ಕೋಟಿಗಳ ವೆಚ್ಚದಲ್ಲಿ ಜಯಂತಿ, ಈವೆಂಟ್, ಕಲ್ಚರಲ್ ಪ್ರಾಜೆಕ್ಟ್ಗಳನ್ನು ಮಾಡುವಲ್ಲಿ ಸರಕಾರಿ ವ್ಯವಸ್ಥೆ ತೋರಿಸುವ ಆಸಕ್ತಿಯನ್ನು ರಂಗ ತಂಡಗಳು ಹಾಗೂ ಕಲಾವಿದರನ್ನು ಬೆಳೆಸುವಲ್ಲಿ ತೋರಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಇನ್ನೂ ಸಮೃದ್ಧಿಯಾಗುತ್ತಿತ್ತು. ದೇಶಕ್ಕೆ ಮಾದರಿಯಾಗುತ್ತಿತ್ತು – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಒಂದು ನಾಟಕದ ನಿರ್ಮಿತಿಗೆ ಎಷ್ಟು ಸಮಯ ಬೇಕು? ಆರು ತಿಂಗಳು, ಒಂದು ವರ್ಷ, ಹೋಗಲಿ ಮೂರು ವರ್ಷ? ‘ವಚನ ಕಲ್ಯಾಣ” ಎನ್ನುವ ಸರಕಾರಿ ಕೃಪಾ ಪೋಷಿತ ನಾಟಕಕ್ಕೆ ಚಾಲನೆ ಕೊಡುವ ಮೊದಲೇ ಬರೊಬ್ಬರಿ ಹತ್ತು ವರ್ಷ ತೆಗೆದುಕೊಂಡಿದೆ ಎಂದರೆ ನಂಬಲೇಬೇಕು. ಯಾಕೆ ಇಷ್ಟೊಂದು ವಿಳಂಬ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಾಜೆಕ್ಟ್ ಗಾಗಿ ಬೇಕಾದ ಹಣವನ್ನು ಎನ್ ಎಸ್ ಡಿ ಅಕೌಂಟಿನಲ್ಲಿಟ್ಟಿದೆ, ನಿರ್ದೇಶಕರು, ನಾಟಕಕಾರರು ಯಾರೆಂದೂ ನಿರ್ಧರಿಸಲಾಗಿದೆ, ವಸ್ತು ವಿಷಯ ಏನೆಂದೂ ನಿರ್ಣಯಿಸಲಾಗಿದೆ. ಅದಕ್ಕೊಂದು ಸಮಿತಿಯನ್ನೂ ಆಯ್ಕೆಮಾಡಲಾಗಿದೆ. ಈಗಾಗಲೇ ಪ್ರದರ್ಶನಗೊಂಡ “ಮಲೆಗಳಲ್ಲಿ ಮದುಮಗಳು ” ಎನ್ನುವ 9 ಗಂಟೆಯ ನಾಟಕದ ಮಾದರಿಯೂ ಮುಂದಿದೆ. ಎಲ್ಲವೂ ಇದ್ದರೂ ಈ ‘ ವಚನ ಕಲ್ಯಾಣ’ ನಾಟಕದ ಪೂರ್ವಭಾವಿ ತಯಾರಿ ಫೈನಲ್ ಹಂತಕ್ಕೆ ಬರಲು ದಶಕವೇ ಬೇಕಾಯ್ತು ಎಂಬುದು ಕನ್ನಡ ರಂಗಭೂಮಿಯಲ್ಲಿ ದಾಖಲಾರ್ಹ ಸಂಗತಿಯಾಗಿದೆ. ಸರಕಾರಿ ಪ್ರಾಯೋಜಿತ ಕೆಲಸ ದೇವರ ಕೆಲಸ, ಎಷ್ಟು ಸಮಯವಾದರೂ ತೆಗೆದುಕೊಳ್ಳಬಹುದು, ಯಾವಾಗಾದರೂ ಮಾಡಬಹುದು, ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಅದು 2015 ರ ಕಾಲಘಟ್ಟ. ಮಾನ್ಯ ಕೆ.ಎ.ದಯಾನಂದರವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದರು. ಮಾನ್ಯ ಉಮಾಶ್ರೀಯವರು ಇಲಾಖೆಯ ಸಚಿವರಾಗಿದ್ದರು. ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಆಗ NSD ಬೆಂಗಳೂರು ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಪ್ರಾಯೋಜಿಸಿದ ಕುವೆಂಪುರವರ “ಮಲೆಗಳಲ್ಲಿ ಮದುಮಗಳು” ಎನ್ನುವ 9 ಗಂಟೆಗಳ ಅಹೋರಾತ್ರಿ ನಾಟಕ ಯಶಸ್ವಿಯಾಗಿತ್ತು. ಅದೇ ರೀತಿ ಉತ್ತರ ಕರ್ನಾಟಕ ಭಾಗದವರ ಜನಮಾನಸದಲ್ಲಿ ಬೆರೆತುಹೋದ ಬಸವಾದಿ ಶರಣರ ಕುರಿತು ನಾಟಕವನ್ನು ಮಾಡಬೇಕೆಂಬುದು ಕೆ.