ಬೆಂಗಳೂರು, ಅ.6: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್ಗಳನ್ನು ರಚಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ವೇಗವಾಗಿ ವಿಸ್ತರಿಸುತ್ತಿರುವ ಬೆಂಗಳೂರು ನಗರದಲ್ಲಿ ಪೊಲೀಸ್ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಮಂಗಳವಾರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಹಲವು ದಶಕಗಳಿಂದ ಒಂದೇ ಕಮಿಷನರೇಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಪುನರ್ರಚನೆಗೆ ಸರ್ಕಾರ ಮುಂದಾಗಿದೆ.
ಜಿಬಿಎ ಅಡಿಯಲ್ಲಿ ಬೆಂಗಳೂರು ನಗರವನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸಿರುವ ಹಿನ್ನೆಲೆಯಲ್ಲಿ, ಪೊಲೀಸ್ ಆಡಳಿತದ ಗಡಿಗಳನ್ನೂ ಇದೇ ಮಾದರಿಗೆ ಹೊಂದಾಣಿಕೆ ಮಾಡುವ ಉದ್ದೇಶದಿಂದ ಐದು ಕಮಿಷನರೇಟ್ಗಳ ರಚನೆಗೆ ಸರ್ಕಾರ ಮುಂದಾಗಿದೆ. ಪ್ರಸ್ತಾವಿತ ಐದು ವಲಯಗಳು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಬೆಂಗಳೂರು ಆಗಿವೆ. ಈ ಐದು ಕಮಿಷನರೇಟ್ಗಳ ಮೇಲ್ವಿಚಾರಣೆಗೆ ಮುಖ್ಯ ಪೊಲೀಸ್ ಕಮಿಷನರ್ ಹುದ್ದೆ ಇರಲಿದೆ.
6,633 ಹೊಸ ಹುದ್ದೆಗಳ ಸೃಷ್ಟಿ
ಪೊಲೀಸ್ ಪುನರ್ರಚನೆಯ ಭಾಗವಾಗಿ ಒಟ್ಟು 6,633 ಹೊಸ ಪೊಲೀಸ್ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆ ಹಿಂದೆಯೇ ಸಿದ್ಧಗೊಂಡಿತ್ತು. ಇದಕ್ಕಾಗಿ ಸುಮಾರು 764.87 ಕೋಟಿ ರೂ. ವೆಚ್ಚವಾಗಲಿದೆ ಎಂದು ಪೊಲೀಸ್ ಇಲಾಖೆಯ ಪ್ರಸ್ತಾವನೆಯಲ್ಲಿ ಅಂದಾಜಿಸಲಾಗಿದೆ. ಇದರಲ್ಲಿ ವಾರ್ಷಿಕ ಮರುಕಳಿಸುವ ವೆಚ್ಚ ಮತ್ತು ಮೂಲಸೌಕರ್ಯ, ವಾಹನಗಳು, ಉಪಕರಣಗಳು, ಸಿಸಿಟಿವಿ ಸೇರಿದಂತೆ ಒಂದು ಬಾರಿ ಮಾಡುವ ವೆಚ್ಚವೂ ಸೇರಿದೆ.
ಐದು ಕಮಿಷನರೇಟ್ಗಳಿಗೆ ಪ್ರತ್ಯೇಕ ಪೊಲೀಸ್ ಕಮಿಷನರ್ಗಳು, ಡಿಸಿಪಿಗಳು, ಎಸಿಪಿಗಳು ಹಾಗೂ ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಮರುಹೊಂದಿಸುವ ಉದ್ದೇಶವಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಕಾನೂನು-ಸುವ್ಯವಸ್ಥೆ, ಸಂಚಾರ, ಸೈಬರ್ ಅಪರಾಧ, ಮಹಿಳಾ ಸುರಕ್ಷತೆ ಮತ್ತು ಅಪರಾಧ ತನಿಖೆಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗಲಿದೆ ಎಂಬುದು ಸರ್ಕಾರದ ಆಶಯ.
