ಸರ್ಕಾರವು ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಅದ್ದೂರಿ ಪ್ರಚಾರ ನೀಡುವ ಬದಲು ಜನಸಾಮಾನ್ಯರ ಸಮಸ್ಯೆಗಳು, ಕಟ್ಟುಪಾಡುಗಳನ್ನು ಮೀರಿ ಬದುಕನ್ನು ಕಟ್ಟಿಕೊಳ್ಳುವ ಜೀವನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ರೂಪಿಸುವ ಗುರುತರ ಜವಾಬ್ದಾರಿ ಅದಕ್ಕಿದೆ – ರೇಶ್ಮಾ ಗುಳೇದಗುಡ್ಡಾಕರ್, ಯುವ ಬರಹಗಾರ್ತಿ.
ಏರುತ್ತಿರುವ ದಿನ ಬಳಕೆಯ ವಸ್ತುಗಳ ಬೆಲೆ, ಹೆಣ್ಣು ಮಕ್ಕಳ ಶೋಷಣೆ, ಭ್ರಷ್ಟಾಚಾರ ಮೂಲಸೌಕರ್ಯದ ಕೊರತೆಗಳು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಗೆಹರಿಯದೆ ದಿನ ದಿನಕ್ಕೂ ಹೊಸ ವಿನ್ಯಾಸವನ್ನು ಪಡೆದು ಜನರ ಮುಂದೆ ನಿಲ್ಲುತ್ತಿವೆ.
ಯಾವುದಾದರೂ ಒಂದು ಸರಕಾರಿ ಸೇವೆಯನ್ನು ಪಡೆಯಬೇಕು ಎಂದರೆ ಒಬ್ಬರಲ್ಲ ಇಬ್ಬರಲ್ಲ ಹತ್ತು ಮಂದಿಗಾದರೂ ನಾವು ಲಂಚವನ್ನು ತಿನ್ನಿಸಬೇಕು. ಯಾವ ಒಂದು ಸಣ್ಣ ಕೆಲಸವೂ ಆಗುವುದಿಲ್ಲ…ಇದನ್ನೆಲ್ಲಾ ಬರೆದು ಸಂಬಂಧ ಪಟ್ಟ ಇಲಾಖೆಗೂ ನಾವು ಕಳಿಸಿದೆವು ಎಂದರೆ ಇ-ಮೇಲ್ inbox is full, your message failed ಎಂದು ತೋರಿಸುತ್ತದೆ.
ಸಂಬಂಧಪಟ್ಟ ಇಲಾಖೆಗೆ ಕರೆ ಮಾಡಿ ಮಾತನಾಡಿದರೆ ಅವರು ಯಾರೂ ಸಮಸ್ಯೆಯನ್ನು ಸಮಸ್ಯೆ ಎಂದು ಪರಿಗಣಿಸುವುದೇ ಇಲ್ಲ. ನೀವು ಬರೆದು ಕಳಿಸಿ, what’sapp number ಕೊಡುತ್ತೇವೆ, email ಮಾಡಿ ಪೋಸ್ಟ್ ಮಾಡಿ, ಎಂದು ಹೇಳಿದ್ದನ್ನೇ ಪದೇ ಪದೇ ಹೇಳುತ್ತಿರುತ್ತಾರೆ. ಅಲ್ಲ ಸ್ವಾಮಿ ಇಮೈಲ್ ಮಾಡಿದ್ದೇವೆ ಇನ್ ಬಾಕ್ಸ್ ಫುಲ್ ಎಂದು ಬಂದಿದೆ ದಯವಿಟ್ಟು ಅದನ್ನು ತೆರೆದು ನೋಡಿ ಎಂದು ಹೇಳಿದರೆ ಅವರಿಂದ ಉತ್ತರವಿಲ್ಲ….
ಉತ್ತರ ಕರ್ನಾಟಕದಿಂದ ಸಮಸ್ಯೆಗಳನ್ನು ಹೊತ್ತುಕೊಂಡು ವಿಕಾಸ ಸೌಧ ವಿಧಾನಸೌಧಗಳಿಗೆ ಭೇಟಿ ನೀಡುವ ಜನರಿಗೆ ಕಡಿಮೆ ಏನು ಇಲ್ಲ. ಕೆಲವೊಮ್ಮೆ ಮಕ್ಕಳು ಹೆಂಡತಿಯರನ್ನು ಕಟ್ಟಿಕೊಂಡು ಆ ದೂರದ ಊರಿಂದ ಆಗಮಿಸಿ ಮತ್ತೆ ತಮ್ಮ ಕೆಲಸಕ್ಕಾಗಿ ಪರದಾಡುವ ಸಾವಿರಾರು ಜನರನ್ನು ಅಲ್ಲಿ ನಾವು ಕಾಣಬಹುದು. ಈ ವ್ಯವಸ್ಥೆಯನ್ನು ಸರ್ಕಾರ ಬದಲಾಯಿಸುವುದೇ?.

