ಇಂದು ಮಾರ್ಚ್ 27, ವಿಶ್ವ ರಂಗಭೂಮಿ ದಿನ. ” ರಂಗಭೂಮಿಯು ವಿಭಜಿತ ಜಗತ್ತಿನಲ್ಲಿ ಜನರನ್ನು ಸಂಪರ್ಕಿಸುವ, ಆಕ್ಷೇಪಣೆ ಮಾಡುವ ಮತ್ತು ಬದಲಾವಣೆಯನ್ನು ಊಹಿಸುವ ಶಕ್ತಿಯನ್ನು ಹೊಂದಿದೆ. ಇದು ವಾಣಿಜ್ಯಿಕ ವಿನೋದಕ್ಕೆ ಅಥವಾ ಸಂಪ್ರದಾಯದ ರಕ್ಷಣೆಗೆ ಮಾತ್ರ ಸೀಮಿತವಾಗದೆ, ಚಿಂತನೆಯನ್ನು ಪ್ರಚೋದಿಸುವಂತಿರಬೇಕು” ಎಂಬ ಅಮೇರಿಕದ ನಟ, ರಂಗನಿರ್ದೇಶಕರು ಹಾಗೂ ವೆನಿಜಿಯಾ ಥಿಯೇಟರ್ ಡಿಪಾರ್ಟ್ಮೆಂಟಿನ ಕಲಾ ನಿರ್ದೇಶಕರಾದ ವಿಲ್ಲೆಮ್ ಡೆಫೋ ( Willem Dafoe, USA) ರವರ ಸಂದೇಶದೊಂದಿಗೆ ಎಲ್ಲ ರಂಗ ಪ್ರಿಯರಿಗೆ ಕನ್ನಡ ಪ್ಲಾನೆಟ್ ನ ಶುಭಾಶಯಗಳು.
ಇಂದು ಮಾರ್ಚ್ 27, ವಿಶ್ವ ರಂಗಭೂಮಿ ದಿನ. ಜಗತ್ತಿನಾದ್ಯಂತ ಪ್ರಿಯರು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿಯೊಂದು ನಾಟಕದ ತಯಾರಿ ಹಾಗೂ ಪ್ರದರ್ಶನವು ಪ್ರತಿಯೊಬ್ಬ ಕಲಾವಿದ ಹಾಗೂ ರಂಗತಂಡದವರಿಗೆ ಒಂದು ಸಂಭ್ರಮವೇ. ಆದರೆ ಜಗತ್ತಿನ ಎಲ್ಲಾ ರಂಗಕರ್ಮಿಗಳೂ ಏಕಕಾಲಕ್ಕೆ ಸಂಭ್ರಮಿಸುವ ವರ್ಷದ ಏಕೈಕ ದಿನ ಮಾರ್ಚ್ 27 “ವರ್ಲ್ಡ್ ಥಿಯೇಟರ್ ಡೇ”.
ಯಾವುದೇ ಆಚರಣೆಯನ್ನು ಆಚರಿಸುವ ಮುನ್ನ ಅದರ ಹಿನ್ನೆಲೆಯನ್ನೊಂದಿಷ್ಟು ತಿಳಿದುಕೊಂಡು ಸಂಭ್ರಮಿಸುವುದು ಸೂಕ್ತ. ಇಲ್ಲವಾದರೆ ಅಂತಹ ಆಚರಣೆಗಳು ಅಂಧಾನುಕರಣೆಯಾಗುತ್ತವೆ. ಆದ್ದರಿಂದ ವಿಶ್ವ ರಂಗಭೂಮಿ ದಿನದ ಇತಿಹಾಸವನ್ನು ಅರ್ಥಮಾಡಿಕೊಳ್ಳೋಣ.
ವಿಶ್ವ ರಂಗಭೂಮಿ ದಿನದ ಇತಿಹಾಸ
‘ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್’ (ಐಟಿಐ) ಎನ್ನುವ ಸಂಘಟನೆಯೊಂದಿದೆ. ಕೆಲವು ರಂಗಭೂಮಿ ಹಾಗೂ ನೃತ್ಯ ಕ್ಷೇತ್ರದ ಪರಿಣಿತರು ಸೇರಿ 1948ರಲ್ಲಿ ಐಟಿಐ ಯನ್ನು ಸ್ಥಾಪಿಸಿದರು. ವಿಶ್ವ ಸಂಘಟನೆಯಾದ ಯುನೆಸ್ಕೋ ಈ ಐಟಿಐ ಯನ್ನು ಪ್ರಾಯೋಜಿಸುತ್ತದೆ. ನೂರಕ್ಕೂ ಹೆಚ್ಚು ದೇಶಗಳಲ್ಲಿ ಇದು ತನ್ನ ಅಸ್ತಿತ್ವವನ್ನು ಹೊಂದಿದೆ. ಈ ಸಂಸ್ಥೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ದೇಶ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ನಡೆಸುತ್ತಿದೆ. ರಂಗ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತದೆ. ವಿಶ್ವ ರಂಗ ಪ್ರಶಸ್ತಿಗಳನ್ನು ಆಯ್ದ ರಂಗಕರ್ಮಿಗಳಿಗೆ ಕೊಟ್ಟು ಗೌರವಿಸುತ್ತದೆ. ಅಂತಾರಾಷ್ಟ್ರೀಯ ರಂಗೋತ್ಸವಗಳನ್ನು ಸಂಘಟಿಸುತ್ತದೆ.

