ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಇದುವರೆಗೂ ಶೇ.10ರಷ್ಟು ಮತದಾನವಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಸಂಡೂರು ಕ್ಷೇತ್ರದಲ್ಲಿ 9 ಗಂಟೆಯವರೆಗೆ ಶೇ.10.11ರಷ್ಟು ಮತದಾನವಾಗಿತ್ತು. ಶಿಗ್ಗಾಂವಿಯಲ್ಲಿ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಶೇ.10.08 ರಷ್ಟು ಮತದಾನ ನಡೆದಿತ್ತು. ಇಲ್ಲಿ ಇದುವರೆಗೂ 23,951 ಮತದಾರರು ಹಕ್ಕು ಚಲಾಯಿಸಿದ್ದಾರೆ. ಚನ್ನಪಟ್ಟಣದಲ್ಲಿ ಅಷ್ಟೊಂದು ಉತ್ಸಾಹ ಕಂಡು ಬಂದಿಲ್ಲ. ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಶೇ. 8.20 ರಷ್ಟು ಮತದಾನವಾಗಿದೆ.
ಮೂರು ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ವಿಶೇಷವಾಗಿ ಯುವಕರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದಾರೆ. ಹಿರಿಯ ನಾಗರೀಕರೂ ಸಹ ಆಸಕ್ತಿಯಿಂದ ಮತಗಟ್ಟೆಗಳಿಗೆ ಆಗಮಿಸುತ್ತಿದ್ದರು.
ಮತದಾನಕ್ಕೂ ಮುನ್ನ ಅಭ್ಯರ್ಥಿಗಳು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು. ಅಭ್ಯರ್ಥಿಗಳು ಮತಯಂತ್ರಗಳಿಗೆ ಪೂಜೆ ಸಲ್ಲಿಸಿದ ಘಟನೆಗಳೂ ನಡೆದವು. ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ತಮ್ಮ ತಂದೆ ಬಸವರಾಜ ಬೊಮ್ಮಾಯಿ ಅವರೊಂದಿಗೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರೆಳಿ ಪೂಜೆ ಸಲ್ಲಿಸಿದರು. ಶಿಗ್ಗಾಂವಿಯಲ್ಲಿ ಭರತ್ ಮತ್ತು ಅವರ ತಂದೆ ಬಸವರಾಜ ಬೊಮ್ಮಾಯಿ ಹಕ್ಕು ಚಲಾಯಿಸಿದರು. ವಿಶೇಷ ಎಂದರೆ ಅನುಷಾ ಅವರು ಅಮೆರಿಕಾದಿಂದ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಚನ್ನಪಟ್ಟಣದ ಚಕ್ಕರೆ ಗ್ರಾಮದಲ್ಲಿ ಸಿ.ಪಿ. ಯೋಗೇಶ್ವರ್ ಅವರ ಸಹೋದರ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಪಿ.ರಾಜೇಶ್ ಚಕ್ಕೆರೆ ಗ್ರಾಮದಲ್ಲಿ ಮತ ಹಾಕಿದರು.