ನಾಡಪ್ರಭು ಕೆಂಪೇಗೌಡರ ಬದುಕಿನ ಶಕ್ತಿ ʼಮಹಾರಾಣಿ ಚೆನ್ನಮ್ಮʼ

ಇತಿಹಾಸದಲ್ಲಿ ರಾಜರ ಯಶಸ್ಸಿನ ಹಿಂದೆ ರಾಣಿಯರ ತ್ಯಾಗ, ಧೈರ್ಯ ಮತ್ತು ದೂರದೃಷ್ಟಿ ಇರುತ್ತದೆ. ನಾಡಪ್ರಭು ಕೆಂಪೇಗೌಡರ ಬದುಕಿನ ಆ ಶಕ್ತಿಯೇ ಮಹಾರಾಣಿ ಚೆನ್ನಮ್ಮ. ಇಂದು ಕೆಂಪೇಗೌಡರನ್ನು ಸ್ಮರಿಸುವಾಗ ಚೆನ್ನಮ್ಮನ ಕೊಡುಗೆಯನ್ನು ಮರೆಯುವುದು ಇತಿಹಾಸಕ್ಕೆ ಅನ್ಯಾಯ ಮಾಡಿದಂತೆ.

ಚೆನ್ನಮ್ಮ ಕೇವಲ ಪತ್ನಿಯಾಗಿರಲಿಲ್ಲ, ಕೆಂಪೇಗೌಡರ ಆಡಳಿತದ ನೆರಳು. ಯಲಹಂಕ ನಾಡು ಕಳ್ಳರ ಕಾಟ, ಬರದಿಂದ ನಲುಗಿದ್ದಾಗ ಕೆಂಪೇಗೌಡರು ಜನಸೇವೆಗೆ ತೊಡಗಿದರೆ, ಅರಮನೆಯ ಒಳಾಂಗಣವನ್ನು ಚೆನ್ನಮ್ಮ ಭದ್ರಪಡಿಸಿದರು. ರಾಜ್ಯಭಾರದ ಒತ್ತಡದಲ್ಲಿ ಅವರಿಗೆ ನೈತಿಕ ಸ್ಥೈರ್ಯ ತುಂಬಿದ ಧೀಮಂತ ಮಹಿಳೆ. 1537ರಲ್ಲಿ ಬೆಂಗಳೂರು ನಿರ್ಮಾಣದ ಕನಸು ಬಿತ್ತಿದಾಗ, ಹೊಸ ನಗರದ ಸಾಮಾಜಿಕ ಬುನಾದಿಯನ್ನು ಚೆನ್ನಮ್ಮ ಹಾಕಿದರು ಎಂದರೆ ತಪ್ಪಾಗಲಾರದು.

ಕೆಂಪೇಗೌಡರು ನಗರದ ಗಡಿ ಗುರುತಿಸಿದರೆ, ಚೆನ್ನಮ್ಮ ಆ ಗಡಿಯೊಳಗೆ ಸಂಸ್ಕೃತಿಯ ಗೋಡೆ ಕಟ್ಟಿದರು. ವೃತ್ತಿ ಆಧಾರಿತ ಪೇಟೆಗಳಲ್ಲಿ ವರ್ತಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಿದರು. ಬಳೇಪೇಟೆ, ಅರಳೇಪೇಟೆಯಲ್ಲಿ ಕಸುಬುಗಳಿಗೆ ಪ್ರೋತ್ಸಾಹ ದೊರಕಿದ್ದು ಚೆನ್ನಮ್ಮನರ ಕಾಳಜಿಯಿಂದ. ದೇವದಾಸಿ, ಬಾಲ್ಯ ವಿವಾಹ ನಿಷೇಧದ ಹಿಂದೆ ಚೆನ್ನಮ್ಮನ ಒತ್ತಾಸೆ ಇತ್ತು. ವಿಧವಾ ವಿವಾಹಕ್ಕೆ ಅರಮನೆಯಿಂದಲೇ ಮಾದರಿಯಾದರು. ಹೆಣ್ಣು ಮಕ್ಕಳ ಬೆರಳು ಕಡಿಯುವ ಅನಿಷ್ಟ ಪದ್ಧತಿಯನ್ನು “ಗಂಡು ಮಕ್ಕಳಿಗಿಲ್ಲದ ಅನಿಷ್ಟ ಹೆಣ್ಣು ಮಕ್ಕಳಿಗೇಕೆ” ಎಂದು  ಅದನ್ನು ನಿಷೇಧಿಸುವಂತೆ ಕೆಂಪೇಗೌಡರರಲ್ಲಿ ಮನವಿ ಮಾಡಿ ಸಂಪೂರ್ಣವಾಗಿಸಿದರು.