ಐಟಿಐ ಮತ್ತು ಯುನೆಸ್ಕೋ ಎರಡೂ ಸೇರಿ 1998ರಲ್ಲಿ ‘ಥಿಯೇಟರ್ ಆಂಡ್ ಕಲ್ಚರ್ ಆಫ್ ಸಿವಿಲೈಸೇಶನ್’ ಎನ್ನುವ ಕಾರ್ಯಕ್ರಮವನ್ನು ಲಾಂಚ್ ಮಾಡಿವೆ. ಈ ಮೂಲಕ ಅಂತಾರಾಷ್ಟೀಯ ರಂಗ ಕಾರ್ಯಾಗಾರಗಳನ್ನು ನಡೆಸುವುದು, ಕಲಾವಿದರಿಗೆ ಆಭಿನಯ ತರಬೇತಿಗಳನ್ನು ಆಯೋಜಿಸುವುದು, ರಂಗಭೂಮಿ ಕುರಿತ ಮಾಹಿತಿ ಹಾಗೂ ಹೊಸ ಐಡಿಯಾಗಳನ್ನು ವಿನಿಮಯ ಮಾಡಿಕೊಳ್ಳುವುದು, ರಂಗಕಲೆಯ ತರಬೇತಿ ಮೆಥಡ್ ನ್ನು ತಿಳಿಸುವುದು ಹೀಗೆ… ಹಲವಾರು ರಂಗ ಸಂಬಂಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಾ ಬಂದಿದೆ.
1961ರಲ್ಲಿ ವಿಯನ್ನಾದಲ್ಲಿ ನಡೆದ ಈ ಸಂಘಟನೆಯ ಒಂಬತ್ತನೆಯ ವಿಶ್ವ ಕಾಂಗ್ರೆಸ್ನಲ್ಲಿ ಮೊಟ್ಟ ಮೊದಲ ಬಾರಿಗೆ ‘ವಿಶ್ವ ರಂಗ ದಿನಾಚರಣೆ’ಯನ್ನು ಕುರಿತು ಆ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್ವಿ ಕಿವಿಯಾ ರವರು ಪ್ರಸ್ತಾಪಿಸಿ ಸಭೆಯ ಅನುಮೋದನೆಯನ್ನು ಪಡೆದರು. ಜಗತ್ತಿನ ಪ್ರದರ್ಶನ ಕಲೆಯಲ್ಲಿ ತೊಡಗಿಕೊಂಡ ಕಲಾವಿದರೆಲ್ಲಾ ಒಂದೇ ಕುಟುಂಬವೆಂಬುದನ್ನು ಪ್ರತಿಪಾದಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಕಲೆಗಳ ಅಭಿವೃದ್ಧಿಯ ಅರಿವನ್ನು ಮೂಡಿಸಲು ವಿಶ್ವರಂಗಭೂಮಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 1962ರ ಮಾರ್ಚ್ 27 ರಂದು ಪ್ಯಾರಿಸ್ ನಲ್ಲಿ ಥಿಯೇಟರ್ ಆಫ್ ನೇಷನ್ಸ್’ ಅಸ್ತಿತ್ವಕ್ಕೆ ಬಂದ ನೆನಪಿಗಾಗಿ ಪ್ರತಿವರ್ಷ ಮಾರ್ಚ್ 27 ರಂದು ‘ವಿಶ್ವ ರಂಗಭೂಮಿ ದಿನ’ವನ್ನು ಆಚರಿಸಬೇಕು ಹಾಗೂ ಪ್ರತಿ ವರ್ಷ ಒಂದು ದೇಶದ ಪ್ರಸಿದ್ಧ ರಂಗಕರ್ಮಿಯೊಬ್ಬರು ರಂಗಭೂಮಿ ಕುರಿತು ಮಹತ್ವದ ಸಂದೇಶವನ್ನು ಕೊಡಬೇಕು” ಎಂದು ವಿಶ್ವ ಕಾಂಗ್ರೆಸ್ ಸಭೆ ನಿರ್ಣಯವನ್ನು ಕೈಗೊಂಡಿತು. 