ಅದೊಂದು ದೊಡ್ಡ ಕಥೆ – ಆತ್ಮಕಥನ ಸರಣಿ -17 |ಮರಳಿ ಕಾರ್ಕಳಕ್ಕೆ

ರಾತ್ರಿಯ ಗಂಟೆ ಒಂಭತ್ತೋ ಹತ್ತೋ ಇರಬಹುದು. ಕಾರ್ಕಳ ಕುಕ್ಕುಂದೂರು ಜೋಡುರಸ್ತೆಯನ್ನು ತಲಪಿದೆವು. ಊರು ನಿದ್ದೆಗೆ ಸಿದ್ಧವಾಗುತ್ತಿತ್ತು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬೆಳಕು ಅಷ್ಟೇ. 1967 ರಲ್ಲಿ, ಅಂದರೆ ಹನ್ನೊಂದು ವರ್ಷಗಳ ಹಿಂದೆ ಬಿಟ್ಟ ಊರು. ಆ ಬಳಿಕ ಒಮ್ಮೆಯೂ ಕಾರ್ಕಳಕ್ಕೆ ಬಂದಿರಲಿಲ್ಲ. ಅಂದ ಮೇಲೆ ಅದು ಹೇಗೆ ಬದಲಾದ ಜೋಡುರಸ್ತೆಯ ಅರಿವು ಇರಲು ಸಾಧ್ಯ?

ಶಿರ್ವ ಶಿವಣ್ಣ ಶೆಟ್ಟರ ದುರ್ಗಾ ಪ್ರಾಥಮಿಕ ಶಾಲೆಯ ಆವರಣದ ಬದಿಯಲ್ಲಿನ ಒಂದು ಮನೆಯ ಪಕ್ಕದಲ್ಲಿ ಲಾರಿ ನಿಂತಿತು. ಲಾರಿಯಲ್ಲಿದ್ದ ಮನೆಯ ಸಾಮಾನುಗಳನ್ನು ಇಳಿಸಿ ಹೊಸ ಬಾಡಿಗೆ ಮನೆಗೆ ಸಾಗಿಸಿ ನಿದ್ದೆ ಮಾಡಿದೆವು.

ಅದು ಮಹಾಬಲ ಶೆಟ್ಟಿ ಎಂಬವರ ಬಾಡಿಗೆ ಮನೆ. ತಿಂಗಳೊಂದರ ನಲವತ್ತೈದು ರುಪಾಯಿ ಬಾಡಿಗೆ. ಶಂಕ್ರಾಣದ ಮನೆಗೆ ಇದ್ದುದು ಆರು ರುಪಾಯಿ. ಆದರೆ ಇಲ್ಲಿನದು ಸಿಮೆಂಟು ಗೋಡೆಯ ಸುಸ್ಥಿತಿಯ ಹಂಚಿನ ಮನೆ.

ಮಹಾಬಲ ಶೆಟ್ಟಿಯವರಿಗೆ ಅಪಾರ ಜಮೀನು ಇತ್ತು. ಎಲ್ಲವನ್ನೂ ಗೇಣಿಗೆ ಕೊಟ್ಟುಬಿಟ್ಟಿದ್ದರು.  ಎಪ್ಪತ್ತರ ದಶಕದ ʼಉಳುವವನೇ ಹೊಲದೊಡೆಯʼ ಕಾನೂನಿಂದಾಗಿ ಸಮಸ್ತವನ್ನೂ ಕಳೆದುಕೊಂಡು, ವಾಸಿಸುತ್ತಿದ್ದ ಮನೆ ಮತ್ತು ಅಲ್ಪಸ್ವಲ್ಪ ಜಮೀನು ಮಾತ್ರ ಉಳಿದುಕೊಂಡಿತ್ತು. ನಾವಿದ್ದ ಮನೆ ಸೇರಿದಂತೆ ಎರಡು ಮನೆ ಮತ್ತು ಒಂದಷ್ಟು ತೆಂಗಿನ ಮರಗಳು ಮಾತ್ರ ಅವರ ಅಳಿದುಳಿದ ಆಸ್ತಿ. ಬಂಟರ ಗತ್ತು ದೌಲತ್ತು ಬಿಡುವಂತಿಲ್ಲ, ಆದರೆ ಈ ಮರ್ಜಿಗೆ ಬೇಕಾಗುವಷ್ಟು ಸಂಪತ್ತೂ ಉಳಿದುಕೊಂಡಿಲ್ಲ. ಇಂತಹ ತ್ರಿಶಂಕು ಸ್ಥಿತಿ ಅವರದು.

ನಮ್ಮ ಪಕ್ಕದ ಇನ್ನೊಂದು ಮನೆಯಲ್ಲಿ ಕೊಡಗಿನ ಜವರಪ್ಪ ಎಂಬವರು ವಾಸಿಸುತ್ತಿದ್ದರು. ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರು ಅವರು. ನಮ್ಮ ತಂದೆ ಮತ್ತು ಅವರು ಇಬ್ಬರೂ ಸರಕಾರಿ ನೌಕರರಾಗಿದ್ದುದರಿಂದ ನಮಗೆ ಒಳ್ಳೆಯ ನೆರೆಹೊರೆಯವರಾಗಿ ಅವರು ಸಿಕ್ಕರು.

