮಾರ್ ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟರು. ಭಾಷೆಯ ಮೇಲೆ ಅನ್ಯ ಭಾಷೆಗಳ ದಾಳಿ ನಡೆಯುತ್ತಿರುವ ಈ ಕಾಲದಲ್ಲಿ, ರಾಜ್ ಅವರ ಭಾಷಾಭಿಮಾನ ಮತ್ತು ಸಾಂಸ್ಕೃತಿಕ ಕಾಳಜಿಯನ್ನು ಅಳವಡಿಸಿಕೊಳ್ಳುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ.
ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕತೆ: ಜನಜಾಗೃತಿಯ ಹಾದಿಯನ್ನು ಗಮನಿಸಿದರೆ ಸಾಮಾನ್ಯವಾಗಿ ಬೆಳ್ಳಿತೆರೆಯ ನಾಯಕರು ಕೇವಲ ಅಭಿನಯಕ್ಕೆ ಸೀಮಿತವಾಗಿರುತ್ತಾರೆ. ಆದರೆ ಡಾ. ರಾಜ್ಕುಮಾರ್ ಅವರಿಗೆ ತಮ್ಮ ಸ್ಥಾನದ ಪ್ರಭಾವದ ಅರಿವಿತ್ತು. ಲಕ್ಷಾಂತರ ಯುವಕರು ತಮ್ಮನ್ನು ಅನುಕರಿಸುತ್ತಾರೆ ಎಂದು ತಿಳಿದಿದ್ದ ಅವರು, ಪರದೆಯ ಮೇಲೆ ಧೂಮಪಾನ ಮತ್ತು ಮದ್ಯಪಾನದ ದೃಶ್ಯಗಳಲ್ಲಿ ನಟಿಸದಿರಲು ಕಟ್ಟುನಿಟ್ಟಾದ ನಿರ್ಧಾರ ಮಾಡಿದ್ದರು. ಇದು ಇಂದಿನ ‘Influencer’ ಯುಗದಲ್ಲಿ ಹಣಕ್ಕಾಗಿ ಯಾವುದನ್ನೂ ಪ್ರಚಾರ ಮಾಡುವವರಿಗೆ ಒಂದು ದೊಡ್ಡ ಪಾಠ. ಕೇವಲ ಹಣಕ್ಕಾಗಿ ಅಲ್ಲದೆ, ಸಮಾಜದ ಹಿತದೃಷ್ಟಿಯಿಂದ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದು ಅವರ ನೈತಿಕತೆಗೆ ಸಾಕ್ಷಿ.
ಅವರ ಚಿತ್ರಗಳು ಕೇವಲ ಕಥೆಗಳಾಗಿರದೆ, ಸಮಾಜದ ಸುಧಾರಣೆಯ ಅಸ್ತ್ರಗಳಾಗಿದ್ದವು. ‘ಬಂಗಾರದ ಮನುಷ್ಯ’ ಸಿನಿಮಾ ಬಿಡುಗಡೆಯಾದಾಗ ಅದನ್ನು ನೋಡಿ ಸಾವಿರಾರು ಪದವೀಧರ ಯುವಕರು ಪಟ್ಟಣ ಬಿಟ್ಟು ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು. ಒಂದು ಚಲನಚಿತ್ರ ಸಮಾಜದಲ್ಲಿ ಇಂತಹ ಪ್ರಾಯೋಗಿಕ ಬದಲಾವಣೆ ತರಲು ಸಾಧ್ಯ ಎಂಬುದು ಅಚ್ಚರಿಯ ಸಂಗತಿಯಾಗಿ ನಮ್ಮೆದುರಿಗೆ ಇರುವ ಜೀವಂತ ಉದಾಹರಣೆ. ತ್ಯಾಗ ಮತ್ತು ಮಾನವೀಯತೆಯ ‘ಕಸ್ತೂರಿ ನಿವಾಸ’ ಚಿತ್ರದಲ್ಲಿನ ತ್ಯಾಗದ ಗುಣ ಅಥವಾ ‘ಹೊಸ ಬೆಳಕು’ ಚಿತ್ರದಂತಹ ಸಾಮಾಜಿಕ ಕಾಳಜಿಯ ಕಥೆಗಳು ಇಂದಿನ ಸ್ವಾರ್ಥಿ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಮನುಷ್ಯತ್ವದ ಮಹತ್ವವನ್ನು ಸಾರುತ್ತವೆ.
ಅವರ ಮಕ್ಕಳು, ಮೊಮ್ಮಕ್ಕಳು, ಅವರನ್ನು ಹತ್ತಿರದಿಂದ ಕಂಡವರು, ಅವರ ಬಗ್ಗೆ ಬರೆದವರು, ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿನ ಭಾವನೆಗಳು ಎಂತವರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ.
