ಬೀದಿ ಬದಿಯ ಅಂಗಡಿಗಳ ಎತ್ತಂಗಡಿ ಮತ್ತು ಮಹಿಳೆ

ನಗರದ ಸೌಂದರ್ಯ ಕೇವಲ ಗಾಜಿನ ಕಟ್ಟಡಗಳಲ್ಲಿ, ಅಗಲವಾದ ರಸ್ತೆಗಳಲ್ಲಿ ಇಲ್ಲ. ಅದರ ನಿಜವಾದ ಸೌಂದರ್ಯ ಇರುವುದು ಜನರ ಬದುಕಿನಲ್ಲಿ, ಅವರ ಬದುಕಿನ ವೈವಿಧ್ಯತೆಯಲ್ಲಿ. ಒಬ್ಬ ಮಹಿಳೆ ಬೀದಿಯಲ್ಲಿ ನಿಂತು ದುಡಿಯುವಾಗ ಆಕೆ ಕೇವಲ ತನ್ನ ಹೊಟ್ಟೆಪಾಡು ನೋಡಿಕೊಳ್ಳುತ್ತಿಲ್ಲ. ಅವಳು ತನ್ನ ಮಕ್ಕಳ ಭವಿಷ್ಯವನ್ನು ಕಟ್ಟುತ್ತಿರುತ್ತಾಳೆ. ಮುಂದಿನ ಪೀಳಿಗೆಗೆ ಶಿಕ್ಷಣದ ದಾರಿ ತೋರಿಸುತ್ತಿರುತ್ತಾಳೆ. ಸಮಾಜದ ಆರ್ಥಿಕ ಏಣಿಯಲ್ಲಿ ಒಂದು ಹೆಜ್ಜೆ ಮೇಲೇರಲು ಪ್ರಯತ್ನಿಸುತ್ತಿರುತ್ತಾಳೆ.ಪ್ರೊ.ಷಾಕಿರಾ ಖಾನಂ, ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

ಬೀದಿ ಬದಿಯ ಅಂಗಡಿಗಳನ್ನು ಎತ್ತಂಗಡಿ ಮಾಡುವ ದೃಶ್ಯ ಈಗ ನಮ್ಮ ನಗರಗಳ ನಿತ್ಯದ ಸಂಗತಿಯಾಗಿದೆ. ಬೆಳಗ್ಗೆ ಬುಲ್ಡೋಜರ್ ಸದ್ದು ಕೇಳಿದರೆ ಸಂಜೆವರೆಗೆ ನೂರಾರು ಬದುಕುಗಳು ಬೀದಿಗೆ ಬಿದ್ದಿರುತ್ತವೆ. ಈ ಕ್ರಿಯೆಯನ್ನು ಅಭಿವೃದ್ಧಿ, ಸೌಂದರ್ಯೀಕರಣ, ಸಂಚಾರ ಸುಗಮ ಎಂಬ ಪದಗಳಿಂದ ಸಮರ್ಥಿಸಲಾಗುತ್ತದೆ. ಆದರೆ ಈ ಬುಲ್ಡೋಜರ್ ಚಕ್ರಗಳ ಕೆಳಗೆ ಸಿಲುಕುವುದು ಕೇವಲ ಕಬ್ಬಿಣದ ತಗಡುಗಳು ಮತ್ತು ಮರದ ಹಲಗೆಗಳಲ್ಲ. ಅಲ್ಲಿ ನುಚ್ಚುನೂರಾಗುವುದು ಸಾವಿರಾರು ಬಡವರ ಅದರಲ್ಲೂ ಮುಖ್ಯವಾಗಿ ಮಹಿಳೆಯರ ಕನಸುಗಳು, ಅವರ ಮಕ್ಕಳ ಶಿಕ್ಷಣ, ವೃದ್ಧ ತಂದೆತಾಯಿಗಳ ಔಷಧದ ಖರ್ಚು ಮತ್ತು ಒಂದು ಇಡೀ ಕುಟುಂಬದ ಘನತೆ. ನಗರದ ಪಾಲಿಕೆಯ ಕಡತದಲ್ಲಿ ಅದು ಕೇವಲ ಅತಿಕ್ರಮಣ ತೆರವು ಕಾರ್ಯಾಚರಣೆ. ಆದರೆ ಒಬ್ಬ ಮಹಿಳೆಗೆ ಅದು ಅವಳ ಅಸ್ತಿತ್ವದ ಮೇಲಿನ ದಾಳಿ.

