Thursday, December 12, 2024

ಚಾ ಚಾ ನೆಹರೂ ಅವರೊಂದಿಗೆ ಇಂದಿನ ಚಹಾ..

Most read

ಇಡೀ ದೇಶದ ಭವಿಷ್ಯ ನಿರ್ಧರಿಸುವ ಹೊತ್ತಲ್ಲಿ, ಹೆಗಲ ಮೇಲಿದ್ದ ಹೊಣೆಗಾರಿಕೆಯನ್ನು ನಿಭಾಯಿಸುವ ಹೊತ್ತಲ್ಲಿ ನಾಡಿನ ಕುರಿತಂತೆ ಮುನ್ನೋಟವಿಟ್ಟುಕೊಂಡು ಪಾರದರ್ಶಕವಾಗಿ ನ್ಯಾಯ ಪಕ್ಷಪಾತಿಯಂತೆ ನಡೆದುಕೊಳ್ಳಲು ಶ್ರಮಿಸಿರುವ ನಾಯಕನೊಬ್ಬನ ಸಾಂದರ್ಭಿಕ ಪ್ರಮಾದಗಳನ್ನು ಹೇಳಿಕೊಂಡೇ ಜೀವನ ನಡೆಸಬೇಕಿರುವ ಮಂದಿಯ ಮುಂದೆ ಜವಾಹರಲಾಲ್ ನೆಹರೂ ಅವರು ಇನ್ನಷ್ಟು ದೊಡ್ಡವರಾಗಿ ಕಾಣುತ್ತಿದ್ದಾರೆ – ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯ ತಿಥಿಯನ್ನು ‘ಮಕ್ಕಳ ದಿನಾಚರಣೆ’ಯನ್ನಾಗಿ ಬಹಳ ಸಂಭ್ರಮದಿಂದ ಆಚರಿಸುವ ಸಡಗರಕ್ಕೆ ಸೂತಕದ ಛಾಯೆ ಬಳಿಯುವ ಚಿಂತನೆಯ ಪಂಥವೊಂದರ ಹುನ್ನಾರಗಳಿಗೆ ಬಲಿಯಾದದ್ದು ನೆಹರೂ ಅಂದುಕೊಂಡರೆ ನಮ್ಮಂತಹ ಮೂರ್ಖರು ಬೇರೆ ಯಾರೂ ಇರಲಾರರು. ಇತಿಹಾಸವನ್ನು ಬದಲಿಸಲಾಗದು ಎನ್ನುವುದು ಸತ್ಯವೇ ಆಗಿದ್ದರೂ ಉರಿ, ನಂಜಿನ, ಕರಿಹಚ್ಚುವ ಕೆಲಸದಲ್ಲೇ ಧನ್ಯತೆ ಕಂಡುಕೊಳ್ಳುವ ಪ್ರೇತಾತ್ಮಗಳ ಹುಚ್ಚಾಟವೂ ಮುಂದುವರಿಯುತ್ತಲೇ ಇದೆ. ಇರಲಿ ಬಿಡಿ, ಕತ್ತಲೆಗಂತೂ ಬೆಳಕಿನದ್ದೇ ಭಯ, ಸುಳ್ಳಿಗೆ ಸತ್ಯದ ಭಯವಾದರೆ ಅಹಿಂಸೆಗೆ ಹಿಂಸೆಯದ್ದೇ ಭಯ. ಅನ್ಯಾಯಕ್ಕೆ ಅಧಿಕಾರದ ಮೌನ ಸಮ್ಮತಿಯ ಅಭಯದ ಫಲ ಏನಿದ್ದರೂ ಸಂಶಯ, ಅಭದ್ರತೆ ಮತ್ತು ನೆಮ್ಮದಿಯ ನಾಶವಷ್ಟೇ. ಹಾಗಂತ ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದುಕೊಂಡು ಆಕಾಶದೆಡೆಗೆ ಮುಖ ಮಾಡಿ ನಿಲ್ಲುವುದೂ ಸರಿಯಾದ ನಿಲುವು ಆಗಲಾರದು. ದೇವರು ನಮ್ಮ ಕೆಲಸ ಆಗುವ ತನಕ ನಮ್ಮತ್ತ ಕಣ್ಣೆತ್ತಿಯೂ ನೋಡಲಾರ ಎನ್ನುವುದು ನಮಗೆ ಯಾವಾಗಲೂ ನೆನಪಿರಬೇಕು. ಹಾಗಾಗಿ ಪ್ರಶ್ನೆಗೆ ಉತ್ತರ, ಉತ್ತರ ಬೇಕಿದ್ದಾಗಲೆಲ್ಲ ಪ್ರಶ್ನೆ ಮಾಡುವ ಕಾಮಗಾರಿ ನಿರಂತರ ಸಾಗುತ್ತಲೇ ಇರಬೇಕು. ಇಲ್ಲದೇ ಹೋದರೆ ಕೋಗಿಲೆಯ ಗೂಡಲ್ಲಿ ಕಾಗೆಗಳ ವಾಸ ಖಾಯಂ ಆಗಿ ಬಿಡಬಹುದು.

