ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ನಡೆಸಿದ ಜಂಟಿ ಪ್ರತಿಭಟನೆಗೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಭಾನುವಾರ ಪ್ರತಿಕ್ರಿಯಿಸಿದ್ದು, ಪಕ್ಷದ ನಾಯಕ ಸೌರಭ್ ದಾಸ್, “ಜ್ಞಾನೂ, ನಿನ್ನ ಆಟ ಮುಗಿಯಿತು ಬ್ರೋ!” (Gyanu, it’s done bro!’)
ಎಂದು ಹೇಳಿದ್ದಾರೆ.
ಮುಂಬೈ ಬಿಎಂಸಿ ಪ್ರಧಾನ ಕಚೇರಿಯ ಬಳಿ ನಡೆದ ಜಂಟಿ ಪ್ರತಿಭಟನಾ ರ್ಯಾಲಿಯಲ್ಲಿ, ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಈ ಇಬ್ಬರೂ ನಾಯಕರು SIR ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಮಹಾರಾಷ್ಟ್ರದಲ್ಲಿ SIR ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.
“ಈ ಪ್ರತಿಭಟನೆಯು ಮತದಾರರ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ” ಎಂದು ಉದ್ಧವ್ ಠಾಕ್ರೆ ಹೇಳಿದರು. ದೇಶಾದ್ಯಂತ ಮತದಾರರ ಪಟ್ಟಿಯಿಂದ “13 ಕೋಟಿ ಜನರ” ಹೆಸರುಗಳನ್ನು ಕೈಬಿಡಲಾಗಿದೆ ಎಂದು ಪ್ರತಿಪಾದಿಸಿದ ಅವರು, “ಸರ್ವಾಧಿಕಾರಿಯನ್ನು ಕೆಳಗಿಳಿಸಲು ನಾವು ಇಂದು ಇಲ್ಲಿ ನಿಂತಿದ್ದೇವೆ” ಎಂದು ನುಡಿದರು. ಅಲ್ಲದೆ, ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಪ್ರಶ್ನೆ ಎತ್ತಿದ ಅವರು, “ಜ್ಞಾನೇಶ್ ಕುಮಾರ್ ಅವರನ್ನು ಹೇಗೆ ನೇಮಕ ಮಾಡಲಾಯಿತು ಎಂಬುದು ನಮ್ಮ ಮೊದಲ ಪ್ರಶ್ನೆ” ಎಂದು ಕೇಳಿದರು.
ಇದೇ ಸಂದರ್ಭದಲ್ಲಿ “ಮಹಾರಾಷ್ಟ್ರದಲ್ಲಿ ಕೈಗೊಂಡಿರುವ ಸಂಪೂರ್ಣ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬುದು ನಮ್ಮ ಬೇಡಿಕೆ,” ಎಂದು ರಾಜ್ ಠಾಕ್ರೆ ಆಗ್ರಹಿಸಿದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 40 ರಿಂದ 60 ಲಕ್ಷ ಮತದಾರರನ್ನು ಸೇರಿಸಲಾಗಿತ್ತು ಎಂದು ಆರೋಪಿಸಿದ ಅವರು, ಇದೀಗ ಎಸ್ಐಆರ್ ಮೂಲಕ ಎರಡು ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ:
CJP ನಾಯಕ ಡಿಪ್ಕೆ ಕೂಡ ಮುಂಬೈ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ್ದು “ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗಾಗಿ ಮುಂಬೈ ಮತ್ತೆ ಬೀದಿಗಿಳಿದಿದೆ! ಎಲ್ಲಾ ಪ್ರತಿಭಟನಾಕಾರರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ಭಾರತೀಯರು ಒಗ್ಗೂಡಬೇಕಾದ ಸಮಯವಿದು. ಇದು ‘ಈಗ ಆಗದಿದ್ದರೆ ಎಂದಿಗೂ ಇಲ್ಲ’ ಎನ್ನುವ ನಿರ್ಣಾಯಕ ಕ್ಷಣ!” ಎಂದಿದ್ದಾರೆ.

