ರಾಷ್ಟ್ರೀಯ ನಾಟಕ ಶಾಲೆ ( ಎನ್ ಎಸ್ ಡಿ) ಬೆಂಗಳೂರು ಕೇಂದ್ರದ ರೆಪರ್ಟರಿಯು “ಮ್ಯಾಕ್ಸಿಂ ಗಾರ್ಕಿಯವರ ” ದಿ ಲೋವರ್ ಡೆಪ್ತ್” ಆಧರಿಸಿ ಬಿ.ಟಿ.ದೇಸಾಯಿಯವರು ರೂಪಾಂತರಿಸಿದ ‘ಈ ಕೆಳಗಿನವರು’ ನಾಟಕವನ್ನು ಶ್ರೀಮತಿ. ವೀಣಾ ಶರ್ಮಾ ಬೂಸನೂರಮಠರವರು ಸಮರ್ಥವಾಗಿ ನಿರ್ದೇಶಿಸಿದ್ದಾರೆ.
ಇಪ್ಪತ್ತು ಜನ ಕಲಾವಿದರನ್ನು ಆಯ್ಕೆ ಮಾಡಿ ಒಂದು ತಿಂಗಳುಗಳ ಕಾಲ ತರಬೇತಿ ಕೊಟ್ಟು ಬೆಂಗಳೂರು ಮೈಸೂರು ಉಡುಪಿ ಗಳಲ್ಲಿ ಒಟ್ಟು 10 ಪ್ರದರ್ಶನಗಳನ್ನು ಕೊಡಲಾಗಿದೆ.
ಸಮಾಜದ ಅತ್ಯಂತ ತಳವರ್ಗದವರ ನಿಕೃಷ್ಟ ಬದುಕಿಗೆ ಕನ್ನಡಿ ಹಿಡಿಯುವ ಈ ನಾಟಕವು ಪ್ರೇಕ್ಷಕರು ಅರಿಯದ ವಿಕ್ಷಿಪ್ತ ಲೋಕವೊಂದನ್ನು ಪರಿಚಯಿಸುತ್ತದೆ. ಅಲ್ಲಿ ಒಳಿತಿಗಿಂತ ಕೆಡುಕೆ ಅತಿಯಾಗಿದೆ. ನಾಗರೀಕ ಸಮಾಜ ಮುಜುಗರ ಪಡುವಂತಹ ನಡೆ ನುಡಿಗಳಿವೆ. ಆದರೆ ಇದೆಲ್ಲ ಈ ವ್ಯವಸ್ಥೆಯ ವಾಸ್ತವವೂ ಆಗಿದೆ. ಇಡೀ ನಾಟಕದಲ್ಲಿ ನಟನೊಬ್ಬನ ದಾರುಣ ಬದುಕನ್ನು ತೋರಿಸಿದ್ದು ಕಲಾವಿದರಾದವರ ಕರುಳು ಹಿಂಡುವಂತಿದೆ. ಇಡೀ ನಾಟಕದಲ್ಲಿ ತುಂಬಾ ಕಾಡುವಂತಹ ಪಾತ್ರವಿದು.
ಆತನೊಬ್ಬ ರಂಗಭೂಮಿಯ ನಟ. ಆ ಸ್ಲಂ ಮಾದರಿಯ ಚಾಳ್ ನಲ್ಲಿದ್ದವರೆಲ್ಲಾ ಆತನನ್ನು ನಟಸಾರ್ವಭೌಮ ಎಂದೇ ಕಿಚಾಯಿಸುತ್ತಿರುತ್ತಾರೆ. ನಟನೆಯಲ್ಲಿ ಏನನ್ನೋ ಸಾಧಿಸಬೇಕೆಂಬ ಹಂಬಲ ಇರುವಾತ. ಅವನಲ್ಲಿ ಪ್ರತಿಭೆ ಇದೆ, ಆದರೆ ಅವಕಾಶಗಳಿಲ್ಲ. ನಟನೆಯನ್ನೇ ಉಸಿರಾಡುವ ಆ ನಟನಿಗೆ ಬೇರೆ ಕೆಲಸ ಮಾಡಿ ಬದುಕಲೂ ಸಾಧ್ಯವಾಗುತ್ತಿಲ್ಲ. ಬದುಕಿನ ವಾಸ್ತವಗಳನ್ನು ಅರಿಯದೇ ಬಣ್ಣದ ಲೋಕದ ಭ್ರಮೆಯಲ್ಲೇ ಜೀವಿಸುವ ಆತ ಅತಂತ್ರ ಜೀವನದ ಅನಂತ ನೋವುಗಳನ್ನು ಮರೆಯಲು ಕುಡಿತಕ್ಕೆ ದಾಸನಾಗುತ್ತಾನೆ. ಕುಡಿತ ಅತಿಯಾದಂತೆ ಅನಾರೋಗ್ಯಕ್ಕೂ ತುತ್ತಾಗಿ ನೆನಪಿನ ಶಕ್ತಿಯೂ ದುರ್ಬಲವಾಗುತ್ತದೆ. ಹಿಂದೆ ಮಾಡಿದ ಪಾತ್ರಗಳ ಸ್ಮರಣೆಯಿಂದ ಹೊರಬರಲಾಗದೇ ಒದ್ದಾಡುತ್ತಾನೆ.