ಕೇವಲ ಬೆಳಗಾವಿಯಲ್ಲಿ ಅಧಿವೇಶನ ಮಾಡಿದರೆ ಸಾಕೆ ? ಉತ್ತರ ಭಾಗದ ಕೆಲಸಗಳನ್ನು ಅಲ್ಲಿಯೇ ಆಗುವಂತೆ ಯಾಕೆ ನೋಡಿಕೊಳ್ಳಬಾರದು?. ಕೇವಲ ಕರ್ನಾಟಕದಲ್ಲಿ ಬೆಂಗಳೂರನ್ನು ಎಷ್ಟು ಗುರಿ ಮಾಡಬೇಕು? ಅಲ್ಲಿಯ ಜನದಟ್ಟಣೆ, ಕೆಟ್ಟಿರುವ ಪರಿಸರ, ಅತಿಯಾಗಿರುವ ಮಾಲಿನ್ಯ ಇವುಗಳನ್ನು ಕಂಡಾದರೂ ನಾವು ಆ ನಗರಕ್ಕೆ ಪ್ರಾಶಸ್ತ್ಯವನ್ನು ಕೊಡಬೇಕಾದ ಅವಶ್ಯಕತೆ ಇದೆ.
ತಮ್ಮ ಇಲಾಖೆಯ ಕೆಲಸಗಳಿಗಾಗಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರುತ್ತಿರುವ ಸರ್ಕಾರಿ ಕೆಲಸಗಾರರಾಗಿರಬಹುದು ಅಥವಾ ಇತರೆ ಕೆಲಸಗಾರರು, ವ್ಯಾಪಾರಿಗಳಾಗಿರಬಹುದು ಅವರ ಅಳಲು ಅವರ ಗೋಳು ಹೇಳತೀರದು.
ಇತ್ತೀಚೆಗೆ ವಿಕಾಸಸೌಧಕ್ಕೆ ಇಬ್ಬರು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಬಂದ ಎಸ್ ಡಿ ಎ, ಎಫ್ ಡಿ ಎ, ಶಿಕ್ಷಕರು ಬಂದಿದ್ದರು. ಹಲವಾರು ಇಲಾಖೆಗಳಲ್ಲಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯರು ದೂರದ ಬೆಳಗಾಂ, ಬಿಜಾಪುರ, ಬೀದರ್, ಗುಲ್ಬರ್ಗಗಳಿಂದ ಆಗಮಿಸಿದ್ದರು. ವರ್ಷಗಳಲ್ಲಿ ಹಲವು ಬಾರಿ ನಾವು ಬೆಂಗಳೂರಿಗೆ ಭೇಟಿ ನೀಡಬೇಕಾಗುತ್ತದೆ ಮೇಡಂ ಯಾವ ಕೆಲಸವೂ ಆಗುವುದಿಲ್ಲ, ಈಗ ಬಾ ಆಗ ಬಾ ಎಂದು ಹೇಳುತ್ತಾರೆ. ಪುಟ್ಟ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಅನಾರೋಗ್ಯದ ಗಂಡಂದಿರು, ಮನೆಯವರನ್ನು ಬಿಟ್ಟು ನಮ್ಮ ಆರೋಗ್ಯವನ್ನು ನೋಡಿಕೊಂಡು ಬರಬೇಕಾದರೆ ಎಷ್ಟು ಕಷ್ಟ ಎಂದವರು ಅಳಲು ತೋಡಿಕೊಂಡರು. ಈ ಸಮಸ್ಯೆ ಆಳುವ ವರ್ಗಕ್ಕೆ ಸಮಸ್ಯೆ ಎನಿಸುತ್ತಿಲ್ಲವೇ?.
