ವಯನಾಡ್(ಕೇರಳ): ವಯನಾಡ್ ಭೂಕುಸಿತದ ದುರಂತವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ವಯನಾಡ್ ಲೋಕಸಭಾ ಉಪಚುನಾವಣೆಗೆ
ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಕೆನಿಚರದಲ್ಲಿ ಪ್ರಚಾರ ನಡೆಸಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ನೋವು ತಂದ ದುರಂತವನ್ನುಬಿಜೆಪಿ ರಾಜಕೀಯಗೊಳಿಸುತ್ತಿದೆ. ಇಂದು ಅದೇ ಸ್ಥಳದಲ್ಲಿ ನಿಂತು ನಾವು ಪ್ರಚಾರ
ಪ್ರಾರಂಭಿಸಿದ್ದೇವೆ.
ಬಿಜೆಪಿಯ ಸಿದ್ಧಾಂತವು ದೇಶ ವಿರೋಧಿಯಾಗಿದೆ. ದ್ವೇಷ, ವಿಭಜನೆ ಮತ್ತು ವಿನಾಶದಿಂದ ಕೂಡಿದ್ದು, ಇದು ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಆ ಮೂಲಕ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬೆಲೆ ಏರಿಕೆ ನಿರಂತವಾಗಿದೆ. ಇಂತಹ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವತ್ತ ಬಿಜೆಪಿ ಗಮನಹರಿಸುವುದಿಲ್ಲ. ಬದಲಾಗಿ ಮೂಲಭೂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಏಕೆಂದರೆ ಯಾವುದೇ ಬೆಲೆ ತೆತ್ತಾದರೂ ಅಧಿಕಾರದಲ್ಲಿ ಉಳಿಯಬೇಕು ಎನ್ನುವುದು ಬಿಜೆಪಿಯ ಏಕೈಕ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ಒಂದು ಅವಕಾಶ ಕೊಟ್ಟರೆ, ನಿಮ್ಮ ಸಮಸ್ಯೆಗಳಿಗೆ ನಾನು ಧ್ವನಿಯಾಗುತ್ತೇನೆ. ನಿಮಗಾಗಿ ನಾನು ಹೋರಾಟ
ಮಾಡಲು ಸಿದ್ಧವಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆಎಂದು ಭರವಸೆ ನೀಡಿದರು.
ಜುಲೈನಲ್ಲಿ ಸಂಭವಿಸಿದ್ದ ವಯನಾಡ್ ಭೂಕುಸಿತ ದುರಂತದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಮನೆ, ಮಠ,
ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು.