‘ಟಾರ್ಗೆಟ್‌ ಮುಸ್ಲಿಂ’ ಕಾರ್ಯತಂತ್ರದ ಹಿಂದೆ ಡಿಕೆಶಿ-ಬಿಜೆಪಿ ಗೇಮ್‌ಪ್ಲ್ಯಾನ್‌?

ದಾವಣಗೆರೆಯ ಚುನಾವಣಾ ಫಲಿತಾಂಶವೇ ಇನ್ನು ಬಂದಿಲ್ಲ, ಅಷ್ಟರೊಳಗೆ ಮುಸ್ಲಿಮರು ಕಾಂಗ್ರೆಸ್‌ಗೆ ಕೈಕೊಟ್ಟಿದ್ದಾರೆ ಅನ್ನೋ ನಿಖರ ತೀರ್ಮಾನಕ್ಕೆ ಕಾಂಗ್ರೆಸ್‌ ಹೇಗೆ ಬಂತು? ಒಂದುಕಡೆ, ಆರೆಸ್ಸೆಸ್‌ ಕಾರ್ಯಕರ್ತರಿಗೆ ಜಿಲ್ಲಾ ಪದಾಧಿಕಾರಿಗಳ ಪಟ್ಟ ಕಟ್ಟುತ್ತಿರುವ ಕಾಂಗ್ರೆಸ್‌, ಒಂದು ಉಪಚುನಾವಣೆಯ ಗೊಂದಲ ನೆಪ ಮಾಡಿಕೊಂಡು ಪಕ್ಷದ ಪಾರಂಪರಿಕ ಮತಗಳೆಂದು ಪರಿಗಣಿಸಲ್ಪಟ್ಟ ಮುಸ್ಲಿಂ ನಾಯಕರ ಸಾಲುಸಾಲು ವಜಾ, ಉಚ್ಛಾಟನೆಗೆ ಕಾಂಗ್ರೆಸ್‌ ಯಾಕೆ ಆತುರ ತೋರುತ್ತಿದೆ? ಪಕ್ಷದ ಈ ಕ್ರಮವನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರರು, ಸಿಎಂ ಸಿದ್ದರಾಮಯ್ಯನವರ ತಲೆಗೆ ಕಟ್ಟಿ ನಯವಾಗಿ ನುಣುಚಿಕೊಳ್ಳುತ್ತಿರುವುದೇಕೆ?

ಎತ್ತಿಂದಿತ್ತ ನೋಡಿದರೂ ಮುಸ್ಲಿಮರ ಮೇಲೆ ಈ ಪರಿ ಜಿದ್ದಿಗೆ ಬೀಳಲು ಕಾಂಗ್ರೆಸ್‌ ಬಳಿ ಯಾವ ಕಾರಣಗಳೂ ಗೋಚರಿಸುತ್ತಿಲ್ಲ. ಆದರೆ ಮೇಲಿನ ಪ್ರಶ್ನೆಗಳ ಜಾಡು ಹಿಡಿದು ಹೊರಟರೆ, 2028ರ ವೇಳೆಗೆ ಕರ್ನಾಟಕ ರಾಜಕಾರಣದಲ್ಲಿ ತಲ್ಲಣವೆಬ್ಬಿಸುವ ವಿದ್ಯಮಾನವೊಂದಕ್ಕೆ ಈ ಮುಸ್ಲಿಂ ಸೇಡು ಮುನ್ನುಡಿಯೆಂಬುದು ಈಗ ಚರ್ಚೆಯಾಗುತ್ತಿದೆ.

ಇದರ ಸಕಲ ಸೂತ್ರಧಾರ ಡಿ.ಕೆ.ಶಿವಕುಮಾರ್‍‌ ಎನ್ನುವುದು ಈಗ ರಹಸ್ಯವಾಗುಳಿದಿಲ್ಲ. ಆದರೆ, ಕಾಂಗ್ರೆಸ್‌ ಪಕ್ಷದ ವೋಟ್‌ಬ್ಯಾಂಕನ್ನೇ ಅಲ್ಲೋಲಕಲ್ಲೋಲ ಮಾಡುವ ಇಂತಹ ದುಸ್ಸಾಹಸಕ್ಕೆ ಅವರ್‍ಯಾಕೆ ಕೈಹಾಕಿದ್ದಾರೆ? ಎಂದು ಕೆದಕುತ್ತಾ ಹೋದರೆ, ನಮ್ಮ ಊಹೆಗು ನಿಲುಕದ ಬಹುದೊಡ್ಡ ರಾಜಕೀಯ ಷಡ್ಯಂತ್ರದ ವಾಸನೆ ಮೂಗಿಗೆ ಬಡಿಯುತ್ತದೆ.