ಕೆಂಪೇಗೌಡರ ಕೃಷಿಯ ಕಾಳಜಿಯ ಧ್ಯೇಯಕ್ಕೆ ಚೆನ್ನಮ್ಮ ಜೀವ ತುಂಬಿದರು. ಧರ್ಮಾಂಬುಧಿ, ಕೆಂಪಾಂಬುಧಿ ಕೆರೆಗಳ ದಡದಲ್ಲಿ  ಘಟ್ಟ, ಮಂಟಪಗಳನ್ನು ನಿರ್ಮಿಸಲು ಹೆಗಲಿಗೆ ಹೆಗಲಾದರು.  ಮರಗಳ ಮಾರಣ ಹೋಮ ಆಗಬಾರದೆಂಬ ನಿಯಮವನ್ನು ಅರಮನೆಯ ಹಿತ್ತಲಿನಿಂದಲೇ ಜಾರಿಗೆ ತಂದರು. ಹಣ್ಣಿನ ಗಿಡ, ತುಳಸಿ ಬೆಳೆಸಿ ಪರಿಸರ ಕಾಳಜಿಯನ್ನು ಮನೆಮನೆಗೆ ಮುಟ್ಟಿಸಿದರು.

1560ರಲ್ಲಿ ಅಳಿಯ ರಾಮರಾಯ ಕೆಂಪೇಗೌಡರನ್ನು ಐದು ವರ್ಷ ಸೆರೆಮನೆಯಲ್ಲಿಟ್ಟಾಗ, ನಾಡಿನ ಒಳಿತಿಗಾಗಿ ಚೆನ್ನಮ್ಮ ಐದು ವರ್ಷ ಕೆಂಪೇಗೌಡರ ಜೊತೆ ಸೆರೆಮನೆಯಲ್ಲಿದ್ದು ಯುದ್ಧದ ರಕ್ತಪಾತವನ್ನು ತಪ್ಪಿಸಿದರು. ಕೋಟೆಯ ರಕ್ಷಣೆ ಭದ್ರಪಡಿಸಲು ಮಗನಿಗೆ ಮಾರ್ಗದರ್ಶಕರಾದರು. “ಗೆಲುವಿಗಿಂತ ಮಾನವೀಯತೆಗೆ ಒತ್ತು ನೀಡಿ ಗೆದ್ದ ನಂತರವೂ ಮನುಷ್ಯರಾಗಿ ಉಳಿಯುವುದು ಮುಖ್ಯ” ಎಂಬ ಪತಿಯ ತತ್ವವನ್ನು ಎತ್ತಿ ಹಿಡಿದರು. ರಾಜನ ಅನುಪಸ್ಥಿತಿಯಲ್ಲಿ  ರಾಜ್ಯ ನ್ಯಾಯದಿಂದ ನಡೆಯಬೇಕು ಎಂದು ತೋರಿಸಿಕೊಟ್ಟರು. ರಾಮರಾಯನಿಗೆ ಕಾಣಿಕೆ ಕೊಡುವ ಸಂದರ್ಭ ಬಂದಾಗ ಅವರು ಸೆರೆಮನೆಯಿಂದಲೇ ಸಂದೇಶವನ್ನು ಕಳುಹಿಸಿ “ನನ್ನ ವಜ್ರಾಭರಣಗಳನ್ನೆಲ್ಲ ಕಾಣಿಕೆಯಾಗಿ ಕೊಡುವ ಹಣದಲ್ಲಿ ಸೇರಿಸಿಕೊಳ್ಳಿ. ನನ್ನ ಸಂಪತ್ತು ನನ್ನೊಂದಿಗಿದೆ ನನಗ್ಯಾಕೆ ಬೇರೆ ಸಂಪತ್ತು. ಪ್ರಜೆಗಳ ಮೇಲೆ ತೆರಿಗೆ ಹೊರೆ ಹಾಕಬೇಡಿ ಎಂದು ಕೆಂಪೇಗೌಡರ ಧ್ವನಿಗೆ ಧ್ವನಿಯಾದರು.

