ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಜೀವ ಬೆದರಿಕೆ ಹಾಕಿದ್ದಂತಹ ಯುವಕ ಸೋಹೆಲ್ ಪಾಶಾ ಎಂಬಾತನನ್ನು ಮುಂಬೈ ಪೊಲೀಸರು ರಾಯಚೂರಿನಲ್ಲಿ ಬಂಧಸಿದ್ದಾರೆ. ಈತ ಸಲ್ಮಾನ್ ಖಾನ್ ಮುಂಬರುವ ಸಿನಿಮಾದ ಗೀತ ಸಾಹಿತಿ ಆಗಿದ್ದನು ಎಂದು ತಿಳಿದು ಬಂದಿದ್ದು, ಆತನೇ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ್ದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ನವೆಂಬರ್ 7ರಂದು ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ಐದು ಕೋಟಿ ರೂಪಾಯಿ ಕೊಡದೇ ಇದ್ದರೆ ಸಲ್ಮಾನ್ ಹಾಗೂ ಸೋಹೆಲ್ನ (ಸಲ್ಮಾನ್ ಸಹೋದರ) ಕೊಲೆ ಮಾಡುತ್ತೇವೆ ಎಂದು ಸೋಹೆಲ್ ಪಾಶಾ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬಂಧಿಸಿದಂತೆ ವೊರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಮುಂಬೈ ಪೊಲೀಸರು ನಿರಂತರವಾಗಿ ತನಿಖೆ ನಡೆಸಿ, ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದಾಗ ಅದು ಕರ್ನಾಟಕದ ರಾಯಚೂರಿನ ವೆಂಕಟೇಶ್ ನಾರಾಯಣ ಎಂಬುವವರದು ಅನ್ನೋದು ತಿಳಿದಿದೆ. ರಾಯಚೂರಿಗೆ ಹೋಗಿ ನೋಡಿದಾಗ ಅವರ ಬಳಿ ಕೇವಲ ಬೇಸಿಕ್ ಸೆಟ್ ಇದ್ದು, ವಾಟ್ಸಾಪ್ ಇಲ್ಲ ಅನ್ನೋದು ತಿಳಿದುಬಂದಿದೆ. ಬೇಸಿಕ್ ಸೆಟ್ಗೆ ಮೂರನೇ ತಾರೀಕಿಗೆ ವಾಟ್ಸಾಪ್ ಲಾಗಿನ್ ಒಟಿಪಿ ಬಂದಿತ್ತು ಎಂಬುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ವೆಂಕಟೇಶ್ ನಾರಾಯಣ ರಾಯಚೂರಿನ ಮಾರುಕಟ್ಟೆಗೆ ದಿನಸಿ ತರಲು ಹೋಗಿದ್ದಾಗ ಯಾರೋ ಮೊಬೈಲ್ ಕೇಳಿದರು ಎಂದು ಹೇಳಿದ್ದಾನೆ.
‘ನಾನು ಮಾರುಕಟ್ಟೆಗೆ ಹೋದಾಗ ಓರ್ವ ವ್ಯಕ್ತಿ ಬಂದು ಮೊಬೈಲ್ ಸರಿ ಇಲ್ಲ ನಿಮ್ಮ ಮೊಬೈಲ್ ನೀಡಿ, ಕರೆ ಮಾಡಿ ಕೊಡುತ್ತೇನೆ ಎಂದು ಕೋರಿದ್ದ’ ಎಂಬುದಾಗಿ ವೆಂಕಟೇಶ್ ನಾರಾಯಣ ಹೇಳಿದ್ದಾರೆ. ಈ ರೀತಿ ಕರೆ ಮಾಡಿದವನೇ ಸೋಹೆಲ್ ಪಾಶಾ. ನಂತರ ಮನೆಗೆ ಹೋಗಿ ಈತನ ಬಂಧಿಸಲಾಗಿದೆ. ಸದ್ಯ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ. ಪಾಶಾ ಪಬ್ಲಿಸಿಟಿಗೆ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.