ಇದು ಈ ನಾಟಕದ ನಟನೊಬ್ಬನ ವ್ಯಥೆಯಲ್ಲ, ರಂಗಭೂಮಿಯನ್ನೇ ಉಸಿರಾಗಿಸಿಕೊಂಡು ವಾಸ್ತವದ ಬದುಕು ಹಾಗೂ ಕಲೆಯನ್ನು ಬ್ಯಾಲೆನ್ಸ್ ಮಾಡಲಾಗದ ಹಲವಾರು ಕಲಾವಿದರ ದುರಂತದ ಕಥೆ. ನೋವು ಮರೆಯಲೋ, ರಿಲ್ಯಾಕ್ಸ್ ಆಗಲೋ, ಎಂಜಾಯ್ ಮಾಡಲೋ ಆರಂಭವಾದ ಮದ್ಯಪಾನದ ಅಭ್ಯಾಸ ಬರಬರುತ್ತಾ ದುರಭ್ಯಾಸವಾದಾಗ ನಟ ಅದಕ್ಕೆ ಅಡಿಕ್ಟ್ ಆಗುತ್ತಾನೆ. ತದನಂತರ ಆತ ಕುಡಿತವನ್ನು ಬಿಡಬೇಕೆಂದರೂ ಕುಡಿತ ಆತನನ್ನು ಬಿಡುವುದಿಲ್ಲ. ಹೀಗಾಗಿ ಏಣಗಿ ನಟರಾಜ್, ಅಶೋಕ ಬಾದರದಿನ್ನಿ ಯಂತಹ ಕೆಲವಾರು ಪ್ರತಿಭಾವಂತ ರಂಗಕರ್ಮಿಗಳು ಈ ಮದ್ಯಪಾನದ ಮಾಯೆಗೆ ಶರಣಾಗಿ ಸಾವನ್ನು ಆಹ್ವಾನಿಸಿಕೊಂಡಿದ್ದಾರೆ. ವೃತ್ತಿರಂಗಭೂಮಿಯಿಂದ ಆಧುನಿಕ ರಂಗಭೂಮಿಯವರೆಗೂ ಈ ಕುಡಿತದ ಹಾವಳಿಗೆ ಬಲಿಯಾದವರ ಸಂಖ್ಯೆಯೂ ದೊಡ್ಡದಿದೆ. ಮದ್ಯಪಾನ ಎನ್ನುವುದು ಒಂದು ರೀತಿಯಲ್ಲಿ ರಂಗಭೂಮಿಗೆ ಶಾಪವಾಗಿ ಕಾಡಿದೆ. ಕುಡಿತದ ಅತಿರೇಕದಿಂದಾಗಿ ರಂಗಭೂಮಿ ಅನೇಕ ಪ್ರತಿಭಾವಂತ ರಂಗಕರ್ಮಿಗಳನ್ನು ಕಳೆದುಕೊಂಡಿದೆ.
ಅಂತವರೆಲ್ಲರ ಪ್ರತಿನಿಧಿಯಾಗಿ ‘ಈ ಕೆಳಗಿನವರು’ ನಾಟಕದ ನಟನ ಪಾತ್ರ ಮೂಡಿಬಂದಿದೆ. ಕುಡಿತದ ದಾಸ್ಯಕ್ಕೆ ಒಳಗಾದರೆ ಏನೆಲ್ಲಾ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಈ ಪಾತ್ರ ಸಾಕ್ಷಿಯಾಗಿದೆ. ಕುಡಿತದ ದುಷ್ಪರಿಣಾಮದ ಬಗ್ಗೆ ಪ್ರೇಕ್ಷಕರನ್ನು ಎಚ್ಚರಿಸುವಂತಿದೆ.
