ರಂಗ ಪ್ರಯೋಗ ವಿಮರ್ಶೆ | ವಿಶಿಷ್ಟ ರಂಗಪ್ರಯೋಗ ‘ಮತ್ತಾಯ’

ವಿಭಿನ್ನ ಪ್ರಯೋಗಶೀಲತೆಗೆ ಹೆಸರಾದ ಮಲಯಾಳಿ ರಂಗನಿರ್ದೇಶಕರಾದ “ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್” ಸಂಸ್ಥಾಪಕ ಅರುಣ್ ಲಾಲ್ ಮತ್ತೆ ಕನ್ನಡ ಭಾಷೆಯಲ್ಲಿ “ಮತ್ತಾಯ” ಎನ್ನುವ ವಿಶಿಷ್ಟ ನಾಟಕವನ್ನು ಮಂಗಳೂರಿನ “ಅಸ್ತಿತ್ವ” ರಂಗತಂಡಕ್ಕೆ ನಿರ್ದೇಶಿಸಿದ್ದಾರೆ.

ವಿಭಿನ್ನ ಡಿಸೈನ್ ಗಳ ಸೆಟ್ ಪ್ರಾಪರ್ಟಿಗಳಿರುವ ನಾಟಕಗಳು ಬೇಕಾದಷ್ಟು ಬಂದಿವೆ. ಆದರೆ ಕೆಲವು ಇಟ್ಟಿಗೆಗಳನ್ನೇ ಸೆಟ್ ಪ್ರಾಪರ್ಟಿಗಳಾಗಿ ಬಳಸಿ ನಾಟಕವೊಂದನ್ನು ನಟರಿಬ್ಬರ ಆಂಗಿಕಾಭಿನಯದ ಮೂಲಕ ಕಟ್ಟಿಕೊಟ್ಟ ರೀತಿ ರಂಗಪರಂಪರೆಯಲ್ಲೇ ಭಿನ್ನವಾಗಿದೆ. ನಾಟಕ ನಡೆಯುವ ಸ್ಥಳದ ಆಯ್ಕೆಯೂ ವಿಭಿನ್ನವಾಗಿದೆ. ಪ್ರೇಕ್ಷಾಗೃಹದಲ್ಲಿ ಕೂತು ನಾಟಕ ನೋಡಬೇಕಾದ ಪ್ರೇಕ್ಷಕರನ್ನು ರಂಗವೇದಿಕೆಯ ಮೇಲೆ ಸುತ್ತಲೂ ಕೂಡಿಸಿ ನಟ್ಟ ನಡುವೆ ಇಬ್ಬರೇ ಕಲಾವಿದರು ಒಂದೂವರೆ ಗಂಟೆಗಳ ಕಾಲ ನಾಟಕವೊಂದನ್ನು ಪ್ರಸ್ತುತ ಪಡಿಸಿರುವುದು ಬಹುಷಃ ಇದೇ ಮೊದಲನೆಯ ಬಾರಿಯಾಗಿದೆ.

ಜೂನ್ 29 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ  “ರಂಗ ನಿರಂತರ” ರಂಗ ಸಂಘಟನೆ ಯು ಸಿಜಿಕೆಯವರ ಜನ್ಮ ದಿನದ ಸ್ಮರಣೆಗಾಗಿ ಆಯೋಜಿಸಿದ್ದ ರಂಗಪ್ರದರ್ಶನದಲ್ಲಿ ಅರುಣ್ ಲಾಲ್ ರವರು ರಚಿಸಿ, ವಿನ್ಯಾಸಗೊಳಿಸಿ ನಿರ್ದೇಶಿಸಿದ “ಮತ್ತಾಯ 22:39” ನಾಟಕವು ಪ್ರದರ್ಶನಗೊಂಡು ಹೀಗೂ ನಾಟಕ ಮಾಡಬಹುದು ಎನ್ನುವ ಹೊಸ ಕಾನ್ಸೆಪ್ಟನ್ನು ತೋರಿಸಿಕೊಟ್ಟಿತು.

