ಬೆಂಗಳೂರು : ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿಯನ್ನು ರಚಿಸಲಾಗುವುದು. ಪ್ರತಿ ವಾರ್ಡ್ ಹಾಗೂ ಪಂಚಾಯಿತಿಯಲ್ಲಿ ಐದು ಜನರಂತೆ, 7 ಸಾವಿರ ಪಂಚಾಯಿತಿ, 4 ಸಾವಿರ ವಾರ್ಡ್ ಗಳಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗುವುದು. ಆಮೂಲಕ ನಾವು ಎಷ್ಟು ನಾಯಕರನ್ನು ತಯಾರು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಂಕಲ್ಪ ಸಮಾವೇಶದಲ್ಲಿ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳನ್ನು ಯಾವ ಕಾರಣಕ್ಕೂ ರದ್ದು ಮಾಡುವುದಿಲ್ಲ. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿಯನ್ನು ರಚಿಸಲಾಗುವುದು ಎಂದರು.
ಈ ರಾಜ್ಯವನ್ನು ಮುನ್ನಡೆಸಲು ನನಗೆ ನೀವು ಹಾಗೂ ನಮ್ಮ ರಾಷ್ಟ್ರೀಯ ನಾಯಕರೆಲ್ಲರೂ ಸೇರಿ ಜವಾಬ್ದಾರಿ ನೀಡಿದ್ದೀರಿ. ನಾವು ಐದು ಗ್ಯಾರಂಟಿ ನೀಡಿದ್ದು, ಇದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಈ ಐದು ಗ್ಯಾರಂಟಿ ಜೊತೆಗೆ ಆರನೇ ಗ್ಯಾರಂಟಿ ಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಜನರ ಆಸ್ತಿ ದಾಖಲೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಕಂದಾಯ ಗ್ರಾಮಗಳನ್ನು ಸ್ಥಾಪಿಸಿ ಉಚಿತವಾಗಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.
‘ನಾನು ಹಾಗೂ ಹರಿಪ್ರಸಾದ್ ಅವರು ಒಂದೇ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಬೆಳೆದವರು. ನನಗಿಂತ 2-3 ವರ್ಷ ಬೇಗ ಚುನಾವಣೆ ಸ್ಪರ್ಧಿಸಿದರು. ಅವರು 1983ರಲ್ಲಿ ಚುನಾವಣೆ ಸ್ಪರ್ಧಿಸಿದರೆ, ನಾನು 1985ರಲ್ಲಿ ಸ್ಪರ್ಧೆ ಮಾಡಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ರಾಷ್ಟ್ರದೆಲ್ಲೆಡೆ ಪಕ್ಷ ಸಂಘಟಿಸಿರುವ ಹಿರಿಯ ನಾಯಕರಿಗೆ ಈ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡುತ್ತಿರುವುದು ಅತ್ಯಂತ ಸಮಾಧಾನ ತಂದಿದೆ ಎಂದರು.
ಇಡೀ ಸರ್ಕಾರ ಹಾಗೂ ಪಕ್ಷ ಹರಿಪ್ರಸಾದ್ ಅವರ ಜೊತೆಗೆ ಇರಲಿದೆ. ನಾನು ಮುಖ್ಯಮಂತ್ರಿಯಾಗಿದ್ದರೂ ಕಾರ್ಯಕರ್ತನಾಗಿ ನಿಮ್ಮ ಜತೆಗೆ ಕೆಲಸ ಮಾಡುತ್ತೇನೆ. 2028ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದು 2029ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿದ್ದೇವೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಸಿಕ್ಕ ಅವಕಾಶ ನಮಗೆ ಸಿಕ್ಕಿಲ್ಲ ಎಂದು ಬಿಜೆಪಿಯವರು ಕೈ ಹಿಸುಕಿಕೊಳ್ಳುತ್ತಿದ್ದಾರೆ. ನೀವು ಚಿಂತೆ ಮಾಡುವ ಅಗತ್ಯವಿಲ್ಲ. 2028ರಲ್ಲಿ ಹಾಗೂ 2029ರಲ್ಲೂ ನಿಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