ಈ ಕುರಿತು ಸರ್ಕಾರ ಚಿಂತಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಲಿ. ಉತ್ತರ ಕರ್ನಾಟಕದಿಂದ ಅನೇಕ ಮಂತ್ರಿಗಳು ಸರ್ಕಾರದಲ್ಲಿ ಸಂಪುಟ ಸಚಿವರಾದರೂ ಅವರ್ಯಾರು ಈ ಯೋಚನೆ ಮಾಡಿಲ್ಲ, ಮಾಡುವುದೂ ಇಲ್ಲ. ಏಕೆಂದರೆ ಜನಸಾಮಾನ್ಯರಂತೆ ಅವರು ಬಸ್ ಅಥವಾ ರೈಲಲ್ಲಿ ಬರಲಾರರು, ಹೀಗಿದ್ದಾಗ ಅವರಿಗೆ ಜನಸಾಮಾನ್ಯರ ಕಷ್ಟಗಳು ಹೇಗೆ ತಿಳಿಯುತ್ತವೆ?.
ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸದೆ ಮತ್ತೆ ಮತ್ತೆ ನಮ್ಮ ಸರ್ಕಾರವೇ ಬರಲಿ, ನಮ್ಮ ಗ್ಯಾರಂಟಿ ಯೋಜನೆಗಳು ಎಷ್ಟು ವರ್ಷ ಪೂರೈಸಿವೆ?, ಬಸ್ಸುಗಳು ಎಷ್ಟು ಜನರನ್ನು ಹೊತ್ತುಕೊಂಡು ಓಡಾಡಿವೆ? ಎಂಬುದನ್ನೆಲ್ಲ ಜಾಹೀರುಗೊಳಿಸಲು ಅದ್ದೂರಿ ಸಭೆಗಳು ಯಾಕೆ?. ಜನಕ್ಕೆ ನಿಜವಾಗಲೂ ಏನು ಬೇಕು? ಅವರ ಸಮಸ್ಯೆಗಳೇನು ಎಂಬುದನ್ನು ನೋಡಲು ಯಾವ ಮಂತ್ರಿಗಳೂ ಸಿದ್ಧರಿಲ್ಲ. ಇನ್ನು ವಿರೋಧ ಪಕ್ಷ ಎನ್ನುವುದು ನಮ್ಮ ಕರ್ನಾಟಕದಲ್ಲಿ ಇಲ್ಲ ಎನ್ನುವಂತೆ ಅದು ಸತ್ತು ಬಿದ್ದಿದೆ. ಜನಸಾಮಾನ್ಯರ ಸಮಸ್ಯೆಗಳು ಅವರ ಪಾಲಿಗೆ ಸಮಸ್ಯೆಗಳಲ್ಲ. ಏನಿದ್ದರೂ ಕೇಸರಿ ಶಾಲನ್ನು ಎಲ್ಲಿಂದ ಮಾಡಿ ತರಿಸಬೇಕೆಂಬ ಯೋಜನೆಯನ್ನು ಮಾತ್ರ ಅವರು ಹಾಕಿಕೊಂಡಿದ್ದಾರೆ. ಇದು ನಮ್ಮ ಕರ್ನಾಟಕದ ದುರವಸ್ಥೆ.
ದಿನಾಂಕ 12 ರಂದು ಪ್ರಜಾವಾಣಿಯಲ್ಲಿ ಹಿರಿಯ ಲೇಖಕಿ ಮತ್ತು ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಅವರು ಸಾಂತ್ವನ ಕೇಂದ್ರಗಳನ್ನು ಸರ್ಕಾರ ಮುಚ್ಚುತ್ತಿರುವ ಬಗ್ಗೆ ಹಾಗೂ ಅಲ್ಲಿನ ವ್ಯವಸ್ಥೆಯ ಬಗ್ಗೆ ಸಮಗ್ರವಾಗಿ ಲೇಖನವನ್ನು ಬರೆದಿದ್ದಾರೆ.
ಒಂದು ಕಾಲದಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡಿದಾಗ ಕಾಂಗ್ರೆಸ್ ಸರ್ಕಾರ ಸಾಂತ್ವನ ಕೇಂದ್ರಗಳನ್ನು ಉಳಿಸುವ ಬಗ್ಗೆ ಧ್ವನಿ ಏರಿಸಿದೆ. ಆದರೆ ವಿಚಿತ್ರ ಎಂದರೆ ಈಗ ತಾನೇ ಅಧಿಕಾರದಲ್ಲಿದ್ದಾಗ ಅವುಗಳನ್ನು ನಿರ್ಲಕ್ಷ ಮಾಡಿರುವುದು ಎಷ್ಟು ಸರಿ?.