1962ರಿಂದ ಐಟಿಐ ‘ವಿಶ್ವ ರಂಗಭೂಮಿ ದಿನ’ವನ್ನು ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದೆ. ಮೊದಲ ಬಾರಿಗೆ 1962ರ ಮಾರ್ಚ್ 27 ರಂದು ‘ಜಿಯಾನ್ ಕಾಕ್ಟಿಯೋ’ ರವರು ಮೊದಲ ವಿಶ್ವರಂಗಭೂಮಿ ದಿನದ ಸಂದೇಶವನ್ನು ಬರೆದು ಪ್ರಕಟಿಸಿದರು. ಭಾರತದಿಂದ ನಾಟಕಕಾರರಾದ ಗಿರೀಶ್ ಕಾರ್ನಾಡರಿಗೆ ಮಾತ್ರ ಇಲ್ಲಿಯವರೆಗೂ ರಂಗಸಂದೇಶವನ್ನು ಕೊಡುವ ಅವಕಾಶ ದೊರಕಿದೆ. ಪ್ರತಿ ವರ್ಷ “ರಂಗಭೂಮಿ ಮತ್ತು ಶಾಂತಿ ಸಂಸ್ಕೃತಿ” ( Theatre and Culture of Peace) ಎನ್ನುವ ಸಾಮಾನ್ಯ ಥೀಮ್ ಅಡಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಅಂದಿನಿಂದ ಪ್ರತಿವರ್ಷ ಐಟಿಐ ಸೆಂಟ್ರಲ್ ಕಮಿಟಿಯವರು ಒಂದು ದೇಶದ ಪ್ರಮುಖ ರಂಗಕರ್ಮಿಯೊಬ್ಬರನ್ನು ಆಹ್ವಾನಿಸಿ ವಿಶ್ವ ರಂಗ ಸೌಹಾರ್ದತೆ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಗ್ರಹಿಸುತ್ತಾರೆ. ಅಂತಹ ಆಹ್ವಾನಿತರು ಕೊಡುವ ಅಂತಾರಾಷ್ಟ್ರೀಯ ರಂಗ ಸಂದೇಶವನ್ನು ಅಧಿಕೃತವಾಗಿ ಪ್ರಕಟಿಸಿ ಪ್ರಚಾರ ಪಡಿಸಲಾಗುತ್ತದೆ. ಈ ಸಂದೇಶವನ್ನು ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗುತ್ತದೆ. ಇಂತಹ ಸಂದೇಶವನ್ನು ಹಲವಾರು ದೇಶಗಳ ವೃತ್ತಪತ್ರಿಕೆಗಳಲ್ಲಿ ಮುದ್ರಿಸಲಾಗುತ್ತದೆ. ರೇಡಿಯೋ ಹಾಗು ಟಿವಿಗಳಲ್ಲಿ ಬಿತ್ತರಿಸಲಾಗುತ್ತದೆ. ಜಗತ್ತಿನಾದ್ಯಂತ ನಡೆಯುವ ‘ವಿಶ್ವ ರಂಗಭೂಮಿ ದಿನಾಚರಣೆ’ಯ ಸಂದರ್ಭದಲ್ಲಿ ಈ ಸಂದೇಶವನ್ನು ಓದಲಾಗುತ್ತದೆ. ಐಟಿಐ ಸಂಸ್ಥೆಯಿಂದಲೇ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಉಳಿದಂತೆ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಹಲವಾರು ರಂಗಸಂಘಟನೆಗಳು, ರಂಗತಂಡಗಳು ಮಾರ್ಚ್ 27ರಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ‘ವಿಶ್ವ ರಂಗಭೂಮಿ ದಿನ’ವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇದುವರೆಗೂ ವಿಶ್ವದ ಆಯ್ದ ಒಬ್ಬರಿಗೆ ಮಾತ್ರ ಪ್ರತಿ ವರ್ಷ ವಿಶ್ವ ರಂಗಭೂಮಿ ದಿನದ ಸಂದೇಶ ನೀಡುವ ಅವಕಾಶವನ್ನು ಒದಗಿಸಲಾಗುತ್ತಿತ್ತು. ಆದರೆ 2018ರಲ್ಲಿ ಅಂತಾರಾಷ್ಟ್ರೀಯ ರಂಗ ಸಂಸ್ಥೆ (ಐಟಿಐ)ಯು 70ನೇ ವರ್ಷದ ವಿಶ್ವರಂಗಭೂಮಿ ದಿನದ ವಾರ್ಷಿಕೋತ್ಸವದ ಅಂಗವಾಗಿ ಐಟಿಐ ಸಂಸ್ಥೆಯ ಎಕ್ಸಿಕ್ಯೂಟಿವ್ ಕೌನ್ಸಿಲ್ ವಿಶ್ವ ರಂಗಭೂಮಿ ಸಂದೇಶದಲ್ಲಿ ವಿಶೇಷತೆಯೊಂದನ್ನು ಆರಂಭಿಸಲು ನಿರ್ಣಯಿಸಿತು. ಪ್ರಪಂಚದ ಪ್ರಾದೇಶಿಕವಾರು ಆಯ್ದ ಐದು ರಂಗಭೂಮಿಯ ಗಣ್ಯರಿಂದ ಸಂದೇಶವನ್ನು ಬರೆಯಿಸಿ ಅದನ್ನು ಅಧಿಕೃತವಾಗಿ ವಿಶ್ವದಾದ್ಯಂತ ಪ್ರಕಟಿಸಲಾಗುತ್ತಿದೆ. ಯುನೆಸ್ಕೋ ಗುರುತಿಸಿದ ಪ್ರಪಂಚದ ಐದು ಪ್ರದೇಶಗಳಾದ ಆಫ್ರಿಕಾ, ಅಮೇರಿಕಾ, ಅರಬ್ ದೇಶಗಳು, ಏಷಿಯಾ ಫೆಸಿಫಿಕ್ ಹಾಗೂ ಯುರೋಪ್ ಖಂಡಗಳಿಂದ ಆಯ್ದ ರಂಗಕರ್ಮಿಗಳಿಂದ ವಿಶ್ವರಂಗಭೂಮಿ ಸಂದೇಶವನ್ನು ಬರೆಯಿಸಲಾಗುತ್ತದೆ. 2018 ರಲ್ಲಿ ಏಷಿಯಾ ಫೆಸಿಫಿಕ್ ನಿಂದ ಭಾರತದ ರಾಮ್ ಗೋಪಾಲ್ ಬಜಾಜ್ ರವರಿಗೆ ಸಂದೇಶ ಬರೆಯುವ ಅವಕಾಶ ದೊರಕಿತ್ತು.

ವಿಪರ್ಯಾಸ ನೋಡಿ, ಹೆಚ್ಚು ಕಡಿಮೆ ನೂರು ದೇಶಗಳಲ್ಲಿ ತನ್ನ ಕೇಂದ್ರವನ್ನು ಹೊಂದಿರುವ ಐಟಿಐ ಭಾರತದಲ್ಲಿ ಇನ್ನೂ ಅಸ್ತಿತ್ವವನ್ನೇ ಹೊಂದಿಲ್ಲ. ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ದಂತಹ ಚಿಕ್ಕಪುಟ್ಟ ದೇಶಗಳಲ್ಲಿ ಸಹ ಐಟಿಐ ಕೇಂದ್ರಗಳಿವೆ. ಈ ದೇಶಗಳು ಐಟಿಐ ಮತ್ತು ಯುನೆಸ್ಕೋದ ಸಾಂಸ್ಕೃತಿಕ ಲಾಭಗಳನ್ನು ಪಡೆಯುತ್ತಿವೆ. ಆದರೆ ಪ್ರದರ್ಶನ ಕಲೆಗಳಲ್ಲಿ ತುಂಬಾ ಶ್ರೀಮಂತವಾಗಿರುವ ಭಾರತದೇಶ ಯಾಕೆ ಇನ್ನೂ ಐಟಿಐ ಕೇಂದ್ರವನ್ನು ಹೊಂದಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಭಾರತದ ಸರಕಾರಕ್ಕೆ ನಿಶ್ಚಿತವಾದ ಒಂದು ಸಾಂಸ್ಕೃತಿಕ ನೀತಿಯೇ ಇಲ್ಲದಿರುವಾಗ ಅದಕ್ಕೆ ಈ ಎಲ್ಲಾ ಸಾಂಸ್ಕೃತಿಕ ವಿನಿಮಯದ ಪ್ರಾಮುಖ್ಯತೆಯ ಅರಿವಾದರೂ ಎಲ್ಲಾಗುತ್ತದೆ. ಐಟಿಐ ದ ಭಾಗವಾಗದಿದ್ದರೆ ಏನಂತೆ… ಭಾರತ ದೇಶಾದ್ಯಂತ ‘ವಿಶ್ವ ರಂಗಭೂಮಿ ದಿನ’ವನ್ನು ಆಚರಿಸಿ ಸಂಭ್ರಮಿಸುತ್ತಿರುವುದು ಭಾರತೀಯ ರಂಗಕರ್ಮಿಗಳ ರಂಗನಿಷ್ಠೆಯನ್ನು ತೋರುತ್ತದೆ. ಕಲೆ ಎನ್ನುವುದಕ್ಕೆ ಗಡಿ-ಭಾಷೆಯ ಹಂಗಿಲ್ಲ. ಆದ್ದರಿಂದ ಬನ್ನಿ ಎಲ್ಲಾ ರಂಗಪ್ರಿಯರು ‘ವಿಶ್ವ ರಂಗಭೂಮಿ ದಿನ’ವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸೋಣ.