ಇಂದಿನ ಕಾರ್ಪೊರೇಟ್ ಜಗತ್ತು ‘Time Management’ ಬಗ್ಗೆ ಇಂದು ಮಾತನಾಡುತ್ತಿದೆ. ಆದರೆ ಡಾ. ರಾಜ್ ಅವರು ಅಂದೇ ಚಿತ್ರೀಕರಣದ ಸ್ಥಳಕ್ಕೆ ಎಲ್ಲರಿಗಿಂತ ಮೊದಲೇ ಹಾಜರಿರುತ್ತಿದ್ದರು. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಯೋಗಾಭ್ಯಾಸ ಮತ್ತು ಸಂಗೀತದ ರಿಹರ್ಸಲ್ ಮಾಡುವುದು ಅವರ ದಿನಚರಿಯಾಗಿತ್ತು. ಈ ಶಿಸ್ತು ಅವರ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿತ್ತು. ಸಾಧನೆಯ ಶಿಖರಕ್ಕೇರಲು ಪ್ರತಿಭೆಗಿಂತ ಹೆಚ್ಚಾಗಿ ನಿರಂತರ ಅಭ್ಯಾಸ ಮತ್ತು ಶಿಸ್ತು ಮುಖ್ಯ ಎಂಬುದನ್ನು ಅವರು ತೋರಿಸಿಕೊಟ್ಟರು.
ಅವರು ಬಸವಣ್ಣನವರ ತತ್ವದಂತೆ ಕೆಲಸವನ್ನೇ ದೈವವೆಂದು ನಂಬಿದ್ದರು. ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಯಶಸ್ಸು ಸಿಕ್ಕರೂ, ಪ್ರತಿಯೊಂದು ಪಾತ್ರವನ್ನೂ ಒಬ್ಬ ಹೊಸ ವಿದ್ಯಾರ್ಥಿಯಂತೆ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಚಿತ್ರೀಕರಣದ ಸೆಟ್ ಅವರಿಗೆ ದೇಗುಲವಿದ್ದಂತೆ. ಅವರ ಈ ಕಾಯಕನಿಷ್ಠೆಯು ಇಂದಿನ ಉದ್ಯೋಗಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದರಿ. ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂಬುದು ಅವರ ಜೀವನ ಸಂದೇಶವಾಗಿದೆ.
ಇಂದಿನ ಒತ್ತಡದ ಬದುಕಿನಲ್ಲಿ ನಮಗೆ ಮಾನಸಿಕ ಶಾಂತಿ ಮತ್ತು ದೈಹಿಕ ಆರೋಗ್ಯ ಮುಖ್ಯವಾಗಿದೆ. ಡಾ. ರಾಜ್ ಅವರು ಯೋಗದ ಮೂಲಕ ತಮ್ಮನ್ನು ತಾವು ಹೇಗೆ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ಇಡೀ ನಾಡಿಗೆ ತೋರಿಸಿಕೊಟ್ಟರು. ಸಿನಿಮಾ ಬದುಕಿನ ಅಬ್ಬರದ ನಡುವೆಯೂ ಒಬ್ಬ ಯೋಗಿಯಂತೆ ಬದುಕಿದ ಅವರ ಜೀವನಶೈಲಿ ಸಮಕಾಲೀನ ಜಗತ್ತಿಗೆ ಅತ್ಯಂತ ಅವಶ್ಯಕವಾಗಿದೆ.
ಡಾ. ರಾಜ್ಕುಮಾರ್ ಅವರು ಕೇವಲ ಅಭಿನಯದ ಮೂಲಕ ಮಾತ್ರವಲ್ಲದೆ, ತಮ್ಮ ವೈಯಕ್ತಿಕ ಬದುಕಿನ ಶಿಸ್ತು ಮತ್ತು ಸಾಮಾಜಿಕ ಕಾಳಜಿಯ ಮೂಲಕ ಜನಮಾನಸದಲ್ಲಿ ಅಮರರಾಗಿದ್ದಾರೆ. ಸಾಮಾಜಿಕ ಜವಾಬ್ದಾರಿ ಎನ್ನುವುದು ಕೇವಲ ಭಾಷಣಕ್ಕೆ ಸೀಮಿತವಾಗದೆ, ನಡವಳಿಕೆಯಲ್ಲಿ ಬರಬೇಕು ಎಂಬುದಕ್ಕೆ ಅವರೇ ಅತ್ಯುತ್ತಮ ಉದಾಹರಣೆ.
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕನ್ನಡ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ
ಯಲ್ಲಾಪುರ, ಉತ್ತರ ಕನ್ನಡ.
ಇದನ್ನೂ ಓದಿ-