ಆದರೆ.. ರಂಗಭೂಮಿ ಎನ್ನುವುದು ಕಲಾವಿದರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತದೆಯೇ ಹೊರತು ಬದುಕಿನಿಂದ ಪಲಾಯನ ಮಾಡುವುದನ್ನು ಕಲಿಸುವುದಿಲ್ಲ. ಅದೆಷ್ಟೇ ಕಷ್ಟ ನಷ್ಟಗಳು ಬಂದರೂ ಅವುಗಳನ್ನು ಎದುರಿಸಿ ಬದುಕನ್ನು ಹೇಗಾದರೂ ಮುಂದುವರೆಸುವ ಛಲವನ್ನು ರಂಗಭೂಮಿ ಪ್ರತಿಯೊಬ್ಬ ಕಲಾವಿದರಲ್ಲಿ ತುಂಬುತ್ತದೆ. ಸಿನೆಮಾ, ಟಿವಿ ಮಾಧ್ಯಮಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರು ಬೇಕಾದಷ್ಟಿದ್ದಾರೆ. ಆದರೆ ರಂಗಮಾಧ್ಯಮದಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಕಾಲಿಕವಾಗಿ ಬದುಕನ್ನು ಕೊನೆಗೊಳಿಸಿದವರು ತುಂಬಾ ತುಂಬಾ ವಿರಳ. ಬಹುಷಃ ಯಾರೂ ಇಲ್ಲಾ.
ಕರೋನಾದಂತಹ ಆಪತ್ತಿನ ದುಸ್ಥಿತಿಯಲ್ಲೂ ಸಹ ರಂಗಭೂಮಿಯನ್ನೇ ನೆಚ್ಚಿಕೊಂಡು ಬದುಕಿದ್ದ ಕೆಲವು ಕಲಾವಿದರುಗಳು ಬೀದಿಬದಿಯಲ್ಲಿ ಹೊಟೇಲ್ ತೆರೆದು ಬದುಕಿದರೇ ಹೊರತು ಸಾವಿಗೆ ಶರಣಾಗಲಿಲ್ಲ.
ಆದರೆ “ಈ ಕೆಳಗಿನವರು” ನಾಟಕದ ನಟ ವಾಸ್ತವದ ವಿರೂಪಗಳನ್ನು ಎದುರಿಸಲಾಗದೇ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆತನ ಅಕಾಲಿಕ ಸಾವಿನೊಂದಿಗೆ ಈ ನಾಟಕ ಕೊನೆಯಾಗುತ್ತದೆ. ನಟನ ಈ ಆತ್ಮಹತ್ಯೆ ನೋಡುಗರಲ್ಲೂ ನಕಾರಾತ್ಮಕತೆ ಹುಟ್ಟಿಸುವಂತಹುದಾಗಿದೆ. ತುಂಬಾ ನೋವುಂಡು ನೊಂದಿರುವ ಕಲಾವಿದರು ಈ ನಾಟಕದ ನಟನ ಆತ್ಮಹತ್ಯೆ ನೋಡಿದರೆ ಪ್ರೇರಣೆಗೆ ಒಳಗಾಗಬಹುದಾದ ಸಾಧ್ಯತೆಯೂ ಇದೆ.
ನಟನೊಬ್ಬನ ನೊಂದ ಬದುಕನ್ನು ಹೀಗೆ ಆತ್ಮಹತ್ಯೆಯ ಮೂಲಕ ಕೊನೆಗಾಣಿಸುವ ಅಗತ್ಯವಾದರೂ ಏನಿತ್ತು? ಎನ್ನುವ ಪ್ರಶ್ನೆ ನೋಡುಗರನ್ನು ಕಾಡದೇ ಇರದು. ‘ಇರಬೇಕು ಇದ್ದು ಜಯಿಸಬೇಕು’ ಎನ್ನುವುದಕ್ಕೆ ವಿರುದ್ಧವಾದ ನಿಲುವನ್ನು ನಿರ್ದೇಶಕರು ತೆಗೆದುಕೊಂಡಿದ್ದಾದರೂ ಯಾಕೆ? ಇರಬಹುದು? ಮ್ಯಾಕ್ಸಿಂ ಗಾರ್ಕಿಯವರ ನಾಟಕದಲ್ಲಿ ನಟ ಆತ್ಮಹತ್ಯೆ ಮಾಡಿಕೊಂಡಿರಬಹುದು, ದೇಸಾಯಿಯವರೂ ಅದನ್ನೇ ಬರೆದಿರಬಹುದು.