ಪ್ರತಿ ವರ್ಷ ವಿಶ್ವರಂಗಭೂಮಿ ಸಂದೇಶವನ್ನು ನಿರಂತರವಾಗಿ ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸುತ್ತಿದ್ದ ಮೈಸೂರಿನ ರಂಗಕರ್ಮಿ ಶ್ರೀಕಂಠ ಗುಂಡಪ್ಪನವರು ಕಾಲವಶರಾದ ನಂತರ ಮೈಸೂರಿನ ಹಿರಿಯ ರಂಗಕರ್ಮಿ ಪ್ರೊ.ಹೆಚ್.ಎಸ್.ಉಮೇಶರವರು, ಬಿ.ಸುರೇಶರವರು ಹಾಗೂ ಬೇರೆ ಬೇರೆಯವರು ಕಾಲಕಾಲಕ್ಕೆ ವಿಶ್ವರಂಗಭೂಮಿ ಸಂದೇಶವನ್ನು ಕನ್ನಡಕ್ಕೆ ಅನುವಾದ ಮಾಡುತ್ತಲೇ ಬಂದಿದ್ದಾರೆ. ಹಾಗೆ ಬರೆದ ಸಂದೇಶವನ್ನು ಕರ್ನಾಟಕದಾದ್ಯಂತ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುತ್ತಿರುವ ಎಲ್ಲರೂ ಸಭೆ ಸಮಾರಂಭದಲ್ಲಿ ಓದುತ್ತಾರೆ.
2026 ಮಾರ್ಚ್ 27 ರ ವಿಶ್ವರಂಗಭೂಮಿ ದಿನದ ಸಂದೇಶವನ್ನು ಅಮೇರಿಕದ ನಟ, ರಂಗನಿರ್ದೇಶಕರು ಹಾಗೂ ವೆನಿಜಿಯಾ ಥಿಯೇಟರ್ ಡಿಪಾರ್ಟ್ಮೆಂಟಿನ ಕಲಾ ನಿರ್ದೇಶಕರಾದ ವಿಲ್ಲೆಮ್ ಡೆಫೋ ( Willem Dafoe, USA) ರವರು ಕೊಟ್ಟಿದ್ದು ಪ್ರಶಾಂತ ಅನಂತಾಡಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಅವರ ವಿಶ್ವರಂಗಭೂಮಿಯ ಸಂಕ್ಷಿಪ್ತ ಸಾರಾಂಶ ಹೀಗಿದೆ ” ರಂಗಭೂಮಿಯು ವಿಭಜಿತ ಜಗತ್ತಿನಲ್ಲಿ ಜನರನ್ನು ಸಂಪರ್ಕಿಸುವ, ಆಕ್ಷೇಪಣೆ ಮಾಡುವ ಮತ್ತು ಬದಲಾವಣೆಯನ್ನು ಊಹಿಸುವ ಶಕ್ತಿಯನ್ನು ಹೊಂದಿದೆ. ಇದು ವಾಣಿಜ್ಯಿಕ ವಿನೋದಕ್ಕೆ ಅಥವಾ ಸಂಪ್ರದಾಯದ ರಕ್ಷಣೆಗೆ ಮಾತ್ರ ಸೀಮಿತವಾಗದೆ, ಚಿಂತನೆಯನ್ನು ಪ್ರಚೋದಿಸುವಂತಿರಬೇಕು”
ವಿಶ್ವ ರಂಗಭೂಮಿ ದಿನದ ಸಂದೇಶ – 2026

ನಾನು ಮೂಲತಃ ಒಬ್ಬ ನಟ. ಮುಖ್ಯವಾಗಿ ಸಿನೆಮಾ ನಟನಾಗಿ ಈ ಪ್ರಪಂಚಕ್ಕೆ ಪರಿಚಿತನಾಗಿದ್ದರೂ, ನನ್ನ ಬೇರುಗಳು ರಂಗಭೂಮಿಯಲ್ಲಿವೆ. 1977ರಿಂದ 2003ರವರೆಗೆ ನಾನು The Wooster Group ಎಂಬ ರಂಗಭೂಮಿ ತಂಡದ ಸದಸ್ಯನಾಗಿದ್ದು, ನ್ಯೂಯಾರ್ಕ್ ನಗರದಲ್ಲಿನ The Performing Garage ನಲ್ಲಿ ಹಲವು ಕೃತಿಗಳನ್ನು ತಂಡವಾಗಿ ರಚಿಸಿ ಪ್ರದರ್ಶಿಸಿದ್ದೆವು ಮತ್ತು ಈ ತಂಡದ ಜೊತೆ ಜಗತ್ತಿನಾದ್ಯಂತ ಪ್ರವಾಸ ಮಾಡಿದ್ದೆವು. ನಾನು Richard Foreman, Robert Wilson ಮತ್ತು Romeo Castellucci ಅವರೊಂದಿಗೆ ಸಹ ಕೆಲಸ ಮಾಡಿದ್ದೇನೆ. ಪ್ರಸ್ತುತ, ನಾನು Venice Theatre Biennale ಯ ಕಲಾ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜಗತ್ತಿನ ವರ್ತಮಾನದ ಆಗುಹೋಗುಗಳು ಹಾಗೂ ಮತ್ತೆ ರಂಗಭೂಮಿಗೆ ಮರಳುವ ನನ್ನ ಆಸೆ-ಇವೆಲ್ಲವು ನನ್ನಲ್ಲಿ ರಂಗಭೂಮಿಯ ಬಗೆಗಿನ ವಿಶಿಷ್ಟ ಸಕಾರಾತ್ಮಕ ಶಕ್ತಿ ಮತ್ತು ಅದರ ಮಹತ್ವದ ಕುರಿತಾದ ನನ್ನ ನಂಬಿಕೆಯನ್ನು ಗಟ್ಟಿಗೊಳಿಸಿವೆ.
