ಅವಳ ಚುನಾವಣಾ ಭಾಷಣಕ್ಕೆ ಬಂಗಾಲಿ ಬಾಬು, ಬೆಹನ್ ಗಳು ಮುರಕೊಂಡು ಮುಗಿ ಬೀಳುತ್ತಾರೆ. ಅವಳದು ತಾರಾ ವರ್ಚಸ್ಸಿನ ಚೆಲುವು ತುಂಬಿದ ಮೋಹಕ ಮಾತುಗಳು. ಬೆಂಗಾಲಿ, ಭೋಜ್ಪುರಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಅರಳು ಹುರಿದಂತೆ ಮಾತಾಡುತ್ತಾಳೆ. ಅವುಗಳ ಜತೆ ಜತೆಯಲಿ ಸ್ಥಳೀಯ ನುಡಿಗಟ್ಟುಗಳನ್ನು ಪೋಣಿಸಿ, ಕುಣಿಸಿ ಸಿರಿಕಂಠದ ದೇಹಭಾಷೆ ಮಾತಾಡುವಲ್ಲಿ ಆಕೆ ನಿಷ್ಣಾತೆ. ಅವಳ ಮಾತುಗಳಿಗೆ ಬೆಂಗಾಲದ ರಸಗುಲ್ಲ ಮತ್ತು ಚುರುಮುರಿ ಘಮಲು – ಮಲ್ಲಿಕಾರ್ಜುನ ಕಡಕೋಳ, ಹಿರಿಯ ಸಾಹಿತಿ.
ಪಶ್ಚಿಮ ಬಂಗಾಳದಲ್ಲೀಗ ಸಾರ್ವತ್ರಿಕ ಚುನಾವಣೆಯ ಚಂಡಮಾರುತ. ಅಲ್ಲಿನ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಟೆಗೆ ಲಗ್ಗೆ ಇಡುವ ಬಿಜೆಪಿಯ ಎಲ್ಲ ತಂತ್ರ ಕುತಂತ್ರಗಳಿಗೆ ಬರೋಬ್ಬರಿ ಸೆಡ್ಡು ಹೊಡೆಯುವ ಬಹುದೊಡ್ಡ ಯುವಪಡೆಯೇ ಆಡಳಿತಾರೂಢ ಟಿ.ಎಂ.ಸಿ. ಸಿದ್ದಗೊಳಿಸಿದೆ.
ಆ ಯುವ ಪಡೆಯಲ್ಲಿ ಸಾಯೊನಿ ಘೋಷ್ ಎಂಬ ಯುವ ಸಂಸದೆ ಮುಂಚೂಣಿಯಲ್ಲಿದ್ದಾಳೆ. ಅವಳ ಚುನಾವಣಾ ಭಾಷಣಕ್ಕೆ ಬಂಗಾಲಿ ಬಾಬು, ಬೆಹನ್ ಗಳು ಮುರಕೊಂಡು ಮುಗಿ ಬೀಳುತ್ತಾರೆ. ಅವಳದು ತಾರಾ ವರ್ಚಸ್ಸಿನ ಚೆಲುವು ತುಂಬಿದ ಮೋಹಕ ಮಾತುಗಳು. ಬೆಂಗಾಲಿ, ಭೋಜ್ಪುರಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಅರಳು ಹುರಿದಂತೆ ಮಾತಾಡುತ್ತಾಳೆ. ಅವುಗಳ ಜತೆ ಜತೆಯಲಿ ಸ್ಥಳೀಯ ನುಡಿಗಟ್ಟುಗಳನ್ನು ಪೋಣಿಸಿ, ಕುಣಿಸಿ ಸಿರಿಕಂಠದ ದೇಹಭಾಷೆ ಮಾತಾಡುವಲ್ಲಿ ಆಕೆ ನಿಷ್ಣಾತೆ. ಅವಳ ಮಾತುಗಳಿಗೆ ಬೆಂಗಾಲದ ರಸಗುಲ್ಲ ಮತ್ತು ಚುರುಮುರಿ ಘಮಲು.
ಹವಾಯಿ ಪಾದರಕ್ಷೆ, ಬಿಳಿಹತ್ತಿ ಸೀರೆಯ ಸರಳ ಮಹಿಳೆ ಮಮತಾ ಬ್ಯಾನರ್ಜಿ ಬಂಗಾಲಿಗರ ಮನಸು ಗೆದ್ದ ಮಹಿಳಾ ಮುಖ್ಯಮಂತ್ರಿ. ಅಷ್ಟಕ್ಕೂ ಬೆಂಗಾಲಿ ಮಮತಾ ಬೆಹನ್ ಗೆ ವರ್ಷಕ್ಕಾಗುವಷ್ಟೂ ಹತ್ತಿ ನೂಲಿನ ಸೀರೆಗಳನ್ನು ನೇಯ್ದು ಕೊಡುವ ನೇಕಾರರು ಕನ್ನಡನಾಡಿನ ಉಡುಪಿಯವರು. ನಮ್ಮ ಉಡುಪಿಯ ಸರಳ ಉಡುಪಿನ ಮಮತಾ ಗರಡಿಮನೆಯಲ್ಲೊಬ್ಬ ತರುಣಿ ಇದ್ದಾಳೆ, ಅವಳೇ ಸಾಯೊನಿ ಘೋಷ್. ಆಕೆ ವರ್ತಮಾನ ಭಾರತ ರಾಜಕಾರಣದ ಅತ್ಯದ್ಭುತ ಪ್ರತಿಭೆ. ಮುವತ್ಮೂರರ ಪ್ರಾಯದ ಸಾಯೊನಿ ಘೋಷ್ ಆಕರ್ಷಕ ವ್ಯಕ್ತಿತ್ವದ ಸುಂದರ ಯುವತಿ, ಮೇಲಾಗಿ ಸಿನೆಮಾ ನಟಿ.

