ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಕುಟುಂಬ ಕುರಿತು ಬಹು ಜನರಿಗೆ ಅರಿವಿಲ್ಲ. ಅವರ ಕುಟುಂಬದ ಯಾರೊಬ್ಬರೂ ರಾಜಕಾರಣ ಪ್ರವೇಶಿಸಿಲ್ಲ. ಆದರೆ ಎಲ್ಲರೂ ತಂದೆಯ ಹಾಗೆ ಪ್ರತಿಭಾವಂತರು. ಎಲೆ ಮರೆಯ ಕಾಯಿಯಂತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕುಟುಂಬದ ಪರಿಚಯ ಇಲ್ಲಿದೆ.
ಡಾ. ಮನಮೋಹನ್ ಸಿಂಗ್ 1958 ರಲ್ಲಿ, ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಗುರುಶರಣ್ ಕೌರ್ ಅವರು ಇತಿಹಾಸ ಪ್ರಾಧ್ಯಾಪಕಿ ಮತ್ತು ಲೇಖಕಿ. ಸರಳತೆ ಮತ್ತು ಪರಸ್ಪರ ತಿಳಿವಳಿಕೆಗೆ ಹೆಸರುವಾಸಿಯಾದ ದಂಪತಿ. ಇವರಿಗೆ ಮೂವರು ಹೆಣ್ಣುಮಕ್ಕಳು. ಉಪಿಂದರ್ ಸಿಂಗ್, ಅಮೃತ್ ಸಿಂಗ್ ಮತ್ತು ದಮನ್ ಸಿಂಗ್. ಈ ಮೂವರೂ ಶಿಕ್ಷಣ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹಿರಿಯ ಮಗಳು ಉಪಿಂದರ್ ಸಿಂಗ್ (65) ಪ್ರಸಿದ್ಧ ಶಿಕ್ಷಣತಜ್ಞೆ ಮತ್ತು ಇತಿಹಾಸಕಾರ್ತಿ. ಅವರ ಪತಿ ವಿಜಯ್ ತಂಖಾ ಅವರೂ ಶಿಕ್ಷಣತಜ್ಞ ಮತ್ತು ಬರಹಗಾರ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಉಪಿಂದರ್ ಸಿಂಗ್ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಮಾಂಟ್ರಿಯಲ್ನ ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದು, ಪ್ರಸ್ತುತ ಅಶೋಕ ವಿಶ್ವವಿದ್ಯಾನಿಲಯದಲ್ಲಿ ಫ್ಯಾಕಲ್ಟಿ ಡೀನ್ ಆಗಿದ್ದಾರೆ.
ಉಪಿಂದರ್ ಸಿಂಗ್ ಅವರು ಪ್ರಾಚೀನ ಭಾರತೀಯ ಇತಿಹಾಸ ಕುರಿತು ವ್ಯಾಪಕವಾದ ಸಂಶೋಧನೆ ಮಾಡಿದ್ದು, ಪ್ರಾಚೀನ ಭಾರತ್ ಮೇ ರಾಜನೀತಿಕ್ ಹಿಂಸಾ( ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ) ಸೇರದಂತೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2009 ರಲ್ಲಿ ಅವರಿಗೆ ಸಮಾಜ ವಿಜ್ಞಾನದಲ್ಲಿ ಇನ್ಫೋಸಿಸ್ ಪ್ರಶಸ್ತಿಯನ್ನು ನೀಡಲಾಗಿದೆ. ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ನಂತಹ ಸಂಸ್ಥೆಗಳಿಂದ ಪ್ರತಿಷ್ಠಿತ ಫೆಲೋಶಿಪ್ಗಳನ್ನು ಪಡೆದಿದ್ದಾರೆ.
ಎರಡನೇ ಪುತ್ರಿ ದಮನ್ ಸಿಂಗ್ (61). ಇವರೂ ಸಹ ಬರಹಗಾರ್ತಿ ಮತ್ತು ಕಥೆಗಾರ್ತಿ. ಅವರು ತಂದೆ ಮತ್ತು ತಾಯಿ ಜೀವನವನ್ನು ಆಧರಿಸಿ ʼಸ್ಟ್ರಿಕ್ಟ್ಲೀ ಪರ್ಸನಲ್: ಮನಮೋಹನ್ ಔರ್ ಗುರುಶರಣ್ʼ ಪುಸ್ತಕವನ್ನು ರಚಿಸಿದ್ದಾರೆ. ಇವರ ಇತರ ಕೃತಿಗಳಾದ ದಿ ಸೇಕ್ರೆಡ್ ಗ್ರೋವ್ ಮತ್ತು ನೈನ್ ಬೈ ನೈನ್ ಸಹ ಸಮಾಜ ಮತ್ತು ಪರಿಸರ ಕುರಿತ ಕೃತಿಗಳು. ಅವರ ಪತಿ ಅಶೋಕ್ ಪಟ್ನಾಯಕ್ ಅವರು ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಮೂರನೇ ಪುತ್ರಿ ಅಮೃತ್ ಸಿಂಗ್ (58) ದೇಶದ ಪ್ರಸಿದ್ಧ ಮಾನವ ಹಕ್ಕುಗಳ ವಕೀಲೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಆಕ್ಸ್ ಫರ್ಡ್ ಮತ್ತು ಯೇಲ್ ಕಾನೂನು ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಅವರು ಕಾನೂನು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಡಾ.ಸಿಂಗ್ ಅವರ ಮೂವರು ಪುತ್ರಿಯರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಂದೆಯ ಪರಂಪರೆಯನ್ನು ಮುನ್ನಡೆಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.