ಮಂಗಳೂರು, ಫೆ. 19 : ಬಿ. ಎಂ.ರೋಹಿಣಿಯವರು ಶಿಕ್ಷಣ, ಸಾಹಿತ್ಯ ವಲಯ ಸಾಂಸ್ಕೃತಿಕ ಸಂಘಟನೆಗಳು, ಸರಕಾರೇತರ ಸಂಘಟನೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಂದಿಗೂ ದಣಿವರಿಯದೆ ಕ್ರಿಯಾಶೀಲರಾಗಿದ್ದಾರೆ. ಬದುಕಿನಲ್ಲಿ ನಿವೃತ್ತಿಯೊಂದಿಗೆ ಎಲ್ಲವೂ ಮುಗಿಯುತ್ತ ಬಂದಿತು ಎಂದು ಅನೇಕರು ಭಾವಿಸುವ ಹೊತ್ತಲ್ಲಿ, ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು ನಿವೃತ್ತಿಯ ಬಳಿಕ ಅವರು ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟು ಗಣನೀಯ ಕೆಲಸ ಮಾಡಿದವರು. ತಮ್ಮೆಲ್ಲ ಚಿಂತನೆ, ವೈಚಾರಿಕತೆ, ಸಂಶೋಧನಾ ಆಸಕ್ತಿ ಮತ್ತು ಸೃಜನಶೀಲ ಪ್ರತಿಭೆಗಳನ್ನು ಬರಹಕ್ಕೆ ಇಳಿಸಿ, ಆ ಮೂಲಕ ಅಪಾರ ಅಭಿಮಾನಿ ಬಳಗ ಮತ್ತು ಓದುಗ ವರ್ಗವನ್ನು ಗಳಿಸಿಕೊಂಡವರು. ಇಂತಹ ರೋಹಿಣಿಯವರಿಗೆ ಅವರ ಗೆಳತಿಯರು, ಅಭಿಮಾನಿಗಳು, ಕರಾವಳಿಯ ವಿದ್ವತ್ ವಲಯ, ಶಿಷ್ಯರು, ಸಹೋದ್ಯೋಗಿಗಳು, ಅವರು ಒಡನಾಡಿದ ಎಲ್ಲ ಸಂಘ ಸಂಸ್ಥೆಯವರು ಒಗ್ಗೂಡಿ ಅವರ ಮೇಲಿನ ತಮ್ಮ ಪ್ರೀತಿ, ಅಭಿಮಾನ, ಗೌರವಗಳ ಅಭಿವ್ಯಕ್ತಿಗಾಗಿ ʼನಾಗರಿಕ ಸನ್ಮಾನʼ ಮಾಡುತ್ತಿದ್ದಾರೆ ಎಂದು ಅಭಿನಂದನಾ ಸಮಿತಿಯ ಸಬಿಹಾ ಭೂಮೀಗೌಡ ಹೇಳಿದರು.
ಅವರು ಬಿ ಎಂ ರೋಹಿಣಿ ಅಭಿನಂದನಾ ಸಮಿತಿ, ಮಂಗಳೂರು, ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳಗಂಗೋತ್ರಿ ಇವರ ಆಶ್ರಯದಲ್ಲಿ ನಡೆಯಲಿರುವ ಬಿ ಎಂ ರೋಹಿಣಿ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭದ ಕುರಿತು ಮಾತಾಡುತ್ತಿದ್ದರು.

ಬಿ ಎಂ ರೋಹಿಣಿಯವರು ಯಾಕೆ ಮುಖ್ಯವಾಗುತ್ತಾರೆ ಎಂದರೆ ಯಾರಾದರೂ ತೊಂದರೆಯಲ್ಲಿ ಇರುವುದನ್ನು ಗಮನಿಸಿ ಅವರಿಗೆ ಅಗತ್ಯ ಇರುವಂತಹ ಸಲಹೆಗಳನ್ನು, ನೆರವುಗಳನ್ನು ಒದಗಿಸಿಕೊಡುವುದು ಅವರ ಬದುಕಿನ ಒಂದು ಭಾಗ ಎಂಬಂತೆ ನಿಷ್ಠೆಯಿಂದ ಅವರು ಕೆಲಸ ಮಾಡಿದವರು. ಅಸಹಾಯಕರನ್ನು ಸಂಬಂಧಪಟ್ಟ ಸಂಸ್ಥೆಗಳ ಜೊತೆ ಜೋಡಿಸುವಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು ಎಂದು ಕೈ ಚೆಲ್ಲಿ ಕುಳಿತವರಲ್ಲ. ಬದಲಿಗ ಆಗಾಗ ಅಲ್ಲಿಗೆ ಹೋಗಿ ಅವರನ್ನು ವಿಚಾರಿಸಿಕೊಳ್ಳುವುದು, ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವುದು ಇತ್ಯಾದಿಗಳನ್ನು ನಿಷ್ಠೆಯಿಂದ ಮಾಡುವ ಕಾಳಜಿಯನ್ನು, ಅಂತ:ಕರಣವನ್ನು ಇರಿಸಿಕೊಂಡವರು. ರೋಹಿಣಿಯವರು ಇದುವರೆಗೆ ಒಟ್ಟು 23 ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ 12 ವಿವಿಧ ಕೃತಿಗಳ ಸಂಪಾದನೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತೆರೆಮರೆಯಲ್ಲೇ ಇದ್ದು ಕೆಲಸ ಮಾಡುತ್ತಲೇ ವಯಸ್ಸೆಂಬ ವಯಸ್ಸಿಗೆ ಸವಾಲು ಹಾಕಿ ಸಾಧನೆ ಮಾಡಿ ಮಾದರಿಯೊಂದನ್ನು ಕಟ್ಟಿಕೊಟ್ಟು ಇತರರಿಗೆ ರೋಹಿಣಿಯವರು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಅಪಾರ ಅಭಿಮಾನಿ ಬಳಗ, ಓದುಗ ವರ್ಗ, ಶಿಷ್ಯ ವೃಂದವನ್ನು ಹೊಂದಿದ ರೋಹಿಣಿಯವರಿಗೆ ದಿನಾಂಕ 21-02- 2026 ಶನಿವಾರದಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಪೂರ್ವಾಹ್ನ ಹತ್ತೂವರೆಗೆ ʼನಾಗರಿಕ ಸನ್ಮಾನʼ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಚೇಳ್ಯಾರು( ಕಾರ್ಯದರ್ಶಿ, ಅಭಿನಂದನಾ ಸಮಿತಿ), ಮರ್ಲಿನ್ ಮಾರ್ಟಿಸ್ ( ನಿರ್ದೇಶಕರು, ಡೀಡ್ಸ್ ಸಂಸ್ಥೆ) ಸುಮಲತಾ ಸುವರ್ಣ ( ಬಿಲ್ಲವ ಮಹಿಳಾ ವೇದಿಕೆ), ರೆನ್ನಿ ಡಿʼಸೋಜಾ ( ಪಡಿ) ದೇವಿಕಾ ನಾಗೇಶ್ ( ಕ.ಲೇ.ವಾ.ಸಂಘ) ಉಪಸ್ಥಿತರಿದ್ದು ತಮ್ಮ ತಮ್ಮ ಸಂಘಟನೆಗಳ ಕೆಲಸ ಕಾರ್ಯಗಳಲ್ಲಿ ರೋಹಿಣಿಯವರ ಕೊಡುಗೆಗಳನ್ನು ಸ್ಮರಿಸಿದರು.