ಪ್ರಜೆಗಳ ಶಿಕ್ಷಣಕ್ಕೆ ಆದ್ಯತೆ ನೀಡಿ ಪಾಠಶಾಲೆಗಳಿಗೆ ದಾನ ನೀಡಿದರು. ಗವಿ ಗಂಗಾಧರೇಶ್ವರ ದೇವಾಲಯದ ಉತ್ಸವ, ಬೆಂಗಳೂರು ಕರಗದಲ್ಲಿ ಎಲ್ಲ ಜಾತಿಯ ಜನರಿಗೆ ಅವಕಾಶ ಕಲ್ಪಿಸಿ ಕೆಂಪೇಗೌಡರ ಹೆಗಲಿಗೆ ಹೆಗಲಾದರು.

ಈ ಹೊತ್ತಿನಲ್ಲಿ ಚೆನ್ನಮ್ಮನ ವ್ಯಕ್ತಿತ್ವ ದಾರಿದೀಪ. ಆಡಳಿತದಲ್ಲಿ ಪಾರದರ್ಶಕತೆ, ಕುಟುಂಬದಲ್ಲಿ ಮೌಲ್ಯ, ಸಮಾಜದಲ್ಲಿ ಸಮಾನತೆ ತಂದರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ನಮನ.

ಚೆನ್ನಮ್ಮ ಇತಿಹಾಸದ ಅಡಿಟಿಪ್ಪಣಿಯಲ್ಲ, ನಾಡಪ್ರಭುಗಳ ಯಶೋಗಾಥೆಯ ಅರ್ಧ ಭಾಗ. ದೊಡ್ಡ ಕನಸು ಕಟ್ಟುವ ಗಂಡಸಿನ ಹಿಂದೆ ಆ ಕನಸನ್ನು ಕಾಪಾಡುವ ಹೆಣ್ಣಿನ ಶಕ್ತಿ ಇರುತ್ತದೆ ಎಂದು ಅವರ ಬದುಕು ಸಾರುತ್ತದೆ. ಕೆಂಪೇಗೌಡರು ಕಟ್ಟಿದ ಕೋಟೆ ಮರೆಯಾದರೂ, ಚೆನ್ನಮ್ಮ ತುಂಬಿದ ಕರುಣೆ, ಧೈರ್ಯ, ಸಾಮಾಜಿಕ ನ್ಯಾಯದ ಮೌಲ್ಯಗಳು ಅಮರ. ಆತ್ಮಬಲ ಬೆಂಗಳೂರನ್ನು ಮತ್ತೆ “ಕಲ್ಯಾಣ ನಗರ”ವನ್ನಾಗಿ ಮಾಡಲು ಕೆಂಪೇಗೌಡರ ದೂರದೃಷ್ಟಿಯ ಜೊತೆ ಚೆನ್ನಮ್ಮನ ಮಾತೃ ಹೃದಯವೂ ಬೇಕು. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡಾಗಲೇ ಇತಿಹಾಸಕ್ಕೆ ನಾವು ಸಲ್ಲಿಸುವ ನಿಜವಾದ ಗೌರವ.

ಪ್ರೊ. ಷಾಕಿರಾ ಖಾನಂ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯೆ.

ಇದನ್ನೂ ಓದಿ- ಸ್ಮರಣೆ | ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ

More articles

Latest article

Most read