ಆದರೆ ಪ್ರಸ್ತುತ ನಾಟಕದಲ್ಲಿ ನಟನ ದುರಂತ ಅಂತ್ಯವನ್ನು ಬದಲಾಯಿಸುವ ಸಾಧ್ಯತೆ ನಿರ್ದೇಶಕರಿಗೆ ಇದ್ದೇ ಇದೆ. ಆತ್ಮಹತ್ಯೆಗೆ ಬದಲಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಬಹುದಾಗಿತ್ತು. ಆತ್ಮಹತ್ಯೆಯಂತಹ ಹೇಡಿತನದ ಕೃತ್ಯ ಯಾವುದಕ್ಕೂ ಪರಿಹಾರವಲ್ಲ ಎಂಬುದರ ಅರಿವು ನಿರ್ದೇಶಕರಿಗೆ ಇರಬೇಕಿತ್ತು. ಏನೇ ಆಗಲಿ ನಾಟಕದಲ್ಲೇ ಇರಲಿ ಕಲಾವಿದರು ಆತ್ಮಹತ್ಯೆ ಮಾಡಕೂಡದಿತ್ತು. ಇದು ನಾಟಕಕಾರರ ಹಾಗೂ ನಿರ್ದೇಶಕರ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಳ್ಳಬಹುದಾದರೂ ನಾಟಕದಲ್ಲಿನ ಜೀವವಿರೋಧಿತನ ನೋಡುಗರಲ್ಲಿ ನಕಾರಾತ್ಮಕತೆಯನ್ನು ಹುಟ್ಟಿಸುವಂತಿದ್ದರೆ ಅದನ್ನು ಪ್ರಶ್ನಿಸುವ, ಬದಲಾವಣೆಗಾಗಿ ಒತ್ತಾಯಿಸುವ ಹಕ್ಕು ಪ್ರಜ್ಞಾವಂತ ಪ್ರೇಕ್ಷಕರಿಗೂ ಇರುತ್ತದಲ್ಲವೇ?
ಈ ನಾಟಕ ಪ್ರದರ್ಶನದ ನಂತರ ಮಾತಾಡಿದ ನಿರ್ದೇಶಕಿ ವೀಣಾ ಶರ್ಮಾರವರು ” ನಾಟಕ ಕಟ್ಟುವ ನಾವು ದಿನನಿತ್ಯ ಒಳಗೊಳಗೆ ಸತ್ತು ಬದುಕುತ್ತೇವೆ. ಕೀಮೋಥೆರಪಿಗೆ ಒಳಗಾದ ನಾನು ಇನ್ನೂ ಬದುಕಿದ್ದರೆ ಅದಕ್ಕೆ ರಂಗಭೂಮಿಯೇ ಕಾರಣ” ಎಂದು ಹೇಳಿದರು. ಅಂದರೆ ಎಂತಹಾ ಕಷ್ಟಗಳು ಬಂದರೂ ಬದುಕಲು ಬೇಕಾದ ಪ್ರೇರಣೆಯನ್ನು ರಂಗಭೂಮಿ ಕೊಡುತ್ತದೆ ಎಂದಾಯ್ತು. ಅದೇ ಮಾನದಂಡವನ್ನು ಈ ನಿರ್ದೇಶಕರು ತಮ್ಮ ನಾಟಕದೊಳಗಿನ ನಟನ ಪಾತ್ರಕ್ಕೆ ಯಾಕೆ ಅಳವಡಿಸಲಿಲ್ಲ. ವೀಣಾರವರಂತೆ ಕಲಾವಿದರು ಮಾನಸಿಕವಾಗಿ ಸತ್ತು ಬದುಕಿದರೂ ಎಲ್ಲವನ್ನೂ ಎದುರಿಸಿ ನಿಲ್ಲುವ, ಸಾವನ್ನು ಸೋಲಿಸಿ ಬದುಕನ್ನು ಗೆಲ್ಲುವ ಛಲವನ್ನು ಹೊಂದಿರುತ್ತಾರೆ. ಅದೇ ರೀತಿ ನಿತ್ಯ ಸತ್ತು ಬದುಕುತ್ತಿದ್ದ, ಮಾನಸಿಕವಾಗಿ ವೇದನೆ ಪಡುತ್ತಿದ್ದ ಈ ನಾಟಕದ ನಟನೂ ಸಹ ಸಾವನ್ನು ಅಪ್ಪಿಕೊಳ್ಳದೇ ಬದುಕನ್ನು ಅಪ್ಪಿಕೊಂಡಿದ್ದರೆ ಈ ನಾಟಕದ ಸಂದೇಶವೇ ಸಕಾರಾತ್ಮಕವಾಗಿರುತ್ತಿತ್ತು.
