ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರೇ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಶಾಸಕ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಬಿಜೆಪಿಯ ಪ್ರತಿಸ್ಪರ್ಧಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಹೆಚ್ಚಿನ ಮತಗಳನ್ನು ಪಡೆದಿರುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದ್ದು, ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿದೆ.
ಏನಿದು ಪ್ರಕರಣ
2023ರ ವಿಧಾನಸಭಾ ಚುನಾವಣೆಯಲ್ಲಿ ನಂಜೇಗೌಡ ಕೇವಲ 248 ಮತಗಳಿಂದ ಗೆಲುವು ಸಾಧಿಸಿದ್ದರು. ಅವರು 50, 955 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಮಂಜುನಾಥ ಗೌಡ 50, 707 ಮತ ಗಳಿಸಿದ್ದರು. ನಂತರ ಮಂಜುನಾಥ ಗೌಡ ನ್ಯಾಯಾಲಯದಲ್ಲಿ ತಕಾರರು ಅರ್ಜಿ ಸಲ್ಲಿಸಿದ್ದರು. ಮತಗಳ ಮರು ಎಣಿಕೆ ಮತ್ತು ಫಲಿತಾಂಶಗಳನ್ನು ಹೊಸದಾಗಿ ಘೋಷಿಸಲು ಹೈಕೋರ್ಟ್ ಆದೇಶಿಸಿತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಂಜೇಗೌಡ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವರ್ಷ ಅಕ್ಟೋಬರ್ನಲ್ಲಿ ಮೇಲ್ಮನವಿಯನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್, ಮರು ಮತ ಎಣಿಕೆಗೆ ಆದೇಶಿಸಿ ಮರುಎಣಿಕೆ ಮಾಡಿದ ನಂತರ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶವನ್ನು ಸಲ್ಲಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಿತ್ತು.
2025ರ ನವೆಂಬರ್ 11 ರಂದು ಸುಪ್ರೀಂಕೋರ್ಟ್ ಸೂಚನೆಯಂತೆ ಈ ಕ್ಷೇತ್ರದ ಮರು ಮತ ಎಣಿಕೆ ನಡೆದಿತ್ತು. ಫಲಿತಾಂಶ ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿತ್ತು
ಶಾಸಕ ಕೆ.ವೈ ನಂಜೇಗೌಡ ಆಯ್ಕೆಗೆ ತಡೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಇಂದು ಕಕ್ಷಿದಾರರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆ ತೆರೆದು ಮರು ಎಣಿಕೆ ಮಾಡಿದ ಬಳಿಕವೂ ನಂಜೇಗೌಡ ಅವರೇ ಗೆದ್ದಿದ್ದಾರೆ ಎಂದು ಕೋರ್ಟ್ ಹೇಳಿದೆ. ನಂಜೇಗೌಡ 50,957 ಮತ್ತು ಮಂಜುನಾಥ್ ಗೌಡ 50,707 ಮತಗಳನ್ನು ಪಡೆದಿದ್ದು, ನಂಜೇಗೌಡ ಅವರೇ ಶಾಸಕರಾಗಿ ಮುಂದುವರೆಯುತ್ತಾರೆ ಎಂದು ನ್ಯಾಯಪೀಠ ತೀರ್ಪು ನೀಡಿದೆ.