The Wooster Group ನಲ್ಲಿ ನನ್ನ ವಿನಮ್ರ ವಾದ-ಪ್ರಾರಂಭಿಕ ದಿನಗಳಲ್ಲಿ, ನಮ್ಮ ಪ್ರದರ್ಶನಗಳಿಗೆ ಕೆಲವೊಮ್ಮೆ ತುಂಬಾ ಕಡಿಮೆ ಪ್ರೇಕ್ಷಕರು ಮಾತ್ರ ಬರುತ್ತಿದ್ದರು. ಕೆಲವೊಮ್ಮೆ ಕಲಾವಿದರಿಗಿಂತಲೂ ಪ್ರೇಕ್ಷಕರು ಕಡಿಮೆ ಇದ್ದರೆ ಪ್ರದರ್ಶನ ರದ್ದುಪಡಿಸಬಹುದು ಎಂಬ ಅವಕಾಶವಿತ್ತು. ಆದರೆ ನಾವು ಎಂದಿಗೂ ಹಾಗೆ ಮಾಡಲಿಲ್ಲ. ನಮ್ಮ ನಾಟಕ ತಂಡದ ಸದಸ್ಯರಲ್ಲಿ ಹಲವರು ಯಾವುದೇ ರೀತಿಯ ವೃತ್ತಿಪರ ನಾಟಕ ತರಬೇತಿ ಪಡೆದ ರಂಗಭೂಮಿ ಕಲಾವಿದರು ಆಗಿರಲಿಲ್ಲ. ಅವರೆಲ್ಲ ವಿಭಿನ್ನ ಕ್ಷೇತ್ರಗಳಿಗೆ ಸೇರಿದ ರಂಗಭೂಮಿ ಕುರಿತು ಪ್ರೀತಿಯಿದ್ದ ಸಮಾನ ಮನಸ್ಕರಾಗಿದ್ದರು. “ಪ್ರದರ್ಶನ ಮುಂದುವರಿಯಲೇಬೇಕು” ಎಂಬುದು ನಮ್ಮ ಮಂತ್ರವಾಗಿರಲಿಲ್ಲವಾದರೂ ಪ್ರೇಕ್ಷಕರೊಂದಿಗೆ ನಮ್ಮ ಮುಖಾಮುಖಿಯು ಮುಂದುವರಿಯಬೇಕೆನ್ನುವುದು ನಮ್ಮ ಆಶಯವಾಗಿತ್ತು.
ನಾವು ಹಗಲಿನ ವೇಳೆಯಲ್ಲಿ ನಾಟಕಾಭ್ಯಾಸ ಮಾಡಿ, ಸಂಜೆಗೆ ಅದನ್ನೇ ಇನ್ನೂ ಅಭ್ಯಾಸದಲ್ಲಿರುವ ಕೃತಿ ಎಂದು ಪ್ರದರ್ಶಿಸುತ್ತಿದ್ದೆವು. ಕೆಲವೊಮ್ಮೆ ಒಂದು ಪ್ರದರ್ಶನಕ್ಕಾಗಿ ವರ್ಷಗಳ ಕಾಲ ಕೆಲಸ ಮಾಡುತ್ತಿದ್ದೆವು ಮತ್ತು ಜೀವನೋಪಾಯಕ್ಕಾಗಿ ಹಳೆಯ ನಾಟಕಗಳನ್ನು ಪ್ರದರ್ಶಿಸುತ್ತಾ ಪ್ರವಾಸ ಮಾಡುತ್ತಿದ್ದೆವು. ಒಮ್ಮೊಮ್ಮೆ ವರ್ಷಗಳ ಕಾಲ ಒಂದೇ ಕೃತಿಯಲ್ಲಿ ತೊಡಗಿರುವುದು ನಮಗೆ ನೀರಸ ಭಾವನೆ ಮೂಡಿಸುತ್ತಿತ್ತು. ಆದರೆ ಈ ಅಭ್ಯಾಸ ಕೃತಿಯ ಪ್ರದರ್ಶನಗಳು ಸದಾ ಉತ್ಸಾಹ ನೀಡುತ್ತಿದ್ದವು. ಪ್ರೇಕ್ಷಕರ ಸಂಖ್ಯೆ ಕಡಿಮೆಯೆನ್ನುವುದು ಪರಿಗಣಿಸಬೇಕಾದ ವಿಚಾರವಲ್ಲ, ಪ್ರೇಕ್ಷಕರು ಸಾಕ್ಷಿಗಳಾಗಿ ಹಾಜರಾಗುವುದೇ ರಂಗಭೂಮಿಗೆ ನಿಜವಾದ ಅರ್ಥ ಮತ್ತು ಜೀವಂತಿಕೆ ನೀಡುವ ವಿಚಾರ ಎಂಬ ಸತ್ಯ ದರ್ಶನ ನನಗಾದುದು ಇದೇ ಸಂದರ್ಭದಲ್ಲಿ.