ಡಿಕೆಶಿಗೆ ಈ ಅವಧಿಯಲ್ಲೇ ತಾನು ಸಿಎಂ ಆಗಬೇಕೆನ್ನುವ ಆತುರವಿದ್ದುದ್ದು ಎಲ್ಲರಿಗೂ ತಿಳಿದ ಸಂಗತಿ. ಅದಕ್ಕಾಗಿ ಅವರು ಮಾಡಿದ ಯಾವ ಪ್ರಯತ್ನಗಳೂ ಕೈಗೂಡಲಿಲ್ಲ. ಅದಕ್ಕೆ ಕಾರಣ, ರಾಹುಲ್‌ ಗಾಂಧಿಯವರು ಸಿದ್ದರಾಮಯ್ಯನವರ ಬೆನ್ನಿಗೆ ಬಲವಾಗಿ ನಿಂತದ್ದು. ಇನ್ನುಳಿದ ಎರಡು ವರ್ಷದಲ್ಲೂ ತನಗೆ ಅಧಿಕಾರ ಸಿಗುವುದಿಲ್ಲವೆನ್ನುವುದು ಈಗ ಅವರಿಗೆ ಖಾತ್ರಿಯಾಗಿದೆ. ಒಂದುವೇಳೆ, ಚುನಾವಣೆ ಹೊಸ್ತಿಲಿನ ಕೊನೇ ಒಂದು ವರ್ಷದಲ್ಲಿ ಅಧಿಕಾರ ಸಿಕ್ಕರೂ ಅದರಿಂದ ಪ್ರಯೋಜನವಿಲ್ಲ. ತಮಗಾದ ಈ ಹಿನ್ನಡೆಗಳು ಅವರನ್ನು ಇನ್ನಿಲ್ಲದಂತೆ ಕೆರಳಿಸಿವೆ. ಎಷ್ಟರಮಟ್ಟಿಗೆಂದರೆ, ಬಿಜೆಪಿ ಸೇರುವ ಬಗ್ಗೆಯೂ ಅವರು ಆಲೋಚಿಸಿದ್ದರು ಎನ್ನಲಾಗುತ್ತೆ. ಇದಕ್ಕೆ ಸೊಪ್ಪು ಹಾಕಿದ್ದು, ಎಸ್‌ ಎಂ ಕೃಷ್ಣ ಮನೆ ಸೊಸೆಯಾಗಿರುವ ಅವರ ಮಗಳು ಎಂಬ ಸುದ್ದಿಯೂ ಹರಿದಾಡಿತ್ತು. ಇನ್‌ಫ್ಯಾಕ್ಟ್‌ ಇದೆಲ್ಲ, ರಾಜಕೀಯ ಪಡಸಾಲೆಯ ಹಳೆಯ ಸುದ್ದಿ! ಅದರ ಮುಂದುವರೆದ ಭಾಗವೇ ಈ `ಟಾರ್ಗೆಟ್‌ ಮುಸ್ಲಿಂ’ ತಂತ್ರ ಎಂಬುದು ಲೇಟೆಸ್ಟ್‌ ಸುದ್ದಿ!!

ಜಬ್ಬಾರ್‌, ಜಮೀರ್‌, ಸಿದ್ದರಾಮಯ್ಯ,‌ ಡಿ ಕೆ ಶಿವಕುಮಾರ್

ಅದು ಹೇಗೆ?