ಎ.ದಯಾನಂದರವರ ಬಯಕೆಯಾಗಿತ್ತು. ಆಗ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಮಾನ್ಯ ಉಮಾಶ್ರೀಯವರ ಮುಂದೆ ಈ ಯೋಜನೆ ಪ್ರಸ್ತಾಪಿಸಿದರು. ಅದಕ್ಕೆ ಒಪ್ಪಿದ ಸಚಿವರು ಮುಖ್ಯಮಂತ್ರಿಯಾಗಿದ್ದ ಸನ್ಮಾನ್ಯ ಸಿದ್ದರಾಮಯ್ಯನವರನ್ನೂ ಒಪ್ಪಿಸಿದ್ದರು. ಅದೇ ಕಾಲಕ್ಕೆ “ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಸರಕಾರದಿಂದ ಘೋಷಣೆಯಾಗಿದ್ದರಿಂದ ಬಸವಣ್ಣನವರ ಕುರಿತ ಮೆಗಾ ನಾಟಕಕ್ಕೆ ಸಿದ್ದರಾಮಯ್ಯನವರು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ “ವಚನ ಕಲ್ಯಾಣ” ಎನ್ನುವ ಶರಣರ ಕುರಿತ ಸುದೀರ್ಘ ನಾಟಕದ ಯೋಜನೆ ಸರಕಾರಿ ಮಟ್ಟದಲ್ಲಿ ಅಪ್ರೂವಲ್ ಪಡೆಯಿತು. ಶರಣ ಸಂಸ್ಕೃತಿಯ ವಿದ್ವಾಂಸರಾಗಿದ್ದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಯ್ತು. ಸಮಿತಿಯ ಸಲಹೆಯ ಮೇರೆಗೆ ‘ಮಲೆಗಳಲಿ ಮದುಮಗಳು’ ರಂಗರೂಪ ಮಾಡಿದ್ದ ಡಾ.ಕೆ.ವೈ.ನಾರಾಯಣಸ್ವಾಮಿಯವರು “ವಚನ ಕಲ್ಯಾಣ” ನಾಟಕವನ್ನು ರಚಿಸಬೇಕೆಂದೂ ಹಾಗೂ ಈ ನಾಟಕವನ್ನು ಸಿ.ಬಸವಲಿಂಗಯ್ಯನವರು ನಿರ್ದೇಶಿಸಬೇಕೆಂದು ನಿರ್ಧರಿಸಲಾಗಿತ್ತು.
ಆದರೆ 2015 ಆಗಸ್ಟ್ 30 ರಂದು ಧರ್ಮಾಂಧರಿಂದ ಕಲಬುರ್ಗಿಯವರ ಹತ್ಯೆಯಾಯಿತು. ಇದರಿಂದಾಗಿ ಈ ಪ್ರಾಜೆಕ್ಟ್ ಮುಂದಕ್ಕೆ ಹೋಯಿತು.

ಮತ್ತೆ ಡಾ. ಕೆ.ಮರುಳಸಿದ್ದಪ್ಪನವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯ್ತು. ಜೊತೆಗೆ ಪ್ರೊ.ಓ.ಎಲ್.ನಾಗಭೂಷಣ್ ಸ್ವಾಮಿ, ಶ್ರೀಮತಿ ಮೀನಾಕ್ಷಿ ಬ್ಯಾಳಿ, ರಂಜಾನ್ ದರ್ಗಾ, ಕಾ.ತ.ಚಿಕ್ಕಣ್ಣ, ಕೆ.ವಿ.ನಾಗರಾಜಮೂರ್ತಿ ಹಾಗೂ NSD ಯ ವೀಣಾ ಶರ್ಮ ರವರನ್ನು ಸಮಿತಿಯ ಸದಸ್ಯರಾಗಿ ಮುಂದುವರೆದರು. ಮೇಲ್ವಿಚಾರಣೆಗೆ ಇಲಾಖೆಯ ಜಂಟಿ ಕಾರ್ಯದರ್ಶಿಯವರಿದ್ದರು. ಆಗ ಸಿ.ಬಸವಲಿಂಗಯ್ಯನವರು NSD ಬೆಂಗಳೂರು ಕೇಂದ್ರದ ನಿರ್ದೇಶಕರಾಗಿದ್ದರಿಂದ NSD ಮೂಲಕವೇ ಈ ನಾಟಕವನ್ನೂ ನಿರ್ಮಿಸಬೇಕೆಂದು ನಿರ್ಧರಿಸಿದ ಸಂಸ್ಕೃತಿ ಇಲಾಖೆಯು 75 ಲಕ್ಷ ರೂಪಾಯಿಗಳನ್ನು NSD ಬ್ಯಾಂಕ್ ಅಕೌಂಟಿಗೆ ವರ್ಗಾಯಿಸಿತು.