“ಗೆಲ್ಲಲು ನೀವು ತೊಡಗಿಸಿಕೊಳ್ಳಬೇಕು “ ಎಂದು ಜೂಜಿನ ಕೇಂದ್ರದ ಫಲಕದಲ್ಲಿ ಬರೆದಿರುವಂತೆ ಒಂದು ಸೃಜನಶೀಲ ಕೃತಿಯ ಸೃಷ್ಟಿಯ ಸಂದರ್ಭದಲ್ಲಿ ಹಂಚಿಕೊಳ್ಳುವ ಸೃಜನಾತ್ಮಕ ಅನುಭವ, ಪ್ರತಿ ಬಾರಿಯು ವಿಭಿನ್ನವಾಗಿ ದೊರಕುವ ಅನುಭವಗಳು ರಂಗಭೂಮಿಯ ನಿಜವಾದ ಶಕ್ತಿ. ಸಾಮಾಜಿಕವಾಗಿ, ರಾಜಕೀಯವಾಗಿ ನಮ್ಮನ್ನು ಮತ್ತು ನಮ್ಮ ಜಗತ್ತನ್ನು ಅರಿತುಕೊಳ್ಳಲು ರಂಗಭೂಮಿಯು ಹಿಂದೆಂದು ಕೂಡಾ ಇಂದಿನಷ್ಟು ಮಹತ್ವಪೂರ್ಣ ಮಾಧ್ಯಮವಾಗಿರಲಿಲ್ಲ.
ಇದು ಹೇಗೆಂದರೆ ಕೊಠಡಿಯಲ್ಲಿ ಇರುವ ಆನೆಯ ಹಾಗೆ. ಅಂದರೆ ಹೊಸ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕದ ಭರವಸೆಯನ್ನು ನೀಡುತ್ತವೆ. ಜೊತೆಯಲ್ಲಿ ಜನರನ್ನು ಒಬ್ಬರಿಗೊಬ್ಬರು ದೂರ ಮಾಡುತ್ತಿರುವಂತೆಯೂ ಕಾಣುತ್ತವೆ

ನಾನು ಪ್ರತಿದಿನ ಕಂಪ್ಯೂಟರ್ ಬಳಸುತ್ತೇನೆ; ಸಾಮಾಜಿಕ ಜಾಲತಾಣಗಳಿಲ್ಲದಾಗಲೂ ನನ್ನ ಬಗ್ಗೆ ಗೂಗಲ್ನಲ್ಲಿ ಹುಡುಕಿದ್ದೇನೆ. ಮಾಹಿತಿಗಾಗಿ ಕೃತಕ ಬುದ್ಧಿಮತ್ತೆಯನ್ನೂ ಬಳಕೆ ಮಾಡಿದ್ದೇನೆ. ಆದರೆ ಇಂತಹ ಅತಿರೇಕಗಳು ಉಂಟುಮಾಡುತ್ತಿರುವ ಅಪಾಯಗಳ ಕುರಿತು ಜಾಣ ಕುರುಡುತನವನ್ನು ಪ್ರದರ್ಶಿಸುವುದು ಸರಿಯಲ್ಲ. ಈ ಆಧುನಿಕ ಸಾಧನಗಳ ಮೂಲಕ ಬದಲಾಗುತ್ತಿರುವ ಮಾನವ ಸಂಬಂಧಗಳ ಅಪಾಯದ ಅರಿವೂ ನಮ್ಮಲ್ಲಿರಬೇಕು.