‘ಮತ್ತಾಯ’ ನಾಟಕದ ಶೀರ್ಷಿಕೆಯೇ ಕುತೂಹಲವನ್ನುಂಟು ಮಾಡುವಂತಹುದಾಗಿದೆ. ಏನಿದು “ಮತ್ತಾಯ 22:39” ? ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್ಲಿನ ಹೊಸ ಒಡಂಬಡಿಕೆಯ 22 ನೇ ಅಧ್ಯಾಯದ 39 ನೇ ವಾಕ್ಯವಾದ “ನಿನ್ನನ್ನು ನೀನು ಪ್ರೀತಿಸುವ ಹಾಗೆ ನಿನ್ನ ನೆರೆಹೊರೆಯವರನ್ನೂ ಪ್ರೀತಿಸು” ಎಂಬುದನ್ನು ಆಧರಿಸಿ ಹೊಸ ಮಾದರಿಯ ನಾಟಕವನ್ನು ನಿರ್ಮಿಸಲಾಗಿದೆ. ಹಾಗಂತ ಈ ನಾಟಕ ಧಾರ್ಮಿಕವೂ ಅಲ್ಲ, ಕ್ರಿಶ್ಚಿಯಾನಿಟಿಯ ಪ್ರೊಪಗಂಡಾವೂ ಇಲ್ಲಿಲ್ಲ, ಪೌರಾಣಿಕ ನಂಬಿಕೆಯ ಪರಿಕಲ್ಪನೆಯೂ ಮೂಡಿ ಬಂದಿಲ್ಲ. ಕೇವಲ ಮಾನವೀಯ ನೆಲೆಯಲ್ಲಿ ಸಹಜೀವನದ ಅಗತ್ಯತೆಯನ್ನು ತೋರುವ ಮಹತ್ತರವಾದ ಜಾಗತಿಕ ಆಶಯ ಈ ನಾಟಕದಲ್ಲಿದೆ.

ವಿನಾಶಕಾರಿ ಬರಗಾಲ ಬಂದು ಜಗತ್ತಿನ ಸಕಲ ಜೀವರಾಶಿಗಳು ಅಳಿದು ಅದು ಹೇಗೋ ಮತ್ತಾಯ ಮತ್ತು ಯಹೋವ ಎನ್ನುವ ಇಬ್ಬರು ಯುವಕರು ಮಾತ್ರ ಬದುಕುಳಿದಿರುತ್ತಾರೆ. ಮತ್ತಾಯನ ಬಳಿ ಕೆಲವು ಕೋಳಿಗಳು, ಒಂದಿಷ್ಟು ಅಕ್ಕಿ ಹಾಗೂ ಬಾವಿಯ ನೀರು ಮಾತ್ರ ಬಾಕಿ ಇರುತ್ತವೆ. ನೆರೆಮನೆಯಾತ ಯಹೋವನ ಜೊತೆ ಇದ್ದಿದ್ದನ್ನು ಹಂಚಿಕೊಂಡು ಬದುಕಬೇಕಾಗುತ್ತದೆ. ಆದರೆ ಯಾವಾಗ ತಾನು ಮಾತ್ರ ಬದುಕಬೇಕೆಂದು ಮತ್ತಾಯನಿಗೆ ಅನ್ನಿಸುತ್ತದೋ ಆಗ ಯಹೋವನಿಗೆ ಊಟ ಹಾಕುವುದನ್ನು ನಿಲ್ಲಿಸುತ್ತಾನೆ. ಹಸಿವೆಯಿಂದ ಕಂಗೆಟ್ಟ ಯಹೋವನು ದೂರಾಗುತ್ತಾನೆ. ಆಗ ಮತ್ತಾಯನಿಗೆ ಒಂಟಿತನ ಕಾಡುತ್ತದೆ. ಜೊತೆಗೊಂದು ಜೀವ ಬೇಕೆನಿಸುತ್ತದೆ. ಯಹೋವನ ಬರುವಿಕೆಗಾಗಿ ಹಾತೊರೆಯುತ್ತಾನೆ. ಹೀಗೆ.. ಸ್ವಾರ್ಥಕ್ಕಾಗಿ ಬದುಕುವುದಕ್ಕಿಂತ ಸಹಜೀವನದ ಸಹಬಾಳ್ವೆ ಸಹನೀಯ ಎನ್ನುವ ಆಶಯದೊಂದಿಗೆ ನಾಟಕ ಅಂತ್ಯವಾಗುತ್ತದೆ. “ನಿನ್ನ ನೆರೆಯವರನ್ನು ನಿನ್ನಂತೆ ಪ್ರೀತಿಸು” ಎನ್ನುವ ಏಸುವಿನ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ “ಮತ್ತಾಯ” ಸಫಲವಾಗಿದೆ.

ಜಗತ್ತಿನ ಮೂಲಭೂತ ಅಗತ್ಯ ಹಾಗೂ ಸಮಸ್ಯೆ ಏನೆಂದರೆ ಅದು ಹಸಿವು. ಈ ನಾಟಕವೂ ಸಹ ಹಸಿವಿನ ಸುತ್ತಲೇ ಮಾನವೀಯತೆಯ ಭಿತ್ತಿಯನ್ನು ಚಿತ್ರಿಸಿದೆ. “ಸಂಕಷ್ಟದ ಕಾಲದಲಿ ಹಂಚಿ ತಿನ್ನಬೇಕು ಎನ್ನುವುದು ಬರುಬರುತ್ತಾ ಸಂಕುಚಿತ ಮನಸ್ಥಿತಿಗೆ ಒಳಗಾದಾಗ ವ್ಯಕ್ತಿ ಹೇಗೆಲ್ಲಾ ಸ್ವಾರ್ಥಿಯಾಗುತ್ತಾನೆ” ಎಂಬುದಕ್ಕೆ ಈ ನಾಟಕ ಸಾಕ್ಷಿಯಾಗಿದೆ. ತಾನು ತನ್ನದು ತನಗಾಗಿ ತನ್ನಿಂದಲೇ ಎಂದುಕೊಂಡಾಗ ಮಾನವೀಯ ಸಂಬಂಧಗಳು ದೂರಾಗಿ ಕೊನೆಗೆ ಒಂಟಿತನದ ನೋವು ಕಾಡುತ್ತದೆ” ಎನ್ನುವುದನ್ನು ‘ಮತ್ತಾಯ’ ಪ್ರಸ್ತುತ ಪಡಿಸುತ್ತದೆ. ಸ್ವಾರ್ಥ ಹಾಗೂ ಸಹಜೀವನದ ಸಾಂಗತ್ಯದ ನಡುವಿನ ಸಂಬಂಧವೇ ಈ ನಾಟಕದ ಅಂತ:ಸತ್ವವಾಗಿದೆ.

“ತನ್ನಂತೆ ಪರರನ್ನು ಪ್ರೀತಿಸು” ಎನ್ನುವ ಬೈಬಲ್ಲಿನಲ್ಲಿ ಬರುವ ಒಂದೆಳೆ ಸಂದೇಶವನ್ನು ಇಟ್ಟುಕೊಂಡು ಪೂರ್ಣಪ್ರಮಾಣದ ನಾಟಕವೊಂದನ್ನು ರಚಿಸುವುದು ಸುಲಭ ಸಾಧ್ಯವಲ್ಲ. ರಚಿಸಿದರೂ ಅದನ್ನು ಪ್ರಸ್ತುತ ಪಡಿಸುವುದು ಇನ್ನೂ ಕಷ್ಟ. ಪ್ರಸ್ತುತ ಪಡಿಸಿದರೂ ಎರಡೇ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸನ್ನು ಹಿಡಿದಿಡುವುದು ಸವಾಲಿನ ಕೆಲಸ. ಆದರೆ ನಿರ್ದೇಶಕರು ಈ ಎಲ್ಲದರಲ್ಲೂ ಯಶಸ್ವಿಯಾಗಿದ್ದಾರೆ, ಒಂದೂವರೆ ಗಂಟೆಗಳ ಕಾಲ ನೋಡುಗರನ್ನು ಅತ್ತಿತ್ತ ಅಲ್ಲಾಡದಂತೆ ಕೂಡಿಸಿ ನಾಟಕ ತೋರಿಸಿದ್ದಾರೆ.