ಆದರೂ.. ಈ ‘ವಚನ ಕಲ್ಯಾಣ’ ಪ್ರಾಜೆಕ್ಟ್ ವಿಳಂಬವಾಗುತ್ತಲೇ ಹೋಯ್ತು. ಕೆ.ಎ.ದಯಾನಂದರವರು ಟ್ರಾನ್ಸ್ಫರ್ ಆದರು. ಸಿ.ಬಸವಲಿಂಗಯ್ಯನವರು ಎನ್ ಎಸ್ ಡಿ ನಿರ್ದೇಶಕತ್ವದಿಂದ ಬಿಡುಗಡೆ ಹೊಂದಿದರು. ಕಾಂಗ್ರೆಸ್ ಸರಕಾರ ಹೋಗಿ ಸಮ್ಮಿಶ್ರ ಸರಕಾರ ಬಂದಿತ್ತು. ಈ ಸರಕಾರದಲ್ಲಿ ಇಡೀ ಪ್ರಾಜೆಕ್ಟ್ ಸ್ಥಗಿತವಾಗಿತ್ತು. ಅಷ್ಟರಲ್ಲೇ ಮತ್ತೆ ಎರಡು ವರ್ಷ ಕಳೆದು ಹೋಗಿತ್ತು.
ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ 2019 ರಲ್ಲಿ ಈ ವಚನ ಕಲ್ಯಾಣ ಯೋಜನೆಗೆ ಮರುಜೀವ ಬಂದಿತು. ಆಗ ಸಿ.ಟಿ ರವಿಯವರು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಅವರು ಮರುಳಸಿದ್ದಪ್ಪನವರನ್ನು ತೆಗೆದು ಹಾಕಿ ಗೋ.ರು. ಚನ್ನಬಸಪ್ಪನವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದರು. ಅಷ್ಟರಲ್ಲಾಗಲೇ ನಾಟಕದ ಅಂದಾಜು ಬಜೆಟ್ ಒಂದೂವರೆ ಕೋಟಿಗೆ ಏರಿತ್ತು. ಸಮಿತಿಯ ಶಿಫಾರಸ್ಸಿನ ಮೇಲೆ ಹೇಗೋ ಅಳೆದು ಸುರಿದು ಸರಕಾರ ಇನ್ನೂ 25 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ NSD ಅಕೌಂಟಿಗೆ ಪಾವತಿಸಿತು. ಆದರೆ ಅಷ್ಟರಲ್ಲೇ ಕರೋನಾ ಮಹಾಮಾರಿ ಅಪ್ಪಳಿಸಿತ್ತು, ಇಡೀ ಯೋಜನೆ ಮತ್ತೆ ಸ್ತಬ್ಧವಾಯಿತು.

ಮತ್ತೆ ಅದಕ್ಕೆ ಮರುಜೀವ ಬಂದಿದ್ದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಂದಾಗ. ಈ ಸರಕಾರ ಗೋರುಚ ರವರನ್ನು ತೆಗೆದು ಹಾಕಿ ಮತ್ತೆ ಡಾ.ಕೆ.ಮರುಳಸಿದ್ದಪ್ಪನವರನ್ನೇ ಸಮಿತಿಗೆ ಅಧ್ಯಕ್ಷರನ್ನಾಗಿಸಿತು. ಅವರ ಅಧ್ಯಕ್ಷತೆಯಲ್ಲಿ 2025 ಡಿಸೆಂಬರಿನಿಂದ ಮೂರ್ನಾಲ್ಕು ಸಭೆಗಳು ನಡೆದವು. ಕೆವೈಎನ್ ರವರು ತಮ್ಮ ತಂಡದೊಂದಿಗೆ ರಾಜ್ಯ ಸುತ್ತಿ, ಸಂಶೋಧನೆ ಮಾಡಿ ಎರಡು ವರ್ಷಗಳ ಕಾಲ ಶ್ರಮವಹಿಸಿ ಬರೆದ 250 ಪುಟಗಳ “ವಚನ ಕಲ್ಯಾಣ” ನಾಟಕವನ್ನು ಪರಿಶೀಲನೆಗೆ ಅಳವಡಿಸಿ ತಿದ್ದುಪಡಿ ಮಾಡಲು ಸಮಿತಿಯಿಂದ ಸಲಹೆ ನೀಡಲಾಯ್ತು. ಕೊನೆಗೂ 2026ರ ಫೆಬ್ರವರಿ ತಿಂಗಳಲ್ಲಿ ಅಂತಿಮ ರಂಗಪಠ್ಯ ಸಿದ್ಧವಾಯಿತು. ಅಷ್ಟರಲ್ಲಿ NSD ಯವರು ಈ ನಾಟಕವನ್ನು ನಿರ್ಮಿಸಲು ಸಾಧ್ಯವಿಲ್ಲವೆಂದು ನಿರಾಕರಿಸಿದರು. ಕಲಾವಿದರ ಆಯ್ಕೆಯಿಂದ ಹಿಡಿದು ಪ್ರದರ್ಶನದವರೆಗೆ ಸಂಸ್ಕೃತಿ ಇಲಾಖೆಯ ಉಸ್ತುವಾರಿ ಇರುವಾಗ ಇದರಲ್ಲಿ NSD ಮಾಡುವುದೇನಿದೆ ಎಂದು ಪ್ರಶ್ನಿಸಿ ಯೋಜನೆಯಿಂದ ಹಿಂದೆ ಸರಿದು ತಮ್ಮ ಅಕೌಂಟಿನಲ್ಲಿದ್ದ ಒಂದೂವರೆ ಕೋಟಿ ಹಣವನ್ನು ಇಲಾಖೆಗೆ ವಾಪಸ್ ಕಳುಹಿಸಿ ಕೈತೊಳೆದುಕೊಂಡರು.
