ಮಧುರೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯ “ಸಾಥನ್‌ಕುಲಂ”ನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಎಂಬ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಮಧುರೈನ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ . ಈ ಅಮಾನವೀಯ ಘೋರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು 9 ಪೊಲೀಸರನ್ನು ತಪ್ಪಿತಸ್ಥರೆಂದು ಘೋಷಿಸಿರುವ ನ್ಯಾಯಾಲಯ, ಎಲ್ಲಾ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸಿ ಆದೇಶವನ್ನು ನೀಡಿದೆ.
ಏನಿದು ಪ್ರಕರಣ?:
2020ರ ಕೊರೊನಾ ಲಾಕ್‌ಡೌನ್ ಸಮಯದಲ್ಲಿ. ಸರ್ಕಾರ ಅಂಗಡಿಗಳನ್ನು ತೆರೆಯಲು ತೆರೆಯಲು ಮತ್ತು ಮುಚ್ಚಲು ಸಮಯ ನಿಗದಿ ಮಾಡಿತ್ತು. ಆ ಸಂದರ್ಭದಲ್ಲಿ ನಿಗದಿತ ಸಮಯಕ್ಕಿಂತ ಕೆಲವೇ ನಿಮಿಷಗಳ ಕಾಲ ಹೆಚ್ಚುವರಿಯಾಗಿ ಅಂಗಡಿ ತೆರೆದಿದ್ದರು ಎಂಬ ಸಣ್ಣ ಕಾರಣಕ್ಕೆ ವ್ಯಾಪಾರಿ ಜಯರಾಜ್ (59) ಮತ್ತು ಅವರ ಮಗ ಬೆನ್ನಿಕ್ಸ್ (31) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಪೋಲೀಸರು ಪೊಲೀಸ್ ಠಾಣೆಯಲ್ಲಿ ರಾತ್ರಿಯಿಡೀ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದರು. ಅಲ್ಲದೇ ರಾತ್ರಿಯಿಡೀ ಅತ್ಯಂತ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದರು. ಪರಿಣಾಮವಾಗಿ ತಂದೆ ಮಗ ಇಬ್ಬರೂ ಕಸ್ಟಡಿಯಲ್ಲೇ ಮೃತಪಟ್ಟಿದ್ದರು, ಪೋಲೀಸರ ಚಿತ್ರಹಿಂಸೆ ಎಷ್ಟು ಕ್ರೂರವಾಗಿತ್ತು ಅಂದರೆ, ಆ ಅಮಾಯಕ ತಂದೆ ಹಾಗೂ ಮಗನ ಕಿವಿ ಹಾಗೂ ಗುದದ್ವಾರಗಳಲ್ಲಿ ತೀವ್ರ ರಕ್ತಸ್ರಾವ ಆಗಿತ್ತು. ಈ ಪ್ರಕರಣ ಇದು ತಮಿಳುನಾಡಿನಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪೋಲೀಸರು ಈ ಪ್ರಕರಣ ಮುಚ್ಚಿ ಹಾಕಲು ನಾನಾ ಪ್ರಯತ್ನಗಳನ್ನು ಮಾಡಿದರು, ಠಾಣೆಯ ಸಿಸಿ ಕ್ಯಾಮೆರಾಗಳನ್ನು ನಾಶ ಮಾಡಿದರು ಕಡೆಗೆ ಅದೇ ಠಾಣೆಯ ಮಹಿಳಾ ಸಿಬ್ಬಂದಿ ಧೈರ್ಯದಿಂದ ಮುಂದೆ ಬಂದು ನೀಡಿದ ಹೇಳಿಕೆಯಿಂದ ಕ್ರೂರ ಅಪರಾಧಿಗಳಿಗೆ ಶಿಕ್ಷೆಯಾಗಿದೆ
ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಅಮಾನವೀಯ ಪ್ರಕರಣದಲ್ಲಿ ಕೊನೆಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.