ಬೀದಿ ಬದಿ ವ್ಯಾಪಾರ ಮಾಡುವ ಬಡ ಹೆಣ್ಣು ಮಕ್ಕಳಿಗೆ ಅದು ಕೇವಲ ಉದ್ಯೋಗವಲ್ಲ. ಅದು ಸ್ವಾವಲಂಬನೆಯ ಮೊದಲ ಮೆಟ್ಟಿಲು. ನಮ್ಮ ಸಮಾಜದಲ್ಲಿ ಇಂದಿಗೂ ಅನೇಕ ಹೆಣ್ಣು ಮಕ್ಕಳಿಗೆ ಔಪಚಾರಿಕ ಶಿಕ್ಷಣದ ಅವಕಾಶವಿಲ್ಲದಿರುವುದು ನಮ್ಮ ಅಭಿವೃದ್ಧಿಯ ಸಾಧನೆ. ಗಂಡು ಮಕ್ಕಳನ್ನು ಓದಿಸಿ ಹೆಣ್ಣು ಮಕ್ಕಳನ್ನು ಮನೆಯ ಕೆಲಸಕ್ಕೆ ಸೀಮಿತಗೊಳಿಸುವ ಕುಟುಂಬಗಳು ಇನ್ನೂ ಇವೆ. ವಯಸ್ಸಾದ ಮೇಲೆ ಮದುವೆ, ಮಕ್ಕಳು, ಸಂಸಾರದ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಹೊರಗಡೆ ಹೋಗಿ ಎಂಟು ಗಂಟೆ ಕೆಲಸ ಮಾಡುವುದು ಅನೇಕರಿಗೆ ಸಾಧ್ಯವಾಗುವುದಿಲ್ಲ. ಸಣ್ಣ ಮಕ್ಕಳನ್ನು ಯಾರ ಬಳಿ ಬಿಡುವುದು, ಮನೆಗೆಲಸ ಯಾರು ಮಾಡುವುದು ಎಂಬ ಪ್ರಶ್ನೆಗಳು ಅವರನ್ನು ನಾಲ್ಕು ಗೋಡೆಗಳ ಮಧ್ಯೆ ಕಟ್ಟಿಹಾಕುತ್ತವೆ. ಬೀದಿ ಬದಿಯ ಅಂಗಡಿ ಈ ಎಲ್ಲ ಮಿತಿಗಳನ್ನು ದಾಟಲು ಇರುವ ಒಂದೇ ದಾರಿ. ಮನೆಯಿಂದಾಚೆ ತನ್ನ ಸಮಯಕ್ಕೆ ಸರಿಹೊಂದುವಂತೆ, ಮಕ್ಕಳನ್ನು ಕಣ್ಣೆದುರೇ ಇಟ್ಟುಕೊಂಡು ದುಡಿಯಲು ಒಂದು ವರ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ ತರಕಾರಿ ಹೆಚ್ಚಲು ಕೂರುವ ಲಕ್ಷ್ಮಮ್ಮ, ಮಧ್ಯಾಹ್ನದ ಊಟದ ನಂತರ ಬಿಡುವಾದಾಗ ಹೂವು ಕಟ್ಟುವ ಸರೋಜಾ, ಸಂಜೆ ಮಕ್ಕಳ ಹೋಮ್‌ವರ್ಕ್ ಮಾಡಿಸುತ್ತಲೇ ಚುರುಮುರಿ ಮಾರುವ ಫಾತಿಮಾ ಇವರೆಲ್ಲರ ಬದುಕಿಗೆ ಈ ಪುಟ್ಟ ಅಂಗಡಿಗಳೇ ಆಧಾರ.

ನಾಳೆಯ ಕತೆ ಏನು????