ಬ್ಯಾಂಕಿನಲ್ಲಿಟ್ಟಿದ್ದ ಠೇವಣಿ ಹಣಕ್ಕೆ ಬಡ್ಡಿ ಬೆಳೆಯುತ್ತಾ ಹೋಗಿ ಒಂದು ಕೋಟಿ ಇದ್ದದ್ದು ಒಂದೂವರೆ ಕೋಟಿಯಾಗಿತ್ತು. ಆದರೆ ಯೋಜನೆಯ ಬಜೆಟ್ 2.4 ಕೋಟಿಗೆ ಹೆಚ್ಚಳವಾಗಿತ್ತು. ‘ಹೆಚ್ಚುವರಿಯಾದ 90 ಲಕ್ಷ ಹಣವನ್ನು ಇಲಾಖೆ ಮಾರ್ಚ್ ಒಳಗೆ ಕೊಡಮಾಡುತ್ತದೆ ಯೋಜನೆ ಶುರುಮಾಡಿ’ ಎಂದು ಸಂಸ್ಕೃತಿ ಇಲಾಖೆ ಮೌಖಿಕವಾಗಿ ಒಪ್ಪಿಗೆ ಕೊಟ್ಟಿತು. ಆದರೆ ಅದಕ್ಕೆ ಇನ್ನೂ ಹಣಕಾಸು ಇಲಾಖೆಯ ಅನುಮತಿ ಪಡೆಯಬೇಕಾಗಿದೆ. ಇಲ್ಲಿಯವರೆಗೂ ಒಂದು ರೂಪಾಯಿ ಹಣವೂ ಬಿಡುಗಡೆ ಆಗಿಲ್ಲವಾದರೂ ಇಲಾಖೆಯ ಸಚಿವರ ಮೌಖಿಕ ಭರವಸೆಯ ಮೇರೆಗೆ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಸಿ.ಬಸವಲಿಂಗಯ್ಯನವರು ಆರಂಭಿಸಿದರು.
ಅಂತೂ ಇಂತೂ ದಶಕದ ಕಾಲ ಎದುರಾದ ಎಲ್ಲ ಅಡೆ ತಡೆಗಳನ್ನು ಮೀರಿ “ವಚನ ಕಲ್ಯಾಣ” ನಾಟಕಕ್ಕೆ ಮುಹೂರ್ತ ಕೂಡಿಬಂತು. ಮಾರ್ಚ್ 9 ರಂದು ಕಲಾವಿದರ ಆಯ್ಕೆಗೆ ಸಂಸ್ಕೃತಿ ಇಲಾಖೆ ಅರ್ಜಿ ಆಹ್ವಾನಿಸಿತು. ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಮೂರು ತಿಂಗಳುಗಳ ಕಾಲ ಪೂರ್ಣಾವಧಿಯಾಗಿ 70 ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು 9 ಗಂಟೆಯ ಅವಧಿಯ ” ವಚನ ಕಲ್ಯಾಣ” ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಸಿ.ಬಸವಲಿಂಗಯ್ಯನವರಾಗಿದ್ದು, ಡಾ.ಕೆ.ವೈ.ನಾರಾಯಣಸ್ವಾಮಿಯವರು ನಾಟಕ ರಚನೆ ಮಾಡಿದ್ದಾರೆ. ಶಶಿಧರ ಅಡಪರವರು ರಂಗವಿನ್ಯಾಸ ಹಾಗೂ ರಂಗಪರಿಕರಗಳನ್ನು ವಿನ್ಯಾಸಗೊಳಿಸುತ್ತಿದ್ದು, ಪ್ರಮೋದ್ ಶಿಗ್ಗಾಂವರವರು ವಸ್ರ್ತ ವಿನ್ಯಾಸ ಮಾಡುವವರಿದ್ದಾರೆ. ಸಂಗೀತ ಹಂಸಲೇಖರವರದ್ದು. ಇವರೆಲ್ಲರೂ ‘ಮಲೆಗಳಲ್ಲಿ ಮದುಮಗಳು’ ನಾಟಕದ ಟೀಮಿನಲ್ಲಿದ್ದವರೇ ಆಗಿದ್ದಾರೆ.
