ಬೆಂಗಳೂರು : ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕಗ್ಗಂಟಾಗಿದ್ದ ಪರಿಶಿಷ್ಟ ಜಾತಿ ಒಳಮೀಸಲಾತಿಗೆ ರಾಜ್ಯ ಸರ್ಕಾರ ಕೊನೆಗೂ ಪರಿಹಾರ ಸೂತ್ರ ಕಂಡುಹಿಡಿದೆ. ಎಡಗೈಗೆ 5.25, ಬಲಗೈಗೆ 5.25 ಮತ್ತು ಅಲೆಮಾರಿ ಸೇರಿ ಇತರರಿಗೆ 4.5 ಒಳಮೀಸಲಾತಿ ನಿಗದಿಪಡಿಸುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಚಿವರುಗಳು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 101 ಜಾತಿಗಳಿಗೂ ನ್ಯಾಯ ಒದಗಿಸಬೇಕು ಎಂಬ ದೃಷ್ಟಿಯಿಂದ ಇಂದು ಒಮ್ಮತದ ತೀರ್ಮಾನ ಮಾಡಲಾಗಿದೆ. ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸುವ ಹೈಕೋರ್ಟ್ ತೀರ್ಪಿನ ಅನ್ವಯ ಎಡಗೈ ಸಂಬಂಧಿತ ಜಾತಿಗಳಿಗೆ 5.25, ಬಲಗೈ ಜಾತಿಗಳಿಗೆ 5.25 ಮತ್ತು ಬೋವಿ , ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳು ಸೇರಿ 4.5 ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು.
ಒಳಮೀಸಲಾತಿ ಜಾರಿ ಮಾಡುವ ಸಂಬಂಧ ರಾಜ್ಯದ ಎಲ್ಲಾ ಸಂಘಟನೆಗಳು, ಸ್ವಾಮೀಜಿಗಳ ಅಭಿಪ್ರಾಯ ಪಡೆಯಲಾಗಿದೆ. ಅಲ್ಲದೆ, ಇದಕ್ಕೆ ಸಚಿವ ಸಂಪುಟದ ಎಲ್ಲಾ ಸಚಿವರುಗಳು ಯಾವುದೇ ಭಿನ್ನಮತ ಇಲ್ಲದೆ ಸರ್ವಾನುಮತದ ಒಪ್ಪಿಗೆ ಸೂಚಿಸಿದ್ದಾರೆ. ಈ ನಿರ್ಧಾರದಿಂದ ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ಸಿಗಲಿದೆ. ನೇಮಕಾತಿ ಮಾಡುವ ಸಂದರ್ಭದಲ್ಲಿ ಒಳಮೀಸಲಾತಿಯನ್ನು ಇದರನ್ವಯ ನಿರ್ಧರಿಸಬೇಕು ಎಂದು ಸ್ಪಷ್ಟಪಡಿಸಿದರು.
ಒಳಮೀಸಲಾತಿ ಜಾರಿಗೆ ಬಹಳ ವರ್ಷದಿಂದ ಹೋರಾಟ ನಡೆದಿದೆ. ಚಿತ್ರದುರ್ಗದಲ್ಲಿ ನಮ್ಮ ಪಕ್ಷದಿಂದ ನಡೆಸಲಾದ ಪರಿಶಿಷ್ಟರ ಸಮಾವೇಶದಲ್ಲಿ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಮೊದಲು ಘೋಷಣೆ ಮಾಡಿದ್ದೆವು. ಅಲ್ಲದೆ, 2023ರ ಚುನಾವಣೆಗೂ ಮುನ್ನ ಡಾ.ಪರಮೇಶ್ವರ್ ಅಧ್ಯಕ್ಷತೆಯ ಪ್ರಣಾಳಿಕೆ ಸಮಿತಿಯಲ್ಲಿಯೂ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಲಾಗಿತ್ತು. ಸರ್ಕಾರ ರಚನೆ ಬಳಿಕ ನ್ಯಾ.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಿ ವರದಿ ಪಡೆಯಲಾಯಿತು.
ಆಯೋಗವು 6,5,4,1,1 ಹಂಚಿಕೆ ಮಾಡಿ ವರದಿ ನೀಡಿತು. ಅದರೆ, ಇದನ್ನು ಸ್ವಲ್ಪ ಬದಲಾಯಿಸಿ ಎಡಗೈಗೆ 6 ಬಲಗೈಗೆ 6 ಹಾಗೂ ಇತರೇ 5 ಎಂದು ಹಂಚಿಕೆ ಮಾಡಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಯಿತು. ತದನಂತರ ಅದನ್ನು ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಅಂಗೀಕರಿಸಿ ರಾಜ್ಯಪಾಲರ ಸಹಿ ಪಡೆಯುವ ಮೂಲಕ ಕಾನೂನು ಸಹ ಮಾಡಲಾಗಿತ್ತು.
ನಾಗಮೋಹನ್ ದಾಸ್ ಆಯೋಗ ಪರಿಶಿಷ್ಟ ಮೀಸಲಾತಿ ಪ್ರಮಾಣವನ್ನು ಶೇ.24ರಷ್ಟು ನೀಡಬೇಕು ಎಂದು ವರದಿ ನೀಡಿತ್ತು. ಹೀಗಾಗಿ ರಾಜ್ಯದ ಮೀಸಲಾತಿ ಪ್ರಮಾಣ ಶೇ. 56 ಕ್ಕೆ ಏರಿಕೆ ಅಗಿತ್ತು. ಈ ಮಧ್ಯೆ ಕೆಲವರು ರೋಸ್ಟರ್ ಬಿಂದು ಸರಿಯಾಗಿಲ್ಲ ನ್ಯಾಯಾಲಯದ ಮೊರೆ ಹೋದರು. ಆಗ ಹೈಕೋರ್ಟ್ ಮೀಸಲಾತಿ ಮಿತಿ ಶೇ 50 ಮಿತಿ ಮೀರಬಾರದು ಎಂದು ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಪುನರುಚ್ಚಾರ ಮಾಡಿತ್ತು. ಹೀಗಾಗಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಇಂದು ತನ್ನ ವರದಿ ನೀಡಿದೆ. ಇಂದಿನ ಸಚಿವ ವಿಶೇಷ ಸಂಪುಟ ಸಭೆಯಲ್ಲಿ ಒಟ್ಟಾರೆಯಾಗಿ ಚರ್ಚಿಸಿ ಶೇ.50ರ ಮೀಸಲಾತಿ ಮಿತಯೊಳಗೆ ಎಡಗೈ ಶೇ.5.25, ಬಲಗೈ ಶೇ.5.25 ಮತ್ತು ಅಲೆಮಾರಿ ಸೇರಿ ಇತರೆ ಶೇ. 4.5ರಂತೆ ವರ್ಗೀಕರಣ ಮಾಡಲಾಗಿದೆ. ಒಳಮೀಸಲಾತಿಗೆ ನಮ್ಮ ಬದ್ಧತೆ ತೋರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

