ಬೆಂಗಳೂರು : ರಾಜ್ಯಕ್ಕೆ ಮುಂಗಾರು ಮಳೆ ಜೂನ್ 1ರಂದು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳಕ್ಕೆ ಮುಂಗಾರು ಮಳೆ ಮಾರುತಗಳು ಮೇ 26ರಂದು ಪ್ರವೇಶಲಿದ್ದು, ಐದು ದಿನಗಳ ಬಳಿಕ ರಾಜ್ಯ ಪ್ರವೇಶಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ಬಿಸಿ ಗಾಳಿ ಮಾರುತ ಎಲ್ ನಿನೋ ಪ್ರಭಾವ ಹೆಚ್ಚಾಗಿಲಿದೆ ಎಂಬ ಮುನ್ಸೂಚನೆ ನಡುವೆಯೇ ಮುಂಗಾರು ಪ್ರವೇಶ ಮುಂಚಿತವಾಗಿ ಆಗುತ್ತಿರುವುದು ರೈತರ ಮೊಗದಲ್ಲಿ ನಗು ಮೂಡಿಸಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದ ಉತ್ತರ ಭಾಗದಲ್ಲಿ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದಯ ಮನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ:
ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ಪ್ರಮುಖವಾಗಿ ಈ ಕೆಳಗಿನ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಆರ್ಭಟಿಸಲಿದೆ. ಕಲ್ಯಾಣ ಕರ್ನಾಟಕದ ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯನಗರ.ಮಧ್ಯ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಾದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ. ಕರಾವಳಿ ಪ್ರದೇಶದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ರೈತರಿಗೆ ಹವಾಮಾನ ಇಲಾಖೆ ಎಚ್ಚರಿಕೆ:
ಮುಂಗಾರು ಪೂರ್ವ ಮಳೆ ರಾಜ್ಯದಲ್ಲಿ ಚುರುಕಾಗಿರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಮುನ್ನೆಚ್ಚರಿಕೆ ಹಾಗೂ ಜಾಗೃತಿ ವಹಿಸುವಂತೆ ಹವಾಮಾನ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯದ ತಜ್ಞರು ವಿಶೇಷ ಸೂಚನೆ ನೀಡಿದ್ದಾರೆ. ಬಿರುಗಾಳಿ ಸಹಿತ ಮಳೆ ಸುರಿಯುವ ಹಿನ್ನೆಲೆಯಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅಲ್ಲದೆ ಸಿಡಿಲು ಕೂಡ ಬಡಿಯುವ ಸಾಧ್ಯತೆ ಇದ್ದು ಇವುಗಳಿಂದ ಪರಾಗುವ ಅಗತ್ಯ ಕ್ರಮಗಳನ್ನು ರೈತರು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತಂಪಾದ ಇಳೆ: ಏಪ್ರಿಲ್ ಹಾಗೂ ಮೇನಲ್ಲಿ ತೀವ್ರ ತಾಪಮಾನದಿಂದ ಬಸವಳಿದಿದ್ದ ರಾಜ್ಯದ ಜನರು ಈಗ ತಂಪು ವಾತಾವರಣ ಅನುಭವಿಸುತ್ತಿದ್ದಾರೆ. ಮುಂಗಾರು ಪೂರ್ವ ಮಳೆ ಹಾಗೂ ವಾಯು ಭಾರ ಕುಸಿತದ ಹಿನ್ನೆಲೆಯಲ್ಲಿ ತಾಪಮಾನ ಕುಸಿದಿದೆ. ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದ ವಾತಾವವರಣ ತಂಪಾಗಿದೆ. ಶೀಘ್ರದಲ್ಲೇ ಮುಂಗಾರು ಮಳೆ ಆಗಮಿಸುವುದರಿಂದ ಬಿಸಿಲಿನ ತೀವ್ರತೆ ಕಡಿಮೆಯಾಗಲಿದೆ.
ಕೃಷಿ ಚಟುವಟಿಕೆಯಲ್ಲಿ ತೊಡಗಲಿರುವ ರೈತರು: ಮುಂಗಾರು ಪೂರ್ವ ಮಳೆ ಹಿನ್ನೆಲೆಯಲ್ಲಿನ ರೈತರು ಕೃಷಿ ಜಮೀನನ್ನು ಉಳುಮೆ ಮಾಡಿ ಕಳೆ ಆರಿಸಿ ಸ್ವಚ್ಛಗೊಳಿಸುತ್ತಿದ್ದಾರೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆ ಕೈಗೊಳ್ಳಲು ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿರುವುದರಿಂದ ರೈತರು ಉಳುಮೆಯಲ್ಲಿ ನಿರತರಾಗಿದ್ದಾರೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