ಮನೆ ಹಂಚಿನದೇನೋ ಆಗಿತ್ತು. ಆದರೆ, ವಿದ್ಯುತ್‌ ಸೌಲಭ್ಯ ಇರಲಿಲ್ಲ. ಮತ್ತೆ ಸೀಮೆ ಎಣ್ಣೆ ದೀಪ, ಲ್ಯಾಂಪು ಇವೇ ಗತಿಯಾಗಿದ್ದವು. ಶಂಕ್ರಾಣದಲ್ಲಿ ಹನ್ನೊಂದು ವರ್ಷ ಓದುತ್ತಿದ್ದಾಗಲೂ ನಾವು ವಿದ್ಯುತ್‌ ದೀಪ ಕಂಡಿರಲಿಲ್ಲ. ಈಗಲೂ ಅದು ಮುಂದುವರಿಯಿತು. ಇನ್ನು ಶೌಚಕ್ಕೆ ಇಲ್ಲೂ ಬಯಲೇ ಆಲಯ. ಇಷ್ಟಾಗಿಯೂ ಇದೊಂದು ಚೆಂದದ ಜಾಗ, ಜೋಡುರಸ್ತೆಯ ಪುಟ್ಟ ಪೇಟೆ, ಕಾರ್ಕಳದ ದೊಡ್ಡ ಪೇಟೆ ಎರಡೂ ಹತ್ತಿರ.

ಮನೆಯ ದಕ್ಷಿಣಕ್ಕೆ ಹಸಿರು ಗದ್ದೆ ಬೈಲು, ಪೂರ್ವಕ್ಕೆ ತೆಂಗಿನ ತೋಪು, ಜವರಪ್ಪರ ಮನೆ, ಪಶ್ಚಿಮಕ್ಕೆ ಮರಿ ಭಟ್ಟರ (ಮರಿಯಣ್ಣ ಭಟ್)‌ ಗದ್ದೆ. ಉತ್ತರಕ್ಕೆ ಕಿರಾಲುಬೋಗಿ ಮರಗಳ (ಬೋವು) ಹಾಡಿ. ಕಿರಾಲು ಬೋಗಿ ಹಾಡಿಯ ಎಡಕ್ಕೆ ಚಲಿಸಿದರೆ ಮರಿಭಟ್ಟರ ಮನೆ, ಇನ್ನೂ ಮುಂದೆ ಚಲಿಸಿದರೆ ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನದ ಹಾದಿ ತೆರೆದುಕೊಳ್ಳುತ್ತದೆ. ಎಲ್ಲಿ ನೋಡಿದರೂ ಕಲ್ಲಿನ ಪಾದೆಗಳೋ ಪಾದೆಗಳು, ಮಣ್ಣಿನ ನೆಲ ಕಡಿಮೆ.

ಕಿರಾಲು ಬೋಗಿ ಹಾಡಿಯ ಮಧ್ಯದಲ್ಲೂ ಇದ್ದುದು ಬೃಹತ್‌ ಬಂಡೆಗಲ್ಲು. ನಾನು ಪರೀಕ್ಷೆಗೆ ಓದುತ್ತಿದ್ದುದು ಇದೇ ಬಂಡೆಯ ಮೇಲೆ. ಈ ಹಾಡಿಯಿಂದ ಬಲಕ್ಕೆ ಚಲಿಸಿದರೆ ದುರ್ಗಾಶಾಲೆಯ ಮೈದಾನ. ಈ ಮೈದಾನದಲ್ಲಿ ನಾವೂ ಜವರಪ್ಪರೂ ಸೇರಿ ಶಟಲ್‌ ಆಡುತ್ತಿದ್ದೆವು. ಇನ್ನೂ ಮುಂದಕ್ಕೆ ಹೋದರೆ ಜೋಡುರಸ್ತೆ- ಕಾರ್ಕಳ ಮುಖ್ಯ ರಸ್ತೆ. ಎಡಕ್ಕೆ ಚಲಿಸಿದರೆ ಫಾರೆಸ್ಟ್‌ ಗೇಟ್‌ ದಾಟಿದ ಬಳಿಕ ರಸ್ತೆ ಕವಲೊಡೆಯುತ್ತದೆ. ಎಡದ ಕವಲು ಬೈಲೂರು, ಹಿರಿಯಡ್ಕ, ಮಣಿಪಾಲ ಮೂಲಕ ಉಡುಪಿಗೆ ಹೋದರೆ, ಬಲದ ಕವಲು ಮುನಿಯಾಲು, ಮುದ್ರಾಡಿ ಮೂಲಕ ಸೋಮೇಶ್ವರಕ್ಕೆ ಹೋಗುತ್ತದೆ.

ದುರ್ಗಾಶಾಲೆಯಿಂದ ಮುಖ್ಯ ರಸ್ತೆ ಸೇರಿ, ಬಲಕ್ಕೆ ತಿರುಗಿದರೆ ಬಂಗ್ಲೆಗುಡ್ಡೆ, ಸಾಲ್ಮರದ ಮೂಲಕ ಕಾರ್ಕಳ ಪೇಟೆ. ಇವೆಲ್ಲ ಇಂದಿಗೆ 45 ವರ್ಷಗಳ ಹಿಂದಿನ ಅಂದರೆ 1978 ರ ದಿನಗಳ ಚಿತ್ರ ನೆನಪಿರಲಿ. ಆಗ ಇಂದಿನಷ್ಟು ʼಡೆವಲಪ್‌ಮೆಂಟ್‌ʼ ಆಗಿರಲಿಲ್ಲ. ಮನೆಗಳು ಕಟ್ಟಡಗಳ ನಡುವೆ ಸಾಕಷ್ಟು ಅಂತರವಿತ್ತು. ಅಲ್ಲಲ್ಲಿ ಆಟದ ಮೈದಾನಗಳೂ ಇದ್ದವು. ಊರು ತನ್ನದೇ ರೀತಿಯಲ್ಲಿ ಸುಂದರವಾಗಿತ್ತು.

