ಐಪಿಎಲ್ 2026ರ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದ್ದ ಪಂಜಾಬ್ ಕಿಂಗ್ಸ್ (PBKS) ತಂಡಕ್ಕೆ ಈಗ ಸೋಲಿನ ಜೊತೆಗೆ ವದಂತಿಗಳ ಬಿಸಿ ತಟ್ಟಿದೆ. ತಂಡದ ಆಂತರಿಕ ವಿಚಾರಗಳ ಬಗ್ಗೆ ಹಬ್ಬುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಮಾಲೀಕಿ ಪ್ರೀತಿ ಜಿಂಟಾ ಮತ್ತು ಫ್ರಾಂಚೈಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ವದಂತಿಗಳ ಸುರಿಮಳೆ ಮತ್ತು ಫ್ರಾಂಚೈಸಿ ಸ್ಪಷ್ಟನೆ
ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲಿ 6 ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪಂಜಾಬ್, ನಂತರ ಸತತ 4 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ವೈಫಲ್ಯದ ಬೆನ್ನಲ್ಲೇ ತಂಡದ ಶಿಸ್ತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
ಯುಜ್ವೇಂದ್ರ ಚಹಾಲ್ ವಿಮಾನದಲ್ಲಿ ‘ವೇಪಿಂಗ್’ ಮಾಡುತ್ತಿದ್ದರು ಎಂಬ ಆರೋಪ. ಮತ್ತು ಆರಂಭಿಕ ಆಟಗಾರ ಪ್ರಭಾಸಿಮ್ರಾನ್ ಸಿಂಗ್ ಅವರ ತೂಕ ಮತ್ತು ಫಿಟ್ನೆಸ್ ಕುರಿತಾದ ಟೀಕೆಗಳು ಹರಿದಾಡಿದ್ದವು.
ಇದಕ್ಕೆ ‘X’ ಮೂಲಕ ಪ್ರತಿಕ್ರಿಯಿಸಿರುವ ಪಂಜಾಬ್ ಕಿಂಗ್ಸ್, “ಕೇವಲ ವ್ಯೂಸ್ ಮತ್ತು ಜನಪ್ರಿಯತೆಗಾಗಿ ಕಟ್ಟುಕಥೆಗಳನ್ನು ಸೃಷ್ಟಿಸಬೇಡಿ. ಟೀಕೆಗಳು ಆಟದ ಭಾಗ, ಆದರೆ ಸುಳ್ಳು ಮಾಹಿತಿ ತಪ್ಪು,” ಎಂದು ಕಿಡಿಕಾರಿದೆ.
ಇದು ‘ಪೂರ್ವಯೋಜಿತ’ ತಪ್ಪು ಮಾಹಿತಿ : ಪ್ರೀತಿ ಜಿಂಟಾ
ತಂಡದ ಪೋಸ್ಟ್ ಅನ್ನು ಹಂಚಿಕೊಂಡ ಪ್ರೀತಿ ಜಿಂಟಾ, ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇವೆಲ್ಲವೂ ತಂಡದ ಬ್ರ್ಯಾಂಡ್ ಹೆಸರಿಗೆ ಮಸಿ ಬಳಿಯುವ ‘ಪೂರ್ವಯೋಜಿತ ಪ್ರಯತ್ನ’ ಎಂದು ಅವರು ಬಣ್ಣಿಸಿದ್ದಾರೆ. “ವೃತ್ತಿಪರ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸತ್ಯಾಸತ್ಯತೆ ತಿಳಿಯದೆ ಹರಡುವ ಮಾಹಿತಿಯನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ,” ಎಂದು ಅವರು ಎಚ್ಚರಿಸಿದ್ದಾರೆ.
ಪ್ಲೇ-ಆಫ್ ರೇಸ್‌ನಲ್ಲಿ ಪಂಜಾಬ್‌ಗೆ ಭೀತಿ
ಮೈದಾನದ ಹೊರಗಿನ ಈ ಗೊಂದಲಗಳ ನಡುವೆ ಮೈದಾನದ ಒಳಗೂ ತಂಡದ ಸ್ಥಿತಿ ಕಷ್ಟದಲ್ಲಿದೆ. ಧರ್ಮಶಾಲಾದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಅನುಭವಿಸಿದ 5 ವಿಕೆಟ್ ಸೋಲು ಪಂಜಾಬ್ ಪಾಲಿಗೆ ಸತತ 4ನೇ ಹಿನ್ನಡೆಯಾಗಿದೆ.
ಪಂಜಾಬ್ ಕಿಂಗ್ಸ್ 11 ಪಂದ್ಯಗಳಲ್ಲಿ 13 ಅಂಕಗಳನ್ನು ಗಳಿಸಿ ಅಂಕಪಟಿಯಲ್ಲಿ 4ನೇ ಸ್ಥಾನದಲ್ಲಿದೆ. ಉಳಿದಿರುವ ಪಂದ್ಯಗಳಲ್ಲಿ ಗೆಲುವು ಸಾಧಿಸದಿದ್ದರೆ, ಉತ್ತಮ ಆರಂಭದ ಹೊರತಾಗಿಯೂ ಪಂಜಾಬ್ ಕಿಂಗ್ಸ್ 2026ರ ಐಪಿಎಲ್ ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಭೀತಿ ಎದುರಿಸುತ್ತಿದೆ. ತಂಡದ ಆಟಗಾರರು ಈ ಮಾನಸಿಕ ಒತ್ತಡವನ್ನು ಮೆಟ್ಟಿ ನಿಂತು ಮತ್ತೆ ಗೆಲುವಿನ ಹಳಿಗೆ ಮರಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