ಎತ್ತಂಗಡಿಯಾದಾಗ ಮೊದಲು ಕೈಕೊಡುವುದು ಮಹಿಳೆಯ ಆರ್ಥಿಕ ಸ್ವಾತಂತ್ರ್ಯ. ತಿಂಗಳಿಗೆ ಐದು ಸಾವಿರ, ಹತ್ತು ಸಾವಿರ ಸಂಪಾದಿಸುತ್ತಿದ್ದವಳು ಮರುದಿನದಿಂದಲೇ ಪರಾವಲಂಬಿ ಆಗುತ್ತಾಳೆ. ಗಂಡನ ಬಳಿ, ಮಗನ ಬಳಿ ಪ್ರತಿ ರೂಪಾಯಿಗೂ ಕೈಚಾಚ ಬೇಕಾಗುತ್ತದೆ. ಸ್ಯಾನಿಟರಿ ಪ್ಯಾಡ್ ತೆಗೆದುಕೊಳ್ಳಲು, ತನಗಿಷ್ಟವಾದ ಬಳೆ ಕೊಳ್ಳಲು, ತವರಿಗೆ ಹೋಗುವಾಗ ತಮ್ಮನಿಗೆ ಏನಾದರೂ ಕೊಡಲು ಮತ್ತೆ ಮತ್ತೆ ಯೋಚಿಸಬೇಕು. ಈ ಸ್ವಾತಂತ್ರ್ಯವನ್ನು ಕಳೆದುಕೊಂಡ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಹಣದ ಜೊತೆಗೆ ಕಳೆದುಹೋಗುವುದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ. ಮಕ್ಕಳನ್ನು ಯಾವ ಶಾಲೆಗೆ ಹಾಕಬೇಕು, ಮನೆಯಲ್ಲಿ ಏನು ಅಡುಗೆ ಮಾಡಬೇಕು ಎಂಬ ಸಣ್ಣ ಪುಟ್ಟ ವಿಷಯಗಳಲ್ಲೂ ಅವಳ ಮಾತಿಗೆ ಬೆಲೆ ಇಲ್ಲದಂತಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಗಂಡನ ಕ್ರೌರ್ಯ. ಏಕೆಂದರೆ ದುಡಿಯದವರ ಮಾತಿಗೆ ಕಿಮ್ಮತ್ತಿಲ್ಲ ಎಂಬುದು ನಮ್ಮ ಸಮಾಜದ ಅಲಿಖಿತ ನಿಯಮ ಮತ್ತು ಹೆಣ್ಣಿನ ಹಣೆಬರಹ.

ಈ ಎತ್ತಂಗಡಿಯ ಹಿಂದೆ ಇರುವ ತರ್ಕವನ್ನು ಒಮ್ಮೆ ನೋಡೋಣ. ಫುಟ್‌ಪಾತ್ ಅತಿಕ್ರಮಣವಾಗಿದೆ, ಸಂಚಾರಕ್ಕೆ ತೊಂದರೆ, ನಗರದ ಸೌಂದರ್ಯ ಹಾಳಾಗುತ್ತದೆ ಎನ್ನುತ್ತಾರೆ. ನಿಜ, ನಡೆದಾಡಲು ಜಾಗ ಬೇಕು. ಆದರೆ ಪ್ರಶ್ನೆ ಏನೆಂದರೆ, ಈ ನಗರ ಯಾರಿಗಾಗಿ. ಕೇವಲ ಕಾರಿನಲ್ಲಿ ಓಡಾಡುವವರಿಗಾಗಿ ಮಾತ್ರವೇ. ಆಫೀಸಿನಿಂದ ಬರುವಾಗ ದಾರಿಯಲ್ಲಿ ಸಿಗುವ ಕಡಿಮೆ ಬೆಲೆಯ ತರಕಾರಿ, ಹಣ್ಣು, ಬಿಸಿ ಬಿಸಿ ಮೆಕ್ಕೆಜೋಳವನ್ನು ಕೊಳ್ಳುವ ಲಕ್ಷಾಂತರ ಜನರಿಗೆ ಈ ಅಂಗಡಿಗಳು ಬೇಕು. ಅವುಗಳಿಲ್ಲದಿದ್ದರೆ ಮಾಲ್‌ಗೆ ಹೋಗಿ ದುಪ್ಪಟ್ಟು ಬೆಲೆ ಕೊಡಬಲ್ಲ ಕುಟುಂಬಗಳು ಎಷ್ಟಿವೆ?. ಬೀದಿ ಬದಿ ವ್ಯಾಪಾರಿಗಳು ನಗರದ ಬಡ ಮತ್ತು ಮಧ್ಯಮ ವರ್ಗದ ಜೀವನಾಡಿ. ಅವರನ್ನು ತೆಗೆದುಹಾಕಿದರೆ ನಗರದ ಒಂದು ವರ್ಗಕ್ಕೆ ಅನುಕೂಲ, ಮತ್ತೊಂದು ವರ್ಗಕ್ಕೆ ಅನ್ಯಾಯ.