ದೇಶ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ, ದೇಶದ ಒಳಗಿನ ಮತ್ತು ಹೊರಗಿನ ವಿದ್ಯಮಾನಗಳನ್ನು ಗಮನಿಸಿದರೆ, ನಾಯಕತ್ವದ ಮುಂದೆ ಇದ್ದ ಸವಾಲು ಎಷ್ಟು ಗುರುತರವಾದದ್ದು ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಲೇ ಗಾಂಧೀಜಿ, ಈ ಹೊಣೆಯನ್ನು ನೆಹರೂ ಅವರ ಹೆಗಲಿಗೆ ಏರಿಸಿದ್ದು. ಸರದಾರ್ ಪಟೇಲ್ ಅವರ ಬಗ್ಗೆ ಕಾಂಗ್ರೆಸ್‍ನ ಒಂದು ವಲಯದಲ್ಲಿ ಒಲವಿದ್ದದ್ದು ಹೌದಾದರೂ ವಿಶ್ವದ ಮತ್ತು ಭಾರತದ ಇತಿಹಾಸದ ಕುರಿತು ಹೆಚ್ಚು ಆಳವಾದ ಜ್ಞಾನ ಉಳ್ಳವರು ಮತ್ತು ಆ ಕಾಲದ ವಿದ್ಯಮಾನಗಳನ್ನು ಹೆಚ್ಚು ಸಮಂಜಸವಾಗಿ ಅರ್ಥಮಾಡಿಕೊಳ್ಳಬಲ್ಲವರು ಮತ್ತು ವಿಸ್ತಾರವಾದ ಮುನ್ನೋಟದಿಂದ ಆಲೋಚಿಸಬಲ್ಲವರು ಎನ್ನುವ ಗಾಂಧೀಜಿಯ ನಂಬಿಕೆಯೇ ನೆಹರೂ ಅವರ ಆಯ್ಕೆಯ ಹಿಂದೆ ಕೆಲಸ ಮಾಡಿತ್ತು. ದೇಶದ ಮೊದಲ ಪ್ರಧಾನಿಯಾಗಿ ನೆಹರೂ ಮಾಡಿದ ಕೆಲಸಗಳು ಅವರ ಆಯ್ಕೆಯನ್ನು ಸಮರ್ಥಿಸಿವೆ ಕೂಡಾ.

