ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಕೈಗೊಂಡ ಐತಿಹಾಸಿಕ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಒಂದೇ ದಿನ ಹದಿನೇಳು ಪ್ರಕರಣಗಳನ್ನು ದಾಖಲಿಸಿತ್ತು. ಹದಿನಾರು ದಿನ ಜೈಲಿಗೆ ಕಳುಹಿಸಿತು. ಆ ಪ್ರಕರಣಗಳು ಇನ್ನೂ ನ್ಯಾಯಾಲಯಗಳಲ್ಲಿ ನಡೆಯುತ್ತಲೇ ಇವೆ. ಸರ್ಕಾರ ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಪರವಾಗಿಲ್ಲ, ಕೇಸಿಗೆ ಹೆದರಿ ಸುಮ್ಮನೆ ಕೂರುವವರು ನಾವಲ್ಲ. ಕನ್ನಡಕ್ಕಾಗಿ ಇಂಥ ಸಾವಿರ ಪ್ರಕರಣ ಹೂಡಿದರೂ ನಾವು ಚಳವಳಿಯ ಮಾರ್ಗದಿಂದ ವಿಮುಖರಾಗುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ. ಎ ನಾರಾಯಣಗೌಡ ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಚಿವ ಸಂಪುಟ ನಿನ್ನೆ ಹಲವು ಪ್ರಕರಣಗಳನ್ನು ಹಿಂದಕ್ಕೆ ಪಡೆದಿದೆ ಮತ್ತು ಅವುಗಳ ಪೈಕಿ ಒಂದೆರಡು ಪ್ರಕರಣಗಳು ನನಗೆ ಸಂಬಂಧಿಸಿದ್ದು ಆಗಿವೆ ಎಂಬುದರ ಕುರಿತು ಮಾಧ್ಯಮ ವರದಿಗಳನ್ನು ಗಮನಿಸಿದೆ. ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬಾರದು ಎಂಬ ಕುತಂತ್ರವನ್ನು ಯಾರು ಹೆಣೆಯುತ್ತಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಅನ್ನುವುದೂ ಕೂಡ ನಮಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಕನ್ನಡ ಪರ ಹೋರಾಟಗಾರರ ಮೇಲೆ ಹೂಡಲಾಗಿರುವ ಸಾವಿರಾರು ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಕೇಳುತ್ತಲೇ ಬಂದಿದ್ದೇವೆ. ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಆಗಾಗ ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳುತ್ತಾ ಬಂದಿದ್ದಾರೆ. ನಾನೇ ಖುದ್ದಾಗಿ ಮುಖ್ಯಮಂತ್ರಿಗಳು, ಗೃಹಸಚಿವರು, ಕಾನೂನು ಸಚಿವರನ್ನು ಭೇಟಿಯಾಗಿ ಮಾತನಾಡಿದ್ದೆ.
ಈಗ ನಾಮಕಾವಸ್ತೆಗೆ ಎರಡು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ತೀರ್ಮಾನ ಮಾಡಿದ್ದಾರೆ. ಮೂಗಿಗೆ ತುಪ್ಪ ಹಚ್ಚೋದು ಅಂದ್ರೆ ಇದೇನಾ? ಇದನ್ನು ಕೇಳಿದಾಗ ನನಗೆ ಅನಿಸಿದ್ದು ಏನೆಂದರೆ ಇವರು ಆ ಎರಡು ಪ್ರಕರಣಗಳನ್ನಾದರೂ ಯಾಕೆ ಹಿಂದಕ್ಕೆ ಪಡೆದರು ಎಂದು. ನನ್ನ ಮೇಲೆ ಒಟ್ಟು 27 ಪ್ರಕರಣಗಳು ಇವೆ. ಎಲ್ಲವೂ ಚಳವಳಿಯ ಪ್ರಕರಣಗಳು. ಯಾರಿಗೋ ಹೊಡೆದ, ಬಡಿದ ಪ್ರಕರಣಗಳು ಅಲ್ಲ, ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾದ ಪ್ರಕರಣಗಳಂತೂ ಅಲ್ಲವೇ ಅಲ್ಲ. ನನ್ನ ಕರವೇ ಕಾರ್ಯಕರ್ತರ ಮೇಲೆ ರಾಜ್ಯಾದ್ಯಂತ ನೂರಾರು ಪ್ರಕರಣಗಳನ್ನು ಹಾಕಲಾಗಿದೆ. ಅವುಗಳ ಸಂಪೂರ್ಣ ವಿವರಗಳನ್ನು ಸಹ ಸರ್ಕಾರಕ್ಕೆ ನೀಡಿದ್ದೇವೆ. ಆದರೆ ಇದ್ಯಾವುದೂ ಸರ್ಕಾರದ ಕಣ್ಣಿಗೆ ಬಿದ್ದಿಲ್ಲ. ಹಾಗೆ ನೋಡುವುದಾದರೆ ಬಿದ್ದಿಲ್ಲ ಎಂದೇನಲ್ಲ, ಜಾಣ ಕುರುಡು ಅಷ್ಟೇ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರ ನಮಗೆ ಯಾವ ಸಂದೇಶ ನೀಡುತ್ತಿದೆ ಎಂಬುದು ನಮಗೆ ಈಗ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಕನ್ನಡ, ಕನ್ನಡ ಚಳವಳಿ ಕುರಿತು ಇವರಿಗೆ ಇರುವ ಕಾಳಜಿಯೂ ಅರ್ಥವಾಗುತ್ತಿದೆ. ಕನ್ನಡ ಹೋರಾಟಗಾರರು ಬೀದಿಗೆ ಇಳಿಯಬಾರದು, ಕನ್ನಡ ಅಸ್ಮಿತೆಯನ್ನು ರಕ್ಷಿಸಲು ಈ ನಾಡಿನ ಯುವಕ ಯುವತಿಯರು ಮುಂದೆ ಬರಬಾರದು. ಕನ್ನಡ ಚಳವಳಿಯೇ ಸತ್ತು ಹೋಗಬೇಕು. ಇದು ಇವರ ಉದ್ದೇಶ.
ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬಾರದು ಎಂಬ ಕುತಂತ್ರವನ್ನು ಯಾರು ಹೆಣೆಯುತ್ತಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಅನ್ನುವುದೂ ಕೂಡ ನಮಗೆ ಗೊತ್ತಿದೆ. ಸಚಿವ ಸಂಪುಟವನ್ನು ದಾರಿ ತಪ್ಪಿಸುವ ಐಎಎಸ್, ಐಪಿಎಸ್ ಬಾಬುಗಳ ಕುರಿತೂ ನಮಗೆ ಚೆನ್ನಾಗಿ ಅರಿವಿದೆ. ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಉತ್ತರ ಕೊಡಬೇಕೋ ಕೊಟ್ಟೆ ಕೊಡುತ್ತೇವೆ. ಯಾವುದನ್ನೂ ಬಾಕಿ ಇರಿಸಿಕೊಳ್ಳುವುದಿಲ್ಲ. ಆ ಕಾಲಕ್ಕೆ ಕಾಯುತ್ತಿದ್ದೇವೆ ಎಂದರು.
ಕೊನೆಯದಾಗಿ ನಾರಾಯಣಗೌಡರು ಕಾಂಗ್ರೆಸ್ ಪರ, ಇದು ಕಾಂಗ್ರೆಸ್ ರಕ್ಷಣಾ ವೇದಿಕೆ ಎಂದು ಬಾಯಿ ಹರಿದುಕೊಳ್ಳುವವರಿಗೂ ಉತ್ತರ ಸಿಕ್ಕಿದೆ ಅಂದುಕೊಳ್ಳುವೆ. ಅವರು ಇನ್ನು ಮುಂದಾದರೂ ತೆಪ್ಪಗೆ ಇರಲಿ. ಕರವೇ ಕನ್ನಡದ ದಾರಿಯಲ್ಲಿ ಯಾರೇ ಅಡ್ಡ ಬಂದರೂ ಅವರ ವಿರುದ್ಧ ನಿಲ್ಲುತ್ತದೆ. ಅದು ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಅಥವಾ ಇನ್ಯಾವುದೇ ಪಕ್ಷವಾಗಲಿ, ನಮ್ಮ ನಿಲುವು ಬದಲಾಗುವುದಿಲ್ಲ. ನಾವು ಯಾರ ಪರವಾಗಿಯೂ ಇಲ್ಲ, ಯಾರೂ ನಮ್ಮ ಪರವಾಗಿಯೂ ಇಲ್ಲ. ನಾವು ಕನ್ನಡಿಗರ, ಕರ್ನಾಟಕದ ಆಶೋತ್ತರಗಳ ಪರವಾಗಿ ಇದ್ದೇವೆ, ಅಷ್ಟೇ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಕೈಗೊಂಡ ಐತಿಹಾಸಿಕ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಒಂದೇ ದಿನ ಹದಿನೇಳು ಪ್ರಕರಣಗಳನ್ನು ದಾಖಲಿಸಿತು, ಹದಿನಾರು ದಿನ ಜೈಲಿಗೆ ಕಳುಹಿಸಿತು. ಆ ಪ್ರಕರಣಗಳು ಇನ್ನೂ ನ್ಯಾಯಾಲಯಗಳಲ್ಲಿ ನಡೆಯುತ್ತಲೇ ಇವೆ. ಈ ಸರ್ಕಾರ ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಪರವಾಗಿಲ್ಲ, ಕೇಸಿಗೆ ಹೆದರಿ ಸುಮ್ಮನೆ ಕೂರುವವರು ನಾವಲ್ಲ. ಕನ್ನಡಕ್ಕಾಗಿ ಇಂಥ ಸಾವಿರ ಪ್ರಕರಣ ಹೂಡಿದರೂ ನಾವು ಚಳವಳಿಯ ಮಾರ್ಗದಿಂದ ವಿಮುಖರಾಗುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