ಮಹಿಳೆಯರ ಖಾತೆಗೆ ಹಣ ಬಿದ್ದರೆ ಸಾಲದು. ಆ ಖಾತೆಯಲ್ಲಿನ ಹಣವನ್ನು ಯಾರು ಬಳಸುತ್ತಾರೆ ಎಂಬುದು ಮುಖ್ಯ. ಉಚಿತ ಪ್ರಯಾಣ ನಾವು ನೀಡಿದ್ದೇವೆ ಎಂದರೆ ಸಾಲದು. ಎಂತಹ ಬಸ್ಸುಗಳಲ್ಲಿ ಎಂತಹ ವಾತಾವರಣದಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ? ಅಲ್ಲಿ ಅವರಿಗೆ ಆಗುತ್ತಿರುವ ತೊಂದರೆಗಳೇನು? ಇವೆಲ್ಲವೂ ಮುಖ್ಯವಾಗುವುದಿಲ್ಲವೇ?.
ಕರ್ನಾಟಕದ ಬಹಳಷ್ಟು ಕೆರೆ ದಂಡೆಗಳ ಮೇಲೆ ಮನೆಗಳು ರಚನೆಯಾಗಿವೆ. ಕೆಲವು ಕೆರೆಗಳು ಕಣ್ಮರೆಯಾಗಿವೆ, ಜನರು ಕೆರೆಯ ದಂಡೆಗಳ ಮೇಲೆ ಮನೆಯನ್ನು ನಿರ್ಮಿಸಿದ್ದಾರೆ ಎಂಬ ಮಾತು ದೊಡ್ಡದಾಗಿ ಪತ್ರಿಕೆಯಲ್ಲಿ ಬಂದಿತ್ತು. ಆದರೆ ಅಲ್ಲಿ ಮನೆ ನಿರ್ಮಾಣ ಮಾಡಲು ಅವರಿಗೆ ಅನುಮತಿಯನ್ನು ನೀಡಿದವರು ಯಾರು?. ಈ ಬಗ್ಗೆ ಯಾಕೆ ಸರ್ಕಾರ ಮೌನ ವಹಿಸಿದೆ?. ಸಂಬಂಧಪಟ್ಟ ಇಲಾಖೆ ಅನುಮತಿಯನ್ನು ನೀಡದಿದ್ದರೆ ಮನೆಗಳು ಹೇಗೆ ನಿರ್ಮಾಣವಾಗುತ್ತಿದ್ದವು? ಈ ಕುರಿತು ಸರ್ಕಾರ ಏಕೆ ಕ್ರಮವಹಿಸುತ್ತಿಲ್ಲ?.
ಕಾನೂನಿನ ಯಾವ ನಿಯಮಗಳನ್ನು ಪಾಲಿಸದೆ ಆಳುವವರೇ ಬೇಕಾದಷ್ಟು ಆಸ್ತಿ ಮನೆಗಳನ್ನು ಹೊಂದಿರುವಾಗ ನೆಲ ಜಲವನ್ನು ಕೇಳುವರು ಯಾರು?
ಬದುಕಿನಲ್ಲಿ ನಿಲ್ಲದ ಈ ಸಮಸ್ಯೆಗಳ ಬಾಣಗಳ ನಡುವೆ ನಾವು ಬದುಕಬೇಕಿದೆ. ಸರ್ಕಾರವು ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಅದ್ದೂರಿ ಪ್ರಚಾರ ನೀಡುವ ಬದಲು ಜನಸಾಮಾನ್ಯರ ಸಮಸ್ಯೆಗಳು, ಕಟ್ಟುಪಾಡುಗಳನ್ನು ಮೀರಿ ಬದುಕನ್ನು ಕಟ್ಟಿಕೊಳ್ಳುವ ಜೀವನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ರೂಪಿಸುವ ಗುರುತರ ಜವಾಬ್ದಾರಿ ಅದಕ್ಕಿದೆ.
ರೇಶ್ಮಾ ಗುಳೇದಗುಡ್ಡಾಕರ್
ಯುವ ಬರಹಗಾರ್ತಿ
ಇದನ್ನೂ ಓದಿ- ಕ್ರಿಮಿನಲ್ ಕೇಸ್ ವಾಪಸ್ಸೀಕರಣ; ಅರಾಜಕ ವ್ಯವಸ್ಥೆಯ ಅನಾವರಣ