ಸಂಸದೆಯಾಗಿರುವ ಆಕೆ ಪಾರ್ಲಿಮೆಂಟ್ ಸಭೆಯಲ್ಲಿ ಆಡುವ ಮಾತುಗಳಿಗೆ ರಾಷ್ಟ್ರೀಯ ಮಹತ್ವದ ಗುಣಮೌಲ್ಯ. ವಿರೋಧ ಪಕ್ಷದ ನಾಯಕಿಯೊಬ್ಬರಿಗೆ ಇರಬೇಕಾದ ಪ್ರಖರ ಚರಿಷ್ಮಾ ಮತ್ತು ಧಾರ್ಷ್ಟ್ಯ ಅವಳಿಗಿದೆ ಎನ್ನುವುದನ್ನು ಬಂಗಾಳಿಗರು ಒಪ್ಪಿದ್ದಾರೆ. ನೇರ ನಿಷ್ಠುರ ಮತ್ತು ಹರಿತ ಮಾತುಗಳ ಮೂಲಕ ಆಡಳಿತ ಪಕ್ಷದ ಪ್ರಮುಖರಿಗೆ ಮುಜುಗರ ತರುವ ಸಿಡಿಗುಂಡುಗಳಂತೆ ಅವಳ ಮಾತಿನ ಚಟಾಕಿಗಳು. ಜಾದವಪುರ ಲೋಕಸಭಾ ಕ್ಷೇತ್ರದ ಈ ತರುಣ ಸಂಸದೆ ಪಾರ್ಲಿಮೆಂಟಲ್ಲಿ ಕ್ಷಿಪಣಿಯಂತೆ ಉಡಾಯಿಸುವ ಹೇಳಿಕೆಗಳು ನಿರೀಕ್ಷೆ ಮೀರಿ ವೈರಲ್ ಆಗುತ್ತವೆ.
ಅವಳ ಹೇಳಿಕೆಗಳ ಟ್ರೋಲ್ ಗಳಿಗೆ ಅಪಾರ ಬೇಡಿಕೆ. ಆಧುನಿಕ ಭಾರತದ ರಾಜಕಾರಣಕ್ಕೆ ಹೇಳಿ ಮಾಡಿಸಿದ ಸೆಲೆಬ್ರಿಟಿ ಆಕೆ. ಈ ಯುವತಿಯ ಸಿರಿಕಂಠದಿಂದ ಎಲ್ಲ ವರ್ಗದ ಮನಸುಗಳನ್ನು ಗಾಢವಾಗಿ ಸೆಳೆಯಬಲ್ಲ ಅಸ್ಖಲಿತ ಭಾಷಾ ಮೋಹಕತೆ. ಅದೇನೋ ಅನೂಹ್ಯ ಆಕರ್ಷಣೆಯ ಸಂದೇಶಗಳಿರುತ್ತವೆ. ಆಕೆಯ ಮಾತು, ಮಾತಿನ ಶೈಲಿ, ಬಾಡಿ ಲಾಂಗ್ವೇಜ್, ಉಡುಪು ಅಷ್ಟೇ ಮನಮೋಹಕ.
ಅದಕ್ಕೆ ಕೋಮಲ ಚಿತ್ತದ ಸರಳ ಸುಂದರತೆ ಮತ್ತು ಸಿಂಹಗರ್ಜನೆಯ ತಾಕತ್ತು ಇರುವುದನ್ನು ಮರೆಯಲಾಗದು. ದೂರದ ಪಶ್ಚಿಮ ಬಂಗಾಳದ ಈ ತರುಣಿ ರಾಜಕೀಯವಾಗಿ ಹಲವು ಸಂವೇದನೆಗಳನ್ನು ಗರ್ಭೀಕರಿಸಿಕೊಂಡಂತೆ ಮಾತಾನಾಡುವುದೇ ಭಲೇ ಭಲೇ ಅನಿಸದಿರದು. ರಾಜಕೀಯ ರಂಗದಲ್ಲಿ ಹುಡುಕಿದರೆ ನಮ್ಮಲ್ಲಿ ಅಂತೊಬ್ಬ ತರುಣಿ ಪ್ರಾಯಶಃ ನನ್ನ ಗಮನಕ್ಕೆ ಬಂದಿಲ್ಲ. ಕೆಲಕಾಲ ಸಂಸದೆಯಾಗಿದ್ದ ರಮ್ಯಾ ಆ ಲೆವಲ್ಲಿಗಲ್ಲ ಅನಿಸುತ್ತದೆ. ನಿಮಗೆ ಹೆಚ್ಚಿಗೆ ಗೊತ್ತಿದ್ದರೆ ತಿಳಿಸಿ.
ರಂಗಕರ್ಮಿ, ಕಥೆಗಾರ, ಲೇಖಕ ಮತ್ತು ಪ್ರಸ್ತುತ ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರು
ಇದನ್ನೂ ಓದಿ- ದೇವನೂರು ಮಹಾದೇವ : ಮಣ್ಣಿನ ವಾಸನೆ ಮತ್ತು ಮನುಷ್ಯತ್ವದ ಉಸಿರು


