ಶಿವಮೊಗ್ಗ / ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪೌರಕಾರ್ಮಿಕರ ಹಾಜರಾತಿ ಕುರಿತು ನೀಡಿದ ಹೇಳಿಕೆಗೆ ಶಿವಮೊಗ್ಗದ ಸಾಮಾಜಿಕ ಹೋರಾಟಗಾರ ಪ್ರಕಾಶ ಕೋನಾಪುರ ಪ್ರತಿಕ್ರಿಯಿಸಿದ್ದು, ಪೌರಾಕಾರ್ಮಿಕರನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆಗಳಿಗೆ ನಿಯೋಜಿಸಲಾಗಿದೆಯೇ ಎಂದು ತನಿಖೆ ನಡೆಸಬೇಕು ಎಂದು ಆರೋಪಿಸಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ದೀರ್ಘ ಪೋಸ್ಟ್ ಮಾಡಿರುವ ಅವರು ಶಿಕಾರಿಪುರ ಪುರಸಭೆಯ ಉದಾಹರಣೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಸೇರಿದಂತೆ ಸ್ಥಳೀಯ ಅಧಿಕಾರಿಗಳ ಮನೆಗಳಿಗೆ ಸರ್ಕಾರಿ ಪೌರಕಾರ್ಮಿಕರನ್ನು ಮನೆಕೆಲಸಕ್ಕೆ ನಿಯೋಜಿಸಲಾಗುತ್ತಿದೆ ಎಂದು ಅವರು ಬರೆದಿದ್ದಾರೆ.
ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಬೆಳಗಿನ ತಪಾಸಣೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಹಾಜರಾತಿ ಪುಸ್ತಕದಲ್ಲಿ ಹಾಜರಿ ಹಾಕಿದ್ದರೂ ಅನೇಕ ಪೌರಕಾರ್ಮಿಕರು ಕರ್ತವ್ಯದಲ್ಲಿ ಇರಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಸುಮಾರು ಶೇ. 30ರಷ್ಟು ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ, ಕೆಲಸ ಮಾಡದವರನ್ನು ಏಕೆ ಖಾಯಂ ಮಾಡಬೇಕು ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರಕಾಶ ಕೋನಾಪುರ ನೇರ ಪತ್ರ ಬರೆದಿದ್ದು, ಮೇಲಾಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಬೆಂಗಳೂರಿನ ರಸ್ತೆಗಳಲ್ಲಿ ಇಲ್ಲದ ಪೌರಕಾರ್ಮಿಕರು ಕಾರ್ಪೊರೇಟರ್, ಎಂಎಲ್ಎ, ಎಂಪಿ, ಬಿಬಿಎಂಪಿ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಉನ್ನತ ಅಧಿಕಾರಿಗಳ ಮನೆಗಳಿಗೆ ಮನೆಕೆಲಸಕ್ಕೆ ನಿಯೋಜನೆಗೊಂಡಿರಬಹುದು. ದಯವಿಟ್ಟು ತನಿಖೆ ನಡೆಸಿ,” ಎಂದು ಜಿಬಿಎ ಸಚಿವ ಕೃಷ್ಣ ಭೈರೇಗೌಡರನ್ನು
ಅಗ್ರಹಿಸಿದ್ದಾರೆ.
ಕೋನಾಪುರ ಅವರ ಪ್ರಕಾರ, ಯಡಿಯೂರಪ್ಪ ಅವರು ರಾಜಕೀಯಕ್ಕೆ ಕಾಲಿಟ್ಟು ಶಿಕಾರಿಪುರ ಪುರಸಭೆಗೆ ಅಧ್ಯಕ್ಷರಾದಾಗಲೇ ಮೂವರು ಮಹಿಳಾ ಪೌರಕಾರ್ಮಿಕರನ್ನು ಅವರ ಮನೆಕೆಲಸಕ್ಕೆ ನಿಯೋಜಿಸಲಾಗಿತ್ತು.
ಮೂವರ ವಿವರ ಅವರು ಹೀಗೆ ನೀಡಿದ್ದಾರೆ:
- ಒಬ್ಬರನ್ನು ದೀರ್ಘಕಾಲ ಮನೆಕೆಲಸಕ್ಕೆ ದುಡಿಸಿಕೊಂಡು, ನಂತರ ಪೌರಕಾರ್ಮಿಕ ಕೆಲಸದಿಂದ ತೆಗೆದು ಖಾಸಗಿಯಾಗಿ ಸಂಬಳ ಕೊಟ್ಟು ನೇಮಿಸಿಕೊಳ್ಳಲಾಯಿತು.
- ಇನ್ನೊಬ್ಬರು ವೈಯಕ್ತಿಕ ಕಾರಣಕ್ಕಾಗಿ ಕೆಲಸ ಬಿಟ್ಟು ಹೋದರು.
