ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಅವ್ಯವಸ್ಥೆಗಳ ಕುರಿತು ರೊಚ್ಚಿಗೆದ್ದ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.
ಕುಲಪತಿಗಳ ಕಚೇರಿಯಲ್ಲಿದ್ದ ಕುರ್ಚಿ ಮತ್ತು ಹೂಕುಂಡಗಳನ್ನು ಹೊಡೆದುಹಾಕುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯವು ಅವ್ಯವಸ್ಥೆಗಳ ಅಗರವಾಗಿದೆ. ಇಲ್ಲಿ ಕುಲಪತಿಗಳು ಅಧಿಕಾರ ಸ್ವೀಕರಿಸಿದ ದಿನದಿಂದಲೂ ವಿವಿಯ ಆಡಳಿತ ವರ್ಗ ಕಿತ್ತಾಟದಲ್ಲೇ ತೊಡಗಿದ್ದು, ವಿದ್ಯಾರ್ಥಿಗಳ ಹಿತಕಾಯುವಲ್ಲಿ ವಿಫಲವಾಗಿದೆ. ಕಳೆದ 5 ತಿಂಗಳ ಹಿಂದೆ ನಡೆದ 1, 3, 5 ನೇ ಸೆಮಿಸ್ಟರ್‌ಗಳ ಪರೀಕ್ಷೆ ಫಲಿತಾಂಶವನ್ನು ಇನ್ನೂ ಪ್ರಕಟಿಸಿಲ್ಲ, ಮೂರು ವರ್ಷಗಳಿಂದ ಅಂಕಪಟ್ಟಿ ವಿತರಿಸಿಲ್ಲ, ಸದ್ಯ ನಡೆದಿರುವ ಪರೀಕ್ಷೆಗಳ ಮೌಲ್ಯಮಾಪನವೂ ನಡೆಯುತ್ತಿಲ್ಲ. ಮೌಲ್ಯಮಾಪಕರಿಗೆ ಗೌರವಧನ ಕೂಡ ನೀಡಿಲ್ಲ. ಹೀಗೆ ಆದರೆ, ವಿದ್ಯಾರ್ಥಿಗಳ ಭವಿಷ್ಯ ಏನು ಎಂದು ಪ್ರತಿಭಟನಕಾರರು ಪ್ರಶಸ್ನಿಸಿದ್ದಾರೆ.
ಅಂಕಪಟ್ಟಿಗಳನ್ನು ವಿತರಿಸಲು ಟೆಂಡ್ ಕರೆಯುವ ಭರವಸೆ ಮಾತ್ರ. ಅಂಕಪಟ್ಟಿಗಳಿಲ್ಲದೇ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಭಾರಿ ಹಿನ್ನಡೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಘಟಿಕೋತ್ಸವವು ನಡೆದಿಲ್ಲ. ಕಳೆದ ಬಾರಿ ವಿವಿ ನೀಡಿರುವ ಫಲಿತಾಂಶ ವೆಬ್‌ಸೈಟ್‌ನಲ್ಲಿ ಗೊಂದಲ ಉಂಟುಮಾಡಿದೆ. ಆಡಳಿತ ವರ್ಗದ ಕಿತ್ತಾಟದಿಂದ ವಿದ್ಯಾರ್ಥಿಗಳಿಗೆ ದಿಕ್ಕೇ ತೋಚದಂತಾಗಿದೆ.
ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳ ಆಡಳಿತ ವರ್ಗಕ್ಕೆ ರಾಜ್ಯಪಾಲರು ಸೂಚನೆ ನೀಡಬೇಕು. ಅವ್ಯವಸ್ಥೆ ಸರಿಪಡಿಸಿ ಅಕ್ರಮ ತಡೆಯಲು ಮುಂದಾಗಬೇಕು. ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಹಲವು ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಬೇಕು, ಪ್ರಮಾಣ ಪತ್ರ, ಅಂಕಪಟ್ಟಿಗಳನ್ನು ಕೂಡಲೇ ವಿತರಿಸಬೇಕು. ಪ್ರವೇಶ ಹಾಗೂ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಬೇಕು. ಡಿಜಿಟಲ್ ಮೌಲ್ಯಮಾಪನ ಕೈಬಿಡಬೇಕು. ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕು. ಇದುವರೆಗೂ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಗೆ ಪರಿಹಾರ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