ಮಹಿಳಾ ವ್ಯಾಪಾರಿಗಳ ಸಮಸ್ಯೆ ಇನ್ನೂ ಗಂಭೀರ.  ಒಂದು ದಿನದ ಎತ್ತಂಗಡಿ ಎಂದರೆ ಮೂರು ದಿನದ ಬಂಡವಾಳ ನಷ್ಟ. ಮತ್ತೆ ವ್ಯಾಪಾರ ಶುರು ಮಾಡಲು ಸಾಲ ಮಾಡಬೇಕು. ಮೀಟರ್ ಬಡ್ಡಿ ಸಾಲ ಅವರನ್ನು ಇನ್ನಷ್ಟು ಸಾಲದ ಕೂಪಕ್ಕೆ ತಳ್ಳುತ್ತದೆ.

ನಗರ ಯೋಜನೆಯಲ್ಲಿ ಮಹಿಳೆಯರ ದೃಷ್ಟಿಕೋನವೇ ಇಲ್ಲ. ಮಾಲ್‌ಗಳು, ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಕಟ್ಟುವಾಗ ಸಾವಿರಾರು ಕಾರುಗಳಿಗೆ ಪಾರ್ಕಿಂಗ್ ಮೀಸಲಿಡುತ್ತಾರೆ. ಆದರೆ ಬೀದಿ ಬದಿ ವ್ಯಾಪಾರಿಗಳಿಗೆ, ಅದರಲ್ಲೂ ಮಹಿಳೆಯರಿಗೆ ಸ್ಥಳ ಮೀಸಲಿಡುವ ಯೋಚನೆಯೇ ಬರುವುದಿಲ್ಲ. ಸರ್ಕಾರ ವೆಂಡಿಂಗ್ ಝೋನ್ ಮಾಡುತ್ತೇವೆ ಎನ್ನುತ್ತದೆ. ಆದರೆ ಆ ಝೋನ್‌ಗಳು ಎಲ್ಲಿ ಬರುತ್ತವೆ?. ನಗರದ ಹೊರವಲಯದಲ್ಲಿ, ಜನಸಂಚಾರವೇ ಇಲ್ಲದ ಕಡೆ. ಅಲ್ಲಿ ಹೋಗಿ ಯಾರು ವ್ಯಾಪಾರ ಮಾಡಿಯಾರು?. ಮಹಿಳೆಯರಿಗೆ ಸಂಜೆ ಏಳರ ನಂತರ ಆ ನಿರ್ಜನ ಪ್ರದೇಶಗಳು ಸುರಕ್ಷಿತವೇ?. ಅವರ ಮಕ್ಕಳನ್ನು, ಮನೆಯನ್ನು ಬಿಟ್ಟು ಅಷ್ಟು ದೂರ ಹೋಗಿ ಬರಲು ಸಾಧ್ಯವೇ?. ಈ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ.