ಯಾವಾಗ ಡಿಕೆಶಿಯವರಿಗೆ ತಾನು ಈ ಅವಧಿಯಲ್ಲಿ ಸಿಎಂ ಆಗುವುದಿಲ್ಲ ಎನ್ನುವುದು ಖಾತ್ರಿಯಾಯ್ತೋ, ಅದೇ ವೇಳೆಗೆ ಮುಂದಿನ ಸಲವೂ ಸಿಎಂ ಆಗಲಾರೆ ಎಂಬುದು ಮನದಟ್ಟಾಯ್ತು. ಯಾಕೆಂದರೆ, ಏನೇ ಪ್ರಯತ್ನಪಟ್ಟರು 2028ರ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಸತತ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡುವುದು ದುಸ್ತರ ಎಂಬ ಅಭಿಪ್ರಾಯಗಳನ್ನು ಅವರ ಆಪ್ತರು ಕಿವಿಗೆ ತುಂಬಿದ್ದರು. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಥವಾ ಸರಳ ಬಹುಮತದ ಸನಿಹಕ್ಕೆ ಬಂದುನಿಂತರೂ ಬಿಜೆಪಿಯ ಆಪರೇಷನ್‌ ಕಮಲವನ್ನು ನಿಭಾಯಿಸಿಕೊಂಡು ಸರ್ಕಾರ ರಚನೆ ಮಾಡುವುದು ದುಸ್ತರ ಎಂಬುದು ಆ ಅಭಿಪ್ರಾಯದ ಸಾರಾಂಶ. ತನಗೆ ಸಿಎಂ ಆಗಲು ಅವಕಾಶ ಸಿಗದಿದ್ದ ಮೇಲೆ ತಾನೇಕೆ ಕಾಂಗ್ರೆಸಿನಲ್ಲಿರಬೇಕು? ಹಿತೈಷಿಗಳು ಹೇಳಿದಂತೆ ಬಿಜೆಪಿ ಸೇರಿದರೆ ಕಡೇಪಕ್ಷ ತನ್ನ ಮೇಲಿನ ಕೇಸುಗಳಿಂದ ರಕ್ಷಣೆಯಾದರೂ ಸಿಗುತ್ತೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತೆ.

ಆದರೆ, ಅದು ಅಷ್ಟು ಸುಲಭವಲ್ಲ.

136 ಶಾಸಕರನ್ನು ಹೊಂದಿರುವ ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೇ ಹಣ ಸುರಿದು, ಎಂತದ್ದೇ ಬಂಡಾಯ ಎಬ್ಬಿಸಿದರೂ ತನ್ನ ಜೊತೆಗೆ 20 ಶಾಸಕರು ಬರಬಹುದಷ್ಟೆ. ಸರ್ಕಾರ ಸುಭದ್ರವಾಗಿರಲಿದೆ. ಆದರೆ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಕೆಟ್ಟ ಹೆಸರು ತನಗೆ ತಗುಲಿಕೊಳ್ಳಲಿದೆ. ಅಲ್ಲದೇ, ಈಗಿರುವ ಅಧಿಕಾರವನ್ನು ಕಳೆದುಕೊಳ್ಳುವುದೂ ಅವರಿಗೆ ಇಷ್ಟವಿಲ್ಲ. ಇನ್‌ಫ್ಯಾಕ್ಟ್‌, ಡಿಕೆ ಶಿವಕುಮಾರ್‍‌ ಹೀಗೆ ದಿಢೀರ್‍‌ ಪಕ್ಷದಿಂದ ಹೊರಬಂದು ತಮ್ಮ ಜೊತೆಗೆ ಗುರುತಿಸಿಕೊಳ್ಳುವುದು ಬಿಜೆಪಿಗೂ ಬೇಕಾಗಿಲ್ಲ. ಯಾಕೆಂದರೆ ಇದರಿಂದ ಕಾಂಗ್ರೆಸ್‌ಗೆ ಸಿಂಪಥಿ ಲಭಿಸಿ, ತನಗೆ ಆಪರೇಷನ್‌ ಕಮಲದ ಕಳಂಕ ಶಾಶ್ವತಗೊಳ್ಳುವ ಅಪಾಯದ ಅರಿವೂ ಇದೆ. ಹಾಗಾಗಿ ಇದ್ದಷ್ಟು ದಿನ ಡಿ ಕೆ ಶಿವಕುಮಾರ್‍‌ ಕಾಂಗ್ರೆಸ್‌ ಪಕ್ಷದಲ್ಲೇ ಇರಬೇಕು, ಮತ್ತು ಆ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸಲು ಏನೆಲ್ಲಾ ಮಾಡಬಹುದೊ, ಅವಕಾಶ ಬಳಸಿಕೊಂಡು ಅದನ್ನು ಮಾಡಬೇಕು ಎನ್ನುವ ಒಳ-ಒಪ್ಪಂದ ಡಿಕೆಶಿ-ಬಿಜೆಪಿ ದಿಲ್ಲಿ ನಾಯಕರ ನಡುವೆ ನಡೆದಿದೆ ಎನ್ನುವುದು ಈಗಿನ ಲೇಟೆಸ್ಟ್‌ ಸುದ್ದಿ. ಡಿಕೆಶಿ, ಬಿಜೆಪಿ ನಾಯಕರ ಪರ ಮೃದುವಾಗಿರೋದು, ಆರೆಸ್ಸೆಸ್‌ ಬಗ್ಗೆ ಒಲವು ತೋರಿಸುತ್ತಿರೋದು ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಕೂಡಾ ಡಿಕೆಶಿ ಕೇಸುಗಳನ್ನು ಕೆದಕದೆ ಸುಮ್ಮನಾಗಿರೋದು ಇದೇ ಒಪ್ಪಂದದ ಕಾರಣಕ್ಕೆ ಎನ್ನಲಾಗುತ್ತಿದೆ.