ರಾಜಕೀಯ ನಾಯಕರ ನಿರ್ಧಾರಗಳಲ್ಲಿ ಸರಿ, ತಪ್ಪುಗಳು ಸಹಜ. ತಪ್ಪು ಒಪ್ಪುಗಳ ಕುರಿತು ಮುಕ್ತವಾಗಿರುವ ಮತ್ತು ಆಡಳಿತದ ನಿರ್ಧಾರಗಳನ್ನು ಸಾರ್ವಜನಿಕವಾಗಿ ನಿಕಷಕ್ಕೆ ಒಡ್ಡಿಕೊಳ್ಳುವ ಎದೆಗಾರಿಕೆ ಎಲ್ಲರಲ್ಲಿರುವುದು ವಿರಳ. ಪ್ರಾಯಶಃ ತನಗೆ ದೊರೆತ ಹೊಣೆಗಾರಿಕೆಯ ಕುರಿತು ನೆಹರೂ ಅವರಲ್ಲಿ ಹೆಮ್ಮೆ ಇರುವಂತೆಯೇ ವಿನೀತ ಭಾವನೆಯೂ ಇದ್ದುದನ್ನು ನಾವು ಕಾಣಬಹುದು. ಸಾರ್ವಜನಿಕ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲವನ್ನು ದೇಶದ ಜನತೆ ನೀಡಿದಾಗ, ಇಂತಹ ಬೆಂಬಲ ತನ್ನನ್ನು ಸರ್ವಾಧಿಕಾರಿಯನ್ನಾಗಿ ಮಾಡದಿರಲಿ, ಎಂದುಕೊಂಡು ತನ್ನನ್ನು ತಾನೆ ಎಚ್ಚರಿಸುತ್ತಿದ್ದ ನೆಹರೂ ಅವರಲ್ಲಿ ಒಬ್ಬ ಮುತ್ಸದ್ದಿಯನ್ನು ನಾವು ಕಾಣಬಹುದು. ತನ್ನ ಜೀವಿತಾವಧಿಯಲ್ಲಿ ಒಂಭತ್ತು ವರ್ಷಗಳನ್ನು ಸೆರೆವಾಸದಲ್ಲಿ ಕಳೆದ ಜವಾಹರಲಾಲ್ ನೆಹರೂ ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮಬಾಳು ಎನ್ನುವ ತತ್ವದಲ್ಲಿ ನಂಬಿಕೆ ಉಳಿಸಿಕೊಂಡವರು. ಇಡೀ ಜಗತ್ತು ಆರ್ಥಿಕ ಸಂಕಷ್ಟದಲ್ಲಿ ನಲುಗಿರುವ ಹೊತ್ತಿಗೆ ಸಮಾಜವಾದವನ್ನು ಅನುಸರಿಸಿದ ಸೋವಿಯತ್ ಒಕ್ಕೂಟ ಸಾಮೂಹಿಕ ಒಡೆತನದ ಸಮಾಜವಾದೀ ಸಿದ್ಧಾಂತ ಪ್ರೇರಿತ ಆರ್ಥಿಕ ನೀತಿಯನ್ನು ಅನುಸರಿಸಿ ಸಾಮಾಜಿಕ ಪರಿವರ್ತನೆ ತರುತ್ತಿದ್ದ ರೀತಿಗೆ ನೆಹರೂ ಬೆರಗಾದದ್ದು ನಿಜವೇ. ಆದರೂ ಮುಂದೆ ಭಾರತೀಯ ಪರಿಸ್ಥಿತಿ, ಅದರ ಪರಂಪರೆಯನ್ನು ಅರಿತುಕೊಂಡ ನೆಹರೂ, ಸ್ವಾತಂತ್ರ್ಯ ಗಳಿಸಿದ ನಂತರ ಮಿಶ್ರ ಆರ್ಥಿಕ ನೀತಿಯನ್ನು ಒಪ್ಪಿಕೊಂಡವರು.