ಎತ್ತಂಗಡಿಯ ಸಾಮಾಜಿಕ ಪರಿಣಾಮವನ್ನು ಗಮನಿಸಬೇಕು. ದುಡಿಮೆ ನಿಂತಾಗ ಮನೆಯ ವಾತಾವರಣ ಹದಗೆಡುತ್ತದೆ. ಗಂಡನಿಗೆ ಕುಡಿತದ ಚಟ ಹೆಚ್ಚಾಗುತ್ತದೆ. ಮನೆಯಲ್ಲಿ ಜಗಳ, ಹೊಡೆದಾಟ ಸಾಮಾನ್ಯವಾಗುತ್ತದೆ. ಇದರ ನೇರ ಪರಿಣಾಮ ಮಕ್ಕಳ ಮೇಲೆ ಆಗುತ್ತದೆ. ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ತಾಯಿ ದುಡಿಯುತ್ತಿದ್ದರೆ ಮಗಳಿಗೆ ಶಿಕ್ಷಣದ ಕನಸು ಕಾಣಲು ಸಾಧ್ಯ. ತಾಯಿಯೇ ಮನೆಯಲ್ಲಿ ಕೂತಾಗ ಮಗಳ ಭವಿಷ್ಯವೂ ನಾಲ್ಕು ಗೋಡೆಯೊಳಗೆ ಕಮರಿ ಹೋಗುತ್ತದೆ.

ಇಲ್ಲಿ ಇನ್ನೊಂದು ದೊಡ್ಡ ದ್ವಂದ್ವದ ಬಗ್ಗೆ ನಾವು ಮಾತನಾಡಲೇಬೇಕು. ಕಾನೂನು ಎಲ್ಲರಿಗೂ ಒಂದೇ ಆಗಬೇಕು ಎಂಬುದೇ ಪ್ರಜಾಪ್ರಭುತ್ವದ ಮೂಲ ತತ್ತ್ವ. ಆದರೆ ಬೀದಿ ಬದಿ ಅಂಗಡಿಗಳ ಎತ್ತಂಗಡಿಯ ಸಂದರ್ಭದಲ್ಲಿ ಈ ತತ್ತ್ವ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ?. ಶ್ರೀಮಂತರು ತಮ್ಮ ಬಂಗಲೆ, ಅಪಾರ್ಟ್‌ಮೆಂಟ್ ಮುಂದಿನ ಪಾಲಿಕೆಯ ಫುಟ್‌ಪಾತ್, ಉದ್ಯಾನವನದ ಜಾಗವನ್ನು ಆಕ್ರಮಿಸಿಕೊಂಡು ಗಾರ್ಡನ್ ಮಾಡಿಕೊಳ್ಳುತ್ತಾರೆ. ಕಾರು ಪಾರ್ಕಿಂಗ್‌ಗೆ ಶೆಡ್ ಹಾಕಿಕೊಳ್ಳುತ್ತಾರೆ. ಸೆಕ್ಯುರಿಟಿ ರೂಮ್ ಕಟ್ಟಿಕೊಳ್ಳುತ್ತಾರೆ. ಇದು ಕೂಡ ಅತಿಕ್ರಮಣವೇ. ಆದರೆ ಅಲ್ಲಿಗೆ ಬುಲ್ಡೋಜರ್ ಹೋಗುವುದಿಲ್ಲ. ನೋಟಿಸ್ ಕೂಡ ಹೋಗುವುದಿಲ್ಲ. ಏಕೆಂದರೆ ಅವರಿಗೆ ಪ್ರಭಾವ ಇದೆ, ಹಣ ಇದೆ, ವಕೀಲರಿದ್ದಾರೆ.