ಈಗ ದಾವಣಗೆರೆ ಉಪಚುನಾವಣೆ ನೆಪವಾಗಿಟ್ಟುಕೊಂಡು ಏಕಾಏಕಿ ಮುಸ್ಲಿಮರ ಮೇಲೆ ಸೇಡಿನ ಕ್ರಮಗಳು ಕಾಂಗ್ರೆಸ್‌ ಪಕ್ಷದಿಂದ ಹೊರಬೀಳುತ್ತಿರುವುದಕ್ಕೂ, ಆ ಒಳ-ಒಪ್ಪಂದಕ್ಕೂ ಸಂಬಂಧವಿದೆಯಾ ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

ಈಗಾಗಲೇ ಒಳಮೀಸಲಾತಿಯ ಗೊಂದಲ ಬೃಹದಾಕಾರವಾಗಿ ಬೆಳೆಯುವಂತೆ ಮಾಡಿ ಕಾಂಗ್ರೆಸ್‌ ಪಕ್ಷದ ವಿರುದ್ಧ ದಲಿತ ಸಮುದಾಯದಲ್ಲಿ ಅಸಮಾಧಾನ ಮೂಡುವಂತೆ ಮಾಡಲಾಗಿದೆ. ಈಗ ಮುಸ್ಲಿಮರು ಕೂಡಾ ಕಾಂಗ್ರೆಸ್‌ ವಿರುದ್ಧ ಸಿಟ್ಟಿಗೇಳುವಂತೆ ಮಾಡಿದರೆ, 2028ರ ವೇಳೆಗೆ ಕಾಂಗ್ರೆಸ್‌ ಪಕ್ಷ ತನ್ನ ಪ್ರಧಾನ ಓಟ್‌ಬೇಸ್‌ ಕಳೆದುಕೊಳ್ಳಲಿದೆ. ಇದು ಬಿಜೆಪಿಯ ಗೇಮ್‌ಪ್ಲ್ಯಾನ್‌. ಇದಕ್ಕಾಗಿ ಡಿಕೆಶಿ ನಂಟು ಮತ್ತು ಜೆಡಿಎಸ್‌ನ ಗಾಳವನ್ನು ಅದು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ.