ವಿದೇಶೀ ರಾಜ ತಾಂತ್ರಿಕರು ನಮ್ಮ ದೇಶಕ್ಕೆ ಭೇಟಿ ಕೊಟ್ಟಾಗಲೆಲ್ಲ ನೆಹರೂ ಅವರು ಐವತ್ತರ ದಶಕದಲ್ಲಿ ಪ್ರಜಾತಂತ್ರ ಮತ್ತು ಅಲಿಪ್ತ ನೀತಿಯನ್ನು ಬಲಗೊಳಿಸಲು ಮಾಡಿದ ಪ್ರಯತ್ನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಐವತ್ತರ ದಶಕದಲ್ಲಿ ವಿಶ್ವದ ಪ್ರಬಲ ಶಕ್ತಿ ಕೇಂದ್ರಗಳಾದ ಅಮೇರಿಕಾ ಮತ್ತು ರಷ್ಯಾವನ್ನು ದೂರವಿರಿಸಿ, ಆಗತಾನೇ ಸ್ವಾತಂತ್ರ್ಯ ಪಡೆದ ಹೆಚ್ಚಾಗಿ ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳೇ ಇದ್ದ ಅಲಿಪ್ತ ನೀತಿಯನ್ನು ಅನುಸರಿಸುವ ಮೂರನೆಯ ಜಗತ್ತಿನ ಸೃಷ್ಟಿ ಸುಲಭದ ಮಾತೇನೂ ಆಗಿರಲಿಲ್ಲ. ಸುಕಾರ್ನೋ, ಮಾರ್ಷಲ್ ಟಿಟೋ ಅವರನ್ನು ಒಳಗೊಂಡು ನೆಹರೂ ಮಾಡಿದ ಈ ಪ್ರಯತ್ನದಿಂದಾಗಿ ಅಮೇರಿಕಾ ಮತ್ತು ರಷ್ಯಾದ ಎದುರು ಆರ್ಥಿಕವಾಗಿ, ರಾಜಕೀಯವಾಗಿ ಶಕ್ತರಲ್ಲದ ಆಗಷ್ಟೇ ಕಣ್ಣು ಬಿಡುತ್ತಿದ್ದ ದೇಶಗಳು ತಲೆ ಎತ್ತಿ ನಿಂತು ವ್ಯವರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಭಾರತ ಸರಕಾರದ ಅಂದಿನ ನೀತಿಗಳು ಪುಟ್ಟ ರಾಷ್ಟ್ರಗಳಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಗಳೊಂದಿಗೆ ವ್ಯವಹರಿಸಲು ಹೇಗೆ ಅವಕಾಶ ಕಲ್ಪಿಸಿತು ಎನ್ನುವುದಕ್ಕೆ ಅಲಿಪ್ತ ನೀತಿ ಒಂದು ನಿದರ್ಶನವಾಗಿದೆ

ಭಾರತದ ವಿಭಜನೆಯ ಕಾರಣ ಉಂಟಾದ ವಲಸಿಗರ ಸಮಸ್ಯೆಯನ್ನು, ಆಂತರಿಕವಾಗಿ ಸ್ಫೋಟಗೊಂಡಿದ್ದ ಹಿಂಸೆಯನ್ನು ನಿಭಾಯಿಸುವುದರೊಂದಿಗೇನೆ, ಹೊಸದಾಗಿ ಹುಟ್ಟಿದ ದೇಶಕ್ಕೊಂದು ಸಂವಿಧಾನ, ಅಭಿವೃದ್ಧಿಯ ನೀತಿ, ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಲು ದೇಶದ ಜನರಿಂದ ಒಪ್ಪಿಗೆ ಪಡೆಯುವ ದೃಷ್ಟಿಯಿಂದ ನಡೆಸಬೇಕಾಗಿದ್ದ ಚುನಾವಣೆಗಳು, ಅದರ ನಡುವೆ ನಾವು ಸ್ವತಂತ್ರರು ಎಂದು ರಾಗ ಎಳೆಯುತ್ತಿದ್ದ ಸ್ವತಂತ್ರ ರಾಜ ಮನೆತನಗಳ ಧೋರಣೆಯೇ ಮುಂತಾದ ಕ್ಲಿಷ್ಟ ಸಮಸ್ಯೆಗಳನ್ನು ನಿಭಾಯಿಸುವುದು ಸುಲಭದ ಕೆಲಸವೇನೂ ಆಗಿರಲಿಲ್ಲ. ಅತ್ತ ಕಾಶ್ಮೀರದ ಸಮಸ್ಯೆ ಇನ್ನೊಂದು ರೀತಿಯದ್ದು. ಒಂದು ವೇಳೆ ಅಲ್ಲಿಯ ಪರಿಸ್ಥಿತಿ ಕೈ ಮೀರಿದ್ದರೆ ಬುಡಕಟ್ಟು ಜನರ ದಂಗೆಯ ಹಿಂದಿದ್ದ ಪಾಕಿಸ್ತಾನದ ರಾಜಕೀಯ ಹಿತಾಸಕ್ತಿಯ ಕೈ ಮೇಲಾಗಿದ್ದರೆ?

