ಗೌರವಾನ್ವಿತ ಶಿವಶರಣ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳೇ…

Most read

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿಯ ಹೇಳಿಕೆಯನ್ನು ವಿರೋಧಿಸುವ ಮಾದಿಗರ ಮೇಲೆ ಪೊಲೀಸ್‌ ದೂರುಗಳು ದಾಖಲಾಗುತ್ತಿದ್ದು ಅದನ್ನು ವಿರೋಧಿಸಿ ಹೋರಾಟಗಾರ ಬಿ ಆರ್‌ ಭಾಸ್ಕರ್‌ ಪ್ರಸಾದ್‌ ಅವರು ಸ್ವಾಮೀಜಿಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.

ಸಮುದಾಯದ ಕಾಳಜಿ ಇರುವ ಯಾರೇ ಆದರೂ ನಿಮ್ಮ ಮೇಲೆ ಕೆಲವು ಆರೋಪ ಮಾಡುವ ಮೂಲಕ ಸಮುದಾಯದ ಪರವಾದ ಆತಂಕವನ್ನು ವ್ಯಕ್ತಪಡಿಸಿದಾಗ, ಸಮುದಾಯದ ಹಿರಿಯರು ಮಾರ್ಗದರ್ಶಕರೂ ಆಗಿ ತಾವು ಅವರ ಆತಂಕವನ್ನು ಅರ್ಥ ಮಾಡಿಕೊಂಡು ಅವರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮುಕ್ತ ಮಾತುಕತೆಗೆ ಮುಂದಾಗಬೇಕು. ಒಕ್ಕಲಿಗ ಸಮುದಾಯದ ಕೆಲವು ಪ್ರಗತಿಪರ ಚಿಂತಕರು ಕೆಲವು ಸಾರಿ ಯಾವುದೋ ಕಾರಣಕ್ಕಾಗಿ ಪೂಜ್ಯ ನಿರ್ಮಲಾನಂದ ಸ್ವಾಮೀಜಿಗಳ ಮೇಲೆ ಮುನಿಸುಗೊಂಡಾಗ, ಲಿಂಗಾಯತ ಅಥವಾ ಪಂಚಮಸಾಲಿಗಳು ತಮ್ಮ ಗುರುಗಳ ವಿರುದ್ಧ ಕೋಪ ಮಾಡಿಕೊಂಡು ಹೇಳಿಕೆಗಳನ್ನು ಕೊಟ್ಟಾಗ, ಆಯಾ ಸಮುದಾಯದ ಗೌರವಾನ್ವಿತ ಸ್ವಾಮೀಜಿಗಳು ಅವರನ್ನು ಕರೆದು ಮಾತಾಡಿ ಅವರುಗಳ ಆತಂಕವೇನೆಂದು ಕೇಳಿ ತಿಳಿದುಕೊಂಡು, ಅವರ ಆತಂಕದ ಕಾರಣವನ್ನು ಅರ್ಥ ಮಾಡಿಕೊಂಡು ಸಮಾಲೋಚಿಸಿ ಸಮಾಜವನ್ನು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರಲ್ಲ ಹಾಗೆಯೇ ತಾವೂ ಮಾಡಬೇಕಿರುವುದು. ಆದರೆ ತಾವು, ತಮ್ಮ ಮೇಲಿನ ಆರೋಪದ ಹಿಂದಿನ ಸಕಾರಣವನ್ನು, ಸಮುದಾಯ ಪರವಾದ ಆತಂಕದ ಹಿಂದಿನ ಕಾರಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಥವಾ ಆ ಬಗ್ಗೆ ಪರಸ್ಪರ ಸಮಾಲೋಚಿಸುವಲ್ಲಿ ಸೋತಿದ್ದೀರಿ. ಬದಲಾಗಿ ತಾವೇ ಮುಂದಾಗಿ ಯುದ್ಧ ಘೋಷಿಸುವ ಉತ್ಸಾಹ ತೋರಿದಂತೆ ಕಾಣುತ್ತಿದ್ದೀರಿ.

