ನವದೆಹಲಿ : ಬಿಜೆಪಿ ನೀಡಿದ್ದ “ಅಚ್ಛೆ ದಿನ್” (ಒಳ್ಳೆಯ ದಿನಗಳು) ಭರವಸೆಯು ವಾಸ್ತವದಲ್ಲಿ ಕುಟುಂಬಗಳ ಬಜೆಟ್ ಮೇಲೆ ನಿರಂತರ ಹೊರೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿಷಯದಲ್ಲಿ ಬುಧವಾರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ವನ್ನು ತೀವ್ರಗೊಳಿಸಿದೆ.
ನಿರಂತರವಾಗಿ ಬಿಜೆಪಿ ಸರ್ಕಾರದಿಂದ “ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಳು ಮತ್ತು ಅರ್ಥಹೀನ ಮಾತುಗಳಿಂದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿದ ಖರ್ಗೆ, ಕಳೆದ ಒಂದು ವರ್ಷದಲ್ಲಿ ಈರುಳ್ಳಿ ಬೆಲೆ ಶೇ. 59ರಷ್ಟು ಹೆಚ್ಚಾಗಿದ್ದು, ಹಲವು ನಗರಗಳಲ್ಲಿ ಕೆಜಿಗೆ 50-60 ರೂ.ಗೆ ಮಾರಾಟವಾಗುತ್ತಿದೆ. ಸಕ್ಕರೆ ಬೆಲೆ ಕೆಜಿಗೆ 60-70 ರೂ. ಇದ್ದು ಕೆಲವು ಕಡೆಗಳಲ್ಲಿ 72 ರೂ. ತಲುಪಿದೆ ಮತ್ತು ಸಾಸಿವೆ ಎಣ್ಣೆ ಲೀಟರ್ಗೆ 200 ರೂ.ಗಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಸಿದರು.
ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷವು ಪದೇ ಪದೇ ಆರೋಪಿಸಿದೆ ಮತ್ತು ಹಣದುಬ್ಬರದ ಪರಿಣಾಮವನ್ನು ಮತದಾರರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಎಚ್ಚರಿಸಿದೆ.
ಆಹಾರ ಪದಾರ್ಥಗಳ ಹಣದುಬ್ಬರ ಶೇ. 5.52 ಮತ್ತು ಸಗಟು ಹಣದುಬ್ಬರ ಶೇ. 9.78 ರಷ್ಟಿರುವುದನ್ನು ಉಲ್ಲೇಖಿಸಿದ ಖರ್ಗೆ, ವಿಶೇಷವಾಗಿ ಹಬ್ಬದ ಸಮಯದಲ್ಲಿ ಬೆಲೆ ಏರಿಕೆಯು ಸಾಮಾನ್ಯ ಕುಟುಂಬಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾಗಿವೆ; ಆದರೆ ‘ಅಚ್ಛೆ ದಿನ್’ (ಒಳ್ಳೆಯ ದಿನಗಳು) ನ ವಾಸ್ತವವೇನೆಂದರೆ, ಬೇಳೆಕಾಳುಗಳು, ತರಕಾರಿಗಳು, ಅಡುಗೆ ಎಣ್ಣೆ ಅಥವಾ ಸಕ್ಕರೆ – ಹೀಗೆ ಯಾವುದಾದರೂ ಒಂದು ವಸ್ತುವಿನ ಬೆಲೆ ಆಗಾಗ್ಗೆ ಸಾಮಾನ್ಯ ಜನರ ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸುತ್ತಲೇ ಇರುತ್ತದೆ ಎಂದು ಹೇಳಿದರು.
ಗಗನಕ್ಕೇರುತ್ತಿರುವ ಹಣದುಬ್ಬರದ ವಿಷಯವಾಗಿ ಕಾಂಗ್ರೆಸ್ ಸೋಮವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಸರ್ಕಾರವು ‘ಅಚ್ಛೆ ದಿನ್’ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಅದು ಪ್ರಶ್ನಿಸಿದರು.

