ನವದೆಹಲಿ : ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 5 ರಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ಗಳನ್ನು ಹಿಂಪಡೆಯಬೇಕು ಮತ್ತು ಹಿಂದಿನ ಪ್ರತಿಭಟನೆಗಳ ವೇಳೆ ನಡೆದಿದೆ ಎನ್ನಲಾದ ಪೆಲೆಟ್ ಹಾಗೂ ಗುಂಡಿನ ದಾಳಿಯ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿ, CJP ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಮೆರವಣಿಗೆಗೆ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ (AISA) ಬುಧವಾರ ಬೆಂಬಲ ವ್ಯಕ್ತಪಡಿಸಿದೆ.
ಪ್ರಕರಣಗಳನ್ನು ಹಿಂಪಡೆಯುವುದಾಗಿ ಸರ್ಕಾರ ಈ ಹಿಂದೆ ಭರವಸೆ ನೀಡಿದ್ದರೂ, ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ. ಯುವಜನರನ್ನು ಒಗ್ಗೂಡಿಸಲು ಕಾರಣವಾದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು AISA ಅಧ್ಯಕ್ಷೆ ನೇಹಾ ಬೋರಾ ಹೇಳಿದ್ದಾರೆ.
ಸರ್ಕಾರವು ಎಲ್ಲಾ ಪ್ರಕರಣಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಪೆಲೆಟ್ ಮತ್ತು ಗುಂಡಿನ ದಾಳಿಯ ಬಗ್ಗೆ ತನಿಖೆಯಾಗಬೇಕು ಮತ್ತು ಅದಕ್ಕೆ ಹೊಣೆಗಾರಿಕೆಯನ್ನು ಹೊರಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಿರಬೇಕು ಎಂದು ಎಡಪಂಥೀಯ ವಿದ್ಯಾರ್ಥಿ ನಾಯಕಿ ಹೇಳಿದ್ದಾರೆ
ಕೇಂದ್ರ ಸರ್ಕಾರದೊಂದಿಗಿನ ಮಾತುಕತೆಯ ನಂತರ ಒಂದು ತಿಂಗಳ ಕಾಲ ವಿರಾಮ ಪಡೆದಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP), ಇದೀಗ ಅಭಿಜೀತ್ ಡಿಪ್ಕೆ ಅವರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಪುನರಾರಂಭಿಸಲು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಶಿಕ್ಷಕರ ದಿನಾಚರಣೆಯಂದೇ ನಡೆಯಲಿರುವ ಈ ಸೆಪ್ಟೆಂಬರ್ 5 ರ ಮೆರವಣಿಗೆಯನ್ನು, NEET ಪರೀಕ್ಷೆ ರದ್ದು ಮತ್ತು ನಂತರದ ಮರುಪರೀಕ್ಷೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳು ಹಾಗೂ ಜುಲೈ ತಿಂಗಳ ಪ್ರತಿಭಟನೆಯ ವೇಳೆ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮುನ್ನಡೆಸುವ ನಿರೀಕ್ಷೆಯಿದೆ.
NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವಾಗಿ ದೆಹಲಿಯಲ್ಲಿ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರೊಂದಿಗೆ 23 ದಿನಗಳ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಬೋರಾ, ಸಾಮಾನ್ಯ ಜನರು ಸರ್ಕಾರದೊಂದಿಗೆ ಸಂವಹನ ನಡೆಸಲು ಎದುರಿಸುತ್ತಿರುವ ತೊಂದರೆಗಳೇ ಈ ಪ್ರತಿಭಟನೆಗಳಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