ತನ್ನ ಒಂದು ಕಣ್ಣು ಹೋದರು ಪರವಾಗಿಲ್ಲ, ತನ್ನ ಸಿಟ್ಟಿಗೆ ಕಾರಣವಾದವರ ಎರಡೂ ಕಣ್ಣುಗಳೂ ನಿರ್ನಾಮವಾಗಲಿ ಎಂಬ ಮುಂಗೋಪಕ್ಕೆ ಬಂದು ತಲುಪಿರುವ ಡಿಕೆಶಿ, ತನ್ನನ್ನು ಸಿಎಂ ಮಾಡದ ಕಾಂಗ್ರೆಸ್‌ ಪಕ್ಷದ ವಿರುದ್ಧ ಇಂತಹ ಆತ್ಮಹತ್ಯಾತ್ಮಕ ರಣತಂತ್ರದ ಜೊತೆ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ. ಮುಸ್ಲೀಮರು ಎಷ್ಟೇ ಅಸಮಾಧಾನ ಹೊಂದಿದ್ದರೂ, ಸಿದ್ದರಾಮಯ್ಯನವರ ಮೇಲಿನ ಅಭಿಮಾನದ ಕಾರಣಕ್ಕೆ ಮುಂದೆ ಅವರು ಎಲ್ಲವನ್ನೂ ಮರೆತು ಕಾಂಗ್ರೆಸ್‌ ಜೊತೆ ನಿಲ್ಲುವ ಸಂಭವವಿದೆ. ಹಾಗಾಗಿ ಸಿದ್ದರಾಮಯ್ಯನವರ ಮೇಲೆಯೇ ಮುಸ್ಲಿಮರಿಗೆ ಸಿಟ್ಟು ಮೂಡುವಂತೆ ಮಾಡಿದರೆ, ಆಗ ಕಾಂಗ್ರೆಸ್‌ ಪಕ್ಷದ ಜೊತೆಗಿನ ಮುಸ್ಲಿಮರ ಕೊಂಡಿಯೇ ಕಳಚಿದಂತಾಗುತ್ತದೆ. ಅದೇ ಕಾರಣಕ್ಕೆ, ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳುವಂತೆ ಪಕ್ಷದ ವತಿಯಿಂದ ತಾನು ತೆಗೆದುಕೊಳ್ಳುತ್ತಿರುವ ಕ್ರಮವನ್ನೆಲ್ಲ ಡಿಕೆಶಿ, ಸಿದ್ದರಾಮಯ್ಯನವರ ಹೆಗಲಿಗೆ ರವಾನಿಸುತ್ತಿದ್ದಾರೆ. “ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್‍‌ ಅಹಮದ್‌ ಅವರನ್ನು ವಜಾ ಮಾಡಿದ್ದರಲ್ಲಿ ನನ್ನ ಪಾತ್ರವೇನೂ ಇಲ್ಲ, ಮುಖ್ಯಮಂತ್ರಿಗಳು ಅವರದೇ ಮೂಲದಿಂದ ಮಾಹಿತಿ ಸಂಗ್ರಹಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ” ಎಂಬ ಡಿಕೆಶಿ ಹೇಳಿಕೆಯೇ ಇದಕ್ಕೆ ಸಾಕ್ಷಿ. ಒಂದುವೇಳೆ, ಅದು ಸಿದ್ದರಾಮಯ್ಯನವರ ತೀರ್ಮಾನವೇ ಆಗಿದ್ದರೆ ಪಕ್ಷದ ಸದಸ್ಯತ್ವದಿಂದ ಜಬ್ಬಾರ್ ಅವರನ್ನು ವಜಾ ಮಾಡಿದ್ದು ಯಾರು? ಕೆಪಿಸಿಸಿ ಅಧ್ಯಕ್ಷಗಿರಿ ಇರೋದು ಡಿಕೆಶಿ ಬಳಿ! ಹೈಕಮಾಂಡ್‌ ಮಟ್ಟದ ಒಬ್ಬ ಉನ್ನತ ನಾಯಕನ ಜೊತೆ ಇರುವ ಸಖ್ಯವನ್ನೇ ಬಳಸಿಕೊಂಡ ಡಿಕೆಶಿ, ಮುಸ್ಲಿಮರ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ.

ಒಂದೇ ಕಲ್ಲಿಗೆ ಎರಡು ಹಕ್ಕಿ ಉರುಳಿಸುವ ತಂತ್ರ

ತನ್ನ ಸಿಎಂ ಕನಸಿಗೆ ಅಡ್ಡನಿಂತ ಸಿದ್ದರಾಮಯ್ಯನವರ ಆಪ್ತರನ್ನು ಮೂಲೆಗುಂಪು ಮಾಡಿ, ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಂತೆಯೂ ಆಗುತ್ತೆ. ಒಳಮೀಸಲಾತಿಯ ಕಾರಣಕ್ಕೆ ದಲಿತರು, ಶಿಸ್ತುಕ್ರಮದ ಕಾರಣಕ್ಕೆ ಮುಸ್ಲಿಮರೂ ಸಿದ್ದರಾಮಯ್ಯನವರ ವಿರುದ್ಧ ಅಸಮಾಧಾನಗೊಂಡರೆ ಅವರ ಅಹಿಂದ ಇಮೇಜಿಗೂ ಧಕ್ಕೆಯಾಗಿ, ಕಾಂಗ್ರೆಸ್‌ ಸಾಮರ್ಥ್ಯವೂ 2028ರ ವೇಳೆಗೆ ಕುಸಿಯಲಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಏನೆಲ್ಲಾ ಭರವಸೆಗಳು ಅವರಿಗೆ ಲಭಿಸಿವೆಯೋ ಗೊತ್ತಿಲ್ಲ! ಒಂದುವೇಳೆ, ಸಿಎಂ ಹುದ್ದೆಯ ತುಪ್ಪವನ್ನು ಅವರ ಮೂಗಿಗೆ ನೇವರಿಸಿದ್ದರೂ ಅಚ್ಚರಿಯಿಲ್ಲ.