ಸರದಾರ್ ವಲ್ಲಭ ಬಾಯಿ ಪಟೇಲ್, ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್, ರಾಜಗೋಪಾಲಚಾರಿ ಮುಂತಾದ ಧೀಮಂತ ನಾಯಕರ ಸಹಕಾರದಿಂದ ಜವಾಹರಲಾಲ್ ಅವರು ದೇಶಕ್ಕೊಂದು ಭದ್ರ ಬುನಾದಿಯನ್ನು ಹಾಕುವಲ್ಲಿ ಸಫಲರಾದದ್ದಂತೂ ಸತ್ಯ. ಏಷ್ಯಾದ ದೇಶಗಳನ್ನು ಒಗ್ಗೂಡಿಸಿ ಜಗತ್ತಿನಲ್ಲಿ ಮೂರನೆಯ ಶಕ್ತಿ ಕೇಂದ್ರದ ಸ್ಥಾಪನೆಯಾದರೆ, ಜಾಗತಿಕ ಶಾಂತಿ ನೆಲೆಸಲು, ಎಲ್ಲಾ ರಾಷ್ಟ್ರಗಳು ಹೆಚ್ಚು ಸ್ವಾಯತ್ತವಾಗಿರಲು ಸಾಧ್ಯವಾಗುತ್ತಿತ್ತೋ ಏನೋ? ಆದರೆ ಅದ್ಯಾಕೋ ಚೀನಾ ಯುದ್ಧದಲ್ಲಿ ಭಾರತದ ಹೀನಾಯ ಸೋಲು ಇಂತಹ ಸಾಧ್ಯತೆಗೆ ಎಳ್ಳುನೀರು ಬಿಟ್ಟಿತು ಎಂದು ಹೇಳಬಹುದು. ಮೇಲ್ನೋಟಕ್ಕೆ ಚೀನಾವನ್ನು ನೆಹರು ಅಗತ್ಯಕ್ಕಿಂತ ಹೆಚ್ಚು ನಂಬಿದರು ಎಂದೇ ತೋರುತ್ತದೆ. ನಮ್ಮ ವೈರಿಯ ಕೈ ಮೇಲಾಗಿರುವುದಕ್ಕೆ ನಮ್ಮ ದೌರ್ಬಲ್ಯವೂ ಕಾರಣವಾಗುತ್ತದೆ. ಇದಕ್ಕೆ ಪ್ರಧಾನ ಮಂತ್ರಿಯಾಗಿ ನೆಹರೂ ಉತ್ತರದಾಯಿಯಾಗಿರ ಬೇಕಾದದ್ದು ಸಹಜವೇ.

ಎಲ್ಲ ಮಿತಿಗಳ ಹೊರತಾಗಿಯೂ ನೆಹರೂ ಭಾರತ ದೇಶದ ಇಂದಿನ ಸ್ಥಿತಿಗತಿಗಳಿಗೆ ನೀಡಿದ ಕೊಡುಗೆ ಅಪಾರವಾದದ್ದು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ, ಬಹು ಭಾಷೆ, ಬಹು ಸಂಸ್ಕೃತಿಗಳಿರುವ ದೇಶವೆನ್ನುವ ಹೆಗ್ಗಳಿಕೆಗೆ ಬಹು ದೊಡ್ಡ ಬೆಲೆ ತೆತ್ತ ಕೆಲವೇ ಕೆಲವು ನಾಯಕರಲ್ಲಿ ನೆಹರೂ ಕೂಡಾ ಒಬ್ಬರು ಎನ್ನುವುದನ್ನು ಮರೆಯಲಾಗದು. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಉಳಿದುಕೊಂಡಿದ್ದರೆ ಅದರ ಹಿಂದೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆಹರೂ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪ್ರಭಾವವಿದೆ. ಇವತ್ತು ಜಾತ್ಯತೀತ ಮನೋಭಾವನೆಯ ಕುರಿತು ಬಹಳಷ್ಟು ಟೀಕೆಗಳನ್ನು ಮಾಡಲಾಗುತ್ತಿದೆ. ಪ್ರಾಯಶಃ ಇದರ ಹಿಂದಿರುವ ಗ್ರಹೀತ, ಉದ್ದೇಶಗಳನ್ನು ಸರಿಯಾಗಿ ಅರ್ಥೈಸದೆ ಇರುವುದೇ ಇಂತಹ ಅರೆಬೆಂದ ತಿಳುವಳಿಕೆಗಳಿಗೆ ಕಾರಣ ಎಂದು ಹೇಳಬಹುದು. ಅಧಿಕಾರದ ಕೇಂದ್ರಗಳು ಯಾವುದೇ, ಧರ್ಮ, ಜಾತಿ, ಮತ, ಪಂಥದ ಪ್ರಭಾವದಿಂದ ಹೊರತಾಗಿರಬೇಕು ಎನ್ನುವ ಆಶಯ ಸರಿಯಾದದ್ದೇ. ಅಧಿಕಾರದ ಕುರ್ಚಿಯಲ್ಲಿ ಕುಳಿತಾಗ ನಮ್ಮನ್ನು ನಿರ್ದೇಶಿಸಬೇಕಾದದ್ದು ನ್ಯಾಯ, ಅನ್ಯಾಯಗಳೇ ಹೊರತು ಬೇರೇನೂ ಅಲ್ಲ. ಈ ನ್ಯಾಯ ಅನ್ಯಾಯಗಳ ಕುರಿತ ವಿವೇಕ ಒಂದು ವಿಶಾಲವಾದ ಮಾನವೀಯತೆಯ ಆವರಣದೊಳಗೆ ನಿರ್ಧಾರವಾಗುವಂತದ್ದು. ಬಹುಷಃ ಸದ್ಯವೇ ನಿವೃತ್ತಿಯಾಗಲಿರುವ ಚಂದ್ರಚೂಡ್ ಅವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಗಮನಿಸಿದರೆ ಅಧಿಕಾರಸ್ಥರ ಅಹಂಕಾರದಿಂದ ನ್ಯಾಯವನ್ನು ಕಾಪಾಡಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ಅರಿವಾಗುತ್ತದೆ.