ಅದೆಂತಹುದೇ ಸಮಸ್ಯೆ ಬಂದರೂ ಪರ್ಯಾಯ ಪರಿಹಾರಗಳನ್ನು ಕಲಾವಿದರು ಹುಡುಕಿಕೊಳ್ಳುತ್ತಾರೆ. ಅದಕ್ಕೆ ಉದಾಹರಣೆ ಸ್ವತಃ ವೀಣಾ ಶರ್ಮಾರವರು. ಇದೇ ‘ಈ ಕೆಳಗಿನವರು’ ನಾಟಕದಲ್ಲಿ ಪ್ರಮುಖ ಪಾತ್ರ ಮಾಡಬೇಕಾದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಬೆಳಿಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಸಂಜೆಗೆ ಶೋ ಇರುವುದನ್ನು ನಿಲ್ಲಿಸಬೇಕಾ ಬೇಡ್ವಾ ಎಂದು ಪ್ರಶ್ನೆ ಎದುರಾದಾಗ ‘ಶೋ ಮಸ್ಟ್ ಗೋ ಆನ್’ ಎನ್ನುವ ರಂಗಭೂಮಿಯ ಬೀಜಮಂತ್ರ ಕೆಲಸಕ್ಕೆ ಬರುತ್ತದೆ. ಯಾವುದೇ ಪೂರ್ವ ತಯಾರಿ ಇಲ್ಲದೇ ಇದ್ದರೂ ನಿರ್ದೇಶಕಿ ವೀಣಾರವರೇ ಆ ಪಾತ್ರವನ್ನು ಅಭಿನಯಿಸುತ್ತಾರೆ. ಹೀಗೆ ಯಾವುದೇ ಸಮಸ್ಯೆಗೆ ಪರ್ಯಾಯ ಪರಿಹಾರವನ್ನು ಕಂಡುಕೊಂಡು ಮುನ್ನಡೆಯಬೇಕು ಎಂಬುದನ್ನೇ ರಂಗಭೂಮಿ ಹೇಳಿಕೊಡುತ್ತದೆ.
ಇನ್ನೊಂದು ಉದಾಹರಣೆ ನೋಡೋಣ. ಮಾರ್ಚ್ 28 ರಂದು ಇದೇ “ಈ ಕೆಳಗಿನವರು” ನಾಟಕವನ್ನು ಎಂಇಎಸ್ ಕಾಲೇಜಿನಲ್ಲಿ ಪ್ರದರ್ಶಿಸಬೇಕಾಗಿತ್ತು. ಆ ಕಾಲೇಜಿನ ರಂಗಶಾಲೆಯ ಪ್ರಾಂಶುಪಾಲರಾದ ಅಶ್ವತ್ ನಾರಾಯಣರವರು ಮೊದಲೇ ಸಾಕಷ್ಟು ಪ್ರಚಾರವನ್ನೂ ಕೊಟ್ಟಿದ್ದರು. ನಾಳೆ ಪ್ರದರ್ಶನವಿದ್ದರೆ ಅದರ ಹಿಂದಿನ ರಾತ್ರಿ ವೀಣಾ ಶರ್ಮಾರವರು ‘ಶೋ ಮಾಡಲಾಗುವುದಿಲ್ಲʼ ಎಂದರು. ಯಾಕೆಂದರೆ “ಆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳಿದ್ದು ಮಧ್ಯಾಹ್ನ 2 ಗಂಟೆಯವರೆಗೂ ಸದ್ದು ಮಾಡುವಂತಿಲ್ಲ. ಎರಡು ಗಂಟೆಯ ಮೇಲೆ ಆ ನಾಟಕದ ಅದ್ದೂರಿ ಸೆಟ್ ಗಳನ್ನು ತಂದು ಜೋಡಿಸಿ ಸ್ಟೇಜ್ ರಿಹರ್ಸಲ್ಸ್ ಮಾಡಲು ಸಮಯ ಸಾಕಾಗೋದಿಲ್ಲಾ. ಆದ್ದರಿಂದ ಪ್ರದರ್ಶನ ಕೊಡುವುದನ್ನು ನಿರಾಕರಿಸಲಾಯ್ತು” ಎಂಬುದು ವೀಣಾರವರ ಸಮರ್ಥನೆ. “ಮೊದಲೇ ಒಪ್ಪಿಕೊಂಡ ಮೇಲೆ ಹೇಗಾದರೂ ಬಂದು ನಾಟಕ ಪ್ರದರ್ಶಿಸುವುದು ನಿರ್ದೇಶಕರ ಬದ್ಧತೆ” ಎಂಬುದು ಅಶ್ವತ್ ನಾರಾಯಣರವರ ಆರೋಪ. ಈ ಇಬ್ಬರ ನಡುವೆ ಎಲ್ಲೋ ಏನೋ ಕಮ್ಯುನಿಕೇಶನ್ ಗ್ಯಾಪ್ ಆಗಿದೆ. ಪರೀಕ್ಷೆಗಳ ಬಗ್ಗೆ ಅಶ್ವತ್ ಮೊದಲೇ ತಿಳಿಸಬೇಕಿತ್ತು ಹಾಗೂ ಸೆಟ್ ಹಾಕಿ ಸ್ಟೇಜ್ ರಿಹರ್ಸಲ್ಸ್ ಮಾಡಿಸಲು ನಮಗೆ ಬೆಳಿಗ್ಗೆಯಿಂದಲೇ ವೇದಿಕೆ ಬಿಟ್ಟುಕೊಡಬೇಕೆಂದು ವೀಣಾರವರಾದರೂ ಮುಂಚೆಯೇ ಕೇಳಬೇಕಿತ್ತು. ಆದರೆ ಇವರಿಬ್ಬರ ನಡುವೆಯಾದ ಸಂವಹನದ ಕೊರತೆಯಿಂದಾಗಿ ‘ಈ ಕೆಳಗಿನವರು’ ನಾಟಕ ಪ್ರದರ್ಶನ ನಿಲ್ಲಿಸಲಾಯ್ತು.

ಹಾಗಂತಾ ರಂಗಭೂಮಿಯವರು ನಿರಾಶರಾಗಿ ಸುಮ್ಮನಿರಲು ಸಾಧ್ಯವೇ? ನೋ ಚಾನ್ಸ್. ಕೂಡಲೇ ಮೈಕೋ ಶಿವಶಂಕರವರನ್ನು ಸಂಪರ್ಕಿಸಿದ ಅಶ್ವತ್ ರವರು ಶಿವು ನಿರ್ದೇಶನದ ” ಕಾಕನಕೋಟೆ” ನಾಟಕವನ್ನು ಪ್ರದರ್ಶಿಸಲು ಕೋರಿಕೊಂಡರು. ಈ ಕೆಳಗಿನವರ ಬದಲಾಗಿ ಕಾಕನಕೋಟೆ ಅದೇ ದಿನ ಅದೇ ಸಮಯಕ್ಕೆ ಪ್ರದರ್ಶನಗೊಂಡಿತು. ಇದು ಆಪತ್ಕಾಲದಲ್ಲಿ ಕಂಡುಕೊಳ್ಳುವ ಪರ್ಯಾಯ ಮಾರ್ಗ. ಇತ್ತ ನಿಗದಿತವಾಗಿದ್ದ ಶೋ ಕ್ಯಾನ್ಸಲ್ ಆಯ್ತಲ್ಲಾ ಎಂದು ವೀಣಾರವರೂ ಚಿಂತೆಗೆ ಬೀಳದೇ ಅದೇ ದಿನ ಅವರ ನಾಟಕವನ್ನು ಎನ್ ಎಸ್ ಡಿ ಅಡಿಟೋರಿಯಂನಲ್ಲಿ ಪ್ರದರ್ಶನ ಮಾಡಿಸಿದರು. ಇದೂ ಸಹ ಪರ್ಯಾಯ ವ್ಯವಸ್ಥೆಯೇ. ಅಶ್ವತ್ ಹಾಗೂ ವೀಣಾ ಮೇಡಂ ಈ ಇಬ್ಬರೂ ನೀನಾಸಂ ನಲ್ಲಿ ಸಹಪಾಠಿಗಳು. ಸಂಕಷ್ಟದ ಸಮಯದಲ್ಲಿ ಹೇಗೆ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಬೇಕು ಎಂಬುದನ್ನು ಕಲಿತುಕೊಂಡವರು. ಹೀಗಾಗಿ ಇಬ್ಬರೂ ಇಲ್ಲಿ ಸೋತು ಗೆದ್ದರು. ಏನೇ ಆಗಲಿ “ಶೋ ಮಸ್ಟ್ ಗೋ ಆನ್” ಎನ್ನುವುದಕ್ಕೆ ಬದ್ಧರಾದರು. ಇದು ರಂಗಭೂಮಿಯ ಮ್ಯಾಜಿಕ್. ಅಚಾನಕ್ ಆಗಿ ಉದ್ಭವಿಸುವ ತೊಂದರೆಗಳು ಮನದಲ್ಲಿ ನೋವನ್ನು ತರಬಹುದು. ಸತ್ತು ಬದುಕುವ, ಸೋತು ಗೆಲ್ಲುವ ಕಲೆಯನ್ನು ರಂಗಭೂಮಿ ಕಲಿಸುತ್ತದೆ. ಅದಕ್ಕೆ ಈ ಮೇಲಿನ ಉದಾಹರಣೆಗಳೇ ಸಾಕ್ಷಿಯಾಗಿವೆ.
ಆದರೆ “ಈ ಕೆಳಗಿನವರು” ನಾಟಕದ ನಟನಿಗೆ ಯಾಕೆ ಸಾವು ನೋವನ್ನು ಗೆದ್ದು ಬದುಕುವ ಅವಕಾಶವನ್ನು ನಿರ್ದೇಶಕಿ ವೀಣಾ ಶರ್ಮಾರವರು ಕೊಡಲಿಲ್ಲ? ಎನ್ನುವ ಪ್ರಶ್ನೆಯನ್ನು ಕೇಳಬಹುದಾಗಿದೆ. “ಮುಂದಿನ ಪ್ರದರ್ಶನಗಳಲ್ಲಿ ಯೋಚಿಸಿ ಈ ಕುರಿತು ಸೂಕ್ತ ಬದಲಾವಣೆ ಮಾಡಿಕೊಳ್ಳಲಾಗುವುದು” ಎಂದು ವೀಣಾ ಮೇಡಂ ಹೇಳಿದ್ದಾರೆ. ಆದರೆ ಇನ್ನು ಒಂದೇ ಒಂದು ಶೋ ಮಾತ್ರ ಬಾಕಿ ಉಳಿದಿದೆ. ಈ ವರ್ಷದ ರೆಪರ್ಟರಿ ಅವಧಿ ಮುಗಿದಿದ್ದರಿಂದಾಗಿ ಮತ್ತೆ ಈ ನಾಟಕ ಮರುಪ್ರದರ್ಶನ ಆಗುವ ಸಾಧ್ಯತೆಗಳಿಲ್ಲ. ಹೀಗಾಗಿ ಈ ನಾಟಕದ ನಟನಿಗೆ ಆತ್ಮಹತ್ಯೆಯನ್ನು ಹೊರತು ಪಡಿಸಿ ಸದ್ಯಕ್ಕೆ ಬೇರೆ ಪರ್ಯಾಯಗಳಿಲ್ಲ. ಏನೇ ಆಗಲಿ, ಏನೇ ಹೋಗಲಿ, ಎಂತುಹುದೇ ನೋವುಗಳಿರಲಿ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ರಂಗ ಪ್ರಯೋಗ ವಿಮರ್ಶೆ | ತಳವರ್ಗದವರ ತಲ್ಲಣಗಳನ್ನು ಅನಾವರಣಗೊಳಿಸುವ ‘ಈ ಕೆಳಗಿನವರು’