ಸನ್ಮಾನ್‌ ಟಾಕೀಸಿನ ಕತೆ

ಸಾಲ್ಮರದಲ್ಲಿ ‌ʼಸನ್ಮಾನ್ʼ ಸಿನಿಮಾ ಟಾಕೀಸು ಇತ್ತು (ಕಾರ್ಕಳ ಪೇಟೆಯಲ್ಲಿ ಜೈಹಿಂದ್‌ ಸುಸಜ್ಜಿತ ಟಾಕೀಸ್‌ ಇತ್ತು). ಇಲ್ಲಿಗೆ ಒಳದಾರಿಯಲ್ಲಿ ನಮ್ಮ ಮನೆಯಿಂದ ನಡಿಗೆಯ ದೂರ. ಗದ್ದೆಯಲ್ಲಿ ಇದ್ದ ತಟ್ಟಿ ಟಾಕೀಸು. ಮಳೆಗಾಲದಲ್ಲಿ ನೀರಿನ ಒಸರು ಕಾಲಿಗೆ ತಾಗುತ್ತಿತ್ತು. ಗೋಡೆಯ ಬದಲು ತಟ್ಟಿ ಇದ್ದುದರಿಂದ ಹಗಲಲ್ಲಿ ಸಿನಿಮಾ ಪ್ರದರ್ಶನ ನಡೆಯುವಾಗ ಒಳಗೂ ಹಗಲು! ಸಿಂಗಲ್‌ ಪ್ರೊಜೆಕ್ಟರ್‌ ಸಿನಿಮಾ ಮಂದಿರ. ಒಂದು ರೀಲು ಆದ ಆನಂತರ ಇನ್ನೊಂದು ರೀಲು ಜೋಡಿಸುವ ತನಕ ಕಾಯಬೇಕು. ಹೀಗೆ ಜೋಡಿಸುವಾಗ ಹಿಂದೆ ಮುಂದೆ ಆಗಿ ಸಿನಿಮಾದ ಕೊನೆ ಮೊದಲು ಬಂದು ಆರಂಭ ಕೊನೆಗೆ ಬಂದು ಒಟ್ಟಿನಲ್ಲಿ ಅದೊಂದು ಸಸ್ಪೆನ್ಸ್‌ ತ್ರಿಲ್ಲರ್‌ ಅಗಿಬಿಡುತ್ತಿತ್ತು. ವಿದ್ಯುತ್‌ ಕೈಕೊಟ್ಟಾಗ ಪ್ರೇಕ್ಷಕರದ್ದು ಗಲಾಟೆಯೋ ಗಲಾಟೆ. ಕುರ್ಚಿಗಳನ್ನು ಎತ್ತಿ ಎಸೆಯುತ್ತಿದ್ದರು. ಪ್ರೊಜೆಕ್ಟರ್‌ ಚಲಾಯಿಸುವವ ಕುಳಿತುಕೊಳ್ಳುವ ಜಾಗದ ಕೆಳಗೆ ಉದ್ದುದ್ದ ಸಿನಿಮಾ ರೀಲಿನ ತುಣುಕುಗಳು ಬಿದ್ದಿರುತ್ತಿದ್ದವು. ಅದರಲ್ಲಿ ರಾಜ್‌ ಕುಮಾರ್‌ ಲೀಲಾವತಿ ಎಲ್ಲ ಇರುತ್ತಿದ್ದರು. ಹೀಗೆ ಕತ್ತರಿಸಿ ಎಸೆಯುತ್ತಾ ಆ ಸಿನಿಮಾ ರೀಲು ಬೇರೆ ಬೇರೆ ಕಡೆ ಹೋಗುವಾಗ ಅಂತಿಮವಾಗಿ ಸಿನಿಮಾ ಕತೆ ಏನಾಗಿರಬಹುದು ನೀವೇ ಯೋಚಿಸಿ. ಇಂತಹ ಈ ಅಧ್ವಾನದ ಸಿನಿಮಾ ಮಂದಿರದಲ್ಲಿ ಮುಂದಿನ ಕುರ್ಚಿಗಳಲ್ಲಿ ಕುಳಿತರೆ ಟಿಕೆಟ್‌ ದರ 90 ಪೈಸೆ ಇತ್ತು. ಈ ಸಿನಿಮಾ ಮಂದಿರದಲ್ಲಿ ನಾನು ಕೌಬಾಯ್‌ ಕುಳ್ಳ, ಮಾತು ತಪ್ಪದ ಮಗ, ಮುಯ್ಯಿಗೆ ಮುಯ್ಯಿ, ಪರ್ವರಿಶ್‌, ಅಪೂರ್ವ ಕನಸು ಇತ್ಯಾದಿ ಅನೇಕ ಸಿನಿಮಾ ನೋಡಿದ್ದೆ. ಬೆಳ್ಳಿ ಪರದೆಯ ತೀರಾ ಹತ್ತಿರ ಕುಳಿತು ನೋಡುತ್ತಿದ್ದುದರಿಂದ ಹೊರಗೆ ಬಂದಾಗ ಸ್ವಲ್ಪ ಹೊತ್ತು ಕಣ್ಣೇ ಕಾಣುತ್ತಿರಲಿಲ್ಲ.