- ಮೂರನೆಯವರು ಗೌರಮ್ಮ. ಅವರು ಇಂದಿಗೂ ಪುರಸಭೆಯ ಪೌರಕಾರ್ಮಿಕರಾಗಿ ನೇಮಕವಾಗಿದ್ದು, ಸಂಬಳ ಕರ್ನಾಟಕ ಸರ್ಕಾರದಿಂದ ಬರುತ್ತದೆ. ಆದರೆ ನಿಜವಾದ ಕೆಲಸ ಯಡಿಯೂರಪ್ಪ ಅವರ ಮನೆಕೆಲಸ. ಈ ರೀತಿ ಸುಮಾರು 25–30 ವರ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಗೌರಮ್ಮ ಅವರ ಗಂಡ ಪಾರ್ಶ್ವವಾಯು ಪೀಡಿತರು, ಸದಾ ಹಾಸಿಗೆಯ ಮೇಲೆ ಇದ್ದಾರೆ. ಗಂಡನ ಸೇವೆ ಮಾಡುತ್ತಲೇ ಯಡಿಯೂರಪ್ಪ ಅವರ ಮನೆಕೆಲಸಕ್ಕೆ ಹೋಗಬೇಕಾಗುತ್ತದೆ ಎಂದು ಕೋನಾಪುರ ಬರೆದಿದ್ದಾರೆ. ಈಕೆಯ ಫೋಟೋ ಒಂದನ್ನು ಸಹ ಅವರು ತಮ್ಮ ಫೇಸ್ಬುಕ್ ಪೋಸ್ಟ್ ಜೊತೆ ಹಾಕಿದ್ದಾರೆ.
https://www.facebook.com/100001666637281/posts/28627579296880910/?rdid=dYY6GrTaYtfP2GB2#
ಕೇವಲ ಯಡಿಯೂರಪ್ಪ ಅವರ ಮನೆ ಮಾತ್ರವಲ್ಲ, ಶಿಕಾರಿಪುರ ಪುರಸಭೆಯ ಪೌರಕಾರ್ಮಿಕರಲ್ಲಿ 8–10 ಮಂದಿಯನ್ನು ಈ ಕೆಳಗಿನ ಮನೆಗಳಿಗೆ ನಿಯೋಜಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ:
- ಯಡಿಯೂರಪ್ಪ ಅವರ ಮನೆ
- ಪುರಸಭೆ ಅಧ್ಯಕ್ಷರ ಮನೆ
- ಪುರಸಭೆ ಉಪಾಧ್ಯಕ್ಷರ ಮನೆ
- ಪುರಸಭೆ ಮುಖ್ಯಾಧಿಕಾರಿ ಮನೆ
- ಪುರಸಭೆ ಮುಖ್ಯ ಎಂಜಿನಿಯರ್ ಮನೆ
- ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಮನೆಗಳು
“ಶಿಕಾರಿಪುರದ ರೀತಿಯಲ್ಲಿ ಇಡೀ ಕರ್ನಾಟಕದಲ್ಲಿ ಪೌರಕಾರ್ಮಿಕರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತನಿಖೆ ನಡೆಸಿ ನಂತರ ಪೌರಕಾರ್ಮಿಕರ ಕುರಿತು ಮಾತನಾಡಿ,” ಎಂದು ಅವರು ಸಚಿವರಿಗೆ ಆಗ್ರಹಿಸಿದ್ದಾರೆ.
ಸರ್ಕಾರಿ ಅಥವಾ ಪುರಸಭಾ ಪೌರಕಾರ್ಮಿಕರ ಸಂಬಳ ತೆರಿಗೆದಾರರ ಹಣದಿಂದ ಬರುತ್ತದೆ. ಅವರ ನೇಮಕಾತಿ ನಗರ ಸ್ವಚ್ಛತೆ, ಮನೆಮನೆ ಕಸ ಸಂಗ್ರಹಣೆ ಮತ್ತು ಒಳಚರಂಡಿ ಕೆಲಸಕ್ಕಾಗಿ. ಅವರನ್ನು ಜನಪ್ರತಿನಿಧಿ ಅಥವಾ ಅಧಿಕಾರಿಯ ಖಾಸಗಿ ಮನೆಕೆಲಸಕ್ಕೆ ನಿಯೋಜಿಸುವುದು ಸಾರ್ವಜನಿಕ ಸಂಪನ್ಮೂಲದ ದುರುಪಯೋಗವಾಗುತ್ತದೆ. ಹಾಜರಾತಿ ಪುಸ್ತಕದಲ್ಲಿ “ಹಾಜರು” ಎಂದು ಗುರುತಿಸಿ ನಿಜಕ್ಕೂ ರಸ್ತೆಯಲ್ಲಿ ಇಲ್ಲದಿದ್ದರೆ, ಸಚಿವರು ಹೇಳುವ “ಗೈರುಹಾಜರಿ”ದ ಹಿಂದೆ ಆಡಳಿತದ ನಿಯೋಜನೆಯೇ ಇರಬಹುದು ಎಂಬುದು ಕೋನಾಪುರ ಅವರ ವಾದವಾಗಿದೆ.