ನಾಟಕದ ಆಶಯಕ್ಕಿಂತಲೂ ಅದನ್ನು ಪ್ರಸ್ತುತ ಪಡಿಸಿದ ಆಕೃತಿ ನಿಜಕ್ಕೂ ವಿಸ್ಮಯಕಾರಿಯಾಗಿದೆ. ಅದಕ್ಕೆ ವಿಭಿನ್ನವಾದ ವಿನ್ಯಾಸವೇ ಕಾರಣವಾಗಿದೆ. ಇಟ್ಟಿಗೆಗಳ ಮೂಲಕ ಮನೆ ಕಟ್ಟಬಹುದು, ಆದರೆ ನಾಟಕವನ್ನೂ ಕಟ್ಟಬಹುದು ಎನ್ನುವುದಕ್ಕೆʼ ‘ಮತ್ತಾಯ’ ಉದಾಹರಣೆಯಾಗಿದೆ. ಇಲ್ಲಿ ಇಟ್ಟಿಗೆಗಳು ಬೇರೆ ಬೇರೆ ರೂಪ ತಳೆಯುತ್ತವೆ. ಕೋಳಿಗಳಾಗಿ, ಅಕ್ಕಿ ಇಡುವ ಉಗ್ರಾಣವಾಗಿ, ಬಾವಿಯಾಗಿ, ಸಮಾಧಿಯಾಗಿ, ಊಟದ ತಟ್ಟೆಗಳಾಗಿ.. ಇನ್ನೂ ಏನೇನೋ ಆಗಿ ನಟನೆಯ ಮೂಲಕ ರೂಪಾಂತರ ಹೊಂದುತ್ತವೆ. ಮೇಲ್ನೋಟಕ್ಕೆ ಮಕ್ಕಳ ಆಟದಂತೆ ತೋರುವ ಈ ನಾಟಕವು ಆಳದಲ್ಲಿ ಅನೇಕ ಒಳನೋಟಗಳನ್ನು ಹೊಮ್ಮಿಸುತ್ತಾ ಸಾಗುತ್ತದೆ.

ಮೊದಮೊದಲು ಮಕ್ಕಳ ಮಂಗಾಟದಂತೆ, ಅರೆ ಹುಚ್ಚರ ಚೇಷ್ಟೆ ಕುಚೇಷ್ಟೆ ಹಾಗೂ ಆಟಾಟೋಪದಂತೆ ತಮಾಷೆಯಾಗಿ ಆರಂಭವಾಗುವ ನಾಟಕವು ಬರಬರುತ್ತಾ ಗಂಭೀರವಾಗುತ್ತದೆ. ಬರದ ಒಡಲಲ್ಲಿ ಹಸಿವಿನಿಂದ ಘಾಸಿಯಾದ ವ್ಯಕ್ತಿಗಳಿಬ್ಬರ ವಿಕ್ಷಿಪ್ತತೆ ಅನಾವರಣಗೊಳ್ಳುತ್ತದೆ. ಅಸಂಗತ ಮಾದರಿಯ ನಾಟಕೀಯತೆ ವಿನೋದದ ಮೂಲಕ ವಿಷಾದವನ್ನು ಹೊರಹೊಮ್ಮಿಸುತ್ತದೆ. ಈ ನಾಟಕದ ಉದ್ದೇಶ ಯಾರಿಗೆಷ್ಟು ಅರ್ಥವಾಯಿತೊ ಗೊತ್ತಿಲ್ಲ, ಆದರೆ ಪ್ರೇಕ್ಷಕರಿಗೆ ಮನರಂಜನೆಯನ್ನಂತೂ ಒದಗಿಸುವಲ್ಲಿ ಸಫಲವಾಗಿದೆ.