ತಂತ್ರಜ್ಞಾನವು ಇಂದು ಬಹುವಾಗಿ ನಮ್ಮ ಸೇವೆಗೆ ಒದಗುತ್ತದೆ. ಆದರೆ ಈ ಸಂಪರ್ಕದ ಮತ್ತೊಂದು ತುದಿಯಲ್ಲಿ ಯಾರು ಇದ್ದಾರೆ ಎಂಬ ಅಸ್ಪಷ್ಟತೆಯ ಸತ್ಯ ಮತ್ತು ವಾಸ್ತವದ ಸಂಕಟವನ್ನು ಗಂಭೀರಗೊಳಿಸುತ್ತದೆ. ಆಧುನಿಕತೆಯ ಈ ಅವಕಾಶಗಳು ನಮಗೆ ಪ್ರಶ್ನೆಗಳನ್ನು, ಮಾಹಿತಿಗಳನ್ನು ಕೊಡಬಹುದು. ಆದರೆ ರಂಗಭೂಮಿಯೆಂಬ ಜೀವಂತಿಕೆಯ ಅವಕಾಶವು ಉಂಟುಮಾಡುವ ಸಂವೇದನಾ ಭಾವವನ್ನು ಅದು ಎಂದಿಗೂ ಕಟ್ಟಿಕೊಡಲಾರದು.
ರಂಗಭೂಮಿಯು ನಮ್ಮಲ್ಲಿ ಸಾವಧಾನದ ಗುಣ, ನಿರಂತರ ತೊಡಗಿಸಿಕೊಳ್ಳುವಿಕೆಯ ಗುಣವನ್ನು ಬೆಳೆಸುತ್ತದೆ. ಒಬ್ಬ ನಟನಾಗಿ ಮತ್ತು ರಂಗಸೃಷ್ಟಿಕರ್ತನಾಗಿ ನನ್ನ ರಂಗಭೂಮಿಯ ಶಕ್ತಿಯ ಮೇಲೆ ನನಗೆ ಅತೀವ ನಂಬಿಕೆಯಿದೆ. ಯಾಂತ್ರಿಕತೆ, ಪರಸ್ಪರ ಅಪನಂಬಿಕೆ ಮತ್ತು ಹಿಂಸೆಯ ದಿಕ್ಕಿಗೆ ಜಗತ್ತು ಇಂದು ಸಾಗುತ್ತಿರುವಾಗ, ರಂಗಭೂಮಿಯನ್ನು ಕೇವಲ ವ್ಯಾಪಾರಿಕ ಮನರಂಜನೆಗೆ ಅಥವಾ ಪರಂಪರೆಗಳ ಒಣ ಸಂರಕ್ಷಣೆಗೆ ಸೀಮಿತಗೊಳಿಸದೆ, ಜನರು, ಸಮುದಾಯಗಳು ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಶಕ್ತಿಯನ್ನಾಗಿ ಬೆಳೆಸುವುದು ನಮ್ಮ ಮುಂದಿರುವ ಸವಾಲು. ನಮ್ಮ ಕನಸುಗಳೇನು ಎಂಬುದನ್ನು ಕಲ್ಪಿಸಲು ನಿಜವಾದ ರಂಗಭೂಮಿ ಪ್ರೇರೇಪಿಸುತ್ತದೆ.
ನಾವು ಸಮಾಜ ಜೀವಿಗಳು. ಜಗತ್ತಿನೊಂದಿಗೆ ತೊಡಗಿಸಿಕೊಳ್ಳಲು ಜೀವಶಾಸ್ತ್ರೀಯವಾಗಿ ರೂಪುಗೊಂಡವರು. ನಮ್ಮ ಪ್ರತಿಯೊಂದು ಇಂದ್ರಿಯವೂ ವಿವಿಧ ಅನುಭವಗಳನ್ನು ಪಡೆದುಕೊಳ್ಳಲು ಹೊಂದಿರುವ ಅವಕಾಶ. ಮತ್ತು ಈ ಮೂಲಕ ನಾವು ಈ ಪ್ರಪಂಚದ ಅತಿದೊಡ್ಡ ಜಿಜ್ಞಾಸೆಯಾದ “ ನಾನು ಯಾರು ?” ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವಂಥದ್ದು. ಕಥನ, ಸೌಂದರ್ಯಶಾಸ್ತ್ರ, ಭಾಷೆ, ಚಲನ, ದೃಶ್ಯ ವಿನ್ಯಾಸಗಳ ಸಮಗ್ರ ಕಲಾರೂಪವಾದ ಈ ರಂಗಭೂಮಿ ನಮಗೆ “ಹಿಂದೆ ಏನು ಇತ್ತು, ಈಗ ಏನು ಇದೆ, ಮತ್ತು ನಮ್ಮ ಜಗತ್ತು ಹೇಗಿರಲು ಸಾಧ್ಯ? ಎಂಬುದನ್ನು ತೋರಿಸುವ ಒಂದು ಅನನ್ಯವಾದ ಚೇತೋಹಾರಿ ಅವಕಾಶ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ದೃಶ್ಯ ಮಾಧ್ಯಮಗಳಲ್ಲಿ ಮಹಿಳೆ ಎಂಬ ಮಾರಾಟದ ಸರಕು!