ನನ್ನ ಸೈಕಲ್

ಕಾರ್ಕಳ ಜೋಡುರಸ್ತೆಯಲ್ಲಿ ಬಿಡಾರ ಮಾಡಿದ ಆ ದಿನಗಳಲ್ಲಿ ನಮಗೆ ಎಲ್ಲವೂ ಹೊಸತು. ನಮ್ಮ ಹೆಚ್ಚಿನ ತಿರುಗಾಟವೆಂದರೆ ಮರಿಭಟ್ಟರ ಮನೆಗೆ, ಅರಣ್ಯ ಇಲಾಖೆಯ ಗಾರ್ಡ್‌ ಬಳಿಯಲ್ಲಿ ಹರಟೆ, ದುರ್ಗಾ ಶಾಲೆಯ ಮೈದಾನದಲ್ಲಿ ಶಟಲ್‌ ಅಟ, ಅದು ಬಿಟ್ಟರೆ ಒಮ್ಮೊಮ್ಮೆ ಕಾರ್ಕಳಕ್ಕೆ. ಈಗ ನನ್ನ ಬಳಿ ಅಣ್ಣನ ಹಳೆಯ ಸೈಕಲ್‌ ಇತ್ತು. ಹಾಗಾಗಿ ಓಡಾಟ ಸುಲಭವಾಗಿತ್ತು. ಈ ಸೈಕಲ್‌ ಭುವನೇಂದ್ರ ಕಾಲೇಜು, ಭಂಡಾರ್ಕಾರ್ಸ್‌ ಕಾಲೇಜುಗಳಲ್ಲಿ ಅಣ್ಣ ಓದುವಾಗಲೂ ಬಳಸಿದ್ದ. ನಾನು ಇದೇ ಸೈಕಲ್‌ ನಲ್ಲಿ ಹೋಗಿ ಭುವನೇಂದ್ರ ಕಾಲೇಜಿನಲ್ಲಿ ಎರಡನೆ ಪಿಯು ನಿಂದ ಬಿಎಸ್‌ಸಿ ಅಂತಿಮ ವರ್ಷದ ತನಕವೂ ಓದಿದ್ದೆ. ಮುಂದೆ ದುರ್ಗಾ ಹೈಸ್ಕೂಲ್‌ ನಲ್ಲಿ ಶಿಕ್ಷಕನಾದಾಗಲೂ ಇದೇ ಸೈಕಲ್‌ ಬಳಸಿದ್ದೆ. ಇದೇ ಸೈಕಲ್‌ ನಲ್ಲಿ ಮಣಿಪಾಲ ಮೂಲಕ ಕಾಪುವಿನ ಮುದ್ದಣ ನರ್ಸರಿಯ ತನಕವೂ ಹೋಗಿದ್ದೆ. ಹಲ್ಲಿನ ಡಾಕ್ಟರ್‌ ರನ್ನು ನೋಡಲು ಮೂಡಬಿದಿರೆಗೂ ಹೋಗಿದ್ದೆ. ಇನ್ನು ಕಾರ್ಕಳ ಗುಮ್ಮಟ ಬೆಟ್ಟ, ಚತುರ್ಮುಖ ಬಸದಿ, ನಗರ ಕೇಂದ್ರ ಗ್ರಂಥಾಲಯ ಎಂದೆಲ್ಲ ಆ ಸೈಕಲ್‌ ನನ್ನನ್ನು ಒಯ್ಯದ ಜಾಗಗಳಿರಲಿಲ್ಲ. 1984 ರಲ್ಲಿ ಊರು ಬಿಡುವ ತನಕವೂ ಅದು ಆಪ್ತ ಸಂಗಾತಿಯಾಗಿತ್ತು.

