ಶಿವಮೊಗ್ಗ : ಪಶ್ಚಿಮ ಘಟ್ಟದ ಜೀವವೈವಿಧ್ಯದ ತಾಣವಾಗಿರುವ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯ ಸಾಗರ ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಅಣುಸ್ಥಾವರ ವಿರೋಧಿಸಿ ಬೃಹತ್ ಹೋರಾಟ ನಡೆಸಲು ಮಲೆನಾಡು ರೈತ ಹೋರಾಟ ಸಮಿತಿ ನಿರ್ಧರಿಸಿದೆ.
‘ಬೇಸೂರಿನಲ್ಲಿ ಸ್ಥಾವರ ಸ್ಥಾಪಿಸಲು ಅಗತ್ಯವಿರುವ ಭೂಮಿ ಕೊಡುವುದಿಲ್ಲ ಎಂದು ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು. ಅದೇ ರೀತಿ ಮಲೆನಾಡಿಗೆ ವಿನಾಶಕಾರಿ ಯೋಜನೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರವೂ ಭರವಸೆ ನೀಡಬೇಕು ಎಂದು ಆಗ್ರಹಿಸಿ ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಮಟ್ಟದಲ್ಲಿ ಬೃಹತ್ ಹೋರಾಟ ಮಾಡಲು ನಿರ್ಧರಿಸಿದೆ.
ಈ ಯೋಜನೆಗೆ ಮಲೆನಾಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಸಾಗರದ ಶಿವಪ್ಪನಾಯಕ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಸುಮಾರು ಅರ್ಧ ಗಂಟೆ ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಲ್ಲಿ ‘ಏಸೂರು ಕೊಟ್ಟರೂ ಬೇಸೂರು ಕೊಡೆವು’, ‘ನಮ್ಮ ಭೂಮಿ, ನಮ್ಮ ಹಕ್ಕು’, ‘ಶುದ್ಧ ಗಾಳಿ, ಶುದ್ಧ ನೀರು ನಮ್ಮ ಹಕ್ಕು’, ‘ಪರಿಸರ ವಿರೋಧಿ ಸರ್ಕಾರದ ನೀತಿಗಳಿಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಗೋಪಾಲ ಕೃಷ್ಣ ಬೇಳೂರು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಮಲೆನಾಡಿಗೆ ಮಾರಕವಾಗಿರುವ ಅಣು ವಿದ್ಯುತ್ ಸ್ಥಾವರ ಯೋಜನೆ ತಡೆಯಲು ನಿರಂತರವಾಗಿ ಹೋರಾಟ ಮಾಡುತ್ತೇನೆ. ನನ್ನ ಶಾಸಕತ್ವ ಹೋದರೂ ಅಣು ಸ್ಥಾವರ ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಘೋಷಿಸಿದ್ದಾರೆ .
‘ಅಣು ಸ್ಥಾವರ ಬೇಡವೆಂದು ನಾನು ನಮ್ಮದೇ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಧ್ವನಿ ಎತ್ತಲು ಸಿದ್ದನಿದ್ದೇನೆ. ಅದೇ ರೀತಿ ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ವಿರೋಧ ಸೂಚಿಸಬೇಕು’ ಎಂದು ಆಗ್ರಹಿಸಿದರು.