ಇತ್ತ ಡಿಕೆಶಿಯವರನ್ನು ಬಳಸಿಕೊಂಡು ಕಠಿಣ ಶಿಸ್ತುಕ್ರಮದ ಮೂಲಕ ಮುಸ್ಲಿಮರು ಕಾಂಗ್ರೆಸಿನಿಂದ, ಸಿದ್ದರಾಮಯ್ಯನವರಿಂದ ದೂರ ಸರಿಯುವಂತೆ ಮಾಡುತ್ತಲೇ, ಅತ್ತ ತಮ್ಮ ಹಾಲಿ ಮೈತ್ರಿ ಎಚ್‌ ಡಿ ಕುಮಾರಸ್ವಾಮಿಯವರನ್ನು ಅಖಾಡಕ್ಕಿಳಿಸಿ ಮುಸ್ಲಿಮರನ್ನು ಜೆಡಿಎಸ್‌ನತ್ತ ಸೆಳೆಯುವಂತೆ ಮಾಡುವುದು ಬಿಜೆಪಿಯ ರಣತಂತ್ರ. ಅದಾಗಲೇ ಜಮೀರ್‍‌ ಅಹ್ಮದ್‌ ಅವರಿಗೆ ಕುಮಾರಸ್ವಾಮಿಯವರಿಂದ ಗಾಳ ಹಾಕುವ ಪ್ರಯತ್ನಗಳೂ ಶುರುವಾಗಿವೆ ಎನ್ನಲಾಗುತ್ತಿದೆ. ಕಾಂಗ್ರೆಸಿನ ಓಟ್‌ಬ್ಯಾಂಕ್‌ ಛಿದ್ರವಾದರೆ, ಲಾಭ ಬಿಜೆಪಿಗೆ!! ಲುಕ್ಸಾನು ಕಾಂಗ್ರೆಸ್‌ ಮತ್ತು ಮುಸ್ಲಿಮರಿಗೆ!!! ಬಿಜೆಪಿಗೆ ಬೇಕಾದುದೇ ಇದಲ್ಲವೇ?

ಈ ಹಂತದಲ್ಲಿ ಸಿದ್ದರಾಮಯ್ಯನವರು ಅಡಕತ್ತರಿಗೆ ಸಿಲುಕಿದಂತಾಗಿದ್ದಾರೆ. ಒಂದೆಡೆ, ಡಿಕೆಶಿ ರಣತಂತ್ರಗಳಿಗೆ ನೇರ ಎದುರೇಟು ಕೊಟ್ಟು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆಯೂ ಇಲ್ಲ; ಮತ್ತೊಂದೆಡೆ, ಪಕ್ಷದ ವೋಟ್‌ ಬೇಸ್‌ ಗಟ್ಟಿಗೊಳಿಸುವ ಖಡಕ್‌ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವೂ ಇಲ್ಲ. ಜಾತಿಗಣತಿ, ಒಳಮೀಸಲಾತಿ, ಮುಸ್ಲಿಂ ಪ್ರಾತಿನಿಧ್ಯದ ವಿಚಾರಗಳಲ್ಲಿ ಅವರು ಅತ್ತ ದರಿ, ಇತ್ತ ಪುಲಿ ಎಂಬ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಉರಿವ ಬೆಂಕಿಗೆ ತುಪ್ಪ ಸುರಿಯುತ್ತಿರುವವರು ಯಾರು ಎಂಬ ಸತ್ಯವನ್ನು ಕಂಡುಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗದಿದ್ದರೆ, ಉರಿದು ಬೂದಿಯಾಗುವುದು ಕೇವಲ ಕಾಂಗ್ರೆಸ್‌ ಮಾತ್ರವಲ್ಲ; ಆ ಪಕ್ಷವನ್ನು ಬೆಂಬಲಿಸಿಕೊಂಡು ಬಂದ ಸಮುದಾಯಗಳು ಕೂಡಾ!!

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

More articles

Latest article

Most read