ಜೋಡುರಸ್ತೆಯಲ್ಲಿ ಮನೆ ಮಾಡಿದ ಬಳಿಕ ನಮ್ಮ ಮೊದಲ ಪರಿಚಯವೇ ಮರಿಭಟ್ಟರ ಮನೆಯವರದು. ಮರಿಭಟ್ಟರ ಮೂರನೇ ಹೆಂಡತಿ ಸರಸ್ವತಿ ಅಮ್ಮನಿಗೆ ಮೂವರು ಮಕ್ಕಳು. ಸುಬ್ರಹ್ಮಣ್ಯ ಭಟ್‌ ಹಿರಿಯವರು. ಕೃಷ್ಣ ಭಟ್‌ ನಡುವಿನವರು, ಶಂಕರ ಭಟ್‌ ಕೊನೆಯವರು. ನಮಗೆ ಹೆಚ್ಚು ಒಡನಾಟ ಇದ್ದುದು ನಮ್ಮನ್ನು ಬೇರೆ ಬೇರೆ ಕಡೆ ಸುತ್ತಿಸುತ್ತಿದ್ದುದು ಕೃಷ್ಣವರ್ಣದ ಶಂಕರ ಭಟ್.‌ ದುರ್ಗಾ ದೇವಸ್ಥಾನದಲ್ಲಿ ಅರ್ಚಕ ಕೆಲಸ ಕೂಡಾ ಮಾಡುತ್ತಿದ್ದರು. ಆಗ ಆ ದೇಗುಲ ಜೀರ್ಣ ಸ್ಥಿತಿಯಲ್ಲಿತ್ತು. ಸಾಮಾನ್ಯ ದಿನಗಳಲ್ಲಿ ಭಕ್ತರು ಕಡಿಮೆ. ಮಧ್ಯಾಹ್ನದ ಪೂಜೆಗೆ ಶಂಕರಭಟ್ಟರು ಗರ್ಭಗುಡಿ ಸೇರಿ ಪೂಜೆ ಮಾಡುವಾಗ ಗಂಟೆ ಬಡಿಯುವ ಕೆಲಸ ನನ್ನದು. ಅವರು ಬೇರೆ ಬೇರೆ ಕಡೆ ಪೌರೋಹಿತ್ಯಕ್ಕೆ ಹೋಗುವಾಗ ಅವರಿಗೆ ಜೊತೆ ನೀಡುತ್ತಿದ್ದುದು ನಾನು. ನಾನು ನೋಡಲು ಬ್ರಾಹ್ಮಣನಂತೆಯೇ ಇದ್ದೆ. ಹಾಗಾಗಿ ಅಲ್ಲೆಲ್ಲ ನನ್ನನ್ನು ಬ್ರಾಹ್ಮಣ ಎಂದೇ ತಿಳಿದು ಗೌರವ ನೀಡುತ್ತಿದ್ದರು. ದೇವರು, ಪೌರೋಹಿತ್ಯದ ಹೆಸರಿನಲ್ಲಿ ಜನರನ್ನು ಯಾಮಾರಿಸುವ ತಂತ್ರಗಳು, ಮೋಸಗಳು ಎಲ್ಲವನ್ನೂ ಶಂಕರ ಭಟ್ಟರು ನನಗೆ ವಿವರಿಸಿ ಹೇಳುತ್ತಿದ್ದರು. ದುರ್ಗಾ ದೇವಾಲಯದಲ್ಲಿ ನೋಡುವುದಕ್ಕೆ ಅಂತಹ ಸೌಂದರ್ಯ ವಿಶೇಷಗಳೇನೂ ಇರಲಿಲ್ಲ. ಜೀರ್ಣ ಸ್ಥಿತಿಯಲ್ಲಿದ್ದುದರಿಂದ ಮತ್ತು ʼಡೆವಲಪ್‌ಮೆಂಟ್‌ʼ ಅಲ್ಲಿಗೆ ಕಾಲಿಡದ ಕಾರಣ ಹಾಗೂ ಗುಡಿ ಎತ್ತರದ ಜಾಗದಲ್ಲಿದ್ದುದರಿಂದ ಪರಿಸರ ಪ್ರಶಾಂತವಾಗಿತ್ತು. ನಾಸ್ತಿಕರನ್ನೂ ಆಸ್ತಿಕರನ್ನಾಗಿಸುವಂತಹ ಆಕರ್ಷಣೆ ಆ ಪರಿಸರಕ್ಕಿತ್ತು.

ಮುಂಭಾಗದ ಅಂಗಣದಿಂದ ಕೆಳಗೆ ಇಳಿದು ಹೋಗುವ ಮೆಟ್ಟಿಲು ಕಗ್ಗಲಿನದಾಗಿತ್ತು. ಪಕ್ಕದಲ್ಲಿ ಬೃಹತ್‌ ಮರವೂ ಇತ್ತು. ಈ ಮೆಟ್ಟಿಲುಗಳ ಮೇಲೆ ಕಾಲಿಳಿಸಿ ಕುಳಿತೆವೆಂದರೆ ದೂರದ ಬೆರ್ಮರ ಪಾದೆಯ (ಈ ಪಾದೆಯ ಬುಡದಲ್ಲಿಯೇ ಮುಂದೆ ನಾವು ಮನೆ ಮಾಡಿದೆವು) ಮೋಹಕ ದೃಶ್ಯ ಲಭ್ಯ. ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಬರೇ ನೀರವ. ನಾನು ಬಿಎಸ್‌ಸಿಯ ಅಂತಿಮ ಪರೀಕ್ಷೆಗಳ ಸಮಯದಲ್ಲಿ ಓದಲು ಹೋಗುತ್ತಿದ್ದುದು ದೇಗುಲದ ಬಳಿ ಇದ್ದ ಇದೇ ಮರದಡಿಯ ಕಲ್ಲು ಹಾಸಿನ ಬಳಿಗೆ. ಶಾಂತ ಪರಿಸರ, ತಂಪು ಗಾಳಿ, ಒಮ್ಮೊಮ್ಮೆ ಓದುತ್ತ ಓದುತ್ತ ತೂಕಡಿಸಿ ಅಲ್ಲೇ ನಿದ್ದೆ ಹೋಗುತ್ತಿದ್ದೆ.