63 ವರ್ಷಗಳ ಬಳಿಕ ಮಹತ್ವದ ಬದಲಾವಣೆ
ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆ 1963ರಲ್ಲಿ ಆರಂಭವಾಗಿತ್ತು. ಆರಂಭದಲ್ಲಿ ಕೇವಲ 37 ಪೊಲೀಸ್ ಠಾಣೆಗಳಿದ್ದ ವ್ಯವಸ್ಥೆ ಇಂದು ನೂರಾರು ಪೊಲೀಸ್ ಠಾಣೆಗಳು, ಸಂಚಾರ ಪೊಲೀಸ್ ಠಾಣೆಗಳು ಹಾಗೂ ಸೈಬರ್ ಮತ್ತು ಮಹಿಳಾ ಪೊಲೀಸ್ ಘಟಕಗಳನ್ನು ಒಳಗೊಂಡಿರುವಷ್ಟು ವಿಸ್ತರಿಸಿದೆ.
ನಗರದ ಜನಸಂಖ್ಯೆ, ವಾಹನಗಳ ಸಂಖ್ಯೆ, ಐಟಿ-ಬಿಟಿ ವಲಯದ ವಿಸ್ತರಣೆ, ಹೊರವಲಯಗಳ ನಗರೀಕರಣ ಹಾಗೂ ಸೈಬರ್ ಅಪರಾಧಗಳ ಹೆಚ್ಚಳದಿಂದ ಒಂದೇ ಕಮಿಷನರೇಟ್ನಿಂದ ಇಡೀ ನಗರವನ್ನು ನಿರ್ವಹಿಸುವುದು ಸವಾಲಾಗಿದೆ ಎಂಬ ವಾದವೂ ಇದೆ. ಪ್ರಸ್ತಾವನೆಯಲ್ಲಿ ಬೆಂಗಳೂರು ಪೊಲೀಸ್ ವ್ಯಾಪ್ತಿಯು ಸುಮಾರು 712 ಚದರ ಕಿ.ಮೀ.ಗೆ ವಿಸ್ತರಿಸಿದ್ದು, ಜನಸಂಖ್ಯೆ 1.56 ಕೋಟಿಗೂ ಅಧಿಕವಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ಪೊಲೀಸ್ ಗಡಿಗಳೂ ಬದಲಾವಣೆ
ಬೆಂಗಳೂರು ಆಡಳಿತ ವ್ಯವಸ್ಥೆಯಲ್ಲಿ ನಡೆದಿರುವ ದೊಡ್ಡ ಬದಲಾವಣೆಯ ಹಿನ್ನೆಲೆಯಲ್ಲಿ ಪೊಲೀಸ್ ಪುನರ್ರಚನೆ ನಡೆದಿದೆ. ಬಿಬಿಎಂಪಿ ವ್ಯವಸ್ಥೆಯ ಬದಲಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳ ರಚನೆ ಜಾರಿಗೆ ಬಂದಿದ್ದು, ನಾಗರಿಕ ಆಡಳಿತದ ಗಡಿಗಳು ಬದಲಾಗಿವೆ. ಪೊಲೀಸ್ ವ್ಯಾಪ್ತಿ ಮಾತ್ರ ಹಳೆಯ ಮಾದರಿಯಲ್ಲಿ ಉಳಿದರೆ ನಗರ ಆಡಳಿತ ಮತ್ತು ಪೊಲೀಸ್ ಇಲಾಖೆಯ ನಡುವೆ ಸಮನ್ವಯದ ಸಮಸ್ಯೆ ಉಂಟಾಗಬಹುದು ಎಂಬ ಕಾರಣದಿಂದ ಪೊಲೀಸ್ ಗಡಿಗಳನ್ನೂ ಮರುಹೊಂದಿಸುವ ಅಗತ್ಯವನ್ನು ಸರ್ಕಾರ ಮುಂದಿಟ್ಟಿದೆ.

