ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಯುವಜನತೆ, ಮೂಲಸೌಕರ್ಯ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ, ರಾಜ್ಯದ ಸ್ವಾವಲಂಬಿ ಬೆಳವಣಿಗೆಯ “11G ಮಾಡೆಲ್” ಅನ್ನು ಅವರು ಪರಿಚಯಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳಿಗೆ ‘ಬಜೆಟ್ಭಾಗ್ಯ’
ಬಜೆಟ್ ಭಾಷಣದ ಪ್ರಮುಖ ಆಕರ್ಷಣೆಯೆಂದರೆ ಸರ್ಕಾರಿ ಉದ್ಯೋಗಗಳ ಘೋಷಣೆ:
ಬೃಹತ್ ನೇಮಕಾತಿ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ.
ವಯೋಮಿತಿ ಸಡಿಲಿಕೆ: ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬದಿಂದ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠವಯೋಮಿತಿಯಲ್ಲಿ5 ವರ್ಷಗಳಸಡಿಲಿಕೆ ಘೋಷಿಸಲಾಗಿದೆ.
ಮೂಲ ಸೌಕರ್ಯಕ್ಕೆ ₹4,000 ಕೋಟಿ ಹೊಸ ಚೈತನ್ಯ
ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕಳೆದ ವರ್ಷದ ₹8,600 ಕೋಟಿ ಕಾಮಗಾರಿಗಳ ಮುಂದುವರಿದ ಭಾಗವಾಗಿ ಈ ಕೆಳಗಿನ ಘೋಷಣೆ ಮಾಡಲಾಗಿದೆ:
ಹೊಸ ಕಾಮಗಾರಿ: 2026-27ನೇ ಸಾಲಿನಲ್ಲಿ ರಸ್ತೆ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ ₹4,000 ಕೋಟಿ ಮೊತ್ತದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಬಿಯಾಂಡ್ ಬೆಂಗಳೂರು: ಬೆಂಗಳೂರಿನ ಹೊರತಾಗಿ ಇತರ ಜಿಲ್ಲೆಗಳ ನಗರಾಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ.
ತೆರಿಗೆ ಆದಾಯದ ಗುರಿಗಳು(ಕೋಟಿರೂ.ಗಳಲ್ಲಿ)
ಬಜೆಟ್ ಗಾತ್ರ ಕಳೆದ ಬಾರಿಗಿಂತ ₹40,000 ಕೋಟಿ ಹೆಚ್ಚಳವಾಗಿದ್ದು, ಆದಾಯದ ಮೂಲಗಳು ಹೀಗಿವೆ:
- ವಾಣಿಜ್ಯ ತೆರಿಗೆ: ₹1,25,000 ಕೋಟಿ
- ರಾಜ್ಯ ಅಬಕಾರಿ: ₹45,000 ಕೋಟಿ
- ನೋಂದಣಿ ಮತ್ತು ಮುದ್ರಾಂಕ: ₹29,000 ಕೋಟಿ
- ಮೋಟಾರು ವಾಹನ ತೆರಿಗೆ: ₹15,500 ಕೋಟಿ
ಕೇಂದ್ರದ ಮೇಲೆ ಒತ್ತಡ: ಉದ್ಯೋಗ ಖಾತ್ರಿ ಸಮಸ್ಯೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು (MGNREGA) ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ ಸಿಎಂ, ಇದರಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ ಎಂದರು. “ರಾಜ್ಯದ ಹಿತದೃಷ್ಟಿಯಿಂದ ನಾವು ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ” ಎಂದು ಸದನಕ್ಕೆ ತಿಳಿಸಿದರು.
ಇತರೆ ಪ್ರಮುಖ ಮುಖ್ಯಾಂಶಗಳು:
ವಸತಿ ಹಕ್ಕು: ವಸತಿ ರಹಿತರಿಗೆ ಆದ್ಯತೆಯ ಮೇಲೆ ಮನೆ ನಿರ್ಮಿಸಿಕೊಡುವ ಭರವಸೆ.
ಹವಮಾನ ಬದಲಾವಣೆ: ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಶೇಷ ಅನುದಾನ.
ಡಾ. ಎಂ. ಗೋವಿಂದ ರಾವ್ ವರದಿ: ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಈ ವರದಿಯ ಶಿಫಾರಸುಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ.
ಮುಂದಿನ ಅಪ್ಡೇಟ್: ಕೃಷಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಲಾದ ಅನುದಾನದ ವಿವರಗಳು ಶೀಘ್ರದಲ್ಲೇ ಬರಲಿವೆ.