ನಮ್ಮ ಮನೆ ಭಟ್ಟರ ಮನೆಗೆ ಹತ್ತಿರವಿದ್ದುದರಿಂದ ಶಂಕರ ಭಟ್ಟರ ಸವಾರಿ ಪದೇ ಪದೇ ನಮ್ಮ ಮನೆಗೆ ಬರುತ್ತಿತ್ತು. ಅವರು ಬಂದರೆಂದರೆ ನಾವೂ ಅವರೊಂದಿಗೆ ಅವರ ಮನೆಗೆ. ಅಲ್ಲಿ ಸಜ್ಜಿಗೆ, ದೋಸೆ ಏನಾದರೊಂದು ಇರುತ್ತಿತ್ತು. ಆದರೆ ಮಹಾ ಮಡಿ ಮೈಲಿಗೆಯ ಮನೆ. ಹಾಗಾಗಿ ಅಲ್ಲಿ ಊಟ ಮಾಡಿದರೆ ಆ ಬಳಿಕ ದನದ ಸೆಗಣಿಯಿಂದ ನಾವೇ ಜಾಗ ಪವಿತ್ರಗೊಳಿಸಬೇಕಿತ್ತು. ಇದೊಂದು ಅವಮಾನದ ಸಂಗತಿ. ಆದರೆ ಅವರ ಪ್ರೀತಿಯ ಮುಂದೆ ಇದು ನಮಗೆ ದೊಡ್ಡ ವಿಷಯವಾಗಿರುತ್ತಿರಲಿಲ್ಲ.

ಮರಿಭಟ್ಟರು ತಮ್ಮ ಹೊಟ್ಟೆ ನೇವರಿಸುತ್ತಾ ಆರಾಮ ಕುಳಿತು ನಮ್ಮೊಂದಿಗೆ ಹರಟುತ್ತಿದ್ದರು. ಕಾರ್ಕಳ ತಾಲೂಕು ಕಚೇರಿಯನ್ನು ಬ್ರಿಟಿಷರ ಕಾಲದಲ್ಲಿ ಕಟ್ಟುವಾಗಲೇ ನಾನು ನೋಡಿದ್ದೆ ಎಂದು ಅವರು ಹೇಳುವಾಗ ನಮಗೆ ರೋಮಾಂಚನ. ಅಪ್ಪ ಅರಣ್ಯ ಇಲಾಖೆಯ ನೌಕರನಾಗಿದ್ದುದಕ್ಕಿಂತಲೂ ಮುಖ್ಯವಾಗಿ ಅವರ ಯಕ್ಷಗಾನ ಪ್ರತಿಭೆಯ ಕಾರಣವಾಗಿ ಅಪ್ಪನೊಂದಿಗೆ ಮರಿಭಟ್ಟರಿಗೆ ಹೆಚ್ಚು ಪ್ರೀತಿ ಮತ್ತು ಒಡನಾಟ. ನಾವು ಕಾರ್ಕಳ ಬಿಡುವವರೆಗೂ ಈ ಸ್ನೇಹ ಹಾಗೆಯೇ ಮುಂದುವರಿಯಿತು.

ನಾವು ಹುಡಗರೇ ಸೇರಿ ಬಾವಿ ತೋಡಿದೆವು!

ಸರಸ್ವತಿ ಅಮ್ಮನಿಗೆ ನಮ್ಮ ಮೇಲೆ ಭಾರೀ ಪ್ರೀತಿ. ಯಾವ ಕಷ್ಟ, ನೋವನ್ನೂ ತೋರ್ಪಡಿಸದೆ ಗಂಡ ಮತ್ತು ಮಕ್ಕಳ ಚಾಕರಿ ಮಾಡುತ್ತಿದ್ದವರು ಅವರು. ನಾನು ಹೋದಾಗಲೆಲ್ಲ ಏನಾದರೂ ತಿನ್ನಲು ಕೊಡದೆ ಕಳಿಸುತ್ತಿರಲಿಲ್ಲ. ಅವರ ಪ್ರೀತಿಗೆ ಇನ್ನೂ ಒಂದು ಕಾರಣ ಇತ್ತು. ಕಾರ್ಕಳದ ಅನೇಕರ ಒಂದು ಸಮಸ್ಯೆಯೆಂದರೆ ನೀರಿನದು. ಎಲ್ಲೆಲ್ಲೂ ಹಾಸು ಪಾದೆಗಳು. ಹಾಗಾಗಿ, ಬಾವಿ ತೋಡಿದರೆ ಸಿಗುವುದು ನೀರಲ್ಲ, ಕಗ್ಗಲ ಪಾದೆ. ಮಣ್ಣಿನಡಿಯಲ್ಲಿ ಕಗ್ಗಲಿನ ಬೆಟ್ಟಗಳು. ಮರಿಭಟ್ಟರು ತಮ್ಮ ಮನೆಯ ಎದುರು ದೊಡ್ಡದೊಂದು ಬಾವಿ ತೋಡಿಸಿದರು. ಅದರಲ್ಲೂ ಸಿಕ್ಕಿದ್ದು ಪಾದೆ. ಮಳೆಗಾಲದಲ್ಲಿ ಮಾತ್ರ ಆ ಬಾವಿಯಲ್ಲಿ ನೀರು. ಇನ್ನೊಂದು ಬಾವಿ ತೋಡಿಸುವ ಬಗ್ಗೆ ಅವರು ಯೋಚಿಸುತ್ತಿದ್ದರು. ಅದಕ್ಕಾಗಿ ಅವರು ನಾಟಿ ವಿಧಾನದಲ್ಲಿ ನೀರು ಪತ್ತೆ ಹಚ್ಚಿ ಕೊಡುವ  ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಬಂದರು. ಆತ ಕೈಯಲ್ಲಿ ಕಡ್ಡಿ ಹಿಡಿದು, ಅದೇನೋ ತಂತ್ರ ಬಳಸಿ, ಅಲ್ಲಿ ಇಲ್ಲಿ ತಿರುಗಾಡಿ ಅಂತಿಮವಾಗಿ ಗದ್ದೆಯ ಒಂದು ಜಾಗ ತೋರಿಸಿದ.