ಮಗುವನ್ನು ನಾಡಿನ ಸತ್ಪ್ರಜೆಯಾಗಿ ಬೆಳೆಸುವಲ್ಲಿ ಗುರು ಮತ್ತು ತಂದೆಯ ಜವಾಬ್ದಾರಿ ಬೇರೆ ಬೇರೆ ಅಲ್ಲ ಎಂದು ನಾನು ಭಾವಿಸಿರುತ್ತೇನೆ. ಇಲ್ಲಿ ಮಗು, ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಬಹುದು. ಕಾರಣ ಅದಿನ್ನೂ ಬೆಳೆಯುವ ಪೈರು. ಆದರೆ ತಾವು ಗುರುಗಳಾಗಿ ಗೊತ್ತಿದ್ದು ತಪ್ಪು ಮಾಡಬಾರದು. ತಮ್ಮ ಯಾವುದೇ ಒಂದು ನಡೆ ತಪ್ಪಾಗಿದೆ ಎಂದು ಸಮುದಾಯದ ಯಾರಿಗಾದರೂ ಅನ್ನಿಸಿ ಅದನ್ನು ವ್ಯಕ್ತಪಡಿಸಿದಾಗ ತಂದೆ ಸಮಾನರಾದ ತಾವುಗಳು ಅದನ್ನು ಗುರುವಿನ ಅಂತಃಕರಣದ ಹೃದಯದಿಂದ ನೋಡಬೇಕು. ಆದರೆ ತಾವು ಸಂಘಪರಿವಾರದ ಕನ್ನಡಕದಿಂದ ನೋಡಿದ್ದು ನಮ್ಮಲ್ಲಿ ಅತೀವವಾದ ನೋವನ್ನುಂಟು ಮಾಡಿದೆ. ಇದರ ಅರ್ಥ, ತಮ್ಮ ಮೇಲೆ ಆರೋಪ ಮಾಡಿದವರ ಮೇಲೆ ತಾವು ಪೊಲೀಸ್ ದೂರು ನೀಡಿಸಿದ ಮಾತ್ರಕ್ಕೆ, ಯಾರಾದರೂ ತಮ್ಮ ಮೇಲಿನ ಆರೋಪದಿಂದ ಹಿಂದೆ ಸರಿಯುತ್ತಾರೆ, ಹೆದರುತ್ತಾರೆ ಅಥವಾ ಹೋರಾಟವನ್ನು ಕೈ ಬಿಟ್ಟು ಬಿಡುತ್ತಾರೆ ಎಂದಲ್ಲ. ಅವರು ಹಾಗೆ ಹಿಂದೆ ಸರಿಯುವಂತೆ ನಾವು ಅವರನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡುವವರು ಅಲ್ಲ. ನಮ್ಮ ದುಃಖ ಏನೆಂದರೆ ಸಮುದಾಯದ ಗುರುಗಳೇ ಹೀಗೆ ಅಧೀರರಾದರೆ, ಸಮುದಾಯದ ಮಾರ್ಗದರ್ಶಕರೇ ಹೀಗೆ ವಿವೇಚನೆ ಕಳೆದುಕೊಂಡರೆ, ಕೈ ಹಿಡಿದು ನಡೆಸಬೇಕಾದವರೇ ಹೀಗೆ ದಾರಿ ತಪ್ಪಿದರೆ, ಕಾಯುವವನೇ ಕೊಲ್ಲಲು ನಿಂತನೇ! ಎನ್ನುವಂತೆ ತಂದೆಯೇ ಹೀಗೆ ಕ್ರೂರನು ಅಸಹಾಯಕನು ಆಗಿಹೋದರೆ, ಗುರುವನ್ನೂ ತಂದೆಯಂತೆಯೇ ಕಾಣುವ ಸಮುದಾಯವಾದರೂ ಯಾರನ್ನು ನಂಬಬೇಕು? ಯಾರನ್ನು ಪೊರೆಯಬೇಕು?. ಸರ್ವರಿಂದಲೂ ಒಂದೊಂದು ಕಲಿತು ಸರ್ವಜ್ಞ ತಾನಾದನೆಂಬಂತೆ, ಮಾದರ ಚನ್ನಯ್ಯ ಗುರು ಮಠವು ಸಮುದಾಯದ ಜನರಿಂದ ಆಗಿದ್ದೇ ಹೊರತು, ಮಠದಿಂದ ಜನರ ಸೃಷ್ಟಿ ಆಗಲಿಲ್ಲ ಎಂಬುದನ್ನು ಸಮುದಾಯದ ಗುರುಗಳಾಗಿ ತಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂತಹ ಸೂಕ್ಷ್ಮಗಳನ್ನು ನಾನು ತಮಗೆ ಅರ್ಥ ಮಾಡಿಸುವ ಸಂದರ್ಭ ಬಂದಿದ್ದಕ್ಕಾಗಿ ನನಗೆ ಅತೀವ ನೋವಾಗಿದೆ.