ಇಡೀ ದೇಶದ ಭವಿಷ್ಯ ನಿರ್ಧರಿಸುವ ಹೊತ್ತಲ್ಲಿ, ಹೆಗಲ ಮೇಲಿದ್ದ ಹೊಣೆಗಾರಿಕೆಯನ್ನು ನಿಭಾಯಿಸುವ ಹೊತ್ತಲ್ಲಿ ನಾಡಿನ ಕುರಿತಂತೆ ಮುನ್ನೋಟವಿಟ್ಟುಕೊಂಡು ಪಾರದರ್ಶಕವಾಗಿ ನ್ಯಾಯ ಪಕ್ಷಪಾತಿಯಂತೆ ನಡೆದುಕೊಳ್ಳಲು ಶ್ರಮಿಸಿರುವ ನಾಯಕನೊಬ್ಬನ ಸಾಂದರ್ಭಿಕ ಪ್ರಮಾದಗಳನ್ನು ಹೇಳಿಕೊಂಡೇ ಜೀವನ ನಡೆಸಬೇಕಿರುವ ಮಂದಿಯ ಮುಂದೆ ಜವಾಹರಲಾಲ್ ನೆಹರೂ ಅವರು ಇನ್ನಷ್ಟು ದೊಡ್ಡವರಾಗಿ ಕಾಣುತ್ತಿದ್ದಾರೆ. ಯಾರು ಏನೇ ಹೇಳಿದರೂ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತಿ, ಈ ನಾಡಿನಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರೆತು ಎಲ್ಲರೂ ಗೌರವದಿಂದ ಘನತೆಯಿಂದ ಬದುಕುವ ಹಾಗಾಗಬೇಕು ಎಂದು ಕನಸುಕಂಡು ಅದನ್ನು ನನಸು ಮಾಡಲು ದುಡಿದ ಕಾಯಕ ಜೀವಿ ಎನ್ನುವ ಸತ್ಯವನ್ನು ಮರೆಯಲಾಗದು. ಈ ದಾರಿಯಲ್ಲಿ ನಡೆದ ನೆಹರೂ ಎಡವಿರಬಹುದು…ಆದರೆ ನಡೆದಿದ್ದು ದಿಟ ತಾನೇ?

ಡಾ.ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ಮುಡಾ ಹಗರಣ ಮತ್ತು ಬಿಜೆಪಿ ನಾಯಕತ್ವದ ಸಮಸ್ಯೆ!

More articles

Latest article