ಸರಿ, ಬಾವಿ ತೋಡಬೇಕಲ್ಲ, ಕೂಲಿಯಾಳು ಯಾರು? ರಾತ್ರಿ ಹೊತ್ತು ವಿಶೇಷವಾಗಿ‌ ಹುಣ್ಣಿಮೆಯ ಆಸುಪಾಸಿನ ದಿನಗಳಲ್ಲಿ ನಾನು, ನನ್ನ ಅಣ್ಣ ಉಮೇಶ, ಶಂಕರ ಭಟ್‌, ಸುಬ್ರಹ್ಮಣ್ಯ ಭಟ್ ಸೇರಿಕೊಂಡು ಕೊಂಚ ಕೊಂಚವೇ ಬಾವಿ ತೋಡಲಾರಂಭಿಸಿದೆವು. ಎಲ್ಲರೂ ಇಪ್ಪತ್ತರ ಆಚೀಚೆಯ ಶಕ್ತಿಶಾಲಿ, ಉತ್ಸಾಹಿ ನವಯುವಕರು.

ಬಾವಿ ತೋಡುವಾಗ ಅಲ್ಲಿಗೇ ಸರಸ್ವತಿ ಅಮ್ಮನಿಂದ ಉಪ್ಪಿಟ್ಟು, ಚಹಾ ಬರುತ್ತಿತ್ತು. ನೀರು ಸಿಗುತ್ತದೆ ಎಂಬ ಯಾವ ಖಾತ್ರಿಯೂ ಇರಲಿಲ್ಲ. ಹಾಗಾಗಿ ಹುಡುಗಾಟಿಕೆಯಿಂದ ಜೋಕು ಹೇಳುತ್ತಾ ನಗುತ್ತಾ ಬಾವಿ ತೋಡುತ್ತಲೇ ಹೋದೆವು. ಈ ಕೆಲಸ ಸುಮಾರು ಒಂದು ತಿಂಗಳು ಇರಬಹುದು. ಬಾವಿ ಆಳವಾಗುತ್ತಾ ಹೋಯಿತು. ಆದರೂ ನೀರು ಸಿಗಲಿಲ್ಲ. ಎಲ್ಲರಿಗೂ ಬೇಸರ. ಹೀಗೆ ಒಂದು ದಿನ ಬಾವಿ ತೋಡಿ, ಮನೆಗೆ ಮರಳಿ, ಮಾರನೇ ದಿನ ಬಾವಿ ತೋಡಲು ಬಂದಾಗ ಬಾವಿಯಲ್ಲಿ ಒಂದಡಿಯಷ್ಟು ನೀರು ತುಂಬಿರಬೇಕೇ? ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ಅದು ನಿಜವಾದ ಒಸರು ನೀರು. ಬಾವಿಯನ್ನು ಇನ್ನೂ ಆಳ ಮಾಡಿದೆವು. ಮರಿಭಟ್ಟರ ಮನೆಗೆ ಶಾಶ್ವತ ನೀರಿನ ವ್ಯವಸ್ಥೆಯಾಯಿತು. ನಾವು ಹುಡುಗರೇ ಸೇರಿ ಹುಡುಗಾಟಿಕೆಯಿಂದ ಮಾಡಿದ ಕೆಲಸ. ಸಂಪ್ರದಾಯಸ್ಥ ಬ್ರಾಹ್ಮಣರೆಂದ ಮೇಲೆ ಅವರಿಗೆ ನೀರಿನ ಅಗತ್ಯ ಹೆಚ್ಚು. ಅವರ ನೀರಿನ ಸಮಸ್ಯೆ ಪರಿಹರಿಸಿದ ಕಾರಣ ಸರಸ್ವತಿ ಅಮ್ಮನ ಪ್ರೀತಿ ನಮ್ಮ ಮೇಲೆ ದುಪ್ಪಟ್ಟಾಯಿತು. ಅವರು ನಮ್ಮ ಕೆಲಸವನ್ನು ಎಂದೂ ಮರೆಯಲಿಲ್ಲ ಮತ್ತು ʼನಿಮ್ಮಿಂದಾಗಿ ನಮಗೆ ನೀರು ಸಿಕ್ಕಿತುʼ ಎಂದು ಹೇಳುತ್ತಲೇ ಇದ್ದರು.