ನಿರ್ದೇಶಕರಿಗೆ 6 ಲಕ್ಷ, ಒಟ್ಟು 40 ವಚನಗಳಿಗೆ ಸಂಗೀತ ಸಂಯೋಜನೆ ಮಾಡಿದ ಹಂಸಲೇಖರವರಿಗೆ 15 ಲಕ್ಷ, ಎರಡು ವರ್ಷಗಳ ಶ್ರಮವಹಿಸಿ ನಾಟಕ ಕಟ್ಟಿದ ಕೆವೈಎನ್ ರವರಿಗೆ ಎರಡು ಲಕ್ಷ, ಹಾಗೂ ಅವರ ತಂಡದಲ್ಲಿದ್ದ 8 ಜನರಿಗೆ ತಲಾ 25 ಸಾವಿರ ರೂಪಾಯಿಗಳ ಸಂಭಾವನೆಯನ್ನು ನಿಗದಿಪಡಿಸಲಾಗಿದೆ. ಇನ್ನು 30 ಮಹಿಳೆಯರೂ ಒಳಗೊಂಡಂತೆ ಒಟ್ಟು 70 ಜನ ಕಲಾವಿದರಿಗೆ ತಿಂಗಳಿಗೆ ತಲಾ 30 ರಿಂದ 40 ಸಾವಿರ ಮತ್ತು ಅಷ್ಟೇ ಹಣವನ್ನು 25 ಜನ ನೇಪಥ್ಯದವರೂ ಸೇರಿದಂತೆ ಒಟ್ಟಾರೆ 70 ಲಕ್ಷದಷ್ಟು ಹಣ ವೇತನಕ್ಕೆ ಖರ್ಚಾಗುವುದಂತೆ. ಇನ್ನು ಕಲಾವಿದರ ಊಟ ವಸತಿಗಾಗಿ 30 ಲಕ್ಷ ಬೇಕಂತೆ.
ಮೂರು ತಿಂಗಳ ಕಾಲ ಕಲಾಗ್ರಾಮದಲ್ಲಿ ತರಬೇತಿ ಕೊಟ್ಟು ಜೂನ್ ತಿಂಗಳಲ್ಲಿ ಅಲ್ಲಿಯೇ ಒಂದು ಟೆಕ್ನಿಕಲ್ ಶೋ ಮಾಡುವುದೆಂದು ಪ್ಲಾನ್ ಮಾಡಲಾಗಿದೆ. ಒಟ್ಟು ನಾಲ್ಕು ಹಂತದ ಮೂರು ಬಯಲು ವೇದಿಕೆಗಳಲ್ಲಿ ಅಹೋರಾತ್ರಿ ನಾಟಕ ಮಾಡಲಾಗುತ್ತಂತೆ. ಜೂನ್ ತಿಂಗಳಲ್ಲಿ ಬಸವಕಲ್ಯಾಣದಲ್ಲಿ 15 ದಿನಗಳಲ್ಲಿ ‘ ವಚನ ಕಲ್ಯಾಣ’ದ ಒಟ್ಟು 10 ಉಚಿತ ಪ್ರದರ್ಶನಗಳನ್ನು ಖಚಿತವಾಗಿ ಮಾಡುವುದೆಂದು ನಿರ್ಧರಿಸಲಾಗಿದೆಯಂತೆ. ತದನಂತರ ಬೆಂಗಳೂರಿನ ಕಲಾಗ್ರಾಮದಲ್ಲಿ ಟಿಕೇಟ್ ಇಟ್ಟು ಕೆಲವು ಪ್ರದರ್ಶನಗಳನ್ನು ಮಾಡುವ ಆಲೋಚನೆ ಇದೆಯಂತೆ. ಒಟ್ಟಾರೆಯಾಗಿ ಹತ್ತು ವರ್ಷಗಳ ಸಮಯ ಪಡೆದ ಮೆಗಾ ಯೋಜನೆಯೊಂದು ಈಗಲಾದರೂ ಕಾರ್ಯರೂಪಕ್ಕೆ ಬರುತ್ತಿದೆಯಲ್ಲಾ ಎನ್ನುವುದೇ ಸಮಾಧಾನಕರ.
‘ವಚನ ಕಲ್ಯಾಣ’ ದ ಸಕಾರಾತ್ಮಕ ಅಂಶಗಳು:
* ವಚನ ಚಳುವಳಿಯ ಆಶಯಗಳನ್ನು ಹಾಗೂ ಬಸವಾದಿ ಶರಣರ ಸಾಧನೆ ಸಾರ್ಥಕತೆಗಳನ್ನು ನಾಟಕದ ಮೂಲಕ ಪ್ರಸ್ತುತಪಡಿಸುತ್ತಿರುವುದು ಸ್ತುತ್ಯರ್ಹ ಪ್ರಯತ್ನವಾಗಿದೆ.
* ಬಸವ ಕಲ್ಯಾಣದ ಕಾಲಘಟ್ಟವನ್ನು ನಾಲ್ಕು ವೇದಿಕೆಗಳಲ್ಲಿ ಮರುಸೃಷ್ಟಿಸುತ್ತಿರುವುದು ಅನನ್ಯ ಪರಿಕಲ್ಪನೆಯಾಗಿದೆ.
* ಸುಮಾರು ಎಪ್ಪತ್ತು ಕಲಾವಿದರು ಹಾಗೂ ಮೂವತ್ತಕ್ಕೂ ಹೆಚ್ಚು ನೇಪಥ್ಯ ತಜ್ಞರಿಗೆ ಮೂರು ತಿಂಗಳುಗಳ ಕಾಲ ಊಟ ವಸತಿ ಸಮೇತ ಕೈತುಂಬಾ ಸಂಬಳ ಕೊಡುತ್ತಿರುವುದು ಅಭಿನಂದನಾರ್ಹವಾಗಿದೆ.
* ಎರಡನೇ ಬಾರಿಗೆ 9 ಗಂಟೆಗಳ ಸುದೀರ್ಘ ಅವಧಿಯ ನಾಟಕವನ್ನು ನಿರ್ಮಿಸಿ ಪ್ರದರ್ಶಿಸುವ ಗಮನಾರ್ಹ ಸಾಧನೆಗೆ “ವಚನ ಕಲ್ಯಾಣ” ನಾಟಕ ಸಾಕ್ಷಿಯಾಗುವಂತಿದ್ದು ಕನ್ನಡ ರಂಗಭೂಮಿ ಈ ರೀತಿಯ ಪ್ರಯೋಗಶೀಲತೆಯಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾಗಿದೆ.
* ಈ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಾಗ ಇನ್ನೂರು ಮುನ್ನೂರು ರೂಪಾಯಿಗಳ ಟಿಕೇಟ್ ಇಡುವುದರಿಂದ ಒಂದಿಷ್ಟು ಆದಾಯವೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಸ್ಸಾಗುತ್ತದೆ.

* ದೊಡ್ಡ ದೊಡ್ಡ ಸಾಂಸ್ಕೃತಿಕ ಯೋಜನೆಗಳು ಕೇವಲ ಬೆಂಗಳೂರು ಮೈಸೂರಿಗೆ ಮಾತ್ರ ಸೀಮಿತವಾಗಿದೆ ಎನ್ನುವ ಆರೋಪವನ್ನು ಹೊಡೆದು ಹಾಕಲು ಉತ್ತರ ಕರ್ನಾಟಕದ ಬಸವ ಕಲ್ಯಾಣದಲ್ಲಿ ಈ ಮೆಗಾ ನಾಟಕದ ಯೋಜನೆಯನ್ನು ಪ್ರಸ್ತುತ ಪಡಿಸುತ್ತಿರುವುದು ಪ್ರಾದೇಶಿಕ ಸಾಂಸ್ಕೃತಿಕ ಸಮಾನತೆಯನ್ನು ಸರಿದೂಗಿಸುವಂತಹುದಾಗಿದೆ.
* ಸಿದ್ದರಾಮಯ್ಯನವರ ಸರಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆ ಮಾಡಿರುವುದರಿಂದ ಬಸವಾದಿ ಶರಣರ ಆಶಯಗಳ ಕುರಿತು ಮಹತ್ತರ ನಾಟಕವನ್ನು ನಿರ್ಮಿಸಿ ಪ್ರದರ್ಶಿಸುತ್ತಿರುವುದು ಶ್ಲಾಘನೀಯವಾಗಿದೆ.
“ವಚನ ಕಲ್ಯಾಣ” ಪ್ರದರ್ಶನದ ನಕಾರಾತ್ಮಕ ಅಂಶಗಳು
* ಈ ಅಹೋರಾತ್ರಿ ನಾಟಕದ ಹತ್ತು ಪ್ರದರ್ಶನಗಳಿಗೆ ಖರ್ಚು ಮಾಡಲಾಗುತ್ತಿರುವ ಎರಡು ಕೋಟಿ ನಲವತ್ತು ಲಕ್ಷ ರೂಪಾಯಿಗಳು ಅಂದರೆ ಪ್ರತಿ ಪ್ರದರ್ಶನಕ್ಕೂ 24 ಲಕ್ಷ ರೂಪಾಯಿಗಳು ಅತೀ ಹೆಚ್ಚಾಗಿದ್ದು ಜನರ ತೆರಿಗೆ ಹಣವನ್ನು ಈ ರೀತಿ ದುಂದು ವೆಚ್ಚ ಮಾಡುವುದು ಬೇಕಿರಲಿಲ್ಲ.