ಅದಕ್ಕೆ ಕಾರಣ ನಟರಿಬ್ಬರ ಆಂಗಿಕ ಅಭಿನಯ ಮತ್ತು ಮಾತುಗಾರಿಕೆಯ ವಾಚಿಕಾಭಿನಯ. ಆಹಾರ್ಯಾಭಿನಯದ ಕೊರತೆಯನ್ನು ಮರೆಮಾಚಿ ಕೇವಲ ದೇಹ ಭಾಷೆಯ ಬಳಕೆಯ ಮೂಲಕವೇ ಈ ಅಭಿನಯ ಪ್ರಧಾನ ನಾಟಕವನ್ನು ಕಟ್ಟಿದ್ದು ನಿರ್ದೇಶಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

ಅನುಶ್ ಶೆಟ್ಟಿಯವರ ಹಿನ್ನೆಲೆ ಸಂಗೀತ ಹಾಗೂ ಆಗಾಗ ಕೇಳಿಬರುವ ‘ಕಾಲ ಬರಗಾಲ’ ಎನ್ನುವ ರೆಕಾರ್ಡೆಡ್ ಹಾಡುಗಳು ನಟನೆಗೆ ಪೂರಕವಾಗಿ ಸ್ಪಂದಿಸಿವೆ. ಜೆ.ಡಿ.ಕ್ರಿಸ್ಟಿಯವರ ಬೆಳಕಿನ ವಿನ್ಯಾಸವೂ ಸಹ ನಾಟಕದ ಯಶಸ್ಸಿನಲ್ಲಿ ಪಾಲು ಕೇಳುವಂತಿದೆ.

ಈ ನಾಟಕದ ವಿನ್ಯಾಸ ಬೀದಿ ನಾಟಕದ ತಂತ್ರವನ್ನೇ ಹೋಲುವಂತಿದೆ. ಸುತ್ತಲೂ  ಪ್ರೇಕ್ಷಕರ ನಡುವೆ ನಟಿಸುವ ನಟರು ಎಲ್ಲರಿಗೂ ಕಾಣುವಂತೆ ಅಭಿನಯಿಸುವುದು ಕಷ್ಟಕರ ಕವಾಯತು. ಆದರೂ ಮತ್ತಾಯ ಪಾತ್ರದ ಕ್ಲಾನ್ವಿನ್ ಹಾಗೂ ಯಹೋವ ಪಾತ್ರಧಾರಿ ಕುಮಾರ ಲಾಲ್ ಇಬ್ಬರೂ ನಟರು ತಮ್ಮ ಕ್ಷಿಪ್ರಗತಿಯ ಚಲನೆ ಹಾಗೂ ನಟನೆಯಿಂದಾಗಿ ನೋಡುಗರನ್ನು ತಲುಪಲು ಮಾಡುವ ಸಕಲ ಪ್ರಯತ್ನ ಶ್ಲಾಘನೀಯ.

ಅರೇನಾ ಥಿಯೇಟರ್ ಮಾದರಿಯ ಅಖಾಡಾ ಎಂದು ಕರೆಯಲ್ಪಡುವ ಈ ಮಾದರಿಯ ನಾಟಕ ಕನ್ನಡ ರಂಗಭೂಮಿಗೆ ಹೊಸದು. ಸಾಂಪ್ರದಾಯಿಕ ನಾಟಕ ನಿರ್ಮಿತಿಯ ವ್ಯಾಕರಣಗಳನ್ನು ಒಡೆದು ಹೊಸ ಮಾದರಿಯ ನಾಟಕವೊಂದನ್ನು ಕನ್ನಡ ರಂಗಭೂಮಿಗೆ ಪರಿಚಯಿಸಿದ ಅರುಣ್ ಲಾಲ್ ರವರಿಗೆ ಅಭಿನಂದನೆ ಸಲ್ಲಿಸಲೇಬೇಕಿದೆ. ಮಂಗಳೂರಿನ ‘ಅಸ್ತಿತ್ವ’ ರಂಗತಂಡದ ಈ ವಿಶಿಷ್ಟ ರಂಗಸಾಹಸವನ್ನು ಬೆಂಬಲಿಸಿ ಪ್ರಾಯೋಜಿಸಿದ ಪ್ರಕಾಶ ರೈರವರ  ‘ನಿರ್ದಿಗಂತ’ ಕ್ಕೂ ವಂದನೆಗಳನ್ನು ಹೇಳಲೇಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗ ಕರ್ಮಿ

More articles

Latest article

Most read