ಈ ದ್ವಂದ್ವ ನೀತಿಯೇ ಮಹಿಳಾ ಬೀದಿ ವ್ಯಾಪಾರಿಗಳಿಗೆ ದೊಡ್ಡ ಶಾಪ. ಕಾನೂನು ಮೊದಲು ಪ್ರಭಾವಿಗಳ ಮನೆಯ ಬಾಗಿಲು ತಟ್ಟಬೇಕು. ದೊಡ್ಡ ದೊಡ್ಡ ಮಾಲ್‌ಗಳ, ಶಾಪಿಂಗ್ ಕಾಂಪ್ಲೆಕ್ಸ್‌ಗಳ ಪಾರ್ಕಿಂಗ್ ಅತಿಕ್ರಮಣ ತೆರವು ಮಾಡಬೇಕು. ರಾಜಕಾರಣಿಗಳ, ಉದ್ಯಮಿಗಳ ಕಟ್ಟಡಗಳ ಅಕ್ರಮ ಕಿತ್ತುಹಾಕಬೇಕು. ಆಗ ಜನಸಾಮಾನ್ಯರಿಗೆ ಕಾನೂನಿನ ಮೇಲೆ ನಂಬಿಕೆ ಬರುತ್ತದೆ. ಬಡವರ ಹೊಟ್ಟೆ ಮೇಲೆ ಲಾಠಿ ಬೀಸುವುದು ಸುಲಭ. ಅವರಲ್ಲಿ ಕಾನೂನಿನ ನೆರವು ಪಡೆಯಲು ದುಡ್ಡಿಲ್ಲ, ಪತ್ರಿಕೆಗೆ ಹೇಳಿಕೆ ಕೊಡಲು ಪ್ರಭಾವವಿಲ್ಲ, ಕೋರ್ಟಿಗೆ ಅಲೆದಾಡಲು ಸಮಯವಿಲ್ಲ. ಅವರ ಅಳುವ ಧ್ವನಿ ವಿಧಾನಸೌಧದ ಗೋಡೆ ದಾಟಿ ಹೋಗುವುದಿಲ್ಲ. ಅದಕ್ಕೆ ಅವರೇ ಸದಾ ಸಾಫ್ಟ್ ಟಾರ್ಗೆಟ್.

ಎಲ್ಲಿಗೆ ಹೋಗೋದು ????

ಇದಕ್ಕೆ ಪರಿಹಾರ ಏನು?. ಎತ್ತಂಗಡಿ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ. ನಿಯಂತ್ರಣ ಮತ್ತು ವ್ಯವಸ್ಥಿತ ಯೋಜನೆ ಬೇಕು. ಮೊದಲನೆಯದಾಗಿ, ಪ್ರತಿ ವಾರ್ಡ್‌ನಲ್ಲೂ ಮಹಿಳಾ ವ್ಯಾಪಾರಿಗಳ ಸಮೀಕ್ಷೆ ಮಾಡಬೇಕು. ಅವರಿಗೆ ಗುರುತಿನ ಚೀಟಿ ನೀಡಬೇಕು. ಬೀದಿ ವ್ಯಾಪಾರಿಗಳ ಸಂರಕ್ಷಣೆ ಕಾಯ್ದೆ 2014 ಸಮರ್ಪಕವಾಗಿ ಜಾರಿಯಾಗಬೇಕು. ಈ ಕಾಯ್ದೆಯ ಪ್ರಕಾರ ಅವರನ್ನು ಒಕ್ಕಲೆಬ್ಬಿಸುವ ಮುನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಟೌನ್ ವೆಂಡಿಂಗ್ ಸಮಿತಿಯಲ್ಲಿ ಶೇಕಡಾ 40ರಷ್ಟು ಮಹಿಳಾ ಪ್ರತಿನಿಧಿಗಳು ಇರಬೇಕು. ಆಗ ಅವರ ಸಮಸ್ಯೆಗಳು, ಅವರ ಅಗತ್ಯಗಳು ನೀತಿ ರೂಪಿಸುವಾಗ ಪರಿಗಣನೆಗೆ ಬರುತ್ತವೆ.

ಎರಡನೆಯದಾಗಿ, ವೆಂಡಿಂಗ್ ಝೋನ್‌ ( ಸೂಕ್ತ ಸ್ಥಳಾವಕಾಶ)ಗಳನ್ನು ಜನನಿಬಿಡ ಪ್ರದೇಶದಲ್ಲೇ ಅಂದರೆ ಬಸ್ ನಿಲ್ದಾಣ, ಮಾರುಕಟ್ಟೆ, ಶಾಲಾ ಕಾಲೇಜುಗಳ ಹತ್ತಿರ ನಿರ್ಮಿಸಬೇಕು. ಅಲ್ಲಿ ಶೌಚಾಲಯ, ಕುಡಿಯುವ ನೀರು, ಮಕ್ಕಳನ್ನು ಕೂರಿಸಲು ಸಣ್ಣ ಶೆಡ್, ಸಿಸಿಟಿವಿ ಕ್ಯಾಮೆರಾದಂತಹ ಮೂಲಭೂತ ಸೌಕರ್ಯ ಇರಬೇಕು. ರಾತ್ರಿ ವೇಳೆ ಸರಿಯಾದ ದೀಪದ ವ್ಯವಸ್ಥೆ ಇರಬೇಕು. ಆಗ ಮಹಿಳೆಯರು ನೆಮ್ಮದಿಯಿಂದ ವ್ಯಾಪಾರ ಮಾಡಬಹುದು. ಮೂರನೆಯದಾಗಿ, ಅವರಿಗೆ ಆರ್ಥಿಕ ಸಾಕ್ಷರತೆ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಸ್ವಸಹಾಯ ಸಂಘಗಳ ಮೂಲಕ ಅವರನ್ನು ಸಂಘಟಿಸಬೇಕು. ಡಿಜಿಟಲ್ ಪೇಮೆಂಟ್ ತರಬೇತಿ ನೀಡಿದರೆ ಅವರ ವ್ಯಾಪಾರ ವೃದ್ಧಿಯಾಗುತ್ತದೆ. ಮೋಸ ಹೋಗುವುದು ತಪ್ಪುತ್ತದೆ.

ನಗರದ ಸೌಂದರ್ಯ ಕೇವಲ ಗಾಜಿನ ಕಟ್ಟಡಗಳಲ್ಲಿ, ಅಗಲವಾದ ರಸ್ತೆಗಳಲ್ಲಿ ಇಲ್ಲ. ಅದರ ನಿಜವಾದ ಸೌಂದರ್ಯ ಇರುವುದು ಜನರ ಬದುಕಿನಲ್ಲಿ, ಅವರ ಬದುಕಿನ ವೈವಿಧ್ಯತೆಯಲ್ಲಿ. ಬಣ್ಣ ಬಣ್ಣದ ಹೂವು ಮಾರುವ ಅಜ್ಜಿ, ಖಾರ ಮಂಡಕ್ಕಿ ಕಲಸಿಕೊಡುವ ಅಕ್ಕ, ಗಾಜಿನ ಬಳೆ ತೊಡಿಸುವ ತಂಗಿ ಇವರೆಲ್ಲರೂ ನಗರ ಸಂಸ್ಕೃತಿಯ ಭಾಗ. ಇವರನ್ನು ತೆಗೆದುಹಾಕಿ ನಿರ್ಮಿಸುವ ನಗರ ಭಾವನೆಗಳಿಲ್ಲದ ಸ್ಮಶಾನದಂತೆ. ಒಬ್ಬ ಮಹಿಳೆ ಬೀದಿಯಲ್ಲಿ ನಿಂತು ದುಡಿಯುವಾಗ ಆಕೆ ಕೇವಲ ತನ್ನ ಹೊಟ್ಟೆಪಾಡು ನೋಡಿಕೊಳ್ಳುತ್ತಿಲ್ಲ. ಅವಳು ತನ್ನ ಮಕ್ಕಳ ಭವಿಷ್ಯವನ್ನು ಕಟ್ಟುತ್ತಿರುತ್ತಾಳೆ. ಮುಂದಿನ ಪೀಳಿಗೆಗೆ ಶಿಕ್ಷಣದ ದಾರಿ ತೋರಿಸುತ್ತಿರುತ್ತಾಳೆ. ಸಮಾಜದ ಆರ್ಥಿಕ ಏಣಿಯಲ್ಲಿ ಒಂದು ಹೆಜ್ಜೆ ಮೇಲೇರಲು ಪ್ರಯತ್ನಿಸುತ್ತಿರುತ್ತಾಳೆ. ಶಕ್ತಿಭಾಗ್ಯ, ಅನ್ನಭಾಗ್ಯ, ಶಾದಿಭಾಗ್ಯ ದಂತಹ ಯೋಜನೆಗಳೊಂದಿಗೆ “ಫುಟ್ ಪಾತ್ ಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಗೆ ಭದ್ರತೆ ನೀಡಬೇಕಾಗಿದೆ.

ಅಭಿವೃದ್ಧಿ ಎಂದರೆ ಎಲ್ಲರನ್ನೂ ಒಳಗೊಂಡ ಬೆಳವಣಿಗೆ. ಕೆಲವರಿಗಾಗಿ ಬಹುಸಂಖ್ಯಾತರ ಬದುಕನ್ನು ಬಲಿಕೊಡುವುದು ಅಭಿವೃದ್ಧಿಯಲ್ಲ. ಬೀದಿ ಬದಿ ಅಂಗಡಿಗಳನ್ನು ತೆರವು ಮಾಡುವ ಮೊದಲು ಆ ಅಂಗಡಿಯ ಹಿಂದಿರುವ ಮಹಿಳೆಯ ಮುಖವನ್ನು ಒಮ್ಮೆ ನೋಡಿ. ಅಲ್ಲಿರುವುದು ಆತಂಕ, ಮಕ್ಕಳ ಚಿಂತೆ, ನಾಳೆಯ ಊಟದ ಬಗೆಗಿನ ಪ್ರಶ್ನೆ. ಒಂದು ನಗರದ ಆತ್ಮ ಇರುವುದು ಅದರ ಬೀದಿಗಳಲ್ಲಿ. ಅಲ್ಲಿ ಬೆವರಿಳಿಸಿ ದುಡಿಯುವ ಜನರಲ್ಲಿ. ಅವರನ್ನು ಒಕ್ಕಲೆಬ್ಬಿಸಿ, ಅವರ ಸ್ವಾಭಿಮಾನವನ್ನು ಹತ್ತಿಕ್ಕಿ ಕಟ್ಟುವ ಯಾವುದೇ ಅಭಿವೃದ್ಧಿ ಶಾಶ್ವತವಲ್ಲ. ಮೊದಲು ಶ್ರೀಮಂತರ ಅತಿಕ್ರಮಣ ತೆರವು ಮಾಡಿ. ಸೊಪ್ಪು ಮಾರುವ ಅಕ್ಕನನ್ನು ಅಪಹಾಸ್ಯ ಮಾಡುವವರ ಮನಸ್ಥಿತಿಗೆ ಕಾನೂನಿನ ಬಿಸಿ ಮುಟ್ಟಿಸಿ. ನಂತರ ನಿಯಮ ಪಾಲಿಸದ ಬಡ ವ್ಯಾಪಾರಿಗಳ ಬಗ್ಗೆ ಕ್ರಮ ಕೈಗೊಳ್ಳಿ. ಆಗ ಅದು ನ್ಯಾಯ ಎನಿಸುತ್ತದೆ. ಇಲ್ಲವಾದರೆ ಇದು ಕೇವಲ ಬಡವರ ಮೇಲೆ ಗದಾಪ್ರಹಾರವಾಗುತ್ತದೆ.. ಅವಳ ಕೈಯಲ್ಲಿರುವ ತಕ್ಕಡಿ ಕೇವಲ ತರಕಾರಿ ತೂಗುವ ತಕ್ಕಡಿಯಲ್ಲ. ಅದು ಕುಟುಂಬದ ಜವಾಬ್ದಾರಿಯಜೊತೆಗೆ ಇಡೀ ಪ್ರಪಂಚದ ನ್ಯಾಯವನ್ನು ತೂಗುವ ತಕ್ಕಡಿ. ಅಂತಹ ತಕ್ಕಡಿಯನ್ನು ಬುಲ್ಡೋಜರ್ ಮೂಲಕ ಕಿತ್ತೆಸೆದರೆ ಅದು ಅನ್ಯಾಯ ಮಾತ್ರವಲ್ಲ, ಅಮಾನವೀಯ ಕೂಡ. ಮಹಿಳೆಯೊಬ್ಬಳ ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇರಬಾರದು. ಏಕೆಂದರೆ ಅದು ಕೇವಲ ಕಾನೂನಿನ ಪ್ರಶ್ನೆಯಲ್ಲ. ಅದು ಮಾನವೀಯತೆಯ ಪ್ರಶ್ನೆ.

ಪ್ರೊ.ಷಾಕಿರಾ ಖಾನಂ

ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

More articles

Latest article

Most read