ಬೆಂಗಳೂರು, ಅ.5: ಬೆಂಗಳೂರಿನ ನೆಲಮಂಗಲ ಸಮೀಪದ ಹುಸ್ಕೂರು ರಸ್ತೆಯಲ್ಲಿರುವ ಖಾಸಗಿ ಗೋದಾಮೊಂದರಲ್ಲಿ ಕನ್ನಡಿಗ ಕಾರ್ಮಿಕರು ಕೆಲಸ ಬಿಟ್ಟು ಹೋಗುವಂತೆ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಕುರಿತು ಸ್ಥಳೀಯ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಕನ್ನಡದಲ್ಲಿ ಮಾತನಾಡುತ್ತಿದ್ದ ಕಾರ್ಮಿಕರಿಗೆ ವ್ಯಕ್ತಿಯೊಬ್ಬರು “ಇಲ್ಲಿ ಕೆಲಸ ಮಾಡಬೇಕಾದರೆ ಹಿಂದಿ ಕಲಿಯಬೇಕು. ಕನ್ನಡ ಮಾತನಾಡುವವರು ಕೆಲಸ ಬಿಟ್ಟು ಹೋಗಬಹುದು” ಎಂಬ ಅರ್ಥದಲ್ಲಿ ಮಾತನಾಡಿರುವುದು ಕಂಡುಬರುತ್ತದೆ. ಅಲ್ಲದೆ, “ಇದು ಕರ್ನಾಟಕವಾದರೂ ಇಲ್ಲಿ ಹಿಂದಿ ನಡೆಯುತ್ತದೆ” ಎಂಬ ದುರಹಂಕಾರದಿಂದ ಹೇಳಿರುವುದು ಕಂಡುಬಂದಿದೆ.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಕರ್ನಾಟಕದಲ್ಲೇ ಕನ್ನಡಿಗ ಕಾರ್ಮಿಕರಿಗೆ ತಮ್ಮ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ಕೆಲಸ ಕಳೆದುಕೊಳ್ಳುವ ಬೆದರಿಕೆ ಹಾಕುವುದು ಸರಿಯೇ? ಎಂಬ ಪ್ರಶ್ನೆಗಳು ಕೇಳಿಬಂದಿವೆ.
ಕ್ಷಮೆಯಾಚನೆ
ವಿಡಿಯೋ ವೈರಲ್ ಆಗಿ ಆಕ್ರೋಶ ಹೆಚ್ಚಾದ ಬಳಿಕ, ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿ ಅಶೋಕ್ ಎಂಬಾತ ಕನ್ನಡಿಗರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾನೆ. ಘಟನೆ ಸಂಬಂಧ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಖಾಸಗಿ ಗೋದಾಮಿಗೆ ಕನ್ನಡಪರ ಕಾರ್ಯಕರ್ತರ ಮುತ್ತಿಗೆ
ಕನ್ನಡಪರ ಕಾರ್ಯಕರ್ತರು ನೆಲಮಂಗಲ ಬಳಿಯ ಹುಸ್ಕೂರು ರಸ್ತೆಯಲ್ಲಿರುವ ಸಂಬಂಧಿತ ಖಾಸಗಿ ಗೋದಾಮಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಕನ್ನಡಿಗ ಕಾರ್ಮಿಕರೊಂದಿಗೆ ದರ್ಪದಿಂದ ವರ್ತಿಸಿದ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕನ್ನಡಿಗರಿಗೆ ಅವರದೇ ರಾಜ್ಯದಲ್ಲಿ ಭಾಷೆಯ ಕಾರಣಕ್ಕೆ ಕಿರುಕುಳ ಅಥವಾ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಖಾಸಗಿ ಸಂಸ್ಥೆಗಳಲ್ಲಿಯೂ ಸ್ಥಳೀಯ ಕಾರ್ಮಿಕರೊಂದಿಗೆ ಗೌರವಯುತವಾಗಿ ವರ್ತಿಸುವುದು ಕಡ್ಡಾಯವಾಗಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