* ನಾಲ್ಕೈದು ವೇದಿಕೆಗಳಲ್ಲಿ ಪ್ರದರ್ಶಿಸಲಾಗುವ ಈ ಬೃಹತ್ ನಾಟಕವನ್ನು ಎಲ್ಲೆಂದರಲ್ಲಿ ಪ್ರಯೋಗಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರು, ಮೈಸೂರು ಹಾಗೂ ಬಸವಕಲ್ಯಾಣ ಹೀಗೆ ನಾಲ್ಕೈದು ಸ್ಥಳಗಳಲ್ಲಿ ಮಾತ್ರ ಪ್ರದರ್ಶನ ಕೊಡಬಹುದಾಗಿದ್ದರಿಂದ ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಸುಲಭಕ್ಕೆ ಪ್ರದರ್ಶಿಸಲು ಆಗುವುದಿಲ್ಲ, ಇದರಿಂದಾಗಿ ಹೆಚ್ಚು ಜನರಿಗೆ ಈ ನಾಟಕವನ್ನು ತಲುಪಿಸುವುದು ಅಸಾಧ್ಯ.
* ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ಕೊಡಬೇಕೆಂದರೂ ನೂರು ಜನರ ತಂಡದ ಖರ್ಚು, ಸಾಗಾಣಿಕೆಯ ವೆಚ್ಚ ಭರಿಸುವುದು ಸುಲಭವೂ ಅಲ್ಲ, ಸರಕಾರ ಹೆಚ್ಚುವರಿ ಹಣ ಖರ್ಚು ಮಾಡುವುದೂ ಇಲ್ಲ, ಟಿಕೇಟ್ ಇಟ್ಟರೂ ಬರುವ ಆದಾಯದಲ್ಲಿ ಈ ಮಹಾ ನಾಟಕ ಪ್ರದರ್ಶನ ಮಾಡುವುದು ಸರಳವಾಗಿಲ್ಲ.
* 2.4 ಕೋಟಿಗಳನ್ನು ಖರ್ಚು ಮಾಡುವುದೇ ಆದರೆ ಅದೇ ಬಜೆಟ್ಟಿನಲ್ಲಿ ಒಂದು ಚಲನಚಿತ್ರವನ್ನೇ ನಿರ್ಮಿಸಿ ಕೊಟ್ಯಾಂತರ ಜನರಿಗೆ ಶರಣ ಸಂಸ್ಕೃತಿಯನ್ನು ತಲುಪಿಸಬಹುದಾಗಿತ್ತು.
* ಇಷ್ಟೇ ಹಣವನ್ನು ಜಿಲ್ಲೆಗೊಂದು ಸಕ್ರಿಯ ತಂಡಗಳಿಗೆ ಹಂಚಿಕೆ ಮಾಡಿದ್ದರೆ ಮೂವತ್ತು ಜಿಲ್ಲೆಗಳಲ್ಲಿ ಮೂವತ್ತು ತಂಡಗಳು ಶರಣರ ಕುರಿತ ನಾಟಕಗಳನ್ನು ನಿರ್ಮಿಸಿ ನಾಡಿನಾದ್ಯಂತ ಪ್ರದರ್ಶನ ಕೊಡಬಹುದಾಗಿತ್ತು. ಹೊರರಾಜ್ಯಗಳಲ್ಲೂ ನಾಟಕ ಪ್ರದರ್ಶನಗೊಳಿಸಿ ಬಸವ ಸಂಸ್ಕೃತಿಯನ್ನು ಪಸರಿಸಬಹುದಾಗಿತ್ತು. ಒಂದು ತಂಡಕ್ಕೆ ಐದು ಲಕ್ಷ ಅನುದಾನ ಕೊಟ್ಟಿದ್ದರೂ ಮೂವತ್ತು ತಂಡಕ್ಕೆ ಒಂದೂವರೆ ಕೋಟಿ ಹಣ ಸಾಕಾಗಿತ್ತು.