ಮಾದಿಗ ಸಮುದಾಯದವರೇ ಆದ ಯತಿರಾಜ್ ಬ್ಯಾಲಹಳ್ಳಿ ಅವರು ಬರೆದಿರುವ ಬಹಿರಂಗ ಪತ್ರವು ಕೇವಲ ಅವರ ವೈಯಕ್ತಿಕ ಪತ್ರವಾಗಿರುವುದಿಲ್ಲ. ಆ ಪತ್ರ ಮತ್ತು ಅದರಲ್ಲಿ ನಾವು ತಮ್ಮ ಮೇಲೆ ಮಾಡಿರುವ ಆರೋಪ ಹಾಗೂ ಹಕ್ಕೊತ್ತಾಯವು ಸಮುದಾಯದ ಪರವಾಗಿ ಚಿಂತಿಸುವ ನಮ್ಮೆಲ್ಲರ ಒಪ್ಪಿಗೆಯಿಂದಲೇ ಬರೆದಿರುವ ಪತ್ರವಾಗಿರುತ್ತದೆ. ಸಂಬಂಧಿಸಿದಂತೆ ತಾವುಗಳು ಯಾವಾಗಲಾದರೂ ಸರಿ, ನಾವು ತಮ್ಮೊಡನೆ ಮಾತು ಕತೆಗೆ ಸಿದ್ಧರಾಗಿದ್ದೇವೆ. ತಾವುಗಳು ದಯಮಾಡಿ ನಮ್ಮ ಆತಂಕ ಮತ್ತು ಕಾಳಜಿಯನ್ನು ಅರ್ಥ ಮಾಡಿಕೊಂಡು ಕೂಡಲೇ ಮಾತುಕತೆಗೆ ಮುಂದಾಗಬೇಕು ಮತ್ತು ಸಮುದಾಯವನ್ನು ಅಭಿವೃದ್ಧಿಯೆಡೆಗೆ ಒಟ್ಟಿಗೆ ಕೊಂಡೊಯ್ಯುವ ಮನಸ್ಸು ಮಾಡಬೇಕು ಎಂದು ವಿನಂತಿಸುತ್ತೇನೆ. ಅಥವಾ ತಾವು ನಮ್ಮ ಮನವಿಗೆ ಸ್ಪಂದಿಸದೆ, ಸಂಘರ್ಷಕ್ಕೇ ಇಳಿಯುತ್ತೇವೆ ಎನ್ನುವುದಾದರೆ, ಇಂತಹದ್ದೇ ನಮ್ಮ ಹಕ್ಕೊತ್ತಾಯದ ಪತ್ರಗಳು, ಹೋರಾಟಗಳು, ಘೆರಾವುಗಳು ಹಾಗೂ ಇನ್ನಿತರೆ ಕಠಿಣ ಮಾದರಿಯ ನಮ್ಮ ಹೋರಾಟದ ಕಾರಣಗಳಿಂದಾಗಿ ತಾವು ನಮ್ಮ ಮೇಲೆ ಮತ್ತಷ್ಟು FIR ಗಳನ್ನು ಹಾಕಿಸಲು ಸಿದ್ಧರಾಗಿರಿ ಎಂದು ತಮ್ಮಲ್ಲಿ ಅಷ್ಟೇ ಗೌರವದಿಂದ ವಿನಂತಿಸುತ್ತಿದ್ದೇವೆ.

ಜೈ ಭೀಮ್

ಗೌರವಗಳೊಂದಿಗೆ,

ಬಿ ಆರ್ ಭಾಸ್ಕರ್ ಪ್ರಸಾದ್

ಹೋರಾಟಗಾರರು

More articles

Latest article