ಬೆಂಗಳೂರು : ದಿನೇ ದಿನೇ ಸಿಲಿಂಡರ್ ಅಭಾವ ಹೆಚ್ಚಾಗುತ್ತಲೇ ಇದೆ. ವಾಣಿಜ್ಯ ಎಲ್ಪಿಜಿ ದರ ಹೆಚ್ಚಳ ಒಂದೆಡೆ. ಹೀಗಾಗಿ, ಹೋಟೆಲ್ ಗಳಲ್ಲಿ ತಿಂಡಿ-ಊಟ ಬೆಲೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ಎಚ್ಚರಿಕೆ ನೀಡಿದೆ.
ಇಡ್ಲಿ, ಮಸಾಲೆ ದೋಸೆ ಸೇರಿದಂತೆ ಜನಪ್ರಿಯ ಉಪಹಾರಗಳ ಬೆಲೆಯೂ ಏರಿಕೆಯಾಗಬಹುದು ಎಂಬ ಮುನ್ಸೂಚನೆಯನ್ನು ನೀಡಿದೆ. ಒಂದು ಪ್ಲೇಟ್ ಬಿರಿಯಾನಿ ದರ 350 ರಿಂದ 500 ರೂ., ಒಂದು ಪ್ಲೇಟ್ ಇಡ್ಲಿಯ ಬೆಲೆ ಸುಮಾರು 80-90 ರೂ., ಮಸಾಲೆ ದೋಸೆ ಸುಮಾರು 150 ರೂ., ಸಸ್ಯಾಹಾರಿ ಊಟ 250-300 ರೂ.ವರೆಗೆ ಹೆಚ್ಚಳವಾಗಲಿದೆ.
ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನ ನಿಯಮಗಳಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ (KSHA) ಸ್ಪಷ್ಟಪಡಿಸಿದೆ. ಜೊತೆಗೆ ಇದರಿಂದ ಗ್ರಾಹಕರ ಜೊತೆಗೆ ಸಣ್ಣ ಹೋಟೆಲ್ ಮಾಲೀಕರ ಮೇಲೂ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಂಘ ತಿಳಿಸಿದೆ.
ಕೆಲವೇ ತಿಂಗಳಲ್ಲಿ LPG ಸಿಲಿಂಡರ್ ದರ 1,884 ರೂ.ಗಳಿಂದ 3,152ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮತ್ತು ಕಸ ಸಂಗ್ರಹ ಸೆಸ್ ಶುಲ್ಕಗಳೂ ಹೋಟೆಲ್ ಉದ್ಯಮಕ್ಕೆ ಹೊರೆ ತರಲಿದೆ. ಪರಿಷ್ಕೃತ ವೇತನ ರಚನೆಯ ಪ್ರಕಾರ ವಲಯ 3 ತಾಲೂಕುಗಳಲ್ಲಿ ಕೌಶಲ್ಯರಹಿತ ಕೆಲಸಗಾರನಿಗೆ ಸುಮಾರು 19,300 ರೂ. ಮತ್ತು ವಲಯ 1 ಪ್ರದೇಶಗಳಲ್ಲಿ ಕೌಶಲ್ಯಪೂರ್ಣ ಕೆಲಸಗಾರನಿಗೆ ಸುಮಾರು 31,100 ರೂ. ವರೆಗೆ ಇರಲಿದೆ. ಹೋಟೆಲ್ಗಳು ಈಗಾಗಲೇ ಕಾರ್ಮಿಕರಿಗೆ ಊಟ, ವಸತಿ, ಯೂನಿಫಾರ್ಮ್ ಸೌಲಭ್ಯ ನೀಡುತ್ತಿರುವುದರಿಂದ ಈ ವಲಯವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