* ಹೋಗಲಿ ಕರ್ನಾಟಕದಲ್ಲಿ ಸರಕಾರಿ ಪ್ರಾಯೋಜಿತ ಆರು “ರಂಗಾಯಣ” ಗಳಿದ್ದು ಈ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಕೊಟ್ಟು ಶರಣರ ಕುರಿತು ಹೊಸ ನಾಟಕಗಳನ್ನು ನಿರ್ಮಿಸಿ ಕನಿಷ್ಟ ನೂರು ಪ್ರದರ್ಶನಗಳನ್ನು ಮಾಡಲೇಬೇಕೆಂದು ನಿಬಂಧನೆ ವಿಧಿಸಿದ್ದರೆ ವರ್ಷ ಪೂರಾ ನಾಟಕಗಳನ್ನು ಆಡಿಸಬಹುದಾಗಿತ್ತು. ಅದೆಷ್ಟೋ ಕಲಾವಿದರು ಹಾಗೂ ನೇಪಥ್ಯ ತಜ್ಞರಿಗೆ ವರ್ಷಗಳ ಕಾಲ ಕೆಲಸ ಕೊಡಬಹುದಾಗಿತ್ತು.
* ಕರ್ನಾಟಕದಲ್ಲಿ ಸಾಣೇಹಳ್ಳಿ, ಕುಂದಾಪುರ, ಹೆಗ್ಗೋಡು, ಬೆಂಗಳೂರು, ಮೈಸೂರು ಮುಂತಾದ ಪ್ರದೇಶಗಳಲ್ಲಿ ದಶಕಗಳ ಕಾಲ ಸಕ್ರಿಯವಾಗಿರುವ ರಂಗ ಶಿಕ್ಷಣ ಶಾಲೆಗಳಿವೆ. ಅವುಗಳಿಗಾದರೂ ಅವಕಾಶ ಮಾಡಿಕೊಡಬಹುದಾಗಿತ್ತು.
ಹೋಗಲಿ ಹಣಕಾಸಿನ ಲೆಕ್ಕಾಚಾರವನ್ನು ಬದಿಗಿಟ್ಟು ನೋಡಿದರೆ ಸಾಧನೆಗಾಗಿಯೋ, ದಾಖಲೆಗಾಗಿಯೋ “ವಚನ ಕಲ್ಯಾಣ” ನಾಟಕವನ್ನು ಹತ್ತು ವರ್ಷಗಳ ಕಾಯುವಿಕೆಯ ನಂತರ ನಿರ್ಮಿಸುತ್ತಿರುವುದು ಸಂತಸದ ಸಂಗತಿ. ಬಸವಾದಿ ಶರಣರ ವಚನಗಳ ಸಾರವನ್ನು ನಾಟಕದ ಮೂಲಕ ತೋರಿಸುತ್ತಿರುವುದು ಸಂಭ್ರಮದ ಸುದ್ದಿ. ಇನ್ನು ಮೇಲಾದರೂ ಯಾವುದೇ ವಿಘ್ನಗಳು ಬರದೇ ಇಡೀ ನಾಟಕ ಸುಸೂತ್ರವಾಗಿ ನಿರ್ಮಾಣಗೊಳ್ಳಲಿ, ಹೆಚ್ಚು ಜನರನ್ನು ತಲುಪಲಿ ಎಂದು ಆಶಿಸೋಣ.
ಹೌದು.. ಕನ್ನಡ ಕಲೆ ಸಂಸ್ಕೃತಿಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಸರಕಾರಕ್ಕೆ ಬಸವಾದಿ ಶರಣರ ಬಗ್ಗೆ ಕಳಕಳಿ ಇದ್ದಿದ್ದರೆ ಇದೆಲ್ಲವನ್ನೂ ಮಾಡಬಹುದಾದ ಸಾಧ್ಯತೆ ಇತ್ತೆನ್ನುವುದನ್ನೂ ಅಲ್ಲಗಳೆಯಲಾಗದು. ಕೋಟಿಗಳ ವೆಚ್ಚದಲ್ಲಿ ಜಯಂತಿ, ಈವೆಂಟ್, ಕಲ್ಚರಲ್ ಪ್ರಾಜೆಕ್ಟ್ಗಳನ್ನು ಮಾಡುವಲ್ಲಿ ಸರಕಾರಿ ವ್ಯವಸ್ಥೆ ತೋರಿಸುವ ಆಸಕ್ತಿಯನ್ನು ರಂಗ ತಂಡಗಳು ಹಾಗೂ ಕಲಾವಿದರನ್ನು ಬೆಳೆಸುವಲ್ಲಿ ತೋರಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಇನ್ನೂ ಸಮೃದ್ಧಿಯಾಗುತ್ತಿತ್ತು. ದೇಶಕ್ಕೆ ಮಾದರಿಯಾಗುತ್ತಿತ್ತು.
ಶಶಿಕಾಂತ ಯಡಹಳ್ಳಿ
ರಂಗಕರ್ಮಿಗಳು
ಇದನ್ನೂ ಓದಿ – ಭಾರತದ ಮೇಲೆ ಮಧ್ಯಪ್ರಾಚ್ಯ ಯುದ್ಧದ ದುಷ್ಪರಿಣಾಮಗಳು