ಕುದುರೆಮುಖ ಶಿಖರ

ಕುದುರೆಮುಖದ ಕಾಡಿನೊಳಗೆ

ಆ ದಿನಗಳಲ್ಲಿ ಅಪ್ಪನ ಸಂಬಳ ತಿಂಗಳಿಗೆ 544 ರುಪಾಯಿ. ಈ ಹಣದಲ್ಲಿಯೇ ಮನೆಯ ಖರ್ಚುವೆಚ್ಚ, ಮಕ್ಕಳ ಶಾಲಾ ಶುಲ್ಕ ಎಲ್ಲ ತೀರಬೇಕು. ಅಪ್ಪನಿಗೆ ಕುದುರೆಮುಖ ಭಾಗದ ವನಪಾಲಕನಾಗಿ ಕೆಲಸ. ಬಜಗೋಳಿ, ಮಾಳ ಇತ್ಯಾದಿ ಅವರ ಆಗಿನ ಕಾರ್ಯಕ್ಷೇತ್ರ. ಇದೇ ಹೊತ್ತಿನಲ್ಲಿ, ಇರಾನ್‌ ಮತ್ತು ಭಾರತ ಸರಕಾರದ ಒಪ್ಪಂದದಡಿಯಲ್ಲಿ ಕುದುರೆಮುಖ ಶಿಖರದಲ್ಲಿ ಕಬ್ಬಿಣದ ಅದಿರು ಕಂಪನಿಗಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಬೆಟ್ಟವನ್ನು ಕೊರೆದು ಕತ್ತರಿಸಿ ರಸ್ತೆ ನಿರ್ಮಿಸಲಾಗುತ್ತಿತ್ತು. ಈ ಕಾಮಗಾರಿ ನಡೆಸುತ್ತಿದ್ದವರು ಭಾರತೀಯ ಸೇನೆಗೆ ಸೇರಿದ ಗಡಿ ರಸ್ತೆ ನಿರ್ಮಾಣ ಸಂಸ್ಥೆಯವರು. ರಸ್ತೆಗಾಗಿ ಅಸಂಖ್ಯ ಮರಗಳ ಮಾರಣಹೋಮ ನಡೆಯುತ್ತಿತ್ತು. ಆಗೆಲ್ಲ ಈಗಿನಷ್ಟು ಪರಿಸರ ಕಾಳಜಿ ಇರಲಿಲ್ಲ. ಪರಿಸರ ಪರ ಹೋರಾಟಗಳೂ ಇರಲಿಲ್ಲ. ಹಾಗಾಗಿ ಯೋಜನೆಗೆ ಯಾವ ಅಡ್ಡಿಯೂ ಇರಲಿಲ್ಲ. ಅಲ್ಲದೆ ಅನೇಕ ಹಕ್ಕುಗಳು ಮೊಟಕುಗೊಂಡಿದ್ದ ತುರ್ತುಪರಿಸ್ಥಿತಿ ಕಾಲದಲ್ಲಿ ಮಂಜೂರಾದ ಯೋಜನೆ.

ಆಗ ಕುದುರೆಮುಖದಿಂದ ಮೋಪು ಸಾಗಿಸುವ ಕಾರ್ಯದಲ್ಲಿ ವಿಜಯಲಕ್ಷ್ಮಿ ಹೆಸರಿನ ಲಾರಿಗಳು ನಿರತವಾಗಿದ್ದವು. ಭಾರೀ ಶ್ರೀಮಂತ ಬಂಟ ಸಮುದಾಯದವರೊಬ್ಬರಿಗೆ ಸೇರಿದ ಲಾರಿಗಳು. ಇವರಿಗೆ ಪರವಾನಗಿ ಕೊಡುವ ಕೆಲಸ ಅಪ್ಪನದು. ಆ ಲಾರಿಗಳಲ್ಲಿ ಅಪ್ಪ ಆಳ ಕಾಡಿಗೆ ಹೋಗಿ ಬರುತ್ತಿದ್ದರು. ನಾನೂ ಒಮ್ಮೊಮ್ಮೆ ಹೋಗುತ್ತಿದ್ದೆ. ಕಾಡಿನ ಕೂಪಿನ ದಾರಿಯಲ್ಲಿ ಲಾರಿಗಳು ಮೋಪು ಹೊತ್ತು ತೇಲಾಡುತ್ತಾ, ಓಲಾಡುತ್ತಾ ಸಾಗುತ್ತಿದ್ದುದು ಒಂದು ರೋಮಾಂಚಕ ಮತ್ತು ಭಯಾನಕ ಅನುಭವ. ಕುದುರೆಮುಖ ಬೆಟ್ಟ ಶುರುವಾಗುವ ಬಜಗೋಳಿಯಲ್ಲಿ ನಿಂತರೆ ಬೆಟ್ಟಗಳನ್ನು ಆವರಿಸುವ ದಟ್ಟ ಮೋಡಗಳ ಅಮೋಘ ದೃಶ್ಯ. ಘಟ್ಟದ ಬುಡವಲ್ಲವೇ? ಯಾವ ಹೊತ್ತು ಮಳೆ ಶುರುವಾಗುತ್ತದೆ ಎನ್ನಲಾಗದು. ಅದೊಂದು ಮೋಹಕ ಅನುಭವ.

ಹಿರಿಯ ಅಣ್ಣ ಸುಬ್ರಹ್ಮಣ್ಯ ಶಂಕ್ರಾಣದಲ್ಲಿಯೇ ಇದ್ದು ಮರದ ಕಂಪೆನಿಯಲ್ಲಿ ತಾತ್ಕಾಲಿಕ ಉದ್ಯೋಗ ಮಾಡುತ್ತಿದ್ದ. ಕಿರಿಯ ಅಣ್ಣ ಉಮೇಶ ಮನೆಯಲ್ಲಿಯೇ ಇದ್ದು ಸಣ್ಣಪುಟ್ಟ ಉದ್ಯೋಗ ಮಾಡುತ್ತಿದ್ದ. ತಮ್ಮ ತಂಗಿಯರೆಲ್ಲ ಪಕ್ಕದಲ್ಲೇ ಇದ್ದ ದುರ್ಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದು ಮುಂದುವರಿಸಿದ್ದರು.

(ಮುಂದುವರಿಯುವುದು….)

ಶ್ರೀನಿವಾಸ ಕಾರ್ಕಳ

ಚಿಂತಕರು

More articles

Latest